ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆ ಅಂದ ಹೆಚ್ಚಿಸಿದ ಸಂಗೀತ ಕಾರಂಜಿ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಸುತ್ತಲೂ ಹಸಿರು ನೆಲ ಹಾಸು..ಮನಸ್ಸಿಗೆ ಮುದ ನೀಡುವ ತಂಗಾಳಿ..ತುಂತುರು ಮಳೆ..ಮನಸ್ಸಿಗೆ ಇಂಪು ನೀಡುವ ಲಘು ಸಂಗೀತ..ಇವುಗಳಿಗೆ ಸಾಥ್ ನೀಡಲು ಝಗಮಗಿಸುವ ವಿದ್ಯುತ್ ದೀಪಗಳು..ಸಂಗೀತ ಕಾರಂಜಿಯ ಮನಮೋಹಕ ನೃತ್ಯ..

-ಹೌದು. ಇವೆಲ್ಲವನ್ನೂ ಈಗ ನಜರ್‌ಬಾದ್‌ನಲ್ಲಿರುವ ಕುಪ್ಪಣ್ಣ ಉದ್ಯಾನದಲ್ಲೇ ಕಣ್ತುಂಬಿಕೊಳ್ಳಬಹುದು.
ಕೃಷ್ಣರಾಜಸಾಗರ (ಕೆಆರ್‌ಎಸ್) ಉದ್ಯಾನದಲ್ಲಿರುವ ಸಂಗೀತ ಕಾರಂಜಿ (ಮ್ಯೂಸಿಕಲ್ ಫೌಂಟೇನ್) ಮಾದರಿಯಲ್ಲೇ ಕುಪ್ಪಣ್ಣ ಉದ್ಯಾನದಲ್ಲಿ ಸಂಗೀತ ಕಾರಂಜಿ ಅರಳಿ ನಿಂತಿದೆ.
 
ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ದೇಶಭಕ್ತಿ ಗೀತೆಗಳ ಸಂಗೀತಕ್ಕೆ ತಕ್ಕಂತೆ ಕುಣಿದು-ಕುಪ್ಪಳಿಸುವ `ಸಂಗೀತ ಕಾರಂಜಿ~ ನೋಡುವುದೇ ಅಂದ. ಇದರಿಂದಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಈಗ ಮತ್ತೊಂದು ಕೋಡು ಮೂಡಿದಂತಾಗಿದೆ.

ಮುಖ್ಯಮಂತ್ರಿಗಳ ರೂ 100 ಕೋಟಿ  ಅನುದಾನದಲ್ಲಿ ರೂ 55 ಲಕ್ಷ ವೆಚ್ಚದಲ್ಲಿ `ಸಂಗೀತ ಕಾರಂಜಿ~ ನಿರ್ಮಿಸಲಾಗಿದೆ. ಇದರ ರೂವಾರಿ ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕನ್‌ಸಲ್ಟಂಟ್ಸ್ ಲಿಮಿಟೆಡ್ ಕಂಪೆನಿಯ ಯೋಜನಾ ನಿರ್ದೇಶಕ ಎಂ.ಜೆ.ಶ್ರೀಧರ್.

ಕುಪ್ಪಣ್ಣ ಉದ್ಯಾನದಲ್ಲಿ ಹಸಿರು ನೆಲಹಾಸು (ಲಾನ್) ಅಳವಡಿಸಲಾಗಿದೆ. ಜತೆಗೆ ಮಂದ ಬೆಳಕು ನೀಡುವ ವಿದ್ಯುತ್ ದೀಪಗಳು. ಸಾರ್ವಜನಿಕರು ಹಾಗೂ ಪ್ರವಾಸಿಗರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ನಗರದ ಹೃದಯ ಭಾಗದಲ್ಲೇ ಉದ್ಯಾನ ಇರುವುದರಿಂದ ಸಂಗೀತ ಕಾರಂಜಿ ನೋಡಲು `ಕೆಆರ್‌ಎಸ್~ಗೆ ಹೋಗುವ ಪ್ರಮೇಯ ತಪ್ಪಿದಂತಾಗಿದೆ.

ಅ. 16 ರಂದು ಚಾಮುಂಡಿ ಬೆಟ್ಟದಲ್ಲಿ 402ನೇ ದಸರಾ ಉದ್ಘಾಟನೆಗೆ ಚಾಲನೆ ದೊರೆತರೆ, ಅದೇ ದಿನ ಸಂಜೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ `ಸಂಗೀತ ಕಾರಂಜಿ~ಗೆ ಚಾಲನೆ ನೀಡಿದ್ದಾರೆ.
 
ದಸರಾ ಉತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಪ್ರತಿ ನಿತ್ಯ ಸಂಜೆ 6 ರಿಂದ 8ರ ವರೆಗೆ ಜಾನಪದ, ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿಗೆ ಆಗಮಿಸುವ ಸಂಗೀತ ಪ್ರಿಯರು, ಸಂಜೆ 7 ಗಂಟೆ ಹಾಗೂ 7.30ಕ್ಕೆ ಕಾರಂಜಿಯ ಸಂಗೀತವನ್ನೂ ಆಸ್ವಾದಿಸಬಹುದಾಗಿದೆ.

ಕೆಆರ್‌ಎಸ್ ಜಲಾಶಯದಲ್ಲಿ ಇರುವ ಬೃಂದಾವನ ಉದ್ಯಾನದ ಸಂಗೀತ ಕಾರಂಜಿಗಿಂತ ಮೂರು ಪಟ್ಟು ದೊಡ್ಡದಾಗಿರುವ ನೃತ್ಯ ಕಾರಂಜಿಯು 12್ಡ6 ಮೀಟರ್ ಅಳತೆಯಲ್ಲಿ ಅರಳಿ ನಿಂತಿದೆ. ಹೊರಭಾಗದಿಂದ 16್ಡ8 ಮೀಟರ್ ವಿಸ್ತೀರ್ಣ ಹೊಂದಿದೆ.

 ಕನ್ನಡ, ಹಿಂದಿ ಹಾಡುಗಳನ್ನು ಅಳವಡಿಸಲಾಗಿದೆ. ಸಂಗೀತ, ನೀರಿನ ಬಣ್ಣ, ಪುಟಿಯುವ ಎತ್ತರ ನಿಯಂತ್ರಿಸಲು `ಇನ್‌ಫೋಟೇನ್‌ಮೆಂಟ್~ ಎಂಬ ಸಾಫ್ಟ್‌ವೇರ್ ಬಳಸಲಾಗಿದೆ. 90 ಕಿಲೋವಾಟ್ ವಿದ್ಯುತ್ ಸಂಗ್ರಹಕ ಅಳವಡಿಸಲಾಗಿದ್ದು, 3 ಎಚ್.ಪಿಯ 2 ಹಾಗೂ 5 ಎಚ್.ಪಿಯ 1 ಪಂಪ್‌ಸೆಟ್ ಬಳಸಲಾಗಿದೆ.

`ಜೈ ಭಾರತ ಜನನಿಯ ತನುಜಾತೆ~.. `ಉಳುವಾ ಯೋಗಿಯ ನೋಡಲ್ಲಿ~.. `ಕಾಡು ಕುದುರೆ ಓಡಿ ಬಂದಿತ್ತ~... `ವಿಶ್ವವಿನೂತನ ವಿದ್ಯಾಚೇತನ~..`ಮೈ ನೇಮ್ ಈಸ್ ಶೀಲಾ, ಶೀಲಾ ಕಿ ಜವಾನಿ~.. `ಸಾರೆ ಜಹಾಂಸೆ ಅಚ್ಚಾ ಹಿಂದೂಸ್ತಾನ ಹಮಾರಾ~.. `ಪ್ಯಾರ್‌ಗೆ ಆಗ್ಬುಟ್ಟೈತೆ~.. ಹೀಗೆ ಪ್ರವಾಸಿಗರಿಗೆ ಇಷ್ಟವಾಗುವ ದೇಶಭಕ್ತಿ, ಜಾನಪದ ಹಾಗೂ ಚಲನಚಿತ್ರ ಗೀತೆಗಳನ್ನು ಅಳವಡಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT