ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದಿಂದ ಪಾಳು ಬಿದ್ದ ಮಿನಿ ವಿಧಾನಸೌಧ

Last Updated 26 ಸೆಪ್ಟೆಂಬರ್ 2011, 9:50 IST
ಅಕ್ಷರ ಗಾತ್ರ

ಹಾಸನ: `ಅನ್ನ, ಸಾರು, ಉಪ್ಪಿನಕಾಯಿಗಳನ್ನು ಅಕ್ಕಪಕ್ಕದಲ್ಲಿಟ್ಟರೆ ಊಟ ಬೇಗ ಆಗುತ್ತೆ. ಆದ್ರೆ ಅನ್ನ ಒಂದೆಡೆ, ಸಾರು ಇನ್ನೊಂದು ಮೂಲೆ, ಉಪ್ಪಿನಕಾಯಿ ಮತ್ತೊಂದು ಜಾಗದಲ್ಲಿಟ್ಟರೆ ಊಟ ಮಾಡೋದು ಹೇಗೆ ?~  ಯಾವುದೋ ಕೆಲಸಕ್ಕಾಗಿ ಹಾಸನದ ತಾಲ್ಲೂಕು ಕಚೇರಿಗೆ ಬಂದಿದ ವ್ಯಕ್ತಿಯೊಬ್ಬರು ಎತ್ತಿದ ಪ್ರಶ್ನೆ ಇದು.

ತಾಲ್ಲೂಕಿನ ರೈತರ ಸ್ಥಿತಿ ಹೀಗಿದೆ. ಹಾಸನದಲ್ಲಿ ನಾಡ ಕಚೇರಿ ಒಂದು ಮೂಲೆಯಲ್ಲಿ, ತಾಲ್ಲೂಕು ಕಚೇರಿ ಪಿ.ಬಿ.ರಸ್ತೆಯಲ್ಲಿ, ಉಪನೋಂದಣಿ ಕಚೇರಿ ಇನ್ನೊಂದು ಮೂಲೆಯಲ್ಲಿದೆ. ಹಳ್ಳಿಯಿಂದ ಬರುವ ರೈತರು ಒಂದೇ ಬಾರಿ ಎಲ್ಲ ಕೆಲಸಗಳನ್ನು ಮುಗಿಸಿ ಹೋಗಬೇಕೆಂದರೆ ಸಾಧ್ಯವಾಗುತ್ತಿಲ್ಲ. ಮೂರೂ ಕಡೆ ಹೋಗಿ ಗಂಟೆಗಟ್ಟಲೆ ಕಾಯ್ದು, ಹಣ, ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಕು.
 
ಒಂದೇ ದಿನ ಕೆಲಸ ಆಗಿಲ್ಲವೆಂದಾದರೆ ಮರುದಿನ ಮತ್ತೆ ಅದೇ ಪಾಡು. ಎಲ್ಲ ಕಚೇರಿಗಳನ್ನು ಒಂದೇ ಕಡೆ ತರಬೇಕೆಂಬ ಉದ್ದೇಶದಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸುಸಜ್ಜಿತ ಮಿನಿ ವಿಧಾನ ಸೌಧ ನಿರ್ಮಿಸಿದ್ದರೂ, ಅದು ಸುಮಾರು ಒಂದು ದಶಕದಿಂದ ಪಾಳು ಬಿದ್ದಿದೆ.

ತಾಲ್ಲೂಕು ಕಚೇರಿ ಸ್ಥಳಾಂತರ ಒಂದರ್ಥದಲ್ಲಿ ತುಘಲಕ್ ದರ್ಬಾರಿನಂತಾಗಿದೆ. ಒಂದೊಮ್ಮೆ ಸುಸಜ್ಜಿತ ಮಿನಿ ವಿಧಾನಸೌಧಕ್ಕೆ ಹೋಗಿದ್ದ ಕಚೇರಿ, ಅಂದು ಹಲವರು ಹೋರಾಟ ಮಾಡಿದ ಕಾರಣದಿಂದ ಮತ್ತೆ ಕಿಷ್ಕಿಂಧೆಯಂಥ ಹಳೆಯ ಜಾಗದಲ್ಲಿ ಬಂದು ಕುಳಿತಿದೆ. ಜಿಲ್ಲಾಧಿಕಾರಿ ಕಚೇರಿ, ಎಸ್.ಪಿ. ಕಚೇರಿ ಜಿಲ್ಲಾ ಪಂಚಾಯಿತಿಗಳೆಲ್ಲ ಅಕ್ಕಪಕ್ಕದಲ್ಲಿರುವುದರಿಂದ ತಾಲ್ಲೂಕು ಕಚೇರಿಯೂ ಇದೇ ಜಾಗದಲ್ಲಿದ್ದರೆ ಅನುಕೂಲವಾಗುತ್ತದೆ.

ಇದನ್ನು ಸ್ಥಳಾಂತರಿಸಬಾರದು, ಈಗಿರುವ ಕಚೇರಿ ಆವರಣದಲ್ಲೇ ಸಾಕಷ್ಟು ಜಾಗವಿದ್ದು, ಅಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಒಂದು ವರ್ಗ ಒತ್ತಾಯಿಸುತ್ತಿದೆ. ಆದರೆ ತಾಲ್ಲೂಕು ಕಚೇರಿಗಾಗಿಯೇ ಈಗಾಗಲೇ ನಿರ್ಮಿಸಿರುವ ಮಿನಿ ವಿಧಾನಸೌಧವನ್ನೇನು ಮಾಡಬೇಕು? ಅಲ್ಲಿರುವ ತೊಂದರೆಯಾದರೂ ಏನು?

`ಅಲ್ಲ ಸಾರ್ ತಾಲ್ಲೂಕು ಕಚೇರಿಗೆ ಬರುವ ರೈತರು, ಗ್ರಾಮೀಣ ಪ್ರದೇಶದ ಜನರಿಗೆ ಜಿಲ್ಲಾಧಿಕಾರಿ ಕಚೇರಿ, ಎಸ್.ಪಿ. ಕಚೇರಿ, ಜಿಲ್ಲಾ ಪಂಚಾಯಿತಿಯಲ್ಲೇನು ಕೆಲಸ ಇರುತ್ತದೆ ? ನಮಗೆ ಪಹಣಿ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರಗಳು ಬೇಕಾಗುತ್ತವೆ. ಅದಕ್ಕೂ ಈ ಕಚೇರಿಗಳಿಗೂ ಏನು ಸಂಬಂಧ ? ಅವುಗಳು ಇದ್ದಲ್ಲೇ ಇರಲಿ, ನಮಗೆ ಉಪನೋಂದಣಿ ಕಚೇರಿ, ನಾಡಕಚೇರಿ, ಟ್ರೆಝರಿ ಹಾಗೂ ತಾಲ್ಲೂಕು ಕಚೇರಿಗಳು ಒಂದೇ ಕಡೆ ಬರುವಂತೆ ಮಾಡಿ ಅಷ್ಟು ಸಾಕು~ ಎಂದು ದಿನಂಪ್ರತಿ ತಾಲ್ಲೂಕು ಕಚೇರಿಗೆ ಬರುವ ರೈತರು ಗೋಗರೆಯುತ್ತಾರೆ. ಇವರ ಪ್ರಶ್ನೆಯಲ್ಲಿ ಅರ್ಥವಿಲ್ಲವೇ?

ಕುವೆಂಪುನಗರದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ ಎಲ್ಲ ರೀತಿಯಿಂದಲೂ ಜನರಿಗೆ ಅನುಕೂಲವೇ ಆಗಿದೆ. ತಾಲ್ಲೂಕು ಕಚೇರಿಗೆಂದೇ ವಿನ್ಯಾಸ ಮಾಡಿ ನಿರ್ಮಿಸಿದ ಕಟ್ಟಡವದು. ಸಾಕಷ್ಟು ವಿಶಾಲ ಕೊಠಡಿಗಳು, ಪಾರ್ಕಿಂಗ್‌ಗೆ ಬೇಕಾದಷ್ಟು ಜಾಗ ಇದೆ. ಸಂಚಾರ ವ್ಯವಸ್ಥೆ ಇಲ್ಲ ಎಂಬ ದೂರಿತ್ತು. ಈಗ ನಗರ ಸಾರಿಗೆ ಬಸ್ಸುಗಳೂ ಆರಂಭವಾಗಿವೆ.
 
ಜನ ಸಂಚಾರ ಹೆಚ್ಚಾದರೆ ಬಸ್ಸುಗಳ ಸಂಖ್ಯೆಯೂ ಹೆಚ್ಚುತ್ತದೆ, ಹಂತ ಹಂತವಾಗಿ ಎಲ್ಲ ಅನುಕೂಲಗಳೂ ಬರುತ್ತವೆ. ಬಸ್ ನಿಲ್ದಾಣ ಸ್ಥಳಾಂತರದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ.

ಇತ್ತ ಕೆಲಸಕ್ಕೆ ಸಾಕಷ್ಟು ಜಾಗವಿಲ್ಲದೆ ಒದ್ದಾಡುತ್ತಿರುವ ತಾಲ್ಲೂಕು ಕಚೇರಿ ಸಿಬ್ಬಂದಿ ನಮಗೆ ತಾಲ್ಲೂಕು ಪಂಚಾಯಿತಿಯ ಕಟ್ಟಡವನ್ನಾದರೂ ನೀಡಿ ಎಂದು ಮನವಿ ಮಾಡಿಕೊಂಡರು. ಆದರೆ ತಾಲ್ಲೂಕು ಪಂಚಾಯಿತಿಯವರು ಸಾರಾಸಗಟಾಗಿ ಈ ಪ್ರಸ್ತಾವನೆಯನ್ನು ನಿರಾಕರಿಸಿಬಿಟ್ಟರು. ದಶಕಗಳಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿರುವ ತಾಲ್ಲೂಕು ಪಂಚಾಯಿತಿ ಜಾಗವನ್ನು ಯಾಕೆ ಬಿಡಬೇಕು? `ನಿಮಗಾಗಿಯೇ ಸರ್ಕಾರ ಮಿನಿ ವಿಧಾನ ಸೌಧ ಕಟ್ಟಿಸಿದೆ ಅಲ್ಲಿಗೆ ಹೋಗಿ~ ಎಂದು ಸಲಹೆ ನೀಡಿದರು. ಅವರ ವಾದ ಸರಿಯಾಗಿಯೇ ಇದೆ.

ಶೌಚಾಲಯದಲ್ಲಿ ಕೆಲಸ: `ತಾಲ್ಲೂಕು ಕಚೇರಿಯ ಸಿಬ್ಬಂದಿ ಶೌಚಾಲಯದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ~ ಹೀಗೆ ಹೇಳಿದ್ದು ತಹಶೀಲ್ದಾರ ಕೆ. ಮಥಾಯಿ. `ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿದಾಗ ಎಲ್ಲರೆದುರೇ ನಾನು ಈ ಮಾತು ಹೇಳಿದ್ದೆ.

ಬೇರೆಬೇರೆ ಜಿಲ್ಲೆಗಳಿಂದ ಬಂದಿದ್ದ ಅಧಿಕಾರಿಗಳೆಲ್ಲ ಘೊಳ್ಳೆಂದು ನಕ್ಕಿದ್ದರು. ಆದರೆ ನಾನು ವಾಸ್ತವನ್ನು ಹೇಳಿದ್ದೇನೆ. ತಾಲ್ಲೂಕು ಕಚೇರಿಗೆ ಮೂಲಸೌಲಭ್ಯಗಳನ್ನೂ ಕೊಡದೆ ಪರಿಣಾಮಕಾರಿಯಾಗಿ ಕೆಲಸ ಮಾಡಿ ಅಂದ್ರೆ ನಾವಾದ್ರೂ ಏನು ಮಾಡಬಹುದು. ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿ ಅಂದ್ರೆ ನಮಗೂ ಅನುಕುಲ ಆಗುತ್ತೆ.

ಸಂಬಂಧಪಟ್ಟ ಅಧಿಕಾರಿಗಳು ಒಂದು ಸೂಚನೆ ನೀಡಿದ್ರೆ ಸಾಕು ನಾವು ಸ್ಥಳಾಂತರಕ್ಕೆ ಈಗಲೂ ಸಿದ್ಧ. ವಾಸ್ತವವಾಗಿ ನಾವು ಅದನ್ನೇ ಬಯಸುತ್ತೇವೆ~ ಎಂದು ಮಥಾಯಿ ನುಡಿಯುತ್ತಾರೆ.

ಹಳ್ಳಿಯಿಂದ ಬರುವ ರೈತರಿಗೆ ಮಿನಿ ವಿಧಾನಸೌಧಕ್ಕೆ ಹೋಗಿ ಬರಲು ಕಷ್ಟವಾಗುತ್ತದೆ. ಆಟೋಗೆ ದುಬಾರಿ ಬಾಡಿಗೆ ನೀಡಬೇಕಾಗುತ್ತಿತ್ತು ಎಂದು ದಶಕದ ಹಿಂದೆ ನಾಗರಿಕರು ಹೋರಾಟ ಮಾಡಿದ್ದರು. ಅಂದು ಅದು ಸತ್ಯವೂ ಆಗಿತ್ತು.

ಈಗ ಪರಿಸ್ಥಿತಿ ಬದಲಾಗಿದೆ. ಹಳೆಯ ಬಸ್ ನಿಲ್ದಾಣ ಇತಿಹಾಸ ಸೇರುವ ತವಕದಲ್ಲಿದೆ. ಹೊಸ ಬಸ್ ನಿಲ್ದಾಣದಿಂದ ಮಿನಿ ವಿಧಾನಸೌಧಕ್ಕೆ ಸಾಕಷ್ಟು ಬಸ್ಸುಗಳು ಓಡಾಡುತ್ತವೆ. ಯಾವುದೇ ತೊಂದರೆ ಇಲ್ಲದೆ ರೈತರು ತಮ್ಮ ಕೆಲಸ ಮಾಡಿಕೊಳ್ಳಬಹುದು. ಹೀಗಿರುವಾಗ ತಾಲ್ಲೂಕು ಕಚೇರಿಯನ್ನು ಸ್ಥಳಂತರಿಸುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬಹುದಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಉದ್ದುದ್ದ ಸಾಲಿನಲ್ಲಿ ನಿಂತು ಆದಾಯ ಪ್ರಮಾಣಪತ್ರ, ಪಹಣಿ ಮತ್ತಿತರ ದಾಖಲೆಗಳನ್ನು ಪಡೆಯುವ ರೈತರಿಗೆ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT