ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಭಾರತದಲ್ಲೇ ಪ್ರಥಮ ಮೆಟ್ರೊ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಭಾರತದಲ್ಲೇ ಪ್ರಥಮವಾಗಿ ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ಮೆಟ್ರೊ ರೈಲು ಸೇವೆ ವಿಶ್ವ ದರ್ಜೆಯದ್ದಾಗಿದೆ ಎಂದು ಗುರುವಾರ ನಗರದಲ್ಲಿ ನಡೆದ ಮೆಟ್ರೊ ರೈಲು ಸಂಚಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಬಣ್ಣಿಸಿದರು.

ಜಪಾನ್‌ನ ರಾಯಭಾರಿ ಅಕಿತಕ ಸಾಯ್ಕಿ ಮಾತನಾಡಿ, `ಕೆಲ ಕ್ಷಣಗಳ ಹಿಂದಷ್ಟೇ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿಗೆ ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡಿ ಬಂದಿದ್ದೇವೆ. ಟೋಕಿಯೊ ಮೆಟ್ರೊ ರೈಲಿನಷ್ಟೇ ಚೆನ್ನಾಗಿ ನಿರ್ಮಾಣಗೊಂಡಿದೆ~ ಎಂದು ಪ್ರಶಂಸಿಸಿದರು.

ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, `ಮೆಟ್ರೊ ಸಂಚಾರ ಪ್ರಾರಂಭವಾಗುವುದರೊಂದಿಗೆ ನಗರಾಭಿವೃದ್ಧಿಯಲ್ಲಿ ಹೊಸ ಮನ್ವಂತರ ಪ್ರಾರಂಭವಾಗಿದೆ~ ಎಂದರು.`ದೇಶದಲ್ಲಿ ಮೊದಲು ಪ್ರಾರಂಭವಾದ ದೆಹಲಿ ಮೆಟ್ರೊದಲ್ಲಿ ಇರುವ ಕೊರತೆಗಳು ಬೆಂಗಳೂರಿನ ಮೆಟ್ರೊ ನಿರ್ಮಾಣ ಸಂದರ್ಭದಲ್ಲಿ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಲಾಗಿದೆ~ ಎಂದು ಅವರು ಹೇಳಿದರು.

`ಮೆಟ್ರೊ ಮಾರ್ಗದ ನಿರ್ಮಾಣದಲ್ಲಿ 40 ದೇಶಗಳ ಸಹಯೋಗವನ್ನು ಬೇರೆ ಬೇರೆ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಅದೆಲ್ಲದರ ನಡುವೆ ಭಾರತೀಯರ ಶ್ರೇಷ್ಠ ತಂತ್ರಜ್ಞಾನದ ಚೈತನ್ಯ ಮೆಟ್ರೊ ಯೋಜನೆ ಜಾರಿಯಲ್ಲಿ ಅನಾವರಣಗೊಂಡಿದೆ. ಮೆಟ್ರೊ ಕನ್ನಡದ ಆಸ್ತಿ~ ಎಂದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಮಾತನಾಡಿ, `ದೆಹಲಿಯಲ್ಲಿ ಮೆಟ್ರೊ ನಿರ್ಮಾಣ ಸಂದರ್ಭದಲ್ಲಿ ನಾಗರಿಕರು ಕಿರಿಕಿರಿ ಅನುಭವಿಸಿದರು. ಆದರೆ ಒಂದಾದ ಮೇಲೆ ಒಂದು ಮಾರ್ಗ ಸಂಚಾರಕ್ಕೆ ಮುಕ್ತವಾದಂತೆ, ಮೆಟ್ರೊ ಪ್ರಯಾಣದ ಸುಖಕರ ಅನುಭವಕ್ಕೆ ರಾಷ್ಟ್ರ ರಾಜಧಾನಿಯ ನಾಗರಿಕರು ಮಾರುಹೋಗಿದ್ದಾರೆ. ಅದೇ ಅನುಭವ ಬೆಂಗಳೂರಿಗರಿಗೂ ಆಗಲಿದೆ~ ಎಂದರು.

ಸಂಸದ ಅನಂತಕುಮಾರ್, `ಬೆಂಗಳೂರಿಗರಿಗೆ ದೀಪಾವಳಿ ಮಾತ್ರವಲ್ಲ; ಇಡೀ ದಕ್ಷಿಣ ಭಾರತಕ್ಕೆ ವೆುಟ್ರೊವಳಿ ಬಂದಿದೆ~ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, `ಸರ್ ಎಂ.ವಿಶ್ವೇಶ್ವರಯ್ಯನವರು 1913ರಲ್ಲೇ ಬೆಂಗಳೂರಿಗೆ ಟ್ರಾಮ್ ವೇ ಸಾರಿಗೆ ಅಗತ್ಯವಿದೆ ಎಂದು ಹೇಳಿದ್ದರು. ಅವರ ಆಶಯ ಇಂದು ಮೆಟ್ರೊ ರೂಪದಲ್ಲಿ ಸಾಕಾರಗೊಳ್ಳುತ್ತಿದೆ~ ಎಂದರು.

`1980ರ ದಶಕದಿಂದಲೂ ಮೆಟ್ರೊ ಯೋಜನೆಯ ಪ್ರಸ್ತಾಪ ಆಗುತ್ತಿತ್ತು. 1994ರಲ್ಲಿ ಬೆಂಗಳೂರು ಮಹಾನಗರ ತ್ವರಿತ ಸಾರಿಗೆ ನಿಗಮವು 2005ರಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮವಾಗಿ ಬದಲಾಗಿ ಮೆಟ್ರೊ ಯೋಜನೆಯನ್ನು ನನಸು ಮಾಡಿದೆ~ ಎಂದರು.

`ನನ್ನ ಜೀವನದಲ್ಲಿ ಅವಿಸ್ಮರಣೀಯ ಸಮಾರಂಭವಿದು. ನಾನು ಮುಖ್ಯಮಂತ್ರಿ ಆಗಿ, ಮೆಟ್ರೊ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಅಪಾರ ಸಂತಸ ತಂದಿದೆ~ ಎಂದು ಹೇಳಿದ ಅವರು,

`2008ರಲ್ಲಿ ನಮ್ಮ ಸರ್ಕಾರ ಬಂದಾಗ ಮೆಟ್ರೊ ಕಾಮಗಾರಿಗಳು ಶೇಕಡಾ 1ರಷ್ಟು ಪ್ರಗತಿಯನ್ನು ಸಾಧಿಸಿರಲಿಲ್ಲ. ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಸಕ್ತಿಯ ಫಲವಾಗಿ ರೀಚ್- 1 ಸಿದ್ಧವಾಗಿದೆ~ ಎಂದು ಅವರು ತಿಳಿಸಿದರು.

`ಮೆಟ್ರೊದ ಬೈಯಪ್ಪನಹಳ್ಳಿ ಡಿಪೊ ಬಳಿ ಬೆಂಗಳೂರು ಸಂತೆ ಪ್ರಾರಂಭಿಸಲಾಗುವುದು. ಅಲ್ಲಿ ಗ್ರಾಮೀಣ ಕುಶಲಕರ್ಮಿಗಳು ತಯಾರಿಸುವ ವಸ್ತುಗಳಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು~ ಎಂದು ಅವರು ಹೇಳಿದರು.
 
ಇದೇ ಸಂದರ್ಭದಲ್ಲಿ ಜಪಾನ್ ದೇಶದ ಸುನಾಮಿ ಪರಿಹಾರ ಕಾರ್ಯಕ್ರಮಗಳಿಗೆ ಒಂದು ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಅಕಿತಕ ಸಾಯ್ಕಿ ಅವರಿಗೆ ಹಸ್ತಾಂತರ ಮಾಡಲಾಯಿತು.

ಸ್ನೇಹದ ಫಲ: ಮೆಟ್ರೊ ಬಂತು ಬೇಗ
`ನಾನು ಮತ್ತು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಬಹಳ ಹಳೆಯ ಸ್ನೇಹಿತರು. ನಾನು ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದಾಗಿನಿಂದ ಅವರ ಪರಿಚಯವಿದೆ. ಅವರ ಸ್ನೇಹದ ಫಲವಾಗಿ ಮೆಟ್ರೊ ಸುರಕ್ಷತಾ ಪ್ರಮಾಣ ಪತ್ರ ಬೇಗ ಸಿಕ್ಕಿತು. ಪರಿಣಾಮ ಈ ತಿಂಗಳಲ್ಲೇ ಮೆಟ್ರೊ ಸಂಚಾರ ಪ್ರಾರಂಭಿಸಲು ಸಾಧ್ಯವಾಯಿತು~ ಎಂದು ಸದಾನಂದಗೌಡ ಹೇಳಿದರು.

`ದೆಹಲಿಯ ಸೌತ್ ಅವೆನ್ಯೂದ 181ನೇ ಸಂಖ್ಯೆಯ ವಸತಿ ಗೃಹದಲ್ಲಿ ತ್ರಿವೇದಿ ಇದ್ದರು. ಆ ಮನೆಯ ಮೊದಲ ಮಹಡಿಯಲ್ಲಿ ನಾನಿದ್ದೆ. ಅಲ್ಲದೇ ನಾವಿಬ್ಬರೂ ವಾಣಿಜ್ಯ ಸ್ಥಾಯಿ ಸಮಿತಿಯಲ್ಲಿ ಸದಸ್ಯರಾಗಿದ್ದೆವು.

ಅವರು ಕೇಂದ್ರ ಸಂಪುಟ ಸಚಿವರಾದ ಸಂದರ್ಭದಲ್ಲೇ ನಾನಿಲ್ಲಿ ಮುಖ್ಯಮಂತ್ರಿಯಾದೆ~ ಎಂದು ಅವರು ನಗುತ್ತಾ ನುಡಿದರು.

ಗೌಡರ ಮಾತಿಗೆ ಪುರಾವೆ ನೀಡುವಂತೆ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು, `ಮೆಟ್ರೊ ಉದ್ಘಾಟನೆ ಇನ್ನು 3 ತಿಂಗಳು ವಿಳಂಬವಾಗುತ್ತಿತ್ತು. ತ್ರಿವೇದಿ ಅವರು ಮುತುವರ್ಜಿ ವಹಿಸಿ, ಆದಷ್ಟು ಬೇಗ ಸುರಕ್ಷತಾ ಪ್ರಮಾಣ ಪತ್ರ ದೊರಕಿಸಿಕೊಟ್ಟರು~ ಎಂದರು.

ಎಲ್ಲ ಮೆಟ್ರೊಗೂ ಜಪಾನ್ ಸಹಕಾರ
ನಗರದ `ನಮ್ಮ ಮೆಟ್ರೊ~ಗೆ ಮಾತ್ರವಲ್ಲ; ದೆಹಲಿ, ಚೆನ್ನೈ, ಕೋಲ್ಕೊತ್ತ ಮೆಟ್ರೊ ಯೋಜನೆಗಳಿಗೆ ಜಪಾನ್ ನೆರವು ನೀಡಿದೆ ಎಂದು ಆ ದೇಶದ ರಾಯಭಾರಿ ಅಕಿತಕ ಸಾಯ್ಕಿ ಹೇಳಿದರು.`ಜಪಾನ್‌ನಲ್ಲಿ ಜಗತ್ತಿನಲ್ಲೇ ಅತ್ಯುತ್ತಮವಾದ ಮೆಟ್ರೊ ಸಾರಿಗೆ ವ್ಯವಸ್ಥೆ ಇದೆ. ನಗರ ಸಮೂಹ ಸಾರಿಗೆ ವ್ಯವಸ್ಥೆಯಾಗಿ ಮೆಟ್ರೊ ಮಾರ್ಗ ಜಪಾನ್‌ನಲ್ಲಿ ನಿರ್ಮಾಣವಾಗಿದ್ದು 84 ವರ್ಷಗಳ ಹಿಂದೆ~ ಎಂದರು.

`1927ರಲ್ಲಿ ಟೋಕಿಯೊದಲ್ಲಿ 2.2 ಕಿ.ಮೀ. ಉದ್ದದ ಮೊದಲ ಮೆಟ್ರೊ ಮಾರ್ಗ ಸಿದ್ಧವಾಯಿತು. ಈಗ ಜಪಾನ್‌ನ ಮೆಟ್ರೊ ವ್ಯವಸ್ಥೆಯಲ್ಲಿ ಪ್ರತಿದಿನ 86 ಲಕ್ಷ ಜನರು ಪ್ರಯಾಣಿಸುತ್ತಾರೆ~ ಎಂದು ಅವರು ವಿವರಿಸಿದರು.

`ಭಾರತ- ಜಪಾನ್ ನಡುವೆ 60 ವರ್ಷಗಳ ರಾಜತಾಂತ್ರಿಕ ಸ್ನೇಹದ ಇತಿಹಾಸವಿದೆ. ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ನೆರವು ನೀಡುವುದರಿಂದ ಜಪಾನ್‌ಗೂ ಲಾಭವಿದೆ~ ಎಂದು ಅವರ ಹೇಳಿದರು.
ಮೊದಲಿಗೆ `ಎಲ್ಲರಿಗೂ ನನ್ನ ನಮಸ್ಕಾರ~ ಮತ್ತು ಕೊನೆಯಲ್ಲಿ `ನನ್ನ ಹೃತಪೂರ್ವಕ ಅಭಿನಂದನೆಗಳು~ ಎಂದು ಅಕಿತಕ ಹೇಳಿದಾಗ ಭಾರಿ ಕರತಾಡನ ಕೇಳಿ ಬಂತು.

ಬಿಐಎಎಲ್‌ಗೆ ಸಂಪರ್ಕ
`ನಗರದ ಕೇಂದ್ರ ಭಾಗದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಸುಮಾರು 34 ಕಿ.ಮೀ. ಉದ್ದದ ಅತಿ ವೇಗದ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮವೇ ಕೈಗೊಳ್ಳಲಿದೆ~ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ತಿಳಿಸಿದರು.

`ಸುಮಾರು 6 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಮಾರ್ಗದಲ್ಲಿ ರೈಲು ಸಂಚಾರದ ಗರಿಷ್ಠ ವೇಗ ಗಂಟೆಗೆ 145 ಕಿ.ಮೀ.ಯಷ್ಟು ಇರಲಿದೆ~ ಎಂದು ಅವರು ತಿಳಿಸಿದರು.

ಸಂಸದ ಅನಂತಕುಮಾರ್, `ಬಿಐಎಎಲ್‌ಗೆ ಸಂಪರ್ಕ ಕಲ್ಪಿಸಲು ಅತಿ ವೇಗದ ರೈಲು ಯೋಜನೆ ಬೇಕಾಗಿಲ್ಲ. ಬದಲಿಗೆ ಮೆಟ್ರೊ ವಿಸ್ತರಿಸಿದರೆ ನಗರದ ಎಲ್ಲೆಡೆ ಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ~ ಎಂದರು.


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT