ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದಲಿತರು ಜನಜಾಗೃತಿಗೆ ಮುಂದಾಗಬೇಕು'

Last Updated 3 ಡಿಸೆಂಬರ್ 2012, 6:22 IST
ಅಕ್ಷರ ಗಾತ್ರ

ಸಿಂದಗಿ: `ಡಾ.ಅಂಬೇಡ್ಕರ್ ಭಾವಚಿತ್ರ ಪೂಜಿಸಿದರೆ, ಅವರ ಹೆಸರಿನಲ್ಲಿ ಹೋರಾಟ ಮಾಡಿದರೆ ಸಾಲದು. ದಲಿತರ ಏಳ್ಗೆಗಾಗಿ ಜನಜಾಗೃತಿ ಕಾರ್ಯಕ್ಕೆ ಮುಂದಾಗಬೇಕು' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ದಲಿತರಿಗೆ ಸಲಹೆ ನೀಡಿದರು.

ತಾಲ್ಲೂಕಿನ ದೇವರಹಿಪ್ಪರಗಿಯಲ್ಲಿ ಭಾನುವಾರ ಭಾರತೀಯ ಜೈಭೀಮ ದಳ ಹಾಗೂ ಜೈಭೀಮ ಸೇನಾ ಇವರು ಹಮ್ಮಿಕೊಂಡಿದ್ದ ಧಮ್ಮಚಕ್ರ ಪರಿವರ್ತನಾ ದಿನಾಚರಣೆ ಮತ್ತು ದಲಿತ ಹಿತ ಚಿಂತನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ದಲಿತರು, ಅಸ್ಪೃಶ್ಯರು ಶೈಕ್ಷಣಿಕ ಏಳ್ಗೆ ಸಾಧಿಸಿ ಸಂಘಟಿತರಾಗಿ ಹೋರಾಟ ಕೈಗೊಂಡರೆ ಮಾತ್ರ ನಿಮ್ಮ ಹಕ್ಕು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಜೀವನದುದ್ದಕ್ಕೂ ದಲಿತರ ಏಳ್ಗೆಗಾಗಿ ಹೋರಾಟ ಮಾಡಿ ಭಾರತಕ್ಕಿಂದು ಭದ್ರ ಸಂವಿಧಾನ ಒದಗಿಸಿ ಇಡೀ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಡಾ.ಅಂಬೇಡ್ಕರ್‌ರು ಸ್ಮರಣೀಯರು' ಎಂದರು.

ಪ್ರತಿಯೊಬ್ಬ ದಲಿತ ಬಂಧು ಜಾತಿ ವ್ಯವಸ್ಥೆ ಹೋಗಲಾಡಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕೇಳಿಕೊಂಡರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಜಾತಿ ವ್ಯವಸ್ಥೆ ಹೋಗಲಾಡಿಸುವ ಹೋರಾಟಕ್ಕೆ ನಾಂದಿ ಹಾಡಿದರು. ಮೇಲ್ವರ್ಗದ ಹಾಗೂ ಕೇಳ ವರ್ಗದವರ ಮಧ್ಯೆ ವಿವಾಹ ಸಂಬಂಧದ ಸೇತುವೆ ನಿರ್ಮಿಸಿದರು. ಜಾತಿ ವ್ಯವಸ್ಥೆ ಹೋಗಲಾಡಿಸಬೇಕಾದರೆ ಸಮಾಜದಲ್ಲಿಂದು ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚಬೇಕು ಎಂದು ಮನವಿ ಮಾಡಿದರು.

ದಲಿತರು ಜಾತಿ ವ್ಯವಸ್ಥೆಯಲ್ಲಿಯೇ ಇದ್ದುಕೊಂಡು ಬರೀ ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಮನ ಪರಿವರ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ದಲಿತರಿಗೆ ನ್ಯಾಯ ಸಿಗಬೇಕಾದರೆ ಡಾ.ಅಂಬೇಡ್ಕರ್‌ರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಬರಬೇಕು ಎಂದು ಸಲಹೆ ನೀಡಿದರು.

ಸಿದ್ದಬಸವ ಕಬೀರ ಸ್ವಾಮೀಜಿ, ಮರುಳಸಿದ್ಧ ದೇವರಮಠ ಚಿಗರಳ್ಳಿ ಸಾನಿಧ್ಯ ವಹಿಸಿದ್ದರು. ಸಮಾವೇಶದ ಅಧ್ಯಕ್ಷತೆಯನ್ನು ಜೈಭೀಮದಳದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ ಲಂಬೂ ವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ರಾಜು ಆಲಗೂರ, ಅಶೋಕ ಶಾಬಾದಿ, ತಾ.ಪಂ. ಸದಸ್ಯೆ ಲಕ್ಷ್ಮಿಬಾಯಿ ಮೆಟಗಾರ, ಗ್ರಾಪಂ ಅಧ್ಯಕ್ಷ  ಶ್ರೀಕಾಂತ ರಾಠೋಡ, ಸುರೇಶಗೌಡ ಪಾಟೀಲ, ದಲಿತ ಮುಖಂಡ ಬಿ.ಆರ್. ಯಂಟಮಾನ, ಜೈಭೀಮ ದಳ ಘಟಕ ಅಧ್ಯಕ್ಷ ಪ್ರಕಾಶ ತಳಕೇರಿ, ಸತೀಶ ಗುಡಿಮನಿ, ದಾವಲಪ್ಪ ಗುಡಿಮನಿ, ಶ್ರೀನಿವಾಸ ಮೇಲಿನಮನಿ, ದಿನೇಶ ಮ್ಯಾಕೇರಿ ಉಪಸ್ಥಿತರಿದ್ದರು. ಕಾಶೀನಾಥ ತಳಕೇರಿ ಸ್ವಾಗತಿಸಿದರು. ಪ್ರಭು ರತ್ನಾಕರ ನಿರೂಪಿಸಿದರು. ರಾವುತ ತಳಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT