ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕ್ರೀಡೆಯ ಸೊಬಗನು ನೋಡ...

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಎರಡೂವರೆ ಸಾವಿರ ಕ್ರೀಡಾಪಟುಗಳು. 18 ಕ್ರೀಡೆಗಳು, 9 ನೂತನ ದಾಖಲೆಗಳು..! ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ಈ ಬಾರಿಯ ದಸರಾ ಕ್ರೀಡಾಕೂಟದ ಪ್ರಮುಖ ಅಂಶಗಳಿವು.

ಪ್ರತಿವರ್ಷವೂ ಇಷ್ಟೇ ಪ್ರಮಾಣದಲ್ಲಿ ಕ್ರೀಡಾಪಟುಗಳು ಸೇರುತ್ತಾರೆ. ನಾಡಹಬ್ಬದ ಅಭಿಮಾನ ಮತ್ತು ಪ್ರತಿಭಾ ಪ್ರದರ್ಶನಕ್ಕೊಂದು ಅವಕಾಶ ಎಂಬ  ಕಾರಣಗಳಿಂದ ಮಾತ್ರ ಇಷ್ಟೊಂದು ಸಂಖ್ಯೆಯಲ್ಲಿ ಆಟಗಾರರು ಸೇರುತ್ತಿದ್ದಾರೆ.

ಆದರೆ, ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಈ ಕೂಟಕ್ಕೆ ಇದುವರೆಗೂ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆಯ ಮಾನ್ಯತೆಯ ಮುದ್ರೆ ಬಿದ್ದಿಲ್ಲ.

ಇದಕ್ಕೆ ದಸರಾ ಕ್ರೀಡೆಯ ಆಯೋಜನೆಯಲ್ಲಿರುವ ಕೆಲವು ಪದ್ಧತಿಗಳೇ ಕಾರಣ.ಇವುಗಳ ಬದಲಾವಣೆ ಮಾಡಿ ಕೆಓಎ ಮಾನ್ಯತೆ ಪಡೆಯುವ ಹಾದಿಯಲ್ಲಿ ಇಲಾಖೆ ಮತ್ತು ದಸರಾ ಕ್ರೀಡಾ ಉಪಸಮಿತಿ ಈ ಬಾರಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ.
 

ಸೆಪ್ಟೆಂಬರ್ 30ರಿಂದ ಅಕ್ಟೋಬರ್ 3ವರೆಗೆ ನಡೆದ ರಾಜ್ಯ ದಸರಾ ಕ್ರೀಡಾಕೂಟದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯಿತು.

ದಸರಾ ಕ್ರೀಡೆಗೆ ಕೆಓಎ ಮಾನ್ಯತೆ ಪಡೆಯಲು ಏನೇನು ನಿಯಮಾವಳಿಗಳಿವೆ. ವಯೋಮಿತಿಯ ನಿರ್ಬಂಧವೇನು ಎಂಬ ಎಲ್ಲ ಮಾರ್ಗಸೂಚಿಗಳನ್ನು ಕೋರಿ ಕೆಓಎಗೆ ಪತ್ರ ಬರೆದಿದ್ದೇವೆ.
 

ಅಲ್ಲಿಂದ ಪ್ರತಿಕ್ರಿಯೆ ಬಂದ ಮೇಲೆ ಮುಂದಿನ ಯೋಜನೆ ರೂಪಿಸಲಾಗುತ್ತದೆ. ಇದರಿಂದ ಕ್ರೀಡಾಪಟುಗಳಿಗೆ ಸದುಪಯೋಗವಾಗಲಿದೆ~ ಎಂದು ಇಲಾಖೆಯ ಉಪನಿರ್ದೇಶಕ ಕೆ. ಸುರೇಶ್ ಹೇಳುತ್ತಾರೆ.

ದಸರಾ ಕ್ರೀಡಾಕೂಟವು ಈಗ ಮುಕ್ತವಾಗಿರುವುದರಿಂದ ವಯೋಮಿತಿಯ ನಿರ್ಬಂಧವಿಲ್ಲ. ತಾಲ್ಲೂಕು, ಜಿಲ್ಲೆ, ವಿಭಾಗಮಟ್ಟಗಳಲ್ಲಿ ವಿಜೇತರಾದವರಿಗೆ ರಾಜ್ಯಮಟ್ಟದ ಕೂಟದಲ್ಲಿ ಆಡಲು ಅವಕಾಶ ನೀಡಲಾಗುತ್ತದೆ.

ಒಲಿಂಪಿಕ್ಸ್ ಗೇಮ್ಸ ಪಟ್ಟಿಯಲ್ಲಿರುವ ಅಥ್ಲೆಟಿಕ್ಸ್, ಈಜು, ವೇಟ್‌ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ವಾಲಿಬಾಲ್, ಹಾಕಿ ಸೇರಿದಂತೆ ಕಬಡ್ಡಿ, ಥ್ರೋಬಾಲ್, ಹ್ಯಾಂಡ್‌ಬಾಲ್‌ಗಳನ್ನು ಆಡಿಸಲಾಗುತ್ತಿದೆ. ಈ ಬಾರಿ ಹೊಸದಾಗಿ ನೆಟ್‌ಬಾಲ್ ಮತ್ತು ಟೇಕ್ವಾಂಡೋವನ್ನೂ ಸೇರ್ಪಡೆ ಮಾಡಲಾಗಿದೆ.

ಆದರೆ ದಸರಾ ಕ್ರೀಡಾಕೂಟದಲ್ಲಿ ಗೆದ್ದ ಸರ್ಟಿಫಿಕೆಟ್‌ಗೆ ಹೆಚ್ಚಿನ ಬೆಲೆ ಬರಬೇಕಾದರೆ ಮತ್ತು ಕ್ರೀಡಾಕೋಟಾದ ಸೌಲಭ್ಯಗಳು ಆಟಗಾರರಿಗೆ ಸಿಗಬೇಕಾದರೆ ಕೆಓಎ ಮಾನ್ಯತೆ ಅವಶ್ಯಕ. ಈ ನಿಟ್ಟಿನಲ್ಲಿ ಕೆಓಎ ಪ್ರಕಾರ ಭಾಗವಹಿಸುವ ಆಟಗಾರರ ವಯೋಮಿತಿ, ಆಟಗಳು ಸೇರಿದಂತೆ ಉಳಿದ ನಿಯಮಾವಳಿಗಳನ್ನು ಪಾಲಿಸಬೇಕು.

ಮೈಸೂರಿನ ಹಲವು ಹಿರಿಯ ಕ್ರೀಡಾಪಟುಗಳು ಈ ಕುರಿತು ಬಹುದಿನಗಳಿಂದ ಬೇಡಿಕೆ ಸಲ್ಲಿಸಿದ್ದರೂ ಈಡೇರಿಲ್ಲ. ಇದೀಗ ಇಲಾಖೆ ಮತ್ತು ಉಪಸಮಿತಿಯೇ ಮುಂದೆ ನಿಂತು ಪ್ರಸ್ತಾವ ಸಲ್ಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ಬಹುಶಃ ಇಡೀ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಸುವ ಏಕೈಕ ಕ್ರೀಡಾ ಚಟುವಟಿಕೆ ದಸರಾ ಕ್ರೀಡಾಕೂಟವೊಂದೇ. (ಇದೀಗ ಪೈಕಾ ಕೂಟವೂ ಸೇರಿದ್ದು, ಇನ್ನೂ ಜನಪ್ರಿಯತೆ ಪಡೆದಿಲ್ಲ).

ಆದರೆ ದಸರಾ ಕ್ರೀಡಾಕೂಟ ಕೇವಲ ಕ್ರೀಡಾ ಹಬ್ಬವಾಗಿ ಮಾತ್ರ ಉಳಿದುಕೊಂಡಿದೆ. ಆದರೂ ಇಲ್ಲಿ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿರುವುದು ವಿಶೇಷ.

ವಿಜಯದಶಮಿಯ ಜಂಬೂ ಸವಾರಿಗಾಗಿ ಲಕ್ಷಾಂತರ ಜನರು ಇಡೀ ವರ್ಷ ಕಾಯುವಂತೆ, ದಸರಾ ಕ್ರೀಡೆಯಲ್ಲಿ ಭಾಗವಹಿಸಲು ರಾಜ್ಯದ ಸಾವಿರಾರು ಕ್ರೀಡಾಪಟುಗಳೂ ಕಾಯುತ್ತಿರುತ್ತಾರೆ.

ಕೆಓಎ ಮಾನ್ಯತೆ ಸಿಕ್ಕರೆ ದಸರಾ ಕ್ರೀಡಾಕೂಟದ ರೂಪವೇ ಬದಲಾಗುತ್ತದೆ. ವಿಜೇತ ಆಟಗಾರರ ಕೊರಳು ಅಲಂಕರಿಸುವ ಪದಕದ ಹೊಳಪು ಹೆಚ್ಚುತ್ತದೆ.

ಪ್ರಮಾಣಪತ್ರದ ತೂಕವೂ ಹೆಚ್ಚುತ್ತದೆ. ನೌಕರಿ, ವಿದ್ಯಾಭ್ಯಾಸದ ಕ್ರೀಡಾ ಕೋಟಾಗಗಳಲ್ಲಿ ಅರ್ಜಿ ಹಾಕುವಾಗ ಈ ಪ್ರಮಾಣಪತ್ರವೂ ತನ್ನ ಅಲ್ಪ ಸಹಾಯವನ್ನು ಆಟಗಾರರಿಗೆ ಒದಗಿಸುತ್ತದೆ.

ಜೊತೆಗೆ ರೈಲ್ವೆ, ಭಾರತೀಯ ಕ್ರೀಡಾ ಪ್ರಾಧಿಕಾರ, ಬ್ಯಾಂಕುಗಳು, ಪೊಲೀಸ್ ಇಲಾಖೆಯೂ ಸೇರಿದಂತೆ ಪ್ರತಿಷ್ಠಿತ ತಂಡಗಳೂ ಭಾಗವಹಿಸಲು ಅವಕಾಶ ದೊರೆಯುತ್ತದೆ. 

ಕೆಓಎ ನಡೆಸುವ ರಾಜ್ಯ ಒಲಿಂಪಿಕ್ಸ್ ಮಾದರಿಯ ಮತ್ತೊಂದು ವೇದಿಕೆಯೂ ದಸರಾ ಕ್ರೀಡಾಕೂಟದ ಹೆಸರಿನಲ್ಲಿ ಆಟಗಾರರಿಗೆ ಸಿಗಲಿದೆ. ಆಗ ದಸರಾ ಹಬ್ಬದ `ಬನ್ನಿ~ಗೆ ಮಾನ್ಯತೆಯೆಂಬ  `ಬಂಗಾರ~ ಹೊಳಪು ಸೇರುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT