ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಮೇಲೆ ಹೆಚ್ಚಿದ ದೌರ್ಜನ್ಯ: ಆತಂಕ

ದೂರುಗಳಿಗೆ ಸ್ಪಂದಿಸದ ಪೊಲೀಸರು: ಆರೋಪ
Last Updated 11 ಡಿಸೆಂಬರ್ 2013, 8:59 IST
ಅಕ್ಷರ ಗಾತ್ರ

ಕೋಲಾರ: ಇತ್ತೀಚಿನ ದಿನಗಳಲ್ಲಿ ಜಿಲ್ಲೆ­ಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ, ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿರುವುದು ಹಾಗೂ ದೌರ್ಜನ್ಯ ಎಸಗಿದವರೊಂದಿಗೆ ಶಾಮೀಲಾಗು­ತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಅಸಮಾ­ಧಾನ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆಯಿತು.

ನಗರದ ತಮ್ಮ ಕಚೇರಿಯಲ್ಲಿ ಡಿವೈಎಸ್ಪಿ ಅಶೋಕಕುಮಾರ್‌ ಅವರು ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯಗಳ ತಡೆ ಸಂಬಂಧಿಸಿದ ಕುಂದು ಕೊರತೆಗಳ ಸಭೆ­ಯಲ್ಲಿ ಮಾತನಾಡಿದ ಮುಖಂಡರು, ದಲಿತರ ಮೇಲಿನ ದೌರ್ಜನ್ಯ ಪ್ರಕರಣ­ಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತ­ಪಡಿಸಿದರು.

ಇಂದುಮಂಗಲ ನಾರಾಯಣಸ್ವಾಮಿ ಎಂಬುವರ ಮೇಲೆ ಇಲ್ಲಿಯವರೆಗೆ 6 ಬಾರಿ ದಲಿತರ ಮೇಲಿನ ದೌರ್ಜನ್ಯ ಪ್ರಕ­ರಣ ದಾಖಲಾಗಿದೆ. ಆದರೆ ಪೊಲೀಸರು ಇದುವರೆಗೆ ಒಂದು ಬಾರಿಯೂ ಅವ­ರನ್ನು ಬಂಧಿಸುವ ಪ್ರಯತ್ನ ಮಾಡಿಲ್ಲ ಎಂದು ಮಾಲೂರಿನ ತಿಪ್ಪಸಂದ್ರ ಶ್ರೀನಿವಾಸ್ ದೂರಿದರು.

ಅವರ ಮಾತಿಗೆ ದನಿಗೂಡಿಸಿದ ವಾಲ್ಮೀಕಿ ಸಂಘದ ಕುಡುವನಹಳ್ಳಿ ಆನಂದ್,  ತಾಲ್ಲೂಕಿನಾದ್ಯಂತ ಗ್ರಾಮಾಂ­ತರ ಪ್ರದೇಶದಲ್ಲಿ ಸಾರಾಯಿ ಮಾರಾಟವಾಗುತ್ತಿದೆ, ಅದಕ್ಕೆ ಅನಕ್ಷರಸ್ಥ ದಲಿತರು ಬಲಿಯಾಗು­ತ್ತಿದ್ದಾರೆ. ಅಬ­ಕಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ­ವಾಗಿಲ್ಲ, ತಾಲ್ಲೂಕಿನ ಗಂಗಟ್ಟ ಗ್ರಾಮ­ದಲ್ಲಿ ರಾಜಾರೋಷ­ವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ ಎಂದು ದೂರಿ­ದರು.

ಮಾಲೂರಿನ ವಾಲ್ಮೀಕಿ ಸಮು­ದಾಯದ ಮುಖಂಡ ವೆಂಕಟರಮಣ, ಮಾಸ್ತಿ ಠಾಣಾ ವ್ಯಾಪ್ತಿಯ ಚಿಕ್ಕತಿರುಪತಿ ಗ್ರಾಮದ, ಪರಿಶಿಷ್ಟ ಜಾತಿಗೆ ಸೇರಿದ ರಾಧಮ್ಮ ಎಂಬುವರು ಸ್ವಂತ ಜಮೀನಿನಲ್ಲಿ ಗಂಗಾಕಲ್ಯಾಣ ಯೋಜನೆ­ಯಡಿ ಕೊಳವೆ ಬಾವಿ ಸೌಲಭ್ಯ ಪಡೆದಿದ್ದಾರೆ. ಅವರ ಜಮೀನು ಸುತ್ತ­ಮುತ್ತ ಎಲ್ಲರೂ ಅನ್ಯ ಜಾತಿಯವರಿದ್ದು, ಕೊಳವೆಬಾವಿಯ ಪಂಪು ಮೋಟಾರು ಮತ್ತಿತರೆ ವಸ್ತುಗಳನ್ನು ಕಳವು ಮಾಡಿ­ಕೊಂಡು ಹೋಗಿದ್ದಾರೆ.

ಆ ಬಗ್ಗೆ ಇದುವರೆಗೂ 10ಕ್ಕೂ ಹೆಚ್ಚು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿ­ದರೂ ಸ್ಥಳೀಯ ಮಟ್ಟದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆ ಮುಗಿದ ತಕ್ಷಣವೇ ಮಾಸ್ತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕ­ರಣದ ಬಗ್ಗೆ ಮಾಹಿತಿ ಪಡೆದು, ಕ್ರಮ ಜರುಗಿಸುವುದಾಗಿ ಡಿವೈಎಸ್ಪಿ ಅಶೋಕಕುಮಾರ್ ಭರವಸೆ ನೀಡಿದರು. ನಗರದಲ್ಲಿರುವ ಪರಿಶಿಷ್ಟ ಸಮು­ದಾಯದ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಹೊರಗಿನ ಕೆಲವರು ವಿದ್ಯಾರ್ಥಿಗಳ ಸೋಗಿ­ನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ದೂರುಗಳಿವೆ. ಅಂಥದಕ್ಕೆ ಆಸ್ಪದ ನೀಡದೆ ಪೊಲೀಸರು ನಿಗಾ ವಹಿಸಬೇಕು ಎಂದು ಹಾರೋಹಳ್ಳಿ ರವಿ ಆಗ್ರಹಿಸಿದರು. 

ಹಾಸ್ಟೆಲ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ, ಶೀಘ್ರವೇ ಕ್ರಮ ವಹಿಸ­ಲಾಗುವುದು ಎಂದು ಡಿವೈಎಸ್ಪಿ ತಿಳಿಸಿದರು. ನಗರದ ಅಮ್ಮವಾರಿಪೇಟೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರೊಬ್ಬರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಪ್ರಮಾಣ ಪತ್ರ ಹೊಂದಿರುವ ಅವರು ಪುನಃ ರಾಜ್ಯ ರಸ್ತೆ ಸಾರಿಗೆ ಡಿಪೊ ಎದುರು ಹೊಸದೊಂದು ಕ್ಲಿನಿಕ್ ಪ್ರಾರಂಭಿಸಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಪಿವಿಸಿ ಕೃಷ್ಣಪ್ಪ ಆಗ್ರಹಿಸಿದರು.

ನಗರದ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ಪ್ರತಿಮೆ ಸುತ್ತಲಿನ ಪ್ರದೇಶ­ದಲ್ಲಿ ರಾತ್ರಿ ವೇಳೆ ಬಹುಹೊತ್ತಿನವರೆಗೂ ಮದ್ಯ ಸೇವನೆ ಮೊದಲಾದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಸುತ್ತ­ಮುತ್ತಲೂ ಮೂರ್ನಾಲ್ಕು ಮದ್ಯದಂಗಡಿ ತೆರೆದಿರುವುದೇ ಅದಕ್ಕೆ ಕಾರಣ. ಬಸ್ ನಿಲ್ದಾಣ, ಆಸ್ಪತ್ರೆ, ಮುಖ್ಯ ವೃತ್ತಗಳು, ಶಾಲೆ– ಕಾಲೇಜುಗಳ ಸುತ್ತಮುತ್ತಲ 200 ಮೀಟರ್ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.

ನಂತರ ಮಾತನಾಡಿದ ಅಶೋಕ­ಕುಮಾರ್, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲು ಶಕ್ತಿಮೀರಿ ಶ್ರಮಿಸು­ವುದಾಗಿ ಭರವಸೆ ನೀಡಿದರು. ದಲಿತ ಸಂಘಟನೆಗಳ ಸಂಯುಕ್ತ ರಂಗದ ಎಂ.ಚಂದ್ರಶೇಖರ್, ಟಿ. ವಿಜಯಕು­ಮಾರ್, ಡಿಪಿಎಸ್ ಮುನಿ­ರಾಜು, ವೇಮಗಲ್ ವಿಜಯಕುಮಾರ್, ವರದೇನಹಳ್ಳಿ ವೆಂಕಟೇಶ್, ವಾಲ್ಮೀಕಿ ಸಂಘದ ಬಾಲಗೋವಿಂದ, ಹೂಹಳ್ಳಿ ಪ್ರಕಾಶ್ ಮಾತನಾಡಿದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ  ಬೀರಮಾನಹಳ್ಳಿ ಆಂಜಿನಪ್ಪ,  ಶ್ರೀರಂಗ, ಅಂಬರೀಶ್, ಸಾಹುಕಾರ್ ಶಂಕರಪ್ಪ, ವೇಮಗಲ್ ಮುನಿಯಪ್ಪ, ಮುನಿ­ಆಂಜಿನಪ್ಪ, ವೆಂಕಟಾಚಲಪತಿ, ದಲಿತ ನಾರಾಯಣಸ್ವಾಮಿ ಹಾಗೂ ಯಲ­ವಾರ ರವಿ ಪಾಲ್ಗೊಂಡಿದ್ದರು. ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಸರ್ಕಲ್ ಇನ್‌ಸ್ಪೆಕ್ಟರ್ ಸುಧಾಕರ್, ಗ್ರಾಮಾಂತರ ಠಾಣೆಯ ಸಬ್ಇನ್‌ಸ್ಪೆಕ್ಟರ್ ದೇವೇಂದ್ರಪ್ಪ, ವೇಮಗಲ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಯಶ್ವಂತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT