ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಕೈಗೇ ಅಧಿಕಾರ ಅನಿವಾರ್ಯ

Last Updated 14 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿನ ಪರಿಸ್ಥಿತಿಯಲ್ಲಿ ದಲಿತರ ಬಗೆಗಿನ ಮನೋಭಾವ ಬದಲಾಗಬೇಕಾದರೆ, ಅವರ ಕೈಯಲ್ಲಿಯೇ ಆಡಳಿತದ ಚುಕ್ಕಾಣಿ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿ ಅಭಿಪ್ರಾಯಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತರ ಪರವಾಗಿ ಹಲವಾರು ಕಾಯ್ದೆ ಕಾನೂನು ಇದ್ದರೂ, ಅವರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಲೇ ಇವೆ. ಇಂದು ಮನುವಾದಿಗಳ ಕೈಯಲ್ಲಿ ಸರ್ಕಾರವಿದೆ. ಈ ಹಿನ್ನೆಲೆಯಲ್ಲಿ ದಲಿತರ ನೋವಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಅಂಬೇಡ್ಕರ್ ಅವರು ಎಂದಿಗೂ ಮುಂದುವರಿದ ವರ್ಗದ ವಿರೋಧಿ ಆಗಿರಲಿಲ್ಲ. ಹಾಗೆಯೇ ಕೇವಲ ದಲಿತರ ಪರವಾಗಿಯೂ ಇರಲಿಲ್ಲ. ಬದಲಿಗೆ ಮಹಿಳೆ, ಹಿಂದುಳಿದ ವರ್ಗದ ಶ್ರೇಯಸ್ಸಿಗಾಗಿಯೂ ಸಾಕಷ್ಟು ದುಡಿದಿದ್ದರು. ಸಂವಿಧಾನವನ್ನು ರೂಪಿಸುವ ಪೂರ್ವದಲ್ಲಿ ಸಂಸ್ಕೃತ ಅಧ್ಯಯನವನ್ನೂ ನಡೆಸಿದ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮಾತನಾಡಿ, ಆಸೆ ಮಿತಿಮೀರಿದರೆ ರಾಜ್ಯ ಮಾತ್ರವಲ್ಲ ದೇಶಕ್ಕೇ ಆಪತ್ತು ಎಂದು ಅಂದೇ ಅಂಬೇಡ್ಕರ್ ಸಾರಿದ್ದರು. ಆದರೆ ಇಂದು ಅದು ಅಕ್ಷರಶಃ ಸತ್ಯವಾಗಿದೆ ಎಂದರು. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು ಮಾತನಾಡಿದರು.


ಆದರ್ಶಗಳ ಪಾಲನೆಯಾಗಲಿ
ಬೆಂಗಳೂರು: ಸರ್ಕಾರದ ಸೌಲಭ್ಯಗಳು ಬಡತನದಲ್ಲಿರುವ ಪರಿಶಿಷ್ಟ ಜನಾಂಗಕ್ಕೆ ಸಿಕ್ಕಾಗ ಮಾತ್ರ ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಗುರುವಾರ ಇಲ್ಲಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜನಾಂಗಕ್ಕೆ ಮೀಸಲು ಇರುವ ಸವಲತ್ತುಗಳು ಆ ವರ್ಗದ ಸ್ಥಿತಿವಂತರಿಗೆ ಮಾತ್ರ ಲಭ್ಯ ಆಗುತ್ತಿದ್ದು, ಈ ಕುರಿತು ಗಮನ ಹರಿಸಬೇಕಾದ ಅಗತ್ಯ ಇದೆ ಎಂದರು.

ಅಂಬೇಡ್ಕರ್ ಅವರ ಉದಾತ್ತ ಆದರ್ಶಗಳ ಪಾಲನೆ ಕಡಿಮೆಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಎ.ಆರ್.ಕೃಷ್ಣಮೂರ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಜಾತಿ ವ್ಯವಸ್ಥೆ ಇನ್ನೂ ಜೀವಂತ;ವಿಷಾದ
ರಾಜರಾಜೇಶ್ವರಿ ನಗರ: ‘ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ. ಅಸ್ಪೃಶ್ಯತೆ ಸಂಪೂರ್ಣವಾಗಿ ಹೋಗಿದೆಯೇ ಎಂಬುದರ ಬಗ್ಗೆ ಸಮಾಜ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ನಮ್ಮೆಲ್ಲರನ್ನು ಸಮಾನತೆಯತ್ತ ಕೊಂಡೊಯ್ಯುವ ಸಾಧ್ಯತೆಗಳು ಬುದ್ಧನ ಚಿಂತನೆಯಲ್ಲಿ ಅಡಗಿವೆ’ ಎಂದು ದಲಿತ ಚಿಂತಕ ಪ್ರೊ.ಸಿ.ಕೆ.ಮಹೇಶ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಅವರಣದಲ್ಲಿರುವ ಡಾ.ಎಚ್.ಎನ್.ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 120 ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರಾಜಕೀಯ ಸಮಾನತೆ ದೊರಕಿದ್ದರೂ ಅರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ತಾರತಮ್ಯ ಇದೆ. ಇದರಿಂದ ದಲಿತ ಸಮುದಾಯ ನಲುಗುತ್ತಿದೆ. ಇದನ್ನು ಹೋಗಲಾಡಿಸಲು ಸಮಾಜವು ಚಿಂತನೆ ನಡೆಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಮಾತನಾಡಿ, ‘ಶತಶತಮಾನಗಳಿಂದ ಅಸ್ಪೃಶತೆ, ಅಸಮಾನತೆ ಸಂಕೋಲೆಗಳಲ್ಲಿ ನಲುಗುತ್ತಿದ್ದ ದಲಿತ ಸಮುದಾಯವು ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಸಮಾಜದ ಮುಖ್ಯವಾಹಿನಿಗೆ ಸೇರುವಂತಾಯಿತು’ ಎಂದರು.

ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, ‘ಕೇವಲ ದಲಿತರ ಹಕ್ಕುಗಳ ಬಗ್ಗೆ ಅಲ್ಲದೇ, ಮಾನವ ಹಕ್ಕು ಹಾಗೂ ಮಹಿಳಾ ಹಕ್ಕುಗಳ ಬಗ್ಗೆಯೂ ಅಂಬೇಡ್ಕರ್ ಚಿಂತನೆ ನಡೆಸಿದ್ದರು’ ಎಂದರು.

ಕುಲಸಚಿವ ಪ್ರೊ.ಆರ್.ಎಂ.ರಂಗನಾಥ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ವಿತ್ತಾಧಿಕಾರಿ ಎ.ಎಸ್.ರಿಜ್ವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ.ಎನ್.ನಂದಿನಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT