ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಂಘಟನೆ ಬೇರೆಯಾದರೂ ಆಶಯ ಒಂದೇ

Last Updated 25 ಜನವರಿ 2012, 5:35 IST
ಅಕ್ಷರ ಗಾತ್ರ

ಮೈಸೂರು: ದಲಿತ ಸಂಘಟನೆಗಳು ಒಡೆಯುತ್ತಿವೆ, ಹೊಸ ಸಂಘಟನೆ ಹುಟ್ಟುತ್ತಿವೆ. ಆದರೆ ಸಾಮಾಜಿಕ ಬದಲಾವಣೆಯ ಮೂಲ ಆಶಯ, ಸೈದ್ಧಾಂತಿಕ ಚೌಕಟ್ಟು ಒಂದೇ ಇರುವಾಗ ಎಲ್ಲ ಸಂಘಟನೆಗಳು ಒಂದೇ ವೃಕ್ಷದ ಕೊಂಬೆಗಳಿದ್ದಂತೆ ಎಂದು ಡಿವೈಎಸ್‌ಪಿ ಡಾ. ಧರಣಿದೇವಿ ಮಾಲಗತ್ತಿ ಪ್ರತಿಪಾದಿಸಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ನಗರ ಶಾಖೆಯು ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಕೆ.ಪಿ. ಮಹಾಲಿಂಗು ಕಲ್ಕುಂದ ಅವರಿಗೆ ಅಭಿನಂದನೆ ಹಾಗೂ ಅವರು ಬರೆದ `ಭಾರತದಲ್ಲಿ ದಲಿತ ಚಳವಳಿ~ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧನ ಸಾಮಾಜಿಕ ಕಾಳಜಿಯೇ ದಲಿತ ಚಳವಳಿಯ ತಳಪಾಯ. ಅಲ್ಲಿಂದ ಇಲ್ಲಿಯವರೆಗೂ ದಲಿತ ಚಳವಳಿಗಳು ಅನೂಹ್ಯ ಬದಲಾವಣೆಗಳನ್ನು ತಂದಿವೆ. ದಯನೀಯ ಸ್ಥಿತಿಯಲ್ಲಿರುವವನೇ ದಲಿತ ಎಂಬ ಅರ್ಥ ಹಿಂದೆ ಇತ್ತು. ಈಗ ಅದು ಸ್ವಾಭಿಮಾನಿ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುವಷ್ಟು ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು.

ಇಂದಿನ ಕೆಲ ದಲಿತ ಹೋರಾಟಗಾರರು ಹಳೆಯ ತಲೆಮಾರಿನ ಚಳವಳಿಗಾರರನ್ನು, ಚಿಂತಕರನ್ನು ಅಸಡ್ಡೆ ಮಾಡುತ್ತಿರುವುದು ಸರಿಯಲ್ಲ. ಹಳೆಯ ಕವಿಗಳ ಹಾಡುಗಳೇ ಅಂದಿನ ದಲಿತ ಚಳವಳಿಗಳಿಗೆ ಶಕ್ತಿ ತುಂಬಿದ್ದವು ಎಂದು ಅಭಿಪ್ರಾಯಪಟ್ಟರು. ಚಳವಳಿ ಎನ್ನುವುದು ಯುದ್ಧವಲ್ಲ. ವಾಸ್ತವಿಕ ನೆಲೆಗಟ್ಟಿನ ಮೇಲೆ ನಡೆಸುವ ಅರ್ಥಪೂರ್ಣ ಸಂಘರ್ಷ. ಈ ಚಿಂತನೆಯನ್ನು ಅರಿಯದಿದ್ದರೆ ಯಾವುದೇ ಸಂಘಟನೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಡಾ.ಮಹಾಲಿಂಗು ಅವರ `ಭಾರತದಲ್ಲಿ ದಲಿತ ಚಳವಳಿ~ ಕೃತಿಯು ವಸ್ತುನಿಷ್ಠ ದೃಷ್ಟಿಕೋನ ಹೊಂದಿದೆ. ಆದರೆ ಮಹಿಳಾ ಗೈರು ಹಾಜರಿ ಇಲ್ಲಿ ಎದ್ದು ಕಾಣುತ್ತಿದೆ. ಭಾರತೀಯ ದಲಿತ ಚಳವಳಿಯಲ್ಲಿ ಸಾವಿತ್ರಿಬಾಯಿ ಪುಳೆಯಂಥ ಹೋರಾಟಗಾರ್ತಿಯರು ಇದ್ದಾರೆ. ಅಂಥವರ ಬಗ್ಗೆ ನಿರ್ಲಕ್ಷ್ಯ ಸಲ್ಲ ಎಂದು ಅವರು ಹೇಳಿದರು.

ಮಹಾಲಿಂಗು ಅವರ ಕೃತಿಯನ್ನು ಬಿಡುಗಡೆ ಮಾಡಿದ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಚ್.ರಂಗಪ್ಪ ಮಾತನಾಡಿ ಲೇಖಕರ ಸಾಹಿತ್ಯ ಸಾಧನೆಗೆ ವಿಶ್ವವಿದ್ಯಾಲಯವು ಸಹಾಯ ಮಾಡುವುದು ಎಂದು ಭರವಸೆ ನೀಡಿದರು. ವಿದ್ಯೆ ಸಂಪಾದನೆಯಿಂದಷ್ಟೇ ಎಲ್ಲ ಸಮಾಜದವರೂ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ದಯಾನಂದ ಮಾನೆ ಪುಸ್ತಕ ಕುರಿತು ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಹರಿಹರ ಆನಂದಸ್ವಾಮಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪೂರೀಗಾಲಿ ಮರಡೇಶಮೂರ್ತಿ, ಸಮಾಜ ವಿಜ್ಞಾನಿ ಡಾ.ಕೃಷ್ಣಮೂರ್ತಿ ಚಮರಂ, ಸೋಮಯ್ಯ ಮಲೆಯೂರು ಉಪಸ್ಥಿತರಿದ್ದರು. ಮಲ್ಲೇಶ್ ಚುಂಚನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT