ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಉತ್ಸವಕ್ಕೆ ಹತ್ತು ಕೋಟಿ

Last Updated 12 ಆಗಸ್ಟ್ 2011, 6:45 IST
ಅಕ್ಷರ ಗಾತ್ರ

ಮೈಸೂರು: `ಈ ಬಾರಿಯ ದಸರಾವನ್ನು ಮಿತವ್ಯಯದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಲಾಗುವುದು. ಉತ್ಸವದ ಎಲ್ಲ ಕೆಲಸ ಕಾರ್ಯಗಳಿಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಒಂಬತ್ತು ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ~ ಎಂದು  ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್  ತಿಳಿಸಿದರು.

ಅರಮನೆಯಲ್ಲಿ ಗುರುವಾರು ಗಜಪಡೆಯ ಮೊದಲ ತಂಡವನ್ನು ಸ್ವಾಗತಿಸಿದ ಅವರು, `ಈ ಬಾರಿಯ ಉತ್ಸವಕ್ಕೆ ಸರ್ಕಾರವು ಹತ್ತು ಕೋಟಿ ರೂಪಾಯಿ ಮೀಸಲಾಗಿಟ್ಟಿದೆ. ಈಗಾಗಲೇ ಆರು ಕೋಟಿ ರೂಪಾಯಿ ಮಂಜೂರಾಗಿದೆ.
 
ಮಾವುತರಿಗೆ ಜೀವವಿಮೆ ಮಾಡಿಸಲಾಗಿದ್ದು, ಊಟ, ವಸತಿ ಮತ್ತಿತರ ಸಕಲ ಸೌಕರ್ಯಗಳನ್ನು ಕೊಡಲಾಗಿದೆ~ ಎಂದು ಹೇಳಿದರು.

`ಸಾಂಸ್ಕೃತಿಕ ದಸರಾಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಲ್ಲ ಜಿಲ್ಲೆಗಳಿಂದ ಅತ್ಯಂತ ವಿಶೇಷವಾದ ಸ್ತಬ್ಧಚಿತ್ರಗಳನ್ನು ಆಹ್ವಾನಿಸಲಾಗುತ್ತಿದೆ. ಇದರ ಬಗ್ಗೆ ಆಯಾ ಜಿಲ್ಲೆಗಳ ಆಡಳಿತದೊಂದಿಗೆ ಸದ್ಯದಲ್ಲಿಯೇ ವಿಡಿಯೋ ಕಾನ್ಫರೆನ್ಸ್ ಮಾಡಲಾಗುವುದು~ ಎಂದರು.

ಪೂಜೆಯ ನೇತೃತ್ವ ವಹಿಸಿದ್ದ ಶಶಿಧರ ದೀಕ್ಷಿತರು, `ಆನೆ ತಂಡವನ್ನು ಅರಮನೆಗೆ ಬರ ಮಾಡಿಕೊಳ್ಳುವ ಮೂಲಕ ದಸರಾ ಮಹೋತ್ಸವದ ಸಿದ್ಧತೆಗಳಿಗೆ ಚಾಲನೆ ಸಿಕ್ಕಂತಾಗಿದೆ. ರಾಜ್ಯ, ರಾಷ್ಟ್ರ, ಸಮಾಜಕ್ಕೆ ದಸರಾ ಹಬ್ಬ ಶುಭ ತರಲಿ~ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೊ.ಮಧುಸೂದನ, ತೋಂಟದಾರ್ಯ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ. ಮಂಜುನಾಥ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಉಪಾಧ್ಯಕ್ಷ ಡಾ. ಶಿವರಾಮು, ಪಾಲಿಕೆ ಸದಸ್ಯೆ ವಿದ್ಯಾ ಅರಸ್, ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್, ಪೊಲೀಸ್ ಆಯುಕ್ತ ಸುನಿಲ ಅಗ್ರವಾಲ್, ಉಪಮೇಯರ್ ಎಂ.ಜೆ. ರವಿಕುಮಾರ್, ಮುಡಾ ಆಯುಕ್ತ ಡಾ. ಸಿ.ಜಿ. ಬೆಟಸೂರಮಠ, ಜಿಪಂ. ಸಿಇಓ ಜಿ. ಸತ್ಯವತಿ ಮತ್ತಿತರರು ಹಾಜರಿದ್ದರು. 

ಗಜಪಡೆಯಲ್ಲಿ ಅಮ್ಮ-ಮಗಳು
 ಗುರುವಾರ ಬೆಳಿಗ್ಗೆ ಅರಮನೆಗೆ ಆಗಮಿಸಿದ ಗಜಪಡೆಯನ್ನು ನೋಡಲು ಬಂದವರೆಲ್ಲರ ಗಮನ ಸೆಳೆದದ್ದು ಅಮ್ಮ-ಮಗಳ ಜೋಡಿ!

ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಮೊದಲ ತಂಡದಲ್ಲಿ ಆಗಮಿಸಿರುವ 54 ವರ್ಷ ವಯಸ್ಸಿನ ಹೆಣ್ಣಾನೆ ಮೇರಿ ಮತ್ತು ಆಕೆಯ 14 ವರ್ಷದ ಮಗಳು ಗಂಗೆ ಈಗ ಆಕರ್ಷಣೆಯ ಕೇಂದ್ರಬಿಂದು.  ಈ ತಂಡದ ಅತ್ಯಂತ ಚಿಕ್ಕ ವಯಸ್ಸಿನ ಆನೆ ಗಂಗೆ ಇದೇ ಪ್ರಥಮ ಬಾರಿಗೆ ದಸರಾ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲಿದೆ. 2.02 ಮೀಟರ್ ಎತ್ತರ ಇರುವ ಗಂಗೆಯು ಹುಣಸೂರು ವನ್ಯಜೀವಿ ವಿಭಾಗದ ಬಳ್ಳೆ ಆನೆ ಶಿಬಿರದಿಂದ ಬಂದಿದೆ.

ಗಂಗೆಯ ತಾಯಿ ಮೇರಿಯನ್ನು 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಸೌಮ್ಯ ಸ್ವಭಾವದ ಈ ಆನೆಯನ್ನು ಹಿಂದೆ ಕಾಡಿನಲ್ಲಿ ಟಿಂಬರ್ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಒಟ್ಟು ಹತ್ತು ಬಾರಿ ದಸರಾ ಮೆರವಣಿಯಲ್ಲಿ ಸಾಲಾನೆಯಾಗಿ ಇದು ಭಾಗವಹಿಸಿದೆ. ಮೇರಿಯು ಹುಣಸೂರು ವಿಭಾಗದ ಸುಂಕದಕಟ್ಟೆ ಆನೆ ಶಿಬಿರದಿಂದ ಬಂದಿದೆ. 2.36 ಮೀಟರ್ ಎತ್ತರ, 3.34 ಮೀಟರ್ ಉದ್ದವಿರುದ ಮೇರಿ 3180 ಕೆಜಿ ತೂಗುತ್ತದೆ.

ಹಿರಿಯಕ್ಕ ಸರಳ: ಕಳೆದ 12 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ 69 ವರ್ಷದ ಹೆಣ್ಣಾನೆ ಸರಳ ಈ ತಂಡದ ಅತ್ಯಂತ ಹಿರಿಯ ಆನೆ.

ಹುಣಸೂರು ವಿಭಾಗದ ಸುಂಕದಕಟ್ಟೆ ಆನೆ ಶಿಬಿರದ ಸರಳ, 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದ ಖೆಡ್ಡಾದಲ್ಲಿ ಸೆರೆ ಸಿಕ್ಕಿತ್ತು. 2.46 ಮೀಟರ್ ಎತ್ತರ, 3.34 ಮೀ. ಉದ್ದವಿರುವ ಸರಳ, ಅಂದಾಜು 3250 ಕೆಜಿ ತೂಗುತ್ತಾಳೆ.  ಈ ತಂಡದ ಗಂಡಾನೆಗಳಲ್ಲಿ ಗಜೇಂದ್ರನೇ ಹಿರಿಯ ಆನೆ. 56 ವರ್ಷದ ಗಜೇಂದ್ರ 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಸೆರೆಯಾಗಿತ್ತು. ಈ ಆನೆಯು ಕಾಡಾನೆಯನ್ನು ಹಿಡಿದು ಪಳಗಿಸುವ ಕೆಲಸದಲ್ಲಿ ಸಮರ್ಥವಾಗಿದ್ದು, ಸುಮಾರು 15 ವರ್ಷಗಳಿಂದ ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿ ಹೊತ್ತಿದೆ.

ಕೆ.ಗುಡಿ ಆನೆ ಶಿಬಿರದ ಗಜೇಂದ್ರ 2.84 ಮೀಟರ್ ಎತ್ತರ, 3.80 ಮೀಟರ್ ಉದ್ದ  ಇದ್ದು ಅಂದಾಜು 4570 ಕೆಜಿ ತೂಗುತ್ತದೆ.  ಚಿನ್ನದ ಅಂಬಾರಿ ಹೊರುವ 53 ವರ್ಷದ ಬಲರಾಮ,  1987ರಲ್ಲಿ ಕೊಡಗಿನ ಕಟ್ಟೇಪುರ ಅರಣ್ಯದಲ್ಲಿ ಸೆರೆ ಸಿಕ್ಕಿತ್ತು. ಬಲಶಾಲಿಯಾಗಿರುವ ಈ  ಆನೆಯು 16 ವರ್ಷಗಳಿಮದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಬಲರಾಮ 12 ವರ್ಷಗಳಿಂದ ಅಂಬಾರಿಯನ್ನು ಹೊರುತ್ತಿದ್ದಾನೆ. ಈ ಬಾರಿಯೂ ಚಿನ್ನದ ಅಂಬಾರಿಯನ್ನು ಹೊತ್ತು ನಡೆಯಲಿದ್ದಾನೆ ಬಲರಾಮ.

ಗಂಡಾನೆಗಳಲ್ಲಿ ಅತ್ಯಂತ ಕಿರಿಯ ಆನೆ ಅಭಿಮನ್ಯುಗೆ ಈಗ 45ರ ಸಂಭ್ರಮ. 2.68 ಮೀಟರ್ ಎತ್ತರ, 3.51 ಮೀಟರ್ ಉದ್ದ ಮತ್ತು 4270 ಕೆಜಿ ತೂಕದ ಅಭಿಮನ್ಯು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯದಲ್ಲಿ ಸೆರೆಯಾಗಿತ್ತು. ಕಾಡಾನೆಯನ್ನು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಪರಿಣಿತನಾಗಿರುವ ಅಭಿಮನ್ಯು, 13 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT