ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಭೂಮಿ ಒತ್ತುವರಿ: ಪ್ರತಿಭಟನೆ

Last Updated 22 ಜನವರಿ 2011, 9:05 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ಅಗಲಹಳ್ಳಿಯಲ್ಲಿ ಸವರ್ಣೀಯರು ದಲಿತರ ಜಮೀನನ್ನು ಕಸಿದುಕೊಂಡು ಓಡಾಡಲು ರಸ್ತೆಯೂ ಇಲ್ಲದಂತೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರರು ಹಾಗೂ ಪೊಲೀಸರಿಗೆ ದೂರು ನೀಡಿದರೂ ಉಪಯೋಗವಾಗಿಲ್ಲ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಆಶ್ರಯದಲ್ಲಿ ಶುಕ್ರವಾರ ಗ್ರಾಮದ ದಲಿತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಗ್ರಾಮದ ಗೌರಮ್ಮ, ರಾಮೇಗೌಡ ಹಾಗೂ ಸಿದ್ದಮ್ಮ ಎಂಬುವವರು ದಲಿತರಿಗೆ ಸೇರಿದ ಮೂರು ಕುಂಟೆ ಜಾಗವನ್ನು ಅತಿಕ್ರಮಣ ಮಾಡಿ ಮನೆಯನ್ನು ಕಟ್ಟಿದ್ದಲ್ಲದೆ ಅಲ್ಲಿ ಯಾರೂ ಓಡಾಡದಂತೆ ತಡೆಗೋಡೆಯನ್ನೂ ಕಟ್ಟಿದ್ದಾರೆ.  ಎಲ್ಲ ಅಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಲಾಗಿತ್ತು. ಆದರೆ ಸಮಸ್ಯೆ ಬಗೆಹರಿದಿಲ್ಲ. ಹಿಂದೆ ಶಾಸಕ ಎಚ್.ಎಸ್. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಅಂದಿನ ಉಪವಿಭಾಗಾಧಿಕಾರಿ, ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳೆಲ್ಲರ ಸಮ್ಮುಖದಲ್ಲಿ ಒಂದು ಶಾಂತಿ ಸಭೆಯೂ ನಡೆದಿತ್ತು. ಸಾರ್ವಜನಿಕ ಜಾಗವನ್ನು ತೆರವು ಮಾಡುವಂತೆ ಅತಿಕ್ರಮಣ ಮಾಡಿದವರಿಗೆ ಸೂಚನೆ ನೀಡಲಾಗಿತ್ತು. ಇದಾದ ಬಳಿಕ ಸರ್ವೆ ಮಾಡಿದಾಗಲೂ ದಲಿತರ ಜಾಗ ಸವರ್ಣೀಯರ ವಶದಲ್ಲಿದೆ ಎಂದು ಸಾಬೀತಾಗಿತ್ತು.ಆದರೆ ಈವರೆಗೆ ಆ ರಸ್ತೆಯನ್ನು ಬಿಡಿಸಿಕೊಟ್ಟಿಲ್ಲ.

‘ಜ.20ರಂದು ಇಲ್ಲಿ ಚಿಕ್ಕೇಗೌಡ ಎಂಬುವವರು ಇನ್ನೊಂದು ಗೋಡೆ ಕಟ್ಟಲು ಆರಂಭಿಸಿದ್ದರು. ಈ ಬಗ್ಗೆಯೂ ಪಂಚಾಯಿತಿಗೆ ದೂರು ನೀಡಲಾಗಿತ್ತು. ಆದರೆ ಎಂದಿನಂತೆ ಪಂಚಾಯಿತಿ ಅಧಿಕಾರಿಗಳು ಸುಮ್ಮನೆ ಕುಳಿತಿದ್ದರು. ಈ ನಡುವೆ ಸವರ್ಣೀಯರೇ ಆ ಗೋಡೆಯನ್ನು ಕೆಡವಿ, ದಲಿತರ ಮೇಲೆ ಆರೋಪ ಹೊರಿಸಿದ್ದಾರೆ. ದಲಿತರ ಕೇರಿಗೆ ನುಗ್ಗಿ ಹೆದರಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಉಪಯೋಗವಾಗಿಲ್ಲ’ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.28 ರೊಳಗೆ ಸೂಕ್ತ ಕ್ರಮ ಕೈಗೊ ಳ್ಳದಿದ್ದರೆ 28ರಂದು ನಡೆಯುವ ಎಸ್.ಸಿ. ಎಸ್‌ಟಿ ಸಭೆ ಯನ್ನು ಬಹಿಷ್ಕರಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದವರನ್ನು ಸಮಾಧಾನಪಡಿಸಲು ತಹಸೀಲ್ದಾರರು ಹಾಗೂ ಶಾಸಕರು ಬಂದರೂ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮರಳಿದ ಪ್ರಸಂಗವೂ ನಡೆಯಿತು.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಘೋಷಣೆ ಕೂಗುತ್ತಿದ್ದವರಿಂದ ಮನವಿ ಸ್ವೀಕರಿಸಿ ಮಾತುಕತೆ ನಡೆಸಲು ತಹಸೀಲ್ದಾರ ಮಥಾಯಿ ಬಂದರು. ಆ ವೇಳೆಗೆ ಪ್ರತಿಭಟನಾಕಾರರು ತಹಸೀಲ್ದಾರರ ವಿರುದ್ಧವೇ ಘೋಷಣೆಗಳನ್ನು ಕೂಗಿದರು. ಇದನ್ನು ನೋಡಿದ ಮಥಾಯಿ ಮಾತುಕತೆ ನಡೆಸದೆ ಮರಳಿದರು.

ಶಾಸಕ ಎಚ್.ಎಸ್. ಪ್ರಕಾಶ್ ಬಂದು ಮಾತಕುತೆಗೆ ಮುಂದಾದರು. ‘ನಾನೇ ಬೆಳಿಗ್ಗೆ ಸ್ಥಳಕ್ಕೆ ಬಂದು ಪರಿಶೀಲನೆ ನೆಡದಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರೂ ಪ್ರತಿಭಟನಾಕಾರರಲ್ಲಿ ಕೆಲವರು ಅಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದರಿಂದ  ಬೇಸರಗೊಂಡ ಶಾಸಕರು ಪ್ರತಿಭಟನೆ ಮಾಡಿಕೊಳ್ಳಲಿ ಎಂದು ಅಲ್ಲಿಂದ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT