ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದರ್ಶನ್'ದರ್ಶನಕ್ಕೆ ಅಭಿಮಾನಿಗಳ ಪೈಪೋಟಿ

Last Updated 19 ಡಿಸೆಂಬರ್ 2012, 11:01 IST
ಅಕ್ಷರ ಗಾತ್ರ

ಕುಷ್ಟಗಿ:  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ಚಲನಚಿತ್ರ 50ನೇ ದಿನಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ವಿಜಯಯಾತ್ರೆ ಕೈಗೊಂಡಿರುವ ಚಿತ್ರದ ನಾಯಕನಟ ದರ್ಶನ್ ಅವರಿಗೆ ಪಟ್ಟಣದಲ್ಲಿನ ಅಭಿಮಾನಿಗಳಿಂದ ಭವ್ಯ ಸ್ವಾಗತ ದೊರೆಯಿತು.

ದರ್ಶನ್ ಮತ್ತು ಚಿತ್ರ ತಂಡದವರು ಹೊಸಪೇಟೆ ಮಾರ್ಗವಾಗಿ ನಿಗದಿತ ಸಮಯಕ್ಕಿಂತ ಸುಮಾರು ಮೂರು ತಾಸು ತಡವಾಗಿ ಬಂದರೂ ಬೆಳಿಗ್ಗೆಯಿಂದಲೇ ಚಳಿ ಗಾಳಿ ಬಿಸಿಲು ಲೆಕ್ಕಿಸದೆ ಅವರನ್ನು ನೋಡಲು ಹರಿದುಬಂದ ಜನಸಾಗರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಕಾತರದಿಂದ ಕಾಯ್ದು ನಿಂತಿದ್ದು ಕಂಡುಬಂದಿತು. ತೆರೆಯಮೇಲಷ್ಟೆ ಕಂಡಿದ್ದ ತಮ್ಮ ನೆಚ್ಚಿನ ನಟನನ್ನು ಖುದ್ದಾಗಿ  ನೋಡುವ ಅವಕಾಶವನ್ನು ಮಿಸ್‌ಮಾಡಿಕೊಳ್ಳದೆ ಹತ್ತಿರದಿಂದಲೇ `ದರ್ಶನ'ಭಾಗ್ಯ ಪಡೆದ ಅಭಿಮಾನಿಗಳು ಪುನೀತರಾದವರಂತೆ ಕಂಡುಬಂದರು. ರಸ್ತೆಪಕ್ಕದ ವಾಹನ, ಗಿಡಮರಗಳು, ಎತ್ತರದ ಕಟ್ಟಡಗಳ ಮೇಲೆ ನೂರಾರು ಜನ ನಿಂತು ರೋಡ್‌ಶೋ ವೀಕ್ಷಿಸಿದರು. ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಚೆಕ್ಕರ್ ಹೊಡೆದ್ದು ಕಂಡುಬಂದಿತು.

ಐರಾವತ ಏರಿ ಬಂದ ಸ್ಟಾರ್ ನಂತರ ತೆರೆದ ವಾಹನ ಏರಿ ಕೈಬೀಸಿದಾಗ ಅಭಿಮಾನಿಗಳುಕೇಕೆ ಹಾಕಿದರು. ಈ ಸಂದರ್ಭದಲ್ಲಿ ದರ್ಶನ್ ಇದ್ದ ವಾಹನಕ್ಕೆ ಮುಗಿಬಿದ್ದಾಗ ಸಾಕಷ್ಟು ನೂಕುನುಗ್ಗಲು ಉಂಟಾಯಿತು. ರಸ್ತೆ ಬದಿಯಲ್ಲಿನ ವಾಹನಗಳು, ರಸ್ತೆ ಮಧ್ಯದ ಟ್ರೀಗಾರ್ಡ್‌ಗಳು ನೆಲಕ್ಕುರುಳಿದವು. ಕಿತ್ತಹೋದ ಚಪ್ಪಲಿಗಳು ರಸ್ತೆಯಲ್ಲಿ ಬಿದ್ದಿದ್ದವು. ಮಹಿಳೆಯರು, ಮಕ್ಕಳು, ಶಾಲಾ ವಿದ್ಯಾರ್ಥಿನಿಯರು ಜನಸಂದಣಿಯಲ್ಲಿ ಸಿಕ್ಕು ನಲುಗಿದರು. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹೆಣಗಾಡಿದರು. ಜನದಟ್ಟಣೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಪಟ್ಟಣದ ಮುಖ್ಯರಸ್ತೆಯಲ್ಲಿನ ಸಂಚಾರ ವ್ಯವಸ್ಥೆ ಕೆಲಹೊತ್ತು ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ರಸ್ತೆ ತುಂಬೆಲ್ಲ ಎದ್ದ ಧೂಳಿನಿಂದ `ಬಣ್ಣದ ಲೋಕದ ನಾಯಕ' ಮಿಂದೇಳುವಂತಾಯಿತು.

ಅಭಿಮಾನಿಗಳ ಗಳಿಕೆ: ನಂತರ ಬಸವೇಶ್ವರ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ನಟ ದರ್ಶನ್, `ಜೀವನದಲ್ಲಿ ನಾನು ಗಳಿಸಿದ್ದು ನಿಮ್ಮೆಲ್ಲರ ಅಭಿಮಾನವನ್ನು ಮಾತ್ರ ಸಂಗೊಳ್ಳಿರಾಯಣ್ಣ ಚಿತ್ರವನ್ನು ಪ್ರೇಕ್ಷಕರು ಸ್ವಾಗತಿಸಿದ ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು ಅಲ್ಲದೇ 50 ದಿನ ಚಿತ್ರ ಓಡುವುದಕ್ಕೆ ಕಾರಣರಾದ ಪ್ರೇಕ್ಷರಿಗೆ, ಚಿತ್ರಮಂದಿರದ ಮಾಲೀಕರನ್ನು ಅಭಿನಂದಿಸಿದರು. ಕನ್ನಡ ಚಲನಚಿತ್ರರಂಗದ ಉಳಿವಿಗೆ ನೀಮ್ಮ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಮನವಿ ಮಾಡಿದರು. ಅಲ್ಲದೇ ಚಿತ್ರದ ಕೆಲ ಡೈಲಾಗ್‌ಗಳನ್ನು ಹೇಳಿದಾಗ ಜನ ಕೇಕೆ ಹಾಕಿದರು.

ಪಟ್ಟಣದ ಹೊರವಲಯದಲ್ಲಿ ದರ್ಶನ್ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಅಮರೇಗೌಡ ಬಯ್ಯಾಪುರ ಸ್ವಾಗತಿಸಿದರು. ಬಸವರಾಜ ಚಿತ್ರಮಂದಿರದ ಮಾಲೀಕ ಜೂಗನಗೌಡ ಕೋಳೂರು ಇದ್ದರು. ದರ್ಶನ್ ಅವರಿದ್ದ ತೆರೆದ ವಾಹನ ಏರಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗಮನಸೆಳೆದರು. ಅಷ್ಟೇ ಅಲ್ಲ ದರ್ಶನ್ ಅವರ ಕೈ ಕುಲುಕುವುದಕ್ಕೆ ರಾಜಕೀಯ ಪಕ್ಷಗಳ ಮುಖಂಡರ ದಂಡು ಪೈಪೋಟಿಗಿಳಿದಿದ್ದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT