ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನಕ್ಕೆ ಮುಗಿಬಿದ್ದ ಅಭಿಮಾನಿಗಳು

Last Updated 20 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ತುಮಕೂರು: `ಕೈ ಮುಗಿದು ಏರು ಇದು ಕನ್ನಡದ ತೇರು, ನಂಬಿ ಬಂದು ಕೂರು ಇದು ಕನ್ನಡಿಗನ ತೇರು, ಅತಿರಥ ಮಹಾರಥ ಸಾರಥಿ, ಸೂರ್ಯ ನಮ್ಗೆ ಎತ್ತುತ್ತಾನೆ ಆರತಿ...~

ನಗರದ ಹೊರವಲಯದಲ್ಲಿರುವ ಕ್ಯಾತ್ಸಂದ್ರದಿಂದ ಗಾಯತ್ರಿ ಚಿತ್ರಮಂದಿ ರದವರೆಗೆ ಎಲ್ಲರ ಬಾಯಲ್ಲಿ ಇದೇ ಹಾಡು. ಗೂಡ್ಸ್ ಮೆಟಡೋರ್‌ನಲ್ಲಿ ತುರುಕಿದಂತೆ ತುಂಬಿದ್ದ ಸೌಂಡ್‌ಬಾಕ್ಸ್ ಗಳು ಮುಂಜಾನೆಯಿಂದ ದರ್ಶನ್ ಅಭಿನಯದ ವಿವಿಧ ಚಿತ್ರಗಳ ಹಿಟ್ ಹಾಡುಗಳನ್ನು ಮೊಳಗಿಸುತ್ತಿತ್ತು. ಡೊಳ್ಳು ತಂಡದ ಅಬ್ಬರದ ದನಿ ಅಭಿಮಾನಿಗಳನ್ನು ಪ್ರೋತ್ಸಾಹಿಸುತ್ತಿತ್ತು.

ದರ್ಶನ್ ಅಭಿಮಾನಿಗಳ ಪಾಲಿಗೆ ಬುಧವಾರದ ಸುಡು ಬಿಸಿಲು ತಣ್ಣನೆ ಬೆಳದಿಂಗಳಾಗಿತ್ತು. ನೆಚ್ಚಿನ ನಟನನ್ನು ನೋಡುವ ತೃಪ್ತಿಯ ಮುಂದೆ ಪೊಲೀಸರ ಲಾಠಿ ಏಟು ಸತ್ವ ಕಳೆದು ಕೊಂಡಿತ್ತು.

ಈಚೆಗಷ್ಟೇ ತೀವ್ರ ಅನಾರೋಗ್ಯದಿಂದ ಬಳಲಿದ್ದ ದರ್ಶನ್ ಮುಖಕ್ಕೆ ಅಭಿಮಾನಿ ಗಳ ಅಭಿಮಾನ ಹೊಸ ತೇಜಸ್ಸು ನೀಡಿತ್ತು. ತಮ್ಮತ್ತ ತೂರಿ ಬಂದ ಹೂ ಪಕಳೆಗಳನ್ನು ಉತ್ಸಾಹದಿಂದ ಹಿಡಿದು, ಮತ್ತೆ ಅಭಿಮಾನಿಗಳತ್ತ ತೂರುತ್ತಿದ್ದರು.

ಫುಟ್‌ಪಾತ್, ರಸ್ತೆಯ ಮೀಡಿಯನ್‌ಅಕ್ಕಪಕ್ಕದ ಎತ್ತರದ ಕಟ್ಟಡಗಳು, ರಸ್ತೆಬದಿಗೆ ನಿಂತ ವಾಹನಗಳಲ್ಲಿ ಅಭಿಮಾನಿಗಳು ನಿಂತು- ಕುಳಿತು ದರ್ಶನ್‌ಗಾಗಿ ಕಾತರದಿಂದ ಕಾಯುತ್ತಿದ್ದರು. ಯಾವುದೇ ಬೃಹತ್ ವಾಹನ ಎದುರಿಗೆ ಕಂಡರೂ ಸಿಳ್ಳೆ, ಚಪ್ಪಾಳೆ, ಜಯಕಾರ ಮೊಳಗುತ್ತಿದ್ದವು. ಜನ ರಸ್ತೆಯತ್ತ ಓಡೋಡಿ ಬಂದು ಪೊಲೀಸರ ಲಾಠಿ ಏಟು ತಿಂದು ನಗುತ್ತಾ ಹಿಂದಿರುಗುತ್ತಿದ್ದರು.

ಸಾಕಷ್ಟು ಸಂಖ್ಯೆಯಲ್ಲಿ ಹುಡುಗಿ ಯರೂ ತಮ್ಮ ನೆಚ್ಚಿನ ನಟನ `ದರ್ಶನ~ ಕ್ಕೆ ಬಂದಿದ್ದರು. ಕಾಲೇಜು ವಿದ್ಯಾರ್ಥಿ ಗಳು ಬ್ಯಾಗ್ ತೂಗು ಹಾಕಿಕೊಂಡೇ ಕಾದು ನಿಂತಿದ್ದರು. ಗಳಿಗೆಗೊಮ್ಮೆ `ದರ್ಶನ್ ದಾಬಸ್‌ಪೇಟೆ ಬಿಟ್ರಂತೆ- ಕ್ಯಾತ್ಸಂದ್ರಕ್ಕೆ ಬಂದ್ರಂತೆ~ ಎಂಬ ಗಾಳಿಸುದ್ದಿ ಮುಂಜಾನೆ 11ರಿಂದ ನಗರದಾದ್ಯಂತ ಹರಿದಾಡುತ್ತಿತ್ತು. ಕೊನೆಗೂ ದರ್ಶನ್ ಸಿದ್ದಗಂಗಾ ಮಠಕ್ಕೆ ಬಂದಾಗ 2.45 ದಾಟಿತ್ತು.

ಶಿವಕುಮಾರ ಸ್ವಾಮೀಜಿ ಆಶೀರ್ವ ಚನ ಪಡೆದು, ಮಠದಲ್ಲಿಯೇ ಊಟ ಸ್ವೀಕರಿಸಿದ ನಂತರ ತೆರೆದ ವಾಹನದಲ್ಲಿ ರೋಡ್ ಶೋ ಪ್ರಾರಂಭಿಸಿದರು. ಕ್ಯಾತ್ಸಂದ್ರ, ಬಟವಾಡಿ, ಎಸ್‌ಪಿ ಕಚೇರಿ, ಶಿವಕುಮಾರ ಸ್ವಾಮೀಜಿ ಸರ್ಕಲ್, ಭದ್ರಮ್ಮ ಸರ್ಕಲ್, ಗಾಯತ್ರಿ ಚಿತ್ರ ಮಂದಿರ ವೃತ್ತದ ಬಳಿ ಜನ ಕಿಕ್ಕಿರಿದು ತುಂಬಿದ್ದರು. ಟೌನ್‌ಹಾಲ್ ವೃತ್ತದ ವರೆಗೆ ತೆರೆದ ವಾಹನದಲ್ಲಿ ತೆರಳಿದರು.

ವಾಹನಕ್ಕೆ ಕಲ್ಲು: ಗಾಯತ್ರಿ ಚಿತ್ರಮಂದಿರದ ಸಮೀಪ ನಿಂತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಗೌತಮ್ ಅವರ ಜೀಪ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವ್ಯಾನ್‌ನ ಗಾಜುಗಳು ಕಿಡಿಗೇಡಿಗಳ ಕಲ್ಲಿಗೆ ಪುಡಿಪುಡಿಯಾದವು. ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.

ಸಂಚಾರ ಅಸ್ತವ್ಯಸ್ತ: ದರ್ಶನ್ ಸಮಯಕ್ಕೆ ಸರಿಯಾಗಿ ನಗರಕ್ಕೆ ಆಗಮಿ ಸಲಿಲ್ಲ. ದಿನವಿಡೀ ಬಿ.ಎಚ್.ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಬೆಂಗಳೂರಿನಿಂದ ಬರುತ್ತಿದ್ದ ಬಸ್‌ಗಳು ಡಿಸಿ ಕಚೇರಿ ಬಳಸಿ ಬಸ್ ನಿಲ್ದಾಣ ತಲುಪಿದವು. ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ನಿಲ್ದಾಣಕ್ಕೆ ತೆರಳುವ ರಸ್ತೆಯನ್ನು ದರ್ಶನ್ ಅಭಿಮಾನಿಗಳು ಆಕ್ರಮಿಸಿಕೊಂಡಿದ್ದರು.

ಎಸ್.ಎಸ್.ವೃತ್ತದಿಂದ ಆಕ್ಸಿಸ್ ಬ್ಯಾಂಕ್‌ವರೆಗೆ ಮೀಡಿಯನ್ ಒಂದೇ ಬದಿಯಲ್ಲಿ ಎರಡು ಕಡೆಯ ವಾಹನಗಳು ಸಂಚರಿಸಿದವು. ದರ್ಶನ್ ದರ್ಶನವಾಗುವ ಹೊತ್ತಿಗೆ ಪೊಲೀಸರು ಹೈರಾಣಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT