ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ನರಬಲಿಗೆ ಇಲ್ಲಿದೆ ಎಲ್ಲರ ಪೂರ್ಣ ಸಹಕಾರ !

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನರಬಲಿ ಎಂಬ ಗಾಢ ಅನುಮಾನ ಮೂಡಿಸಿರುವ ಹತ್ಯೆ ನಡೆದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ತಿರುಮಲದೇವರಕೊಪ್ಪಕ್ಕೆ ಭೇಟಿ ನೀಡಿ ಸೂಕ್ಷ್ಮವಾಗಿ ಈ ಪ್ರಕರಣದ ಸುತ್ತಲಿನ ಬೆಳವಣಿಗೆಗಳನ್ನು ಅವಲೋಕಿಸಿದಾಗ ನಮ್ಮ ವ್ಯವಸ್ಥೆಯ ಹಲವು ಮುಖಗಳನ್ನು ನೋಡಲು ಸಾಧ್ಯವಾಯಿತು.

21ನೇ ಶತಮಾನದ ವೈಜ್ಞಾನಿಕ ಆಧುನಿಕ ಕಾಲದಲ್ಲಿ ನರಬಲಿ ಇನ್ನೂ ಆಚರಣೆಯಲ್ಲಿರುವುದು ಮೊದಲ ಅಚ್ಚರಿ. ಈ ಪ್ರಾಂತ್ಯದಲ್ಲಿ ಆಗಾಗ `ನರಬಲಿ~ ಸ್ವರೂಪದ ಹತ್ಯೆಗಳು ನಡೆದಿದ್ದು, ಅವುಗಳನ್ನು `ಕೊಲೆ~,~ಆತ್ಮಹತ್ಯೆ~, `ಆಕಸ್ಮಿಕ ಸಾವು~ ಇತ್ಯಾದಿ ಹೆಸರುಗಳಿಂದ ಮುಚ್ಚಿಹಾಕಲಾಗಿದೆ ಎಂದು ಸ್ಥಳೀಯ ಜನ ಆರೋಪಿಸುವುದನ್ನು ಗಮನಿಸಿದರೆ ಈ ಪ್ರಾಂತ್ಯಕ್ಕಿದು ಅಚ್ಚರಿಯ ಘಟನೆಯಲ್ಲ.
 
ಈಗ ನಡೆದ ಹತ್ಯೆಯನ್ನು ಪೊಲೀಸರು `ಕೊಲೆ~ ಎಂದು ಕೇಸು ದಾಖಲಿಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದರೆ ಜನರ ಆರೋಪದಲ್ಲಿ ಸತ್ಯವಿದೆ ಎಂದು ಅನ್ನಿಸುತ್ತದೆ.

ಬಸವನಗೌಡ ಎಂಬ ಹಣದ ಲೇವಾದೇವಿದಾರರೂ ಆದ ಭೂಮಾಲೀಕರ ಮನೆಯಲ್ಲಿ ಬಸವರಾಜ ಎಂಬ 18ರ ದಲಿತ ಯುವಕ ಟ್ರ್ಯಾಕ್ಟರ್ ಓಡಿಸುತ್ತಿದ್ದ. ನವೆಂಬರ್ 26ರಂದು ಈತನ ಬರ್ಬರ ಹತ್ಯೆ ನಡೆಸಲಾಯಿತು. ಮರುದಿನ  ಈತನ ಮೃತದೇಹ ಸಂಪೂರ್ಣ ವಿರೂಪಗೊಂಡ ಸ್ಥಿತಿಯಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಯಿತು. ಹಣೆಯಲ್ಲಿ ರಂಧ್ರ ಕೊರೆದು ರಕ್ತವನ್ನು ಬಸಿಯಲಾಗಿತ್ತು. ಒಂದು ಕಣ್ಣನ್ನು ಕಿತ್ತು, ಮುಖದಲ್ಲಿ ಅರಿಶಿನ ಕುಂಕುಮವನ್ನು ಹಚ್ಚಲಾಗಿತ್ತು. 

 ನಮ್ಮ ಪ್ರಗತಿಪರ ಹಾಗೂ ಮಾನವಹಕ್ಕು ಸಂಘಟನೆಗಳ ಸತ್ಯಶೋಧನಾ ತಂಡ ದಿನಾಂಕ 2012ರ ಜನವರಿ 9 ರಂದು ಹತ್ಯೆ ನಡೆದ ತಿರುಮಲಕೊಪ್ಪದ ಬಸವಗೌಡನ ಮನೆಗೆ ಭೇಟಿ ನೀಡಿದಾಗ ಮನೆಗೆ ಬೀಗ ಹಾಕಲಾಗಿತ್ತು.
 
ಕಿಟಕಿಯಂತಿದ್ದ ದೊಡ್ಡ ಗೇಟಿನ ಮೂಲಕ ನೋಡಿದಾಗ ಅಲ್ಲಿ ಪೂಜೆಗಾಗಿ ಅಲಂಕರಿಸಿದ್ದು, ಗೋಡೆಯ ಮೇಲೆಲ್ಲ ರಕ್ತ ಚಿಮ್ಮಿದ್ದು, ಪ್ಲಾಸ್ಟಿಕ್ ಬಿಂದಿಗೆಗೆ ತೀರ್ಥ ಪ್ರೋಕ್ಷಣೆ ಮಾಡಿದಂತೆ ರಕ್ತ ಸಿಂಪಡಿಸಿದ್ದು ಕಂಡು ಬಂತು.

ಹತ್ಯೆಯಾದ ಬಸವರಾಜುವಿನ ಮನೆಯವರನ್ನು ಹಾಗೂ ಊರವರನ್ನು  ಭೇಟಿ ಮಾಡಿದಾಗ `ತಮ್ಮ ಮನೆಯ ವಾಸ್ತು ಸರಿಯಿಲ್ಲ, ಅದಕ್ಕೆ ಬಲಿ ಕೊಡಬೇಕೆಂದು ತಾತು ಅಜ್ಜ ಹೇಳಿದ್ದಾನೆ~ ಎಂದು ಬಸವನಗೌಡ ಮತ್ತು ಆತನ ಮನೆಯವರು ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. `ಬಲಿ ಎಂದರೆ ಕುರಿನೋ ಕೋಳಿನೋ ಎಂದು ನಾವು ಎಣಿಸಿದ್ದೆವು~ ಎಂದು ಅವರು ಹೇಳುತ್ತಾರೆ.

ಊರವರು ಹೇಳುವ ತಾತುಅಜ್ಜ ಗದಗ ಜಿಲ್ಲೆಯ ನೇರಲಿಗೆ ಗ್ರಾಮದವನಾಗಿದ್ದು ಈತನ ನಿಜನಾಮಧೇಯ ನಿಜಲಿಂಗಸ್ವಾಮಿ ಎಂದಿದೆ. ಈತನೊಬ್ಬ ಮಂತ್ರವಾದಿ. ಆಗಾಗ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಂದು ಬಸವನಗೌಡರ ಮನೆಗೆ  ಭೇಟಿ ನೀಡುತ್ತಿದ್ದ ಹಾಗೂ ನವೆಂಬರ್ 25 ಮತ್ತು ಹತ್ಯೆ ನಡೆದ 26ರಂದು ಈತ ಬಸವನಗೌಡರ ಮನೆಯಲ್ಲಿ ಇದ್ದುದನ್ನು ನೋಡಿದ್ದಾಗಿ ಊರವರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಇದೊಂದು ನರಬಲಿ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿಯಾಗಿದೆ.

ಬಸವನಗೌಡರ ಮಗ ನಿಂಗನಗೌಡ, ಬಸವರಾಜು ಹತ್ಯೆಯಾದ ದಿನವೇ ಪೊಲಿಸರಿಗೆ ಶರಣಾಗಿದ್ದಾನೆ. `ನನ್ನ ಹೆಂಡತಿಗೂ ಮತ್ತು ನಮ್ಮ ಮನೆಯ ಕೆಲಸದಾಳು ಬಸವರಾಜುವಿಗೂ ಅನೈತಿಕ ಸಂಬಂಧವಿದ್ದು ಆ ಕಾರಣಕ್ಕಾಗಿ ನಾನು ಆತನನ್ನು ಕೊಲೆ ಮಾಡಿದೆ~ ಎಂದು ಹೇಳಿಕೆ ನೀಡಿದ್ದಾನೆಂದು ಪೊಲಿಸರು ತಿಳಿಸುತ್ತಾರೆ.
 
ನಮ್ಮ ಸತ್ಯಶೋಧನಾ ತಂಡ ನಿಂಗನಗೌಡನ ಪತ್ನಿಯನ್ನು ಅವರ ತವರುಮನೆಯಲ್ಲಿ ಭೇಟಿಯಾಗಿ ಈ ಕುರಿತು ಪ್ರಶ್ನಿಸಿತು. `ಆರು ತಿಂಗಳ ಹಿಂದೆ ನಿಂಗನಗೌಡನೊಂದಿಗೆ ನನ್ನ ಮದುವೆಯಾಗಿದ್ದು ತಿರುಮಲದೇವರಕೊಪ್ಪದ ಮಾವನ ಮನೆಯಲ್ಲಿ ಮದುವೆಯಾದ ಹೊಸತರಲ್ಲಿ 15 ದಿನ ಹಾಗೂ ಆನಂತರ 10 ದಿನ, ಅಂದರೆ ಒಟ್ಟು 25 ದಿನಗಳ ಕಾಲ ಇದ್ದೆನು. ಉಳಿದ ಕಾಲವೆಲ್ಲ ನಾನು ನನ್ನ ತವರುಮನೆಯಲ್ಲಿಯೇ ಇದ್ದೆನು. ಈ ಘಟನೆ ನಡೆದಾಗಲೂ ನಾನು ತವರುಮನೆಯಲ್ಲಿಯೇ ಇದ್ದೆ. ಅನೈತಿಕ ಸಂಬಂಧದ ಕತೆಯನ್ನು ಸೃಷ್ಟಿಸಿದವರು  ಪೊಲಿಸರು~ ಎಂದು ಅವರು ಹೇಳಿದರು. ಈ ಹೇಳಿಕೆಯನ್ನು ಧ್ವನಿಮುದ್ರಿಸಿಕೊಳ್ಳಲಾಗಿದೆ.

ಪೊಲೀಸರು ಪ್ರಮುಖ ಆರೋಪಿಗಳಾಗಿರುವ ಬಸವನಗೌಡ ಮತ್ತು ಮಂತ್ರವಾದಿ ತಾತುಅಜ್ಜ ಅಲಿಯಾಸ್ ನಿಜಲಿಂಗಸ್ವಾಮಿಯನ್ನು ಇದುವರೆಗೂ ಬಂಧಿಸಿಲ್ಲ. ಹತ್ಯೆ ನಡೆದ ನಂತರದ ಮೂರು ದಿನಗಳ ಕಾಲ ಆರೋಪಿಗಳ ಮನೆಗೆ ಪೊಲೀಸ್ ರಕ್ಷಣೆ ಒದಗಿಸಿದ್ದರೆ ಹತ್ಯೆಯಾದ ಬಸವರಾಜು ಕುಟುಂಬಕ್ಕೆ ರಕ್ಷಣೆ ನೀಡಲಾಗಿಲ್ಲ.

ನಾಡಿನ ಕೆಲವು ಪ್ರಗತಿಪರ ಹಾಗೂ ಮಾನವಹಕ್ಕು ಸಂಘಟನೆಗಳು ಜನವರಿ 30ರಂದು ಈ ಪ್ರಕರಣದ ಕುರಿತು ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ಆಯೋಜಿಸಿದ್ದು ಇವುಗಳಿಗೆ ವಾರದ ಹಿಂದೆ ಅರ್ಜಿ ನೀಡಿದ್ದರೂ ರಾಣೆಬೆನ್ನೂರು ಪೊಲೀಸರು ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಿರಲಿಲ್ಲ.

ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಒತ್ತಡ ಬಂದ ನಂತರ ಸಭೆ ನಡೆಯುವ ಸಮಯದಲ್ಲಿ ಅನುಮತಿ ನೀಡಲಾಯಿತು. ಒಟ್ಟಿನಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದು ನಿಚ್ಚಳವಾಗಿದೆ.

ಈ ಊರಿನ ಹಳ್ಳಿಗಳ ದಲಿತರು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ. ಬಹುತೇಕ ಕಡೆ ಅಸ್ಪೃಶ್ಯತೆಯ ಆಚರಣೆಯೂ ಚಾಲ್ತಿಯಲ್ಲಿದೆ. ಮುಖ್ಯವಾಗಿ ಅನೇಕ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರತ್ಯೇಕವಾದ ತಟ್ಟೆ ಲೋಟಗಳನ್ನಿಡುವ ವ್ಯವಸ್ಥೆಯಿದೆ. ಸವರ್ಣೀಯರಿಂದ ಆಗಾಗ ದಲಿತರ ಕೊಲೆಗಳು ನಡೆಯುತ್ತಿದ್ದರೂ ಅವುಗಳನ್ನು ಮುಚ್ಚಿಹಾಕಲಾಗುತ್ತದೆ ಎಂದು ದಲಿತ ಯುವಕರು ನಮ್ಮ ಬಳಿ ದೂರಿದರು.
 
ಇದೇ ತಾಲ್ಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ಜಯಪ್ಪ ಎಂಬ ಮಾದಿಗ ಜನಾಂಗದ ಯುವಕ 2011ರ ಜುಲೈ 5 ರಂದು ಸವರ್ಣೀಯರಿಂದ ಕೊಲೆಯಾಗಿದ್ದು ಇದುವರೆಗೂ ಆರೋಪಿಗಳನ್ನು ಬಂಧಿಸಿರದ ಪ್ರಕರಣವನ್ನು ಇದಕ್ಕೆ ಉದಾಹರಣೆಯಾಗಿ ನೀಡಿದರು.

ವಿಪರ್ಯಾಸವೆಂದರೆ ರಾಣೆಬೆನ್ನೂರಿನ ಹಿರಿಯ ಪೊಲೀಸ್ ಅಧಿಕಾರಿ ದಲಿತರಾಗಿದ್ದೂ ದಲಿತರಿಗೆ ನ್ಯಾಯವೆಂಬುದು ಮರೀಚಿಕೆ. ದಲಿತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದ್ದ ದಲಿತ ಸಂಘರ್ಷ ಸಮಿತಿಯ ಅನೇಕ ಬಣಗಳು ಇಲ್ಲಿದ್ದರೂ ಅವು ಯಾಕೋ ಮೌನ ತಾಳಿವೆ.

ನರಬಲಿಯಂತಹ ಪ್ರಕರಣಗಳ ಹಿಂದೆ ವಿದ್ಯುನ್ಮಾನ ಮಾಧ್ಯಮಗಳು ಜ್ಯೋತಿಷ್ಯ, ಮಂತ್ರ-ತಂತ್ರಗಳಿಗೆ ಪ್ರಚಾರ ನೀಡುತ್ತ ಹರಡುತ್ತಿರುವ ಮೌಢ್ಯದ ಹಿನ್ನೆಲೆಯಿದೆ. ಇದರೊಂದಿಗೆ ಅನಕ್ಷರತೆ, ಬಡತನ, ಜಾತಿ ವ್ಯವಸ್ಥೆ, ಭ್ರಷ್ಟ ಅಧಿಕಾರಶಾಹಿ, ಪ್ರಜ್ಞಾವಂತರ ಹೊಣೆಗೇಡಿ ನಿರ್ಲಿಪ್ತತೆ `ನರಬಲಿ~ಗೆ ಕಾರಣವಾಗಿವೆ.

`ನರಬಲಿ~ ನಡೆದಿದೆ ಎಂದು ಒಪ್ಪಿಕೊಂಡರೆ ಅದು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಸರ್ಕಾರವೂ ಇದನ್ನು `ಕೊಲೆ~ ಎಂದು ಮುಚ್ಚಿಹಾಕಲು ಪೊಲೀಸರಿಗೆ ನಿರ್ದೇಶನ ನೀಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ರೀತಿಯ ಮನೋಭಾವಗಳು ಇನ್ನಷ್ಟು ನರಬಲಿಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತವಷ್ಟೆ.

ಒಂದು ನಾಗರಿಕ ಸಮಾಜಕ್ಕೆ ನರಬಲಿ ಮಡೆ ಮಡೆಸ್ನಾನದಷ್ಟೆ ಅವಮಾನಕರ, ಭೀಕರ. ಆದರೆ ಯಾಕೆ ಇದನ್ನು ಪ್ರಜ್ಞಾವಂತ ಸಮಾಜ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT