ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಂದಲೇ ದಲಿತರಿಗೆ ಅನ್ಯಾಯ-ಎಸ್‌ಪಿ ಮುಂದೆ ಅಳಲು

Last Updated 7 ಫೆಬ್ರುವರಿ 2012, 9:25 IST
ಅಕ್ಷರ ಗಾತ್ರ

ಮಂಗಳೂರು: ನಿವೇಶನ ರಹಿತ ದಲಿತರಿಗೆ ಮನೆ ಕಟ್ಟಿಕೊಳ್ಳಲು ನೀಡಲಾಗುತ್ತಿರುವ ಡಿಸಿ ಮನ್ನಾ ಜಮೀನಿನ ವಿಚಾರದಲ್ಲಿ ದಲಿತರಿಗೆ ಹಕ್ಕುಪತ್ರ ನೀಡದೆ ಸತಾಯಿಸಲಾಗುತ್ತಿದೆ. ಆದರೆ ಇದೇ ಜಮೀನನ್ನು ಸರ್ಕಾರಿ ಜಮೀನು ಎಂದು ತಿದ್ದುಪಡಿ ಮಾಡಿ ಇತರೆ ವರ್ಗದ ಜನರಿಗೆ ನೀಡುವಲ್ಲಿ ಅಧಿಕಾರಿಗಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹಲವು ಬಾರಿ ಈ ಬಗ್ಗೆ ದೂರಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬ ಅಳಲು ದಲಿತರಿಂದ ಸೋಮವಾರ ಕೇಳಿಬಂದಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಅವರ ಕಚೇರಿಯಲ್ಲಿ ಸೋಮವಾರ ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ನಾಯಕ ಎಸ್.ಪಿ.ಆನಂದ ಈ ವಿಚಾರ ಪ್ರಸ್ತಾಪಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಹ ಈ ಬಗ್ಗೆ ದೂರಿಕೊಂಡರೂ ಪ್ರಯೋಜನ ಆಗಿಲ್ಲ. ದಲಿತರಿಗೆ ಮಂಗಳೂರು ನಗರ ಮಾತ್ರವಲ್ಲ, ಜಿಲ್ಲೆಯ ಹಲವೆಡೆ ಇಂತಹ ಅನ್ಯಾಯವಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮೇಲ್ವರ್ಗದವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ದಲಿತ ಯುವತಿಯರ ಧ್ವನಿಯನ್ನು ಒತ್ತಡಕ್ಕೆ ಒಳಗಾಗಿ ಪೊಲೀಸರೇ ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ಅನ್ಯಾಯಕ್ಕೆ ಒಳಗಾದ ಮೇಲೂ ಮೇಲ್ವರ್ಗದವರ ಪ್ರಭಾದಿಂದಾಗಿ ದಲಿತರು ನ್ಯಾಯ ಪಡೆಯದಂತಾಗಿದೆ ಎಂದೂ ಅವರು ದೂರಿದರು.

ಇಂಥ ಪ್ರಕರಣಗಳ ಬಗ್ಗೆ ನಿರ್ದಿಷ್ಟ ದೂರುಗಳಿದ್ದರೆ ಖಂಡಿತ ತಮಗೆ ನೀಡಬೇಕು. ಇನ್ನು ಮುಂದೆ ಇಂಥ ಅನ್ಯಾಯ ಆಗದಂತೆ  ಗಮನ ಹರಿಸುವೆ ಎಂದು ಎಸ್‌ಪಿ ಅಭಿಷೇಕ್ ಗೋಯಲ್ ಭರವಸೆ ನೀಡಿದರು.

ಮಡೆ ಮಡೆಸ್ನಾನ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಮಡೆಸ್ನಾನ ವಿವಾದಕ್ಕೆ ಸಂಬಂಧಿಸಿ ರಾಜ್ಯದ ದಲಿತ ಮುಖಂಡ ಶಿವರಾಂ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆನಂದ್ ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಯಾವುದೇ ಒತ್ತಡಕ್ಕೂ ತಾವು ಮಣಿಯುವುದಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.

ದಲಿತರಿಗೆ ದಲಿತರೇ ಶತ್ರು: ಸುಳ್ಯ ಪೇಟೆಯ ಬೀರಮಂಗಲ್ಲಿರುವ ತಮ್ಮ ಭೂಮಿಯನ್ನು ಅತಿಕ್ರಮಿಸಿಕೊಂಡ ಕ್ರೈಸ್ತ ಕುಟುಂಬವೊಂದಕ್ಕೆ ದಲಿತ ಸಂಘರ್ಷ ಸಮಿತಿ  ನಾಯಕರೇ ಕುಮ್ಮಕ್ಕು ನೀಡಿ ತಮ್ಮ ನಿವೇಶನದ ಸ್ವಲ್ಪ ಭಾಗ ಕಬಳಿಸಲು ಯತ್ನಿಸಿದರು ಎಂದು ಪುತ್ತೂರಿನ ಮಾಜಿ ಸೈನಿಕ ವಿಜಯಕುಮಾರ್ ಎಂಬವರು ಎಸ್‌ಪಿಗೆ ದೂರು ಸಲ್ಲಿಸಿದರು.

ಸಭೆ ಆರಂಭವಾಗುತ್ತಿದ್ದಂತೆಯೇ ಅಳಲು ತೋಡಿಕೊಂಡ ವಿಜಯ ಕುಮಾರ್, ತಾವು ಮೂರು ಬಾರಿ ನಿವೇಶನದ ಅಳತೆ ಮಾಡಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ದ.ಸಂ.ಸ. ಮುಖಂಡರೊಬ್ಬರು ಅತಿಕ್ರಮಿಸಿಕೊಂಡ ಕ್ರೈಸ್ತ ಕುಟುಂಬದವರ ಪರವಾಗಿ ತಮಗೇ ಬೆದರಿಕೆ ಹಾಕಿದರು. ತಮ್ಮ ಆಕ್ಷೇಪವನ್ನೂ ಕಡೆಗಣಿಸಿ ತಮ್ಮ ಜಮೀನಿನಲ್ಲಿ ಗೋಡೆ ನಿರ್ಮಿಸಿದ್ದಾರೆ ಎಂದು ದೂರಿದರು.

ಅಕ್ರಮವಾಗಿ ಜಮೀನು ಪ್ರವೇಶಿಸಿದ್ದರ ಬಗ್ಗೆ ತಕ್ಷಣ ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳಬಹುದು. ಅಕ್ರಮ ಪ್ರವೇಶ ನಡೆದು 3 ತಿಂಗಳಾದ ನಂತರ ಪೊಲೀಸರು ಸಹ ಯಾವುದೇ ಕ್ರಮ ಕೈಗೊಳ್ಳಲಾಗದು. ನ್ಯಾಯಾಲಯದಲ್ಲೇ ಈ ಬಗ್ಗೆ ಹೋರಾಟ ನಡೆಸಿ ಎಂದು ಎಸ್‌ಪಿ ಹೇಳಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ದ.ಸಂ.ಸ. (ಭೀಮವಾದ) ನಾಯಕ ಕೇಶವ ಪುತ್ತೂರು, ಸಂಘಟನೆಯಲ್ಲಿ ಬಣಗಳಿರಬಹುದು. ಆದರೆ ದಲಿತರಿಗೆ ಅನ್ಯಾಯ ಮಾಡುವ ಅಥವಾ ತೊಂದರೆ ಕೊಡುವ ಕೆಲಸದಲ್ಲಿ ಅದು ಪಾಲ್ಗೊಂಡಿಲ್ಲ. ದ.ಸಂ.ಸ. ಹೆಸರು ಹೇಳಿಕೊಂಡು ಅನ್ಯಾಯಕ್ಕೆ ಕುಮ್ಮಕ್ಕು ನೀಡುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಎಸ್‌ಪಿ, ಎಲ್ಲಾ ದ.ಸಂ.ಸ. ಬಣಗಳ ನಾಯಕರು, ಕಾರ್ಯಕರ್ತರ ಹೆಸರಿನ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು. ಇದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಾಗುತ್ತದೆ ಎಂದರು. ಇದಕ್ಕೆ ಕೇಶವ ಮತ್ತಿತರ ಮುಖಂಡರು ಸಮ್ಮತಿದರು.

ಪುತ್ತೂರು ಎಎಸ್‌ಪಿ ಅನುಚೇತ್, ಕಡಬದಲ್ಲಿ ನಡೆದ ಅಪ್ರಾಪ್ತ ದಲಿತ ಯುವತಿ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT