ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ವೆಬ್‌ಸೈಟ್ ಆರಂಭ: ಏಕ ಟಿಕೆಟ್ ಸೇವೆ

Last Updated 9 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಮೈಸೂರು: ವಿಶ್ವಪ್ರಸಿದ್ಧ ದಸರಾ ಉತ್ಸವದ ವೈಭವದ ಮಾಹಿತಿಯನ್ನು ಜಗತ್ತಿನ ಮೂಲೆಮೂಲೆಗೂ    ಹರಡುವ ವೆಬ್‌ಸೈಟ್ ಬುಧವಾರ ಕಾರ್ಯಾರಂಭ ಮಾಡಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ವೆಬ್‌ಸೈಟ್‌ಗೆ (www.mysoredasara.gov.in) ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಗರದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಹಾಗೂ ಮೈಸೂರಿನ ದಸರಾ ತಾಂತ್ರಿಕ ಸ್ವಯಂ ಸೇವಾ ತಂಡಗಳ ನೆರವು ಪಡೆಯಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವೆಬ್‌ಸೈಟ್ ರಚನೆಯಾಗಿದೆ. ಮೈಸೂರು ದಸರಾ ಸಹಾಯವಾಣಿ ಹಾಗೂ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆಗಳನ್ನು ಅಳವಡಿಸಲಾಗಿದೆ~ ಎಂದು ತಿಳಿಸಿದರು.

`ರೇಷ್ಮೆ ಸೀರೆ, ಮಲ್ಲಿಗೆ ಹೂವು, ನಂಜನಗೂಡು ರಸಬಾಳೆ, ಗಂಧದ ಸಾಬೂನು, ಶ್ರೀಗಂಧದ ಎಣ್ಣೆ, ಮೈಸೂರು ಪಾಕ್, ಚಿತ್ರಕಲೆ, ಕಸೂತಿ, ಚಿಗುರು ವೀಳ್ಯದೆಲೆ, ವೀರನಗೆರೆ ಬದನೆಕಾಯಿಗಳ ಕುರಿತು ವೆಬ್‌ಸೈಟ್‌ನಲ್ಲಿ ಮಾಹಿತಿ ಅಳವಡಿಸಲಾಗುವುದು~ ಎಂದು ತಿಳಿಸಿದರು.

`ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳ ವಿವರಗಳನ್ನೂ ನಮೂದಿಸಲಾಗಿದೆ. ಪಾರಂಪರಿಕ ಕಟ್ಟಡಗಳು, ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನು ಹಾಕಲಾಗಿದೆ. ಹಳೆಯ ಹಾಗೂ ಇತ್ತೀಚಿನ ದಸರಾ ಉತ್ಸವಗಳ ಚಿತ್ರಗಳು, ವಿಡಿಯೋ ಕ್ಲಿಪ್‌ಗಳನ್ನು ಅಳವಡಿಸಲಾಗಿದೆ. ಉತ್ಸವಕ್ಕೆ ಸಂಬಂಧಿಸಿದ ಅಧಿಕಾರಿಗಳ ಪಟ್ಟಿ ಮತ್ತು ದೂರವಾಣಿ ಸಂಖ್ಯೆಗಳನ್ನು ಹಾಕಲಾಗಿದೆ~ ಎಂದು ಹೇಳಿದರು.

`ದಸರಾ ಮತ್ತು ಅರಮನೆ ವೆಬ್‌ಸೈಟ್‌ಗಳನ್ನು ಫೇಸ್‌ಬುಕ್‌ನಿಂದ ಸಂಪರ್ಕಿಸುವ ಪ್ರಯತ್ನ ನಡೆದಿದೆ. ಔಷಧ ಅಂಗಡಿ, ತುರ್ತು ಆರೋಗ್ಯ ಸೇವೆ, ಆಕಾಶವಾಣಿ, ವಿಮಾನ ಸೇವೆ, ರೈಲ್ವೆ, ಬಸ್, ನೇತ್ರ ಭಂಡಾರ, ಪೊಲೀಸ್, ದೂರವಾಣಿ ಮತ್ತಿತರರ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನೂ ಹಾಕಲಾಗಿದೆ. ಮೈಸೂರಿಗೆ ಬರುವ ಅಂತರರಾಷ್ಟ್ರೀಯ ಪ್ರವಾಸಿಗರು ಮತ್ತು ಅನ್ಯರಾಜ್ಯಗಳ ಪ್ರವಾಸಿಗಳಿಗೆ ಹೊಟೇಲ್‌ಗಳ ಸಂಪೂರ್ಣ ಮಾಹಿತಿ ಮತ್ತು ಮನರಂಜನೆ ವಿವರಗಳನ್ನು ಕಲ್ಪಿಸಲಾಗಿದೆ~ ಎಂದು ಹೇಳಿದರು.

`ಏಕ ಟಿಕೆಟ್ ವ್ಯವಸ್ಥೆಯನ್ನು ಈ ಬಾರಿ ಮಾಡಲಾಗುತ್ತಿದೆ.  ಇ-ಟಿಕೆಟ್ ವ್ಯವಸ್ಥೆಯಲ್ಲಿ ಒಂದೇ ಟಿಕೆಟ್ ಪಡೆದು ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವ ಸರಳ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ಒಟ್ಟು ಆರು ಸಾವಿರ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ವೆಬ್‌ಸೈಟ್ ಮೂಲಕವೇ ಅವುಗಳನ್ನು ಪಡೆಯಲು ಅವಕಾಶವಿದೆ~ ಎಂದು ಹೇಳಿದರು.

`ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಯಾವುದೇ ಸಲಹೆಗಳಿಗೂ ಸ್ವಾಗತವಿದೆ. karmys.nic.in  ಮೇಲ್ ವಿಳಾಸಕ್ಕೆ ಸಲಹೆ, ಅಭಿಪ್ರಾಯಗಳನ್ನು ಕಳುಹಿಸಬಹುದು~ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಪುಷ್ಪಲತಾ ಟಿ.ಬಿ. ಚಿಕ್ಕಣ್ಣ, ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್, ಪಾಲಿಕೆ ಆಯುಕ್ತ ರಾಯ್ಕರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ. ಪಿ. ಮಂಜುನಾಥ ಮತ್ತಿತರರು   ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT