ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ದಂಪತಿ ವಿವಾದ: ನ್ಯಾಯಾಂಗ ನಿಂದನೆ ದಾಖಲು

Last Updated 14 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಚಿತ್ರನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಡುವೆ ರಾಜಿ ಸಂಧಾನ ನಡೆಸಲು ಪ್ರಯತ್ನಿಸಿರುವ ಚಿತ್ರನಟರಾದ ಅಂಬರೀಷ್, ಜಗ್ಗೇಶ್, ವಿಜಯ್, ರಾಕ್‌ಲೈನ್ ವೆಂಕಟೇಶ್ ವಿರುದ್ಧ ಬುಧವಾರ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ.

ವಕೀಲ ಎ.ವಿ.ಅಮರನಾಥನ್ ಅವರು ಎಲ್ಲರ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುವಾಗ, ವಿಜಯಲಕ್ಷ್ಮಿ ಅವರ ಮೇಲೆ ಒತ್ತಡ ಹೇರಿ ಪತಿಯ ವಿರುದ್ಧದ ದೂರನ್ನು ವಾಪಸು ಪಡೆದುಕೊಳ್ಳುವಂತೆ ಇವರೆಲ್ಲ ಒತ್ತಾಯ ಮಾಡಿದ್ದು, ಇದು ನ್ಯಾಯಾಂಗದ ಪ್ರಕ್ರಿಯೆಯ ಮಧ್ಯೆ ಪ್ರವೇಶಿಸಿದಂತೆ. ಇದು ನ್ಯಾಯಾಂಗ ನಿಂದನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನಿಯಮದ ಪ್ರಕಾರ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದಾಗ ಅದನ್ನು ಮೊದಲು ಅಡ್ವೊಕೇಟ್ ಜನರಲ್ ಮುಂದಿಟ್ಟು ನ್ಯಾಯಮೂರ್ತಿಗಳ ಮುಂದೆ ಅರ್ಜಿ ಸಲ್ಲಿಸುವ ಸಂಬಂಧ ಅನುಮತಿ ಪಡೆದುಕೊಳ್ಳಬೇಕು (ಒಂದು ವೇಳೆ ಅನುಮತಿ ನೀಡದಿದ್ದರೆ ನೇರವಾಗಿ ಅರ್ಜಿ ಸಲ್ಲಿಸಲೂ ಕಾನೂನಿನಡಿ ಅವಕಾಶ ಇದೆ). ಈ ಹಿನ್ನೆಲೆಯಲ್ಲಿ ಅವರ ಮುಂದೆ ಅರ್ಜಿ ಸಲ್ಲಿಸಲಾಗಿದೆ.

`ಭಿಕ್ಷುಕರನ್ನು ತೆರವುಗೊಳಿಸಬೇಡಿ~
ನಗರದ ಮಾಗಡಿ ರಸ್ತೆಯಲ್ಲಿ ಭಿಕ್ಷುಕರ ಕಾಲೋನಿಯಲ್ಲಿ ಇರುವ ಭಿಕ್ಷುಕರನ್ನು ತನ್ನ ಮುಂದಿನ ಆದೇಶದವರೆಗೆ ತೆರವುಗೊಳಿಸದಂತೆ ಹೈಕೋರ್ಟ್ ಬುಧವಾರ ಸರ್ಕಾರಕ್ಕೆ ಆದೇಶಿಸಿದೆ.

ಇಲ್ಲಿಯ ಸುಮಾರು 120 ಎಕರೆ ಜಾಗವನ್ನು ಆಸ್ಪತ್ರೆ, ಸಮ್ಮೇಳನ ಸಭಾಂಗಣ ಸೇರಿದಂತೆ ಇತರ ಬಳಕೆಗೆ ನೀಡುವ ಕುರಿತು 2010ರ ಜೂನ್ 10ರಂದು ಹೊರಡಿಸಲಾದ ಆದೇಶ ರದ್ದತಿಗೆ ಕೋರಿ `ಹೆಲ್ತ್ ಫೌಂಡೇಷನ್~ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ವಿವಾದದ ಕುರಿತು ಅಂತಿಮ ತೀರ್ಮಾನಕ್ಕೆ ಬರುವಂತೆ ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.

ನಕಲಿ ಸಂಘ ಆರೋಪ: ನೋಟಿಸ್‌ಗೃಹ ನಿರ್ಮಾಣ ಸಹಕಾರ ಸಂಘವೊಂದಕ್ಕೆ ನಗರದ ಬೇಗೂರು ಬಳಿ 66.22 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
`ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘ~ ಎಂಬ ಹೆಸರಿನ ಈ ಸಂಘವು ನಕಲಿ ಸಂಘವಾಗಿದ್ದರೂ ಜಮೀನು ಮಂಜೂರು ಆಗಿದೆ ಎನ್ನುವುದು ಕೆ.ಸೋಮ ಎನ್ನುವವರ ದೂರು. ಈ ಸಂಘದಲ್ಲಿನ ಅರ್ಹ ಸದಸ್ಯರ ಪಟ್ಟಿ ತಯಾರಿಸಲು ಆದೇಶಿಸುವಂತೆ ಹಾಗೂ ಜಮೀನು ಮಂಜೂರು ಮಾಡಿರುವ ಆದೇಶ ರದ್ದತಿಗೆ ಅರ್ಜಿದಾರರು ಕೋರಿದ್ದಾರೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ, ಸಂಘ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT