ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ ನಾಟಕವಾಡಿ ಕೊನೆಗೆ ತಪ್ಪೊಪ್ಪಿಕೊಂಡ ಗುತ್ತಿಗೆದಾರ

Last Updated 16 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ರಾಣೆಬೆನ್ನೂರ: ಬ್ಯಾಂಕಿನಿಂದ ಬರುವಾಗ ಕಣ್ಣಿಗೆ ಖಾರದ ಪುಡಿ ಎರಚಿ ಕೈಯಲ್ಲಿದ್ದ ನಾಲ್ಕು ಲಕ್ಷ ರೂ. ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ ವ್ಯಕ್ತಿಯೇ ದರೋಡೆಯಾಗಿಲ್ಲ ಎಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಘಟನೆ ಬುಧವಾರ ನಗರದಲ್ಲಿ ನಡೆದಿದೆ.

ನಗರದ ಪ್ರಶಾಂತ ಪಾಟೀಲ ಎಂಬ ಗುತ್ತಿಗೆದಾರನೇ ಈ ರೀತಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ವ್ಯಕ್ತಿ. ಈತನು ತನ್ನ ಕುಟುಂಬದ ಸದಸ್ಯರಲ್ಲಿ 4 ಲಕ್ಷ ರೂ. ಕೈಗಡವಾಗಿ ಪಡೆದುಕೊಂಡಿದ್ದನು.

ಮನೆಯ ಕುಟುಂಬದ ಸದಸ್ಯರು ಸಾಲ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೇ ತಕ್ಷಣವೇ ಸಾಲವನ್ನು ವಾಪಸ್ಸು ಮಾಡುವಂತೆ ತಾಕೀತು ಮಾಡಿದ್ದಾರೆ. ಮನೆಯವರ ಈ ವರ್ತನೆಯಿಂದ ಸಂದಿಗ್ದ ಸ್ಥಿತಿಗೆ ಸಿಲುಕಿದ ಪ್ರಶಾಂತ ಸಾಲವನ್ನು ವಾಪಸ್ಸು ಮಾಡಲು ಸಾಧ್ಯವಾಗದೇ ದರೋಡೆಯ ನೆಪವೊಡ್ಡಿದ್ದಾನೆ.

ಅದಕ್ಕೊಂದು ದರೋಡೆಯ ವಾತಾವರಣ ಸೃಷ್ಠಿಸಿ ಬುಧವಾರ ಮಧ್ಯಾಹ್ನ ನಗರದ ಹೊರವಲಯದ ಕಮದೋಡ ಬಳಿಯ ಕೇಳಸೇತುವೆಯಲ್ಲಿ ತಾನೇ ಮುಖಕ್ಕೆ ಹಾಗೂ ಕಣ್ಣಿಗೆ ಖಾರದ ಪುಡಿಯನ್ನು ಎರಚಿಕೊಂಡು ಪೊಲೀಸ್‌ರಿಗೆ ದೂರವಾಣಿ ಮೂಲಕ ಕರೆ ಮಾಡಿ ತನ್ನಲ್ಲಿದ್ದ ಹಣ ದರೋಡೆಯಾಗಿದೆ ಎಂದು ತಿಳಿಸಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೂ ಸಹ ಬ್ಯಾಂಕಿನಿಂದ ತಾನು ನಾಲ್ಕು ಲಕ್ಷ ರೂ.ತೆಗೆದುಕೊಂಡು ಬರುತ್ತಿದ್ದಾಗ ದರೋಡೆಕೋರರು ಕಣ್ಣಿಗೆ ಖಾರದ ಪುಡಿ ಎರಚಿ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರು ಈತನ ಮಾತು ನಂಬಿ ಆತನನ್ನು ಠಾಣೆಗೆ ಕರೆತಂದು ವಿವರ ಪಡೆಯುತ್ತಿದ್ದಾಗ ಆತ ಸಂಶಯಾಸ್ಪದವಾಗಿ ಹೇಳಿಕೆ ನೀಡುತ್ತಿರುವುದನ್ನು ಕಂಡು ಅವನ ಬಗ್ಗೆಯೇ ಸಂಶಯಗೊಂಡ ಮತ್ತಷ್ಟು ವಿವರವನ್ನು ಅವನಿಂದ ಕೇಳಿ ಪಡೆಯುವಾಗ ಆತನೇ ಸುಳ್ಳು ಹೇಳುತ್ತಿರುವುದನ್ನು ಪೊಲೀಸರು ಖಚಿತ ಮಾಡಿಕೊಂಡಿದ್ದಾರೆ.

ಪೊಲೀಸರಿಗೆ ತಾನು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗುತ್ತಿದ್ದಂತೆ ತಾನೇ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಪೊಲೀಸರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ. ಪತ್ರ ಬರೆಸಿಕೊಂಡು ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT