ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ದೀಕ್ಷೆ ಕೊಡುವ ಮಠ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಹಾಸನ ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿನ ವೀರಶೈವ ಮಠವೊಂದು ಶತಮಾನಗಳಿಂದ ಸಾಮಾಜಿಕ ಅಸಮಾನತೆ ತೊಡೆದುಹಾಕುವಂಥ ಕಾರ್ಯ ಮಾಡುತ್ತ ಬಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಚಂಗಡಿಹಳ್ಳಿಗೆ ಸಮೀಪದ ಈ `ಹೆಗ್ಗಡಹಳ್ಳಿ ಮಠ~ದಲ್ಲಿ ದಲಿತರಿಗೂ ದೀಕ್ಷೆ ನೀಡುವುದು ವಿಶೇಷ ಸಂಪ್ರದಾಯ.

ಈ ಮಠಕ್ಕೆ ಸುಮಾರು 500ರಿಂದ 700 ವರ್ಷದ ಇತಿಹಾಸವಿದೆ ಎಂದು ಹೇಳುತ್ತಾರೆ ಈಗಿನ ಉತ್ತರಾಧಿಕಾರಿ ವಿಶ್ವನಾಥ ದೇವರು.  ತುಂಬ ಹಿಂದಿನ ಇತಿಹಾಸದ ಬಗ್ಗೆ ದಾಖಲೆಗಳು ಲಭಿಸುತ್ತಿಲ್ಲ.

ಮೈಸೂರು ಮಹಾರಾಜರ ಕಾಲದಲ್ಲಿ ದರಕಾಸ್ತು ರೂಪದಲ್ಲಿ ಮಠಕ್ಕೆ 40 ಎಕರೆ ಜಾಗ ಬಂದಿತ್ತು. ಸುತ್ತ ದಟ್ಟ ಅರಣ್ಯ. ಮಧ್ಯದಲ್ಲಿ ಪುರಾತನ ಕಾಲದ ಕಟ್ಟಡ, ಒಳಗೆ ಶಾಂತ ಮಲ್ಲಿಕಾರ್ಜುನಸ್ವಾಮಿ, ಷಟ್ಭಾವರಹಿತೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿಗಳ ಗದ್ದುಗೆಗಳಿವೆ.

ವೀರಶೈವ ಮಠವಾಗಿದ್ದರೂ ಸಾಮಾನ್ಯ ಮಠಗಳಲ್ಲಿ ಕಾಣಸಿಗದಂಥ ಹಲವು ವಿಶೇಷಗಳು ಇಲ್ಲಿವೆ. ಷಟ್ಭಾವರಹಿತೇಶ್ವರ ಎಂಬ ಹೆಸರೇ ಬೇರೆಲ್ಲೂ ಕಾಣ ಸಿಗುವುದಿಲ್ಲ. ಆರು ಭಾವಗಳನ್ನು (ಷಡ್ ವೈರಿಗಳನ್ನು)  ಮೀರಿದವರು ಎಂಬುದು ಇದರ ಅರ್ಥ. ಈ ಮಠದಲ್ಲಿ ಮೂರು ವರ್ಷಗಳಿಗೊಮ್ಮೆ ಶ್ರಾವಣ ಮಾಸದಲ್ಲಿ ಲಿಂಗಪೂಜೆ ನಡೆಯುತ್ತದೆ. ಇದೂ ವಿಶೇಷ. ಪೂಜೆಯ ದಿನದಂದು ಹೆಣ್ಣುಮಕ್ಕಳು ಅಡುಗೆ ಮಾಡುವಂತಿಲ್ಲ. ಆ ದಿನ ಎಲ್ಲವೂ ಮಡಿಯಲ್ಲೇ ಆಗಬೇಕು. ಮಠದಲ್ಲೇ ಅಂದು ಬತ್ತವನ್ನು ಕುಟ್ಟಿ ಅಕ್ಕಿ ಮಾಡಬೇಕು. ಪ್ರತ್ಯೇಕ ಬಾವಿಯಿಂದ ನೀರು ತಂದು ಪೂಜೆ, ಆಗಲೇ ಕರೆದ ಹಸುವಿನ ಹಾಲಿನಲ್ಲಿ ಅಕ್ಕಿ ಬೇಯಿಸಿ ಎಡೆ ಮಾಡಬೇಕು.

ವಿಶಿಷ್ಟ ಸಂಪ್ರದಾಯ

ಬೇರೆ ಯಾವುದೇ ಮಠಗಳಲ್ಲಿಲ್ಲದ ಈ ಸಂಪ್ರದಾಯ ಹೆಗ್ಗಡಹಳ್ಳಿ ಮಠದಲ್ಲಿ ಪರಂಪರಾಗತವಾಗಿ ಬಂದಿದೆ. ಸುತ್ತಮುತ್ತಲಿನ ಹಲವು ಹಳ್ಳಿಗಳ ದಲಿತರಿಗೆ ಕುಮಾರಲಿಂಗೇಶ್ವರ ಮನೆದೇವರು. ಬಹಳ ಹಿಂದೆ ಕುಮಾರಲಿಂಗೇಶ್ವರರಿಗೆ ದೀಕ್ಷೆ ನೀಡಲು ಎಲ್ಲರೂ ನಿರಾಕರಿಸಿದಾಗ ಹೆಗ್ಗಡಹಳ್ಳಿ ಮಠದ ಸ್ವಾಮೀಜಿ ದೀಕ್ಷೆ ನೀಡಿದ್ದರು. ಅಂದಿನಿಂದ ಈ ಸಂಪ್ರದಾಯ ಮುಂದುವರಿಯುತ್ತ ಬಂದಿದೆ.

`ದೀಕ್ಷೆ ಪಡೆಯಲು ಮುಂದಾಗುವ ದಲಿತರಿಗೆ ವೀರಶೈವ ಪರಂಪರೆಯಲ್ಲಿ ದೀಕ್ಷೆ ನೀಡುತ್ತೇವೆ. ಮತಾಂತರ ಮಾಡುವುದಿಲ್ಲ. ದೀಕ್ಷೆಯ ಜತೆಗೆ ರುದ್ರಾಕ್ಷಿ, ವಿಭೂತಿ, ಜೋಳಿಗೆ ಹಾಗೂ ಬೆತ್ತ ನೀಡಲಾಗುತ್ತದೆ. ದೀಕ್ಷೆ ಪಡೆದ ನಂತರ ಅವರು ಕೆಟ್ಟ ಚಟಗಳನ್ನೆಲ್ಲ ಬಿಟ್ಟು ಸಮಾಜದ ಒಳಿತಿಗೆ ದುಡಿಯಬೇಕಾಗುತ್ತದೆ. ತಿಳಿವಳಿಕೆ ಬಂದ ಬಳಿಕ ಸ್ವಇಚ್ಛೆಯಿಂದ ಬಂದವರಿಗೆ ಮಾತ್ರ ದೀಕ್ಷೆ. ದೀಕ್ಷೆ ಪಡೆಯಲು ಬಂದಾಗ ಅವರ ಸಮುದಾಯದ ಹತ್ತು ಜನರಿಂದ ಅನುಮತಿ ಪತ್ರ ಹಾಗೂ ವಾಸಸ್ಥಳ ದೃಢಿ ೀಕರಣ ಪತ್ರಗಳನ್ನು ತರಲು ಸೂಚಿಸುತ್ತೇವೆ. ದೀಕ್ಷೆ ನೀಡಿದ ಬಳಿಕ ಅವರ ಸಮುದಾಯದವರು ಇವರನ್ನು ಒಪ್ಪಿಕೊಳ್ಳಬೇಕು ಎಂಬುದು ಇದರ ಉದ್ದೇಶ~ ಎಂದು ವಿಶ್ವನಾಥ ದೇವರು ನುಡಿಯುತ್ತಾರೆ.

ಹೀಗೆ ದೀಕ್ಷೆ ಪಡೆದವರು ದಲಿತ ಜನಾಂಗಕ್ಕೆ ಮುಖ್ಯಸ್ಥರಾಗುತ್ತಾರೆ. ವಿಶೇಷವೆಂದರೆ ಇಲ್ಲಿಯ ದಲಿತರು ವೀರಭದ್ರೇಶ್ವರನನ್ನು ಪೂಜಿಸುತ್ತಾರೆ, ವೀರಭದ್ರೇಶ್ವರರ ಒಡಪುಗಳನ್ನು ಹೇಳುತ್ತಾರೆ. ಈ ಸಂಪ್ರದಾಯ ಬೇರೆಲ್ಲೂ ಇಲ್ಲ. ದೀಕ್ಷೆ ಪಡೆದವರು `ಕಣಿಯಪ್ಪ~ ಎಂದು ಕರೆಸಿಕೊಳ್ಳುತ್ತಾರೆ. ಇವರಲ್ಲಿ ಕೆಲವರು ತಮ್ಮ ಹೆಸರಿನ ಮುಂದೆಯೇ ಕಣಿಯಪ್ಪ ಎಂದು ಸೇರಿಸಿಕೊಂಡಿದ್ದೂ ಇದೆ. ಹೆಗ್ಗಡಹಳ್ಳಿ ಮಠದಿಂದ ಸುಮಾರು 14 ಕಿ.ಮೀ. ದೂರದ ಗೊದ್ದು ಗ್ರಾಮದಲ್ಲಿ ನಡೆಯುವ ಜಾತ್ರೆ ಹಾಗೂ ಕೊಡಗು ಜಿಲ್ಲೆಯ ಅವರದಾಳು ಗ್ರಾಮಗಳ ಜಾತ್ರೆಗೂ ಈ ಮಠಕ್ಕೂ ಅವಿನಾಭಾವ ಸಂಬಂಧ. ಈ ಮಠದ ಸ್ವಾಮೀಜಿ ಹೋಗಿ ದರ್ಶನ ನೀಡಿದ ಬಳಿಕವೇ ಅಲ್ಲಿ ಜಾತ್ರೆ ಆರಂಭವಾಗುತ್ತದೆ.

ಸಂಕ್ರಾಂತಿಯ ಮರುದಿನ ಗೊದ್ದುವಿನಲ್ಲಿ ಕುಮಾರಲಿಂಗೇಶ್ವರ ಜಾತ್ರೆ ನಡೆಯುತ್ತದೆ. ಮಠದಿಂದ ದೀಕ್ಷೆ ಪಡೆದ ದಲಿತರು ಬಂದು ಸ್ವಾಮೀಜಿಯನ್ನು ಜಾತ್ರೆಗೆ ಬರಮಾಡಿಕೊಳ್ಳುತ್ತಾರೆ. ಸಾಮಾನ್ಯ ದಿನಗಳಲ್ಲಿ ಖಾಲಿಖಾಲಿಯಾಗಿರುವ ಈ ಮಠದಲ್ಲಿ ಸಂಕ್ರಾಂತಿಯಂದು ಹಬ್ಬದ ವಾತಾವರಣ. ದೀಕ್ಷೆ ಪಡೆದ `ಕಣಿಯಪ್ಪ~ರೆಲ್ಲರೂ ಅಂದು ಮಠಕ್ಕೆ ಬಂದು ಅಲ್ಲಿಯೇ ಉಳಿಯುತ್ತಾರೆ. ರಾತ್ರಿ ಗದ್ದುಗೆಗೆ ವಿಶೇಷ ಪೂಜೆ ನಡೆಯುತ್ತದೆ. ಮರುದಿನ ಮುಂಜಾನೆಯೇ ಗೊದ್ದು ಗ್ರಾಮಕ್ಕೆ ಸ್ವಾಮೀಜಿಗಳ ಯಾತ್ರೆ ಹೊರಡುತ್ತದೆ. ಹಿಂದೆ ಕುದುರೆಯಲ್ಲಿ ಹೋಗುತ್ತಿದ್ದರು. ಈಗ ಆ ಸ್ಥಾನವನ್ನು ವಾಹನಗಳು ತುಂಬಿಕೊಂಡಿವೆ.

ಗೊದ್ದುವಿನಲ್ಲಿ ವಿಶೇಷ ಕಟ್ಟೆಯೊಂದರ ಮೇಲೆ ಸ್ವಾಮೀಜಿಯನ್ನು ಕುಳ್ಳಿರಿಸಿದ ಬಳಿಕ ಕುಮಾರಲಿಂಗೇಶ್ವರ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತರಲಾಗುತ್ತದೆ. ಸ್ವಾಮೀಜಿ ಬಂದರೆಂಬ ಖುಷಿಗೆ ಭಕ್ತರು ಕುಣಿಯುತ್ತ ಕುಣಿಯುತ್ತ ಪಲ್ಲಕ್ಕಿ ತರುತ್ತಾರೆ.
ಕೊಡಗು ಜಿಲ್ಲೆಯ ಅವರದಾಳು ಗ್ರಾಮದಲ್ಲಿ ನಡೆಯುವ ಹುಲಕೋಡಯ್ಯ ಸ್ವಾಮಿ ಜಾತ್ರೆಯಲ್ಲೂ ಸರಿಸುಮಾರು ಇದೇ ಸಂಪ್ರದಾಯ ಅನುಸರಿಸಲಾಗುತ್ತದೆ.

ಹಾಸನ ಹಾಗೂ ಕೊಡಗು ಜಿಲ್ಲೆಗಳ ಗಡಿಭಾಗ ಶನಿವಾರಸಂತೆಯಿಂದ ಆರೇಳು ಕಿ.ಮೀ. ದೂರದಲ್ಲಿ ದಟ್ಟ ಅರಣ್ಯದ ಶಾಂತ ಪರಿಸರದಲ್ಲಿ ಹೆಗ್ಗಡಹಳ್ಳಿ  ಮಠವಿದೆ. ಅತ್ಯಂತ ಪವಿತ್ರ ಹಾಗೂ ಕಾರಣೀಕ ಕ್ಷೇತ್ರ ಎಂಬುದು ಭಕ್ತರ ಅಭಿಪ್ರಾಯ. ಮಠದ ಸುತ್ತ ಇರುವ ಕಾಡು, ತೋಟದಲ್ಲಿ ಇನ್ನೂ ಹಲವು ಧಾರ್ಮಿಕ ಸ್ಥಾನಗಳಿವೆ. ಭಕ್ತರು ಬಂದು ತಮ್ಮ ಭಕ್ತಿ, ಭಾವಕ್ಕೆ ಅನುಗುಣವಾಗಿ ಹರಕೆಗಳನ್ನು ಹೇಳಿಕೊಳ್ಳುತ್ತಾರೆ, ಬಂದು ತೀರಿಸುತ್ತಾರೆ.

ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಬೆಳ್ಳಿಯ ಬಿಲ್ವಪತ್ರೆ ಮಾಡಿಸಿಕೊಟ್ಟವರಿದ್ದಾರೆ. ಅಂಥ ಅನೇಕ ಭಕ್ತರು ವರ್ಷಕ್ಕೊಮ್ಮೆ ಬಂದು ದರುಶನ ಪಡೆದು ಹೋಗುತ್ತಾರೆ. ದೀಕ್ಷೆ ಪಡೆದು ಕಣಿಯಪ್ಪ ಎನಿಸಿಕೊಂಡ ಹಲವು ಮಂದಿ ಬೇರೆ ಬೇರೆ ಕಡೆ ಉದ್ಯೋಗ ಮಾಡುತ್ತಿದ್ದಾರೆ. ಅನೇಕ ಮಂದಿ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದಾರೆ.

ಸಾಮಾಜಿಕವಾಗಿಯೂ ಮಠದಿಂದ ಕೆಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ.
ಈಗಿನ ವಿಶ್ವನಾಥ ದೇವರು ಪ್ರಸಕ್ತ ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿದ್ದಾರೆ. ಮಠದ ಕಟ್ಟಡ ಕೆಲವು ಭಾಗ ಜೀರ್ಣಾವಸ್ಥೆಗೆ ಬಂದಿದೆ. ಅದನ್ನು ನವೀಕರಿಸಬೇಕು, 40ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಬೇಕು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಏನಾದರೂ ಕಾಣಿಕೆ ನೀಡಬೇಕು ಎಂಬುದು ಇವರ ಕನಸು.
ಶ್ರೀಶೈಲದ ಶಾಖಾ ಮಠವಾಗಿರುವ ಹೆಗ್ಗಡಹಳ್ಳಿ ಮಠಕ್ಕೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಬಸವಾಪಟ್ಟಣ ಗ್ರಾಮದಲ್ಲಿ ಶಾಖಾ ಮಠವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT