ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಗಳ ದೊಡ್ಡಿಯಾದ ಉದ್ಯಾನ!

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಜನ ವಾಯುವಿಹಾರ ಮಾಡಲು ಅಭಿವೃದ್ಧಿಪಡಿಸಿದ ಉದ್ಯಾನ ಹಸುಗಳ ದೊಡ್ಡಿಯಾಗಿದೆ. ಉದ್ಯಾನದಲ್ಲಿ ಕಾಲಿರಿಸಿದರೆ ಸಗಣಿ, ಗಂಜಲದ ವಾಸನೆ ಗಮ್ಮೆನಿಸುತ್ತದೆ. ಇದು ದೊಮ್ಮಲೂರಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಉದ್ಯಾನದ ಚಿತ್ರಣ.

ಬಿಬಿಎಂಪಿಗೆ ಸೇರಿದ ಉದ್ಯಾನದಲ್ಲಿ ಸಾರ್ವಜನಿಕರು ವಾಯುವಿಹಾರಕ್ಕೆಂದು ಬಂದರೆ ಕಾಲಿರಿಸಿದ ಜಾಗದಲ್ಲೆಲ್ಲಾ ಸಗಣಿ, ಚೆಲ್ಲಾಡಿದ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕವರ್‌ಗಳ ರಾಶಿ ಸ್ವಾಗತಿಸುತ್ತವೆ. ಒಟ್ಟಾರೆ ತ್ಯಾಜ್ಯದ ಸಂಗ್ರಹಾಗಾರದಂತೆ ಉದ್ಯಾನ ಕಾಣಿಸುತ್ತದೆ.

ಸುಮಾರು ಅರ್ಧ ಕಿ.ಮೀ. ವಿಸ್ತೀರ್ಣದ ಉದ್ಯಾನಕ್ಕೆ ಸಂಪೂರ್ಣ ಬೇಲಿ ಹಾಕಿಲ್ಲ. ಮಧ್ಯ ಭಾಗವನ್ನು ಹೊರತುಪಡಿಸಿ ಉಳಿದ ಕಡೆ ತಂತಿ ಬೇಲಿ ಹಾಕಲಾಗಿದೆ. ಅದೂ ಸಹ ಕಿತ್ತು ಹೋಗಿದೆ. ಬೇಲಿ ಇಲ್ಲದ ಮಧ್ಯಭಾಗ ಕಸದ ರಾಶಿ ಸುರಿಯುವ ಮತ್ತು ಹಸುಗಳನ್ನು ಕಟ್ಟುವ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ.

`ಉದ್ಯಾನದಲ್ಲಿ ಹಾಕುವ ಕಸವನ್ನು ಪ್ರತಿನಿತ್ಯ ತೆಗೆಯಲಾಗುತ್ತಿದೆ. ಆದರೆ, ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಬಂದು ಕಸವನ್ನು ಉದ್ಯಾನದ ಒಳಗೆ ಎಸೆದು ಹೋಗುತ್ತಾರೆ. ರಾತ್ರಿ ವೇಳೆ ಜ್ಯೂಸ್ ಅಂಗಡಿಯವರು, ಸುತ್ತಮುತ್ತಲಿನ ಹೋಟೆಲ್ ನವರೇ ಹೆಚ್ಚಾಗಿ ಕಸವನ್ನು ತಂದು ಸುರಿಯುತ್ತಾರೆ' ಎಂದು ಶಾಂತಿನಗರದ ಪಾಲಿಕೆ ಸದಸ್ಯೆ ಗೀತಾ ಶ್ರೀನಿವಾಸ ರೆಡ್ಡಿ ಆರೋಪಿಸಿದರು.

`ಉದ್ಯಾನದ ಪಕ್ಕದಲ್ಲೇ ಇರುವ ಸ್ಥಳೀಯರು ಹಸುಗಳನ್ನು ತಂದು ಉದ್ಯಾನದ ಒಳಗೆ ಕಟ್ಟುತ್ತಿದ್ದಾರೆ. ಪಾಲಿಕೆ ವತಿಯಿಂದ ಒಂದು ಸಾವಿರ ರೂಪಾಯಿವರೆಗೆ ದಂಡವನ್ನು ಹಾಕುತ್ತೇವೆ. ಆದರೆ, ದಂಡವನ್ನು ಕಟ್ಟಿ ಹಸುಗಳನ್ನು ಬಿಡಿಸಿಕೊಂಡು ಹೋಗುತ್ತಾರೆ. ಮತ್ತೆ ಮರುದಿನ ಅದೇ ಜಾಗದಲ್ಲಿ ಮತ್ತೆ ಕಟ್ಟಿರುತ್ತಾರೆ. ಇಲ್ಲಿ ಒಂದೊಂದು ಮನೆಯಲ್ಲಿ ಹತ್ತು ಹದಿನೈದು ಹಸುಗಳನ್ನು ಸಾಕಿದ್ದಾರೆ. ಇದರಿಂದ, ಎಷ್ಟು ಬಾರಿ ದಂಡ ವಿಧಿಸಿದರೂ ಪ್ರಯೋಜನವಾಗಿಲ್ಲ. ಹಸುಗಳನ್ನು ನಿಯಂತ್ರಣ ಮಾಡುವುದು ಅಸಾಧ್ಯವಾಗಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

`ಉದ್ಯಾನದ ನಿರ್ವಹಣೆಯನ್ನು ಮೊದಲು ಪುರವಾಂಕರ ಸಂಸ್ಥೆಯವರಿಗೆ ವಹಿಸಲಾಗಿತ್ತು ಆದರೆ, ಅವರು ಸಹ ಉದ್ಯಾನದ ನಿರ್ವಹಣೆಯ ಕಡೆಗೆ ಗಮನವನ್ನು ನೀಡುತ್ತಿಲ್ಲ. ಈ ಹಿಂದೆ ಉದ್ಯಾನದ ಸುತ್ತಲೂ ಬೇಲಿ ಹಾಕಿಸಲಾಗಿತ್ತು. ಉದ್ಯಾನದ ಒಳಗೆ ಹಸುಗಳನ್ನು ಕಟ್ಟುವವರು ಅದನ್ನು ಕಿತ್ತು ಹಾಕಿದ್ದಾರೆ. ಪುನಃ ಬೇಲಿ ಹಾಕಿಸಬೇಕು ಎಂದು ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ' ಎಂದು ಅವರು ಹೇಳಿದರು.

`ಕಸತೆಗೆಯುವ ನೌಕರರ ಗುತ್ತಿಗೆ ಮುಗಿದಿದ್ದು, ಇದರಿಂದ, ಹತ್ತು ಹದಿನೈದು ದಿನಗಳಿಂದ ಯಾರು ಕಸವನ್ನು ತೆಗೆಯಲು ಬರುತ್ತಿಲ್ಲ. ಮೂರ‌್ನಾಲ್ಕು ದಿನಗಳಿಂದ ಕಸದ ರಾಶಿ ಜಾಸ್ತಿಯಾಗಿದೆ. ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ಕಸವನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು' ಎಂದರು.

ಹಸುಗಳನ್ನು ಉದ್ಯಾನದ ಒಳಗೆ ಕಟ್ಟದಂತೆ  ನಿಯಂತ್ರಣ ಮಾಡುವುದು ಅಸಾಧ್ಯವಾಗಿದೆ. ರಾತ್ರಿಯ ವೇಳೆ ಕೆಲವು ಹೋಟೆಲ್‌ಗಳಿಂದ, ಜ್ಯೂಸ್ ಅಂಗಡಿಯವರು ರಾತ್ರಿ ವೇಳೆ ವಾಹನಗಳಲ್ಲಿ ಬಂದು ಉದ್ಯಾನದ ಒಳಗಡೆ ಕಸವನ್ನು ಎಸೆದು ಹೋಗುತ್ತಾರೆ. ಸ್ಥಳೀಯರ ಸಹಕಾರವಿಲ್ಲದೆ ಸ್ಪಚ್ಚತೆ ಕಾಪಾಡಲು ಸಾಧ್ಯವಿಲ್ಲ.
-ಗೀತಾ ಶ್ರೀನಿವಾಸ ರೆಡ್ಡಿ, ಬಿಬಿಎಂಪಿ ಸದಸ್ಯೆ.

ಹೋಟೆಲ್ ಕೆಲಸ ಮುಗಿದ ನಂತರ ಹೋಟೆಲ್ ಸುತ್ತಮುತ್ತ ಶುಚಿಗೊಳಿಸುತ್ತೇವೆ. ಆದರೆ ಹೋಟೆಲ್ ಎದುರಿನಲ್ಲಿರುವ ಪಾಲಿಕೆಗೆ ಸೇರಿದ ಸ್ಥಳದಲ್ಲಿ ಕಸದ ರಾಶಿ ಇರುವುದರಿಂದ ಹೋಟೆಲ್‌ಗೆ ಬರಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಆರೋಗ್ಯದ ದೃಷ್ಟಿಯಿಂದ ಅತಿ ಬೇಗ ಕಸ ಮತ್ತು ಉದ್ಯಾನದ ಒಳಗಿರುವ ಹಸುಗಳನ್ನು ತೆರವುಗೊಳಿಸಬೇಕು.
- ಹೆಸರೇಳಲು ಬಯಸದ ಹೋಟೆಲ್ ಮಾಲೀಕ.

ಪಾಲಿಕೆಯವರನ್ನು ದೂರುವುದಕ್ಕಿಂತ ರಸ್ತೆಯ ಬದಿಯಲ್ಲಿ ಕಸ ಹಾಕುವುದು ಎಷ್ಟು ಸರಿ ಎಂಬುದನ್ನು ಮೊದಲು ಜನ ಅರಿಯಬೇಕು. ಇದರಲ್ಲಿ ನಮ್ಮ ಪಾಲು ಎಷ್ಟು ಎಂದು ಮೊದಲು ನಾವು ತಿಳಿಯಬೇಕು. ಜನರು ಈ ರೀತಿಯಾಗಿ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ಬಿಡಬೇಕು. ಕೆಲವು ಕೊಳೆಗೇರಿ ಜನರು ಹೀಗೆ ಮಾಡುತ್ತಿದ್ದಾರೆ.
-ಮಂಜುನಾಥ್, ಮೆಡಿಸಿನ್ ಡಿಸ್ಟ್ರಿಬ್ಯೂಟರ್.

ಮೊದಲು ಬೇರೆ ಕಡೆ ಹಸುಗಳನ್ನು ಕಟ್ಟಲಾಗುತ್ತಿತ್ತು, ಆದರೆ ಇತ್ತೀಚೆಗೆ ಉದ್ಯಾನದ ಮಧ್ಯದಲ್ಲಿ ಕಟ್ಟಲಾಗುತ್ತಿದೆ. ತುಂಬಾ ಕೆಟ್ಟ ವಾಸನೆ ಬರುತ್ತದೆ. ಮಳೆ ಬಂದರೆ ಎರಡು ಪಟ್ಟು ಜಾಸ್ತಿ ವಾಸನೆ ಬರುತ್ತದೆ. ಸಗಣಿಯನ್ನು ಮುಖ್ಯ ರಸ್ತೆಯ ಬಳಿಯೇ ಹುಡ್ಡೆ ಹಾಕಿರುವುದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು ಇದರಿಂದ ಕಾಯಿಲೆಗಳು ಹೆಚ್ಚಾಗುವ ಆತಂಕ ನಮ್ಮದು.   
- ಬೀರೇಶ್, ಆಟೊ ಮೊಬೈಲ್ ಅಂಗಡಿ ಸಹಾಯಕ.

ಮೊದಲು ಕಸವನ್ನು ತೆಗೆದು ಕೊಂಡು ಹೋಗಲು ಅಂಗಡಿಯ ಬಳಿಗೆ ಪಾಲಿಕೆ ನೌಕರರು ಬರುತ್ತಿದ್ದರು. ಆದರೆ ಇತ್ತೀಚೆಗೆ ನಾವೇ ಅವರನ್ನು ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಕಸವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದರೂ ಯಾರೂ ಬರುವುದಿಲ್ಲ
-ರಾಜೇಶ್, ಜ್ಯೂಸ್ ಅಂಗಡಿ ಮಾಲೀಕ.

ಪಾಲಿಕೆಗೆ ಸೇರಿದ ಜಾಗ ಇದಾಗಿರುವುದರಿಂದ ಯಾರು ಕೇಳುವವರೇ ಇಲ್ಲ. ಆದ್ದರಿಂದ ಜನ ಕಸವನ್ನು ತಂದು ಮುಖ್ಯ ರಸ್ತೆಯ ಬದಿಯಲ್ಲೇ ಎಸೆದು ಹೋಗುತ್ತಾರೆ. ಇದರ ಬಗ್ಗೆ ಪಾಲಿಕೆಯವರಿಗೆ ದೂರು ನೀಡಿದರು ಏನು ಪ್ರಯೋಜನವಾಗಿಲ್ಲ.
-ಮಂಜುನಾಥ, ನೆರಳಚ್ಚು ಅಂಗಡಿ ಮಾಲೀಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT