ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ಪ್ರಕರಣ: ಶೀಘ್ರ ವಿಚಾರಣೆಗೆ ನಕಾರ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ನಟ ದರ್ಶನ್‌ಗೆ ಇನ್ನೂ ಕನಿಷ್ಠ ಎರಡು ವಾರ ಜೈಲೇ ಗತಿ. ಕಾರಣ, ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿ ಗುರುವಾರ ಆದೇಶಿಸಿದೆ.

ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ದರ್ಶನ್‌ಗೆ ಇದೇ 20ರಂದು ಸೆಷನ್ಸ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಈ ಆದೇಶ ರದ್ದತಿಗೆ ಅವರು ಹೈಕೋರ್ಟ್ ಅನ್ನು ಕೋರಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ನ್ಯಾಯಮೂರ್ತಿ ಬಿ.ವಿ.ಪಿಂಟೊ ಅವರ ಮುಂದೆ ದರ್ಶನ್ ಪರ ವಕೀಲರು ಮನವಿ (`ಮೆಮೊ~) ಸಲ್ಲಿಸಿದರು. ಅದಕ್ಕೆ ನ್ಯಾಯಮೂರ್ತಿಗಳು `ವಿವಿಧ ಪ್ರಕರಣಗಳಲ್ಲಿ ಹೀಗೆ ಸಲ್ಲಿಸಿರುವ `ಮೆಮೊ~ಗಳು ಈಗಾಗಲೇ ಸುಮಾರು 650 ಇತ್ಯರ್ಥಕ್ಕೆ ಬಾಕಿ ಇವೆ.

ದಿನಕ್ಕೆ ಸುಮಾರು 20 ಅನ್ನು ಕ್ರಮಸಂಖ್ಯೆಗೆ ಅನುಗುಣವಾಗಿ ಪರಿಗಣನೆಗೆ ತೆಗೆದುಕೊಂಡರೂ ನಿಮ್ಮ ಮನವಿಯನ್ನು ಪರಿಗಣಿಸಲು ಒಂದು ತಿಂಗಳಾದರೂ ಹಿಡಿಯುತ್ತದೆ. ಕ್ರಮ ಸಂಖ್ಯೆಯನ್ನು ಮೀರಿ ವಿಚಾರಣೆ ನಡೆಸಲಾಗದು~ ಎಂದು ಮೌಖಿಕವಾಗಿ ಹೇಳಿದರು.

ಪೊಲೀಸರ ವಾದ: ಹೈಕೋರ್ಟ್‌ನಲ್ಲಿ ಪ್ರತಿವಾದಿಯಾಗಿರುವ ಸರ್ಕಾರ (ವಿಜಯನಗರ ಪೊಲೀಸ್) ಮಂಡಿಸಿರುವ ವಾದ ಎಂದರೆ, `ದರ್ಶನ್, ಪತ್ನಿ ಹಾಗೂ ಮಗುವಿನ ಮೇಲೆ ಹಲ್ಲೆ ನಡೆಸಿರುವುದು ಇದೇ ಮೊದಲ ಬಾರಿ ಏನಲ್ಲ. ಈ ಹಿಂದೆ ಕೂಡ ಇದೇ ರೀತಿ ಹೀನಾಯವಾಗಿ ಪತ್ನಿಗೆ ಕಿರುಕುಳ ನೀಡಿದ್ದಾರೆ.

`ನಗರದ ಬಿಟಿಎಂ ಲೇಔಟ್ ಬಳಿ ಇರುವ ಯುವತಿಯೊಬ್ಬರ ಜೊತೆ ದರ್ಶನ್ ಒಡನಾಟ ಹೊಂದಿದ್ದರು. ಇದನ್ನು ವಿರೋಧಿಸಿದ್ದಕ್ಕೆ ವಿಜಯಲಕ್ಷ್ಮಿ ಅವರ ಕೆನ್ನೆಯ ಮೇಲೆ ಸಿಗರೆಟ್‌ನಿಂದ ಸುಟ್ಟಿದ್ದರು. ಸ್ವಿಟ್ಜರ್ಲೆಂಡ್‌ನಲ್ಲಿ ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ಆಗ ಸುಮಾರು 6 ತಿಂಗಳ ಮಗುವಾಗಿದ್ದ ವಿನೀಶ್‌ನನ್ನು ಕೊಠಡಿಯೊಂದರಲ್ಲಿ ಕೂಡುಹಾಕಿ ಹೋಗಿದ್ದರು.

ಇದನ್ನು ಪ್ರತಿಭಟಿಸಿದ್ದಕ್ಕೆ ಅಲ್ಲಿಯೂ ಪತ್ನಿಗೆ ತೀವ್ರ ಹಿಂಸೆ ನೀಡಿದರು. ಈ ಹಿಂದೆ ಮಲ್ಯ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಮೈಮೇಲೆ ಹಲ್ಲೆ ನಡೆದಿರುವುದಕ್ಕೆ ಸಂಬಂಧಿಸಿದಂತೆ 9 ಗುರುತುಗಳು ಇದ್ದರೆ, ಈಗ 11 ಗುರುತುಗಳಾಗಿವೆ. ಕೈ ಬೆರಳುಗಳು ಜಜ್ಜಿರುವಂತಹ ಗಂಭೀರ ಹಲ್ಲೆ ಕೂಡ ನಡೆದಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡುವುದು ಸೂಕ್ತ ಅಲ್ಲ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT