ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದಲಿತರ ಮೀಸಲು ಹಣ ಬಳಕೆ ಸಂವಿಧಾನಿಕ ಹಕ್ಕಾಗಲಿ'

Last Updated 14 ಏಪ್ರಿಲ್ 2013, 20:11 IST
ಅಕ್ಷರ ಗಾತ್ರ

ಬೆಂಗಳೂರು: `ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗಾಗಿ ಮೀಸಲಿಡುವ ಹಣದ ಬಳಕೆಯನ್ನು ಸಂವಿಧಾನಿಕ ಹಕ್ಕನ್ನಾಗಿ ಮಾಡಲು ಹೊಸ ಕಾನೂನು ಜಾರಿಗೆ ತರಬೇಕು' ಎಂದು ಬಿಜೆಪಿ ಮುಖಂಡ ಅನಂತಕುಮಾರ್ ಹೇಳಿದರು.

ನಗರದ ಮಲ್ಲೇಶ್ವರದಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬಜೆಟ್‌ನಲ್ಲಿ ಮೀಸಲಿಡುವ ಶೇ 22ರಷ್ಟು ಹಣ ಸಂಪೂರ್ಣವಾಗಿ ವಿನಿಯೋಗ ಆಗುತ್ತಿಲ್ಲ. ಖರ್ಚಾಗದೇ ಉಳಿದ ಹಣವನ್ನು ಮತ್ತೆ ಸರ್ಕಾರಕ್ಕೆ ವಾಪಸ್ ಮಾಡಲಾಗುತ್ತಿದೆ. ಇದರಿಂದ ದಲಿತರು ಆರ್ಥಿಕವಾಗಿ ಹಿಂದುಳಿಯುವಂತಾಗಿದೆ. ಈ ವರ್ಗಗಳಿಗೆ ಮೀಸಲಿಟ್ಟ ಹಣದ ಪೂರ್ಣ ಬಳಕೆಯನ್ನು ಕಡ್ಡಾಯಗೊಳಿಸಲು ಪ್ರತ್ಯೇಕ ಕಾನೂನಿನ ಅಗತ್ಯವಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು' ಎಂದರು.

`ವೋಟ್ ಬ್ಯಾಂಕ್‌ಗಾಗಿ ಮೀಸಲಾತಿಯ ಮೂಲ ಆಶಯಗಳನ್ನು ಕಾಂಗ್ರೆಸ್ ದುರ್ಬಲಗೊಳಿಸಿದೆ. ಮೀಸಲಾತಿಯನ್ನು ಅರ್ಥಪೂರ್ಣವಾಗಿ ಜಾರಿಗೊಳಿಸಲು ಮತ್ತೆ ಹೋರಾಟ ಹಮ್ಮಿಕೊಳ್ಳಬೇಕು. ದೇಶದ ಆಡಳಿತವನ್ನು ಅಂಬೇಡ್ಕರ್ ಸ್ಮೃತಿಯೊಂದಿಗೆ ನಡೆಸುವ ಅಗತ್ಯವಿದೆ. ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರುವುದೇ ಅಂಬೇಡ್ಕರ್ ಸ್ಮೃತಿಯಾಗಿದ್ದು, ಬಿಜೆಪಿ ಇದಕ್ಕೆ ಬದ್ಧವಾಗಿದೆ' ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, `ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದರೂ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ದೊಡ್ಡ ದುರಂತ' ಎಂದು ವಿಷಾದ ವ್ಯಕ್ತಪಡಿಸಿದರು.

`ನ್ಯಾ.ರಂಗನಾಥ ಮಿಶ್ರಾ ಆಯೋಗದ ವರದಿ ಮೀಸಲಾತಿ ನೀತಿಯನ್ನು ಬುಡಮೇಲು ಮಾಡುವಂತಿದೆ. ಈ ವರದಿ ಅನುಷ್ಠಾನಗೊಂಡರೆ ಶೋಷಿತ ಸಮುದಾಯಗಳಿಗೆ ಭಾರಿ ವಂಚನೆಯಾಗಲಿದೆ. ಆದ್ದರಿಂದ ಈ ವರದಿ ವಿರುದ್ಧ ದೊಡ್ಡ ಆಂದೋಲನ ನಡೆಸಬೇಕು' ಎಂದರು.

ಬಿಜೆಪಿ ಮುಖಂಡರಾದ ಡಿ.ವಿ.ಸದಾನಂದಗೌಡ, ಸತೀಶ್, ಡಿ.ಎಸ್.ವೀರಯ್ಯ, ತಾರಾ ಅನೂರಾಧ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT