ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಧಲೆ ಖಂಡಿಸಿ ಪ್ರತಿಭಟನೆ

Last Updated 21 ಜನವರಿ 2012, 5:20 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಜಾವಾಣಿ~ ಪತ್ರಿಕೆಯ ಜ.16ರ ಸಂಚಿಕೆಯಲ್ಲಿ ಪ್ರಕಟಗೊಂಡ ಅನಾವರಣ ಅಂಕಣದಲ್ಲಿ ಸ್ವಾಮಿ ವಿವೇಕಾನಂದರ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಆರೋಪಿಸಿ ಪತ್ರಿಕೆಯ ಶಿವಮೊಗ್ಗ ಕಚೇರಿಯ ಮುಂದೆ ಸಂಘಟನೆಯೊಂದರ ಸದಸ್ಯರು ದಾಂಧಲೆ ಮಾಡಿದ್ದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

`ಅಂಕಣಕಾರ ದಿನೇಶ್ ಅಮಿನ್ ಮಟ್ಟು ಅವರು ಸ್ವಾಮಿ ವಿವೇಕಾನಂದ ಅವರ ಜೀವನದ ಕೆಲ ವಾಸ್ತವ ವಿಷಯಗಳನ್ನು ಅಂಕಣದಲ್ಲಿ ಪ್ರಸ್ತಾಪಿಸಿದ್ದರು. ಬರೆದಿರುವ ಎಲ್ಲ ವಿಷಯಗಳಿಗೂ ಲೇಖಕರು ಆಧಾರವನ್ನೂ ಒದಗಿಸಿದ್ದರು. ಆದರೂ ಕೆಲ ಕಿಡಿಕೇಡಿಗಳು ಕಚೇರಿ ಎದುರು ದಾಂಧಲೆ ಮಾಡಿರುವುದು ಖಂಡನೀಯ. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ~ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

`ಎಲ್ಲಾ ಧರ್ಮಗಳ ಧರ್ಮಾಂಧತೆಯನ್ನು ವಿವೇಕಾನಂದರು ವಿರೋಧಿಸಿದ್ದರು. ಘೋರ ಧಾರ್ಮಿಕ ದುರಭಿಮಾನ ಒಳ್ಳೆಯದಲ್ಲ ಎಂದು ಅವರು ಸಾರಿದ್ದರು. ಸಮಾಜದ ಒಂದು ವರ್ಗದ ಜನರು ವಿವೇಕಾನಂದ ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರ ವಿಚಾರಧಾರೆಗಳನ್ನು ಸಮಾಜದ ಮುಂದೆ ತರದೆ ಮತಾಂಧತೆ ಮತ್ತು ಇತರ ಧರ್ಮವನ್ನು ದ್ವೇಷಿಸಲು ವಿವೇಕಾನಂದ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿವೇಕಾನಂದರನ್ನು ಓದಿಕೊಳ್ಳುವ ವಿವೇಕ ಇಲ್ಲದ ಜನರು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಸತ್ಯವನ್ನು ಸಹಿಸದ ಕೆಲವರು ಲೇಖಕರಿಗೆ ಬೆದರಿಕೆ ಹಾಕುತ್ತಿರುವುದು ಖಂಡನೀಯ~ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಪ್ರತಿಮೆಯಿಂದ ಎಂ.ಜಿ. ರಸ್ತೆಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪತ್ರಿಕೆಯ ಸಂಪಾದಕರಿಗೆ ಮನವಿ ಪತ್ರ ಸಲ್ಲಿಸಿದರು. ಸಹಾಯಕ ಸಂಪಾದಕರಾದ ಲಕ್ಷ್ಮಣ್ ಕೊಡಸೆ ಮತ್ತು ಸಿ.ಜಿ. ಮಂಜುಳಾ ಅವರು ಸಂಪಾದಕರ ಪರವಾಗಿ ಮನವಿ ಪತ್ರ ಸ್ವೀಕರಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್, ಯುವಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಎನ್. ರಮೇಶ್, ಅಹಿಂದ ಸಂಘಟನೆಯ ಅಧ್ಯಕ್ಷ ಕೆ. ಮುಕುಡಪ್ಪ, ಜೆಡಿಎಸ್ ಮುಖಂಡ ಬಿ. ಗೋಪಾಲ್, ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಹಿಂದುಳಿದ ವರ್ಗಗಳ ಮುಖಂಡರಾದ ಜೆ. ಶ್ರೀನಿವಾಸನ್, ಎನ್.ವಿ. ನರಸಿಂಹಯ್ಯ, ಸಾಹಿತಿಗಳಾದ ಡಾ. ಸಮತಾ ಬಿ ದೇಶಮಾನೆ, ಶ್ರ.ದೆ. ಪಾರ್ಶ್ವನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಖಂಡನೆ:  ಪತ್ರಿಕೆಯ ಶಿವಮೊಗ್ಗ ಮತ್ತು ಹುಬ್ಬಳ್ಳಿ ಕಚೇರಿಗಳ ಮೇಲೆ ನಡೆದಿರುವ ದಾಳಿಯನ್ನು ಸಿಪಿಎಂ ಖಂಡಿಸಿದೆ. ಲೇಖನದಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳಿಗೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬರಹದ ಮೂಲಕ ವ್ಯಕ್ತಪಡಿಸಬಹುದಿತ್ತು. ಈ ದಾಳಿಯು ಹತಾಶೆಯ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಸ್.ವೈ. ಗುರುಶಾಂತ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT