ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ದೌರ್ಜನ್ಯಕ್ಕೆ ಖಂಡನೆ: ಧರಣಿ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬುಧವಾರ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಸಿದರು.

ಜಿಲ್ಲಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದಲ್ಲಿ 2010ರಲ್ಲಿ 1632 ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ರಾಮನಗರ ಜಿಲ್ಲೆಯಲ್ಲಿ 51 ಪ್ರಕರಣಗಳು ನಡೆದಿವೆ. ದೇಶದ ದೌರ್ಜನ್ಯ ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ ದೊರೆತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

1995ರಿಂದ 2007ರ ಅವಧಿಯಲ್ಲಿ ದೇಶದಲ್ಲಿ 4,41,424 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಕರ್ನಾಟಕದಲ್ಲಿ 21,362 ಪ್ರಕರಣಗಳು ದಾಖಲಾಗಿದ್ದವು ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಅಪರಾಧ ದಾಖಲಾತಿ ಇಲಾಖೆಯ ವರದಿಯ ಪ್ರಕಾರ ದೇಶದಲ್ಲಿ ಶೇ 37.8 ಹಳ್ಳಿಗಳಲ್ಲಿ ದಲಿತರಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ. ಶೇ 33 ಹಳ್ಳಿಗಳಲ್ಲಿ ಸರ್ಕಾರಿ ಆರೋಗ್ಯ ಸೇವಕರು ದಲಿತರ ಮನೆಗಳಿಗೆ ಭೇಟಿ ನೀಡುವುದಿಲ್ಲ. ಶೇ 48.4 ದಲಿತರಿಗೆ ಕುಡಿಯುವ ನೀರನ್ನು ನಿರಾಕರಿಸಲಾಗಿದೆ. ಶೇ 23.5 ದಲಿತರ ಮನೆಗಳಿಗೆ ಅಂಚೆ ಪೇದೆ ಹೋಗುವುದಿಲ್ಲ. ಶೇ 64ರಷ್ಟು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಪ್ರತಿ ದಿನ 3 ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪ್ರತಿ 18 ನಿಮಿಷಕ್ಕೆ ಒಬ್ಬ ದಲಿತನ ಮೇಲೆ ಹಲ್ಲಿ ನಡೆಯುತ್ತಿದೆ ಎಂದು ಅವರು ಅಂಕಿ ಅಂಶ ನೀಡಿದರು.

ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಅಂಕನಹಳ್ಳಿ ಗ್ರಾಮದಲ್ಲಿ ದಲಿತರ ಬಹಿಷ್ಕಾರ, ಕನಕಪುರದ ಅರಳಾಳು ಗ್ರಾಮದಲ್ಲಿ ದಲಿತರ ಬಹಿಷ್ಕಾರ, ಚನ್ನಪಟ್ಟಣದ ಸಂಕಲಗೆರೆ ಗ್ರಾಮದಲ್ಲಿ ದಲಿತರ ಬಹಿಷ್ಕಾರ, ಮಾಗಡಿಯ ಗಂಗಮ್ಮನ ಹತ್ಯೆ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಂಗೂರು ಪ್ರಕರಣ, ಇತ್ತೀಚೆಗೆ ನಡೆದ ಸಿದ್ದಾಪುರ ಗ್ರಾಮದ ಮಾದಿಗರ ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ನಡೆದಿವೆ. ಆದರೆ ಇವುಗಳಲ್ಲಿ ದಲಿತರಿಗೆ ನ್ಯಾಯ ದೊರಕಿಸಿಕೊಟ್ಟಿರುವುದು ಅತಿ ವಿರಳ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸಂಯೋಜಕರಾದ ಅಂದಾನಪ್ಪ, ಆರ್.ಟಿ.ರಾಜಗೋಪಾಲ್, ಉಪಾಧ್ಯಕ್ಷ ಎಂ.ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀಲಿ ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT