ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ಜಾಮೀನು: ಇಂದು ಆದೇಶ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ವಾದ- ಪ್ರತಿವಾದ ಆಲಿಸಿದ ನಗರದ ಸೆಷನ್ಸ್ ನ್ಯಾಯಾಲಯ ಅದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

ನ್ಯಾಯಾಧೀಶರಾದ ಆರ್.ಬಿ.ಬೂದಿಹಾಳ್ ಅವರು ಬೆಳಿಗ್ಗೆ ವಿಚಾರಣೆ ಆರಂಭಿಸಿದರು. ದರ್ಶನ್ ಪರವಾಗಿ ವಕೀಲ ಎಸ್.ಕೆ.ವೆಂಕಟರೆಡ್ಡಿ ಅವರು ವಾದ ಮಂಡಿಸಿದರು. ಇದೊಂದು ಕೌಟುಂಬಿಕ ಕಲಹ ಆಗಿರುವುದರಿಂದ ದರ್ಶನ್‌ಗೆ ಜಾಮೀನು ನೀಡಬೇಕು ಎಂದು ವಾದಿಸಿದರು.

ಕಕ್ಷಿದಾರನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 498ಎ ಪ್ರಕಾರ ದೂರು ದಾಖಲಿಸಲಾಗಿದೆ. ಆದರೆ ಈ ಸೆಕ್ಷನ್ ಅನ್ವಯವಾಗುವುದಿಲ್ಲ. ಕಕ್ಷಿದಾರ ಅಥವಾ ಆವರ ಕುಟುಂಬದವರು ವಿಜಯಲಕ್ಷ್ಮಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿಲ್ಲ. ಮಾನಸಿಕ- ದೈಹಿಕ ಹಿಂಸೆಯನ್ನೂ ನೀಡಿಲ್ಲ. ಎಲ್ಲಕ್ಕೂ ಮಿಗಿಲಾಗಿ ವಿಜಯಲಕ್ಷ್ಮಿ ಅವರೇ ದೂರು ವಾಪಸ್ ಪಡೆಯುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದರು.

ಐಪಿಸಿ ಸೆಕ್ಷನ್ 307ಕ್ಕೆ (ಕೊಲೆ ಯತ್ನ) ಬದಲಾಗಿ 324ಕ್ಕೆ (ಗಾಯಗೊಳಿಸುವುದು) ಬದಲಾಯಿಸಿ ಎಂದು ಮೆಮೊ ಸಲ್ಲಿಸಿದ್ದಾರೆ. ದೂರುದಾರರೇ ಪ್ರಕರಣ ಹಿಂದಕ್ಕೆ ಪಡೆಯುವುದಾಗಿ ಹೇಳಿರುವುದರಿಂದ ಸಾಕ್ಷ್ಯ ನಾಶಪಡಿಸುವ ಪ್ರಶ್ನೆಯೇ ಬರುವುದಿಲ್ಲ. ಅವರಿಬ್ಬರ ಮುಂದಿನ ಜೀವನವನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ತೀವ್ರ ಆಕ್ಷೇಪ: ಪತ್ನಿ ಮತ್ತು ಮೂರು ವರ್ಷದ ಮಗನನ್ನು ಕೊಲೆ ಮಾಡಲು ಯತ್ನಿಸಿರುವ ಆರೋಪ ಎದುರಿಸುತ್ತಿರುವ ದರ್ಶನ್ ಅವರಿಗೆ ಜಾಮೀನು ನೀಡುವುದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಅಗಸಿಮನಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅರ್ಧ ಗಂಟೆಗೂ ಹೆಚ್ಚು ಕಾಲ ಸುದೀರ್ಘ ವಾದ ಮಂಡಿಸಿದ ಅವರು, `34 ಚಲನಚಿತ್ರಗಳಲ್ಲಿ ಅಭಿನಯಿಸಿರುವ ದರ್ಶನ್ ಒಬ್ಬ ಪ್ರಮುಖ ನಟ. ಬೆಳ್ಳಿ ತೆರೆಯ ಮೇಲೆ ಆದರ್ಶ ಎನಿಸುವ ಪಾತ್ರ ಮಾಡುವ ಅವರನ್ನು ಅಭಿಮಾನಿಗಳು ಅನುಸರಿಸುತ್ತಾರೆ. ಇಂತಹ ನಟ ಪತ್ನಿಯ ಜತೆ ನಡೆದುಕೊಂಡಿರುವ ರೀತಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ~ ಎಂದರು.

`ಪತ್ನಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಮೂರು ವರ್ಷದ ಮಗನ ಕತ್ತನ್ನು ಹಿಡಿದು ಮೇಲಕ್ಕೆತ್ತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಕೊಲೆ ಯತ್ನವೇ ಆಗಿದೆ. ಈ ಹಿಂದೆ ಸಹ ವಿಜಯಲಕ್ಷ್ಮಿ ಅವರ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ~ ಎಂದು ವಾದಿಸಿದರು.

`ವಿಜಯಲಕ್ಷ್ಮಿ ನೀಡಿರುವ ದೂರಿನಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ಚಪ್ಪಲಿಯಿಂದ ಹೊಡೆದಿದ್ದಾರೆ ಮತ್ತು ಸಿಗರೇಟ್‌ನಿಂದ ಸಹ ಸುಟ್ಟಿದ್ದಾರೆ. ಹಿಂದೆಯೂ ಅವರು ಹಲ್ಲೆ ನಡೆಸಿದ್ದ ಬಗ್ಗೆ ದೂರಿನಲ್ಲಿ ಮಾಹಿತಿ ಇದೆ. ಇದು ಅವರ ಮನಸ್ಥಿತಿ ಮತ್ತು ಮೃಗೀಯ ವರ್ತನೆಯನ್ನು ಬಿಂಬಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಬಾರದು~ ಎಂದು ಅಗಸಿಮನಿ ವಾದಿಸಿದರು.

`ಸಾವಿರಾರು ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಹ ಅವರಿಗಿದೆ. ಆದ್ದರಿಂದ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಸೆಕ್ಷನ್ 307ನ್ನು 324ಕ್ಕೆ ಬದಲಾವಣೆ ಮಾಡಿ ಎಂದು ಮೆಮೊ ಸಲ್ಲಿಸುವಂತೆ ತನಿಖಾಧಿಕಾರಿಯ ಮೇಲೆ ಪ್ರಭಾವ ಬೀರಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ~ ಎಂದು ಅವರು ವಾದ ಮಂಡಿಸಿದರು.

`ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವವರೆಗೂ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು~ ಎಂದರು.

`ದರ್ಶನ್ ಮೂರು ಗಂಟೆಗಳ ಕಾಲವೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಲಿಲ್ಲ. ಸಧೃಡ ಕಾಯರಾಗಿರುವ ದರ್ಶನ್ ಅವರಿಗೆ ಕಾಯಿಲೆಗಳು ಇರುವ ಬಗ್ಗೆಯೂ ಅನುಮಾನವಿದೆ~ ಎಂದರು. ಎರಡೂ ಕಡೆಯ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮಂಗಳವಾರ ಆದೇಶ ನೀಡುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT