ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ದ್ರೋಹ

Last Updated 25 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮನುಷ್ಯ ಸಂಬಂಧಗಳಲ್ಲಿ ವಿಶ್ವಾಸದ ಪಾತ್ರ ಅತ್ಯಮೂಲ್ಯವಾದುದು. ವಿಶ್ವಾಸವೆನ್ನುವಂತಹ ಮಾನಸಿಕ ಸ್ಥಿತಿಯು ಸ್ಥಿರವಾಗಿ ಮುಂದುವರೆಯುವುದಕ್ಕೆ ಎಳೆತನದ ಮನೋವಿಕಾಸವು ಬಹಳ ಮುಖ್ಯ. ಬಾಲ್ಯದ ದಿನಗಳಲ್ಲಿ ಹುಟ್ಟಿಕೊಳ್ಳುವ ನಂಬಿಕೆ, ಅಪನಂಬಿಕೆಗಳು ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಬ್ಲ್ಲಲುದು. ಇತರರ ಭಾವಗಳಿಗೆ ಬೆಲೆಕೊಡುವ ಗುಣವು ಸಹ ಎಳೆತನದಿಂದಲೇ ಮೂಡುವಂತಹದ್ದು. ಅನುಕಂಪ, ಸಹಾನುಭೂತಿಗಳಂತಹ ಮನೋಗುಣಗಳು ಸಂಬಂಧಗಳನ್ನು ಗಟ್ಟಿಪಡಿಸುವ ಪ್ರಕ್ರಿಯೆಗೆ ಅತ್ಯಗತ್ಯ.  ಆತ್ಮೀಯ ಸಂಬಂಧಗಳನ್ನು ಎಚ್ಚರಿಕೆಯಿಂದ ಪೋಷಿಸದಿದ್ದರೆ ನೋವು, ದುಃಖ ಖಚಿತ. ದಾಂಪತ್ಯ ಸಂಬಂಧವನ್ನು ಅತ್ಯಂತ ಪ್ರಬಲವಾದ ಆತ್ಮೀಯ ಸಂಬಂಧವೆನ್ನಬಹುದು. ಗಂಡು-ಹೆಣ್ಣಿನ ಒಪ್ಪಂದ, ಅನುಮೋದನೆಗಳು ಸಾಮಾಜಿಕ ಕಟ್ಟುಪಾಡುಗಳನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಬೇಕಾಗಿದ್ದರೂ ಪರಸ್ಪರ ನಂಬಿಕೆ, ವಿಶ್ವಾಸವು ಇವುಗಳಿಂದಲೇ ಗಟ್ಟಿಯಾಗುವುದಿಲ್ಲ.

ವಿವಾಹದ ಹೊರಗಿನ ದೈಹಿಕ ಅಥವಾ ಲೈಂಗಿಕ ಸಂಬಂಧವನ್ನು ದ್ರೋಹವೆನ್ನುವುದು ವಾಡಿಕೆ. ದಾಂಪತ್ಯ ದ್ರೋಹವೆಂದರೆ ದಾಂಪತ್ಯದ ಹೊರಗೆ ಹಚ್ಚಿಕೊಂಡಿರುವ ಸಂಬಂಧವೆನ್ನಬಹುದು. ಈ ಸಂಬಂಧವು ದೈಹಿಕ ಮತ್ತು ಮಾನಸಿಕ ಸಂಬಂಧಗಳನ್ನು ಒಳಪಟ್ಟಿರುವಂತಹದ್ದು. ಹೆಚ್ಚಿನ ಸಮಯದಲ್ಲಿ ಬೇರೊಬ್ಬರತ್ತ ಮನಸ್ಸು ಇರಿಸಿಕೊಂಡಿರುವುದು ಸಹ ದ್ರೋಹವೆನ್ನಬಹುದು.

ಪತಿ/ಪತ್ನಿಯರ ನಡುವೆ ಇರಬೇಕಾದಂತಹ ಅನ್ಯೋನ್ಯ, ಆದರಗಳನ್ನು ಹೊರಗಿನ ವ್ಯಕ್ತಿಗೆ ಮೀಸಲಿಡುವುದು ದ್ರೋಹದ ಪರಿಯೇ ಆಗಿರುತ್ತದೆ. ದಾಂಪತ್ಯ ದ್ರೋಹಕ್ಕೆ ನಿರೂಪಣೆ ಕೊಡುವುದು ಸುಲಭವಲ್ಲ. ಏಕೆಂದರೆ ದ್ರೋಹದ ರೀತಿಗಳು ಎಲ್ಲರಲ್ಲೂ ಒಂದೇ ಮಾದರಿಯಲ್ಲಿರಲಾರದು. ಭಿನ್ನ ವ್ಯಕ್ತಿತ್ವಗಳು ದ್ರೋಹದ ವಿವರಣೆಯನ್ನು ಜಟಿಲಗೊಳಿಸುತ್ತದೆ. 

 ದಾಂಪತ್ಯದಲ್ಲಿ ಎಡರುತೊಡರುಗಳು ಸಾಮಾನ್ಯ. ಇವುಗಳು ಮನಸ್ಸಿಗೆ ಬೇಸರ, ಘಾಸಿ ಉಂಟುಮಾಡಿದರೂ ಅವುಗಳಿಂದ ಚೇತರಿಸಿಕೊಂಡು ಬರುವುದು ಕಷ್ಟವಾಗದು. ಆದರೆ, ಈ ಸಂಬಂಧದಲ್ಲಿ ವಿಶ್ವಾಸಘಾತುಕತೆ ಉಂಟಾದರೆ ಅದನ್ನು ಎದುರಿಸುವುದು ಮತ್ತು ಬಗೆಹರಿಸುವುದು ಸುಲಭವಲ್ಲ. ದಾಂಪತ್ಯದ ವಿರಸವನ್ನು ಹೇಗಾದರೂ ನಿಭಾಯಿಸಬಹುದಾದರೂ ದ್ರೋಹವನ್ನು ನಿಭಾಯಿಸುವುದು ಕಷ್ಟ. ದಾಂಪತ್ಯ ದ್ರೋಹವು ವ್ಯಕ್ತಿಯ ಮಾನಸಿಕ ಸಮತೋಲನವನ್ನೇ ಏಕಾಏಕಿ ಅಳ್ಳಾಡಿಸುವಂತಹದ್ದು. ಗಂಡ ಅಥವಾ ಹೆಂಡತಿ ಹೊರಗಿನ ವ್ಯಕ್ತಿಯೊಂದಿಗೆ ಸಹವಾಸ ಇರಿಸಿಕೊಂಡಿದ್ದಾರೆ ಎನ್ನುವುದು ಕೇವಲ ಮಾತುಗಳಾಗಿರದೆ ಚುಚ್ಚಿ ನೋಯಿಸುವಂತಹ ಸಾವಿರ ಸೂಜಿಗಳಾಗಿರುತ್ತವೆ. ಹೀಗಿದ್ದರೂ ಮನುಷ್ಯ ಸ್ವಭಾವದಲ್ಲಿ ಸಂಯಮ, ಸಹನೆಯ ಶಕ್ತಿಯ ಮೂಲಕ ಅದೆಷ್ಟೋ ಸ್ತ್ರೀ-ಪುರುಷರು ದಾಂಪತ್ಯ ದ್ರೋಹವನ್ನು ಸಮರ್ಪಕವಾಗಿ ಎದುರಿಸುತ್ತಾರೆ.
ದ್ರೋಹ ಏಕೆ ಉಂಟಾಗುತ್ತದೆ?

ಎಲ್ಲ ವಂಚನೆಯ ಪ್ರಕರಣದಂತೆ ಇದೂ ಕೂಡ ಮೋಸದ ಪ್ರವೃತ್ತಿಗೆ ಸೇರಿರುತ್ತದೆ. ವ್ಯಕ್ತಿಯೊಡನೆ ಉಂಟಾಗಿರುವ ಒಪ್ಪಂದವನ್ನು ಗೌರವಿಸದೇ ಉಲ್ಲಂಘಿಸುವ ಮನೋಭಾವ ಇಲ್ಲಿಯೂ ಪ್ರಧಾನವೇ. ಸಾಮರಸ್ಯ, ಆದರಗಳಂತಹ ಭಾವನಾತ್ಮಕ ಸ್ಥಿತಿಗಳನ್ನು ಕೃತಕವಾಗಿ ವ್ಯಕ್ತಪಡಿಸುವುದು ಒಂದು ನಯವಂಚನೆಯೇ. ಸಾಮಾನ್ಯವಾಗಿ ಇಂತಹ ನಯವಂಚನೆಯ ಪ್ರಮುಖ ಕಾರಣಗಳಲ್ಲಿ ಲೈಂಗಿಕ ಚಪಲ, ಚಟ, ಆತ್ಮಾಭಿಮಾನದ ಸಮಸ್ಯೆ, ಅತಿಯಾದ ಆಹಂಕಾರ, ಅಧಿಕಾರ ಮತ್ತು ಅಂತಸ್ತಿನ ದರ್ಪ ಸೇರಿರುವುದು. ಇವು ನಾನಾ ವಿಧದ ವರ್ತನೆಗಳ ಮೂಲಕ ವ್ಯಕ್ತಗೊಳ್ಳುತ್ತದೆ.

ಉದಾಹರಣೆಗೆ ಸದಾ ಪರಪುರುಷ/ಸ್ತ್ರೀಯತ್ತ ಕೇಂದ್ರಿತವಾದ ಲೈಂಗಿಕ ಭಾವ ಮತ್ತು ಆಸಕ್ತಿ; ಮದುವೆಯ ಹೊರಗಿನ ಗೋಪ್ಯ ಸಂಬಂಧ ಮತ್ತು ಅದನ್ನು ಕಾಪಾಡಲು ಹುಸಿಚಟುವಟಿಕೆಗಳ ಆಶ್ರಯ.

ವೈವಾಹಿಕ ವಿಶ್ವಾಸಕ್ಕೆ ದ್ರೋಹ ಬಗೆಯುವ ಲಕ್ಷಣ ಗಂಡು- ಹೆಣ್ಣುಗಳಿಬ್ಬರಲ್ಲಿಯೂ ಇರುತ್ತದೆ.ಆದರೆ, ಸಂಬಂಧಗಳ ಉಲ್ಲಂಘನೆಯಲ್ಲಿ ಹೆಣ್ಣಿಗಿಂತ ಗಂಡೇ ಮುಂದು ಎನ್ನುವುದು ಜನಮನದಲ್ಲಿರುವ ಅಭಿಪ್ರಾಯ. ಗಂಡಸಿನಲ್ಲಿ ಪೌರುಷದ ಕಾರಣವಿದ್ದರೆ, ಹೆಣ್ಣಿನಲ್ಲಿ ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶವಿರುತ್ತದೆ ಎನ್ನಲಾಗುತ್ತದೆ. ಹೆಚ್ಚಿನ ಸಮಯದಲ್ಲಿ ಇಂತಹ ಹೇಳಿಕೆಗಳು ಕೇವಲ ಅಂದಾಜಿನ ಮಾತು ಎನ್ನಬಹುದೇನೋ. ಒಟ್ಟಿನಲ್ಲಿ ವಿಶ್ವಾಸ ದ್ರೋಹದ ರೀತಿ ಮತ್ತು ಉದ್ದೇಶಗಳು ಒಂದೇ ಸಮನಾಗಿರುವುದಿಲ್ಲ.

ದಾಂಪತ್ಯ ದ್ರೋಹದ ನಂತರ...
ಸಂಗಾತಿಯು ದ್ರೋಹವೆಸಗಿರುವುದು ತಿಳಿದಾಗ ಉಂಟಾಗುವ ಆಘಾತ ಅಸಹನೀಯ. ಅದೆಷ್ಟೋ ಸಲ ಇದು ಜೀವಕ್ಕೆ ಹಾನಿ ಉಂಟುಮಾಡುವಂತಹದ್ದು. ಪತಿ ಅಥವಾ ಪತ್ನಿಯ ಶೀಲವನ್ನು ಶಂಕಿಸಿ ಕೊಲೆಯಾಗುವವರ ಬಗ್ಗೆ ಮಾಧ್ಯಮಗಳ ಮೂಲಕ ಸುದ್ಧಿ ಬರದಿರುವ ದಿನಗಳು ಅಪರೂಪ.

ಆಘಾತವು ಹೊರತರುವ ವರ್ತನೆಗಳಲ್ಲಿ ಪ್ರಬಲವಾದವುಗಳೆಂದರೆ: ತಡೆಯಲಾರದಂತಹ ಸಿಟ್ಟು, ಆಕ್ರೋಶ, ಹೇಸಿಗೆ, ಅಪಮಾನ, ಅಪಾರ ದುಃಖ ಮತ್ತು ಖಿನ್ನತೆ. ಇವುಗಳನ್ನು ನಿಗ್ರಹಿಸುವಂತಹ ಶಕ್ತಿಯನ್ನು ವ್ಯಕ್ತಿ ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಶಕ್ತಿಯನ್ನು ಪಡೆಯಲು ನುರಿತ ತಜ್ಞರ ಸಹಾಯದ ಅಗತ್ಯವಿರುತ್ತದೆ. ದ್ರೋಹಕ್ಕೆ ಒಳಪಟ್ಟವರೇ ಸಮಸ್ಯೆಯ ಪರಿಹಾರ ಕ್ರಮವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾರರು. ಇಂತಹದೊಂದು ಪರಿಸ್ಥಿತಿಯಲ್ಲಿ ನೊಂದ ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು ಯಥಾರೀತಿಯಲ್ಲಿ ಸ್ವೀಕರಿಸುವುದು ಅವಸರದ ಕ್ರಮವಾಗುತ್ತದೆ.

ಉತ್ತಮ ಗೆಳೆಯರು, ಹಿತೈಷಿಗಳ ಸಾಂತ್ವನದ ನೆರವು ಜಿಗುಪ್ಸೆಯನ್ನು ಕಡಿಮೆಮಾಡಬಲ್ಲದು. ವಿಶ್ವಾಸ ದ್ರೋಹವನ್ನು ನುಂಗಿಕೊಂಡು ಬಾಂಧವ್ಯ ಮುಂದುವರೆಸಿಕೊಂಡು ಹೋಗಿರುವ ನಿದರ್ಶನಗಳು ಬೇಕಾದಷ್ಟು ಇವೆ. ಆದದ್ದೆಲ್ಲವನ್ನು ಮರೆತು ಹಸನಾಗಿ ಬದುಕಿ ಬಾಳುತ್ತಿರುವವರು ಹೇರಳವಾಗಿದ್ದಾರೆ.

ಅಂದಮೇಲೆ ದಾಂಪತ್ಯವನ್ನು ಮುಂದುವರೆಸಿಕೊಂಡು ಹೋಗಲು ಪರಸ್ಪರ ನಂಬಿಕೆ, ಅವಲಂಬನೆ ಮತ್ತು ಪಶ್ಚಾತ್ತಾಪದ ಭಾವನೆಗಳು ನೆರವಾಗಬಲ್ಲದು. ದಂಪತಿಗಳ ನಡುವೆ ವಂಚನೆಗೆ ಮುಂಚಿತವಾಗಿ ಇದ್ದಂತಹ ಸಾಮರಸ್ಯ, ಸದ್ಭಾವನೆಯ ಸ್ವಭಾವಗಳು ಭವಿಷ್ಯದ ಬಾಂಧವ್ಯಕ್ಕೆ ಚೇತನ ನೀಡಬಲ್ಲದು. ಇದರೊಂದಿಗೆ ಹಳೆಯ ನೋವುಗಳನ್ನು ಇಳಿಸುವುದಕ್ಕೆ ತಜ್ಞರಿಂದ ಆಪ್ತಸಲಹೆ, ಮಾಗದರ್ಶನವೂ ಬೇಕಾಗುತ್ತದೆ. ದಾಂಪತ್ಯ ದ್ರೋಹಕ್ಕೆ ನಿಜ ಪ್ರೇರಣೆಗಳನ್ನು ಗುರುತಿಸುವುದು ಕಷ್ಟವೇ. ಹೀಗಾಗಿ ಘಟನೆಯ ವಿಶ್ಲೇಷಣೆಯ ಮೂಲಕ ದ್ರೋಹಕ್ಕೆ ಕಾರಣವನ್ನು ಕಂಡುಕೊಳ್ಳುವುದು ಕೇವಲ ತೃಪ್ತಿಗಾಗಿ ಎನ್ನಬಹುದೇನೋ. ಆದರೂ, ಕಾರಣಗಳನ್ನು ಗುರುತಿಸುವ ಪ್ರಯತ್ನದ ಮೂಲಕವಾದರೂ ಭವಿಷ್ಯದಲ್ಲಿ ಇಂತಹದೊಂದು ವರ್ತನೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ದಾಂಪತ್ಯ ದ್ರೋಹಕ್ಕೆ ಕೆಲವೊಮ್ಮೆ ವ್ಯಕ್ತಿತ್ವವು ಕಾರಣವಾಗಿರಬಲ್ಲದು.

ಬಲವಂತದ ಮದುವೆ, ದುರುದ್ದೇಶದ ಮದುವೆ ಅಥವಾ ಮಾನಸಿಕ ಸಮಸ್ಯೆಗಳು ಹೊರತರುವ ವ್ಯಕ್ತಿತ್ವದ ವಿಕಾರಗಳು ದಾಂಪತ್ಯದ ವಿರಸದೊಂದಿಗೆ ದ್ರೋಹಕ್ಕೆ ಅವಕಾಶ ಮಾಡಿಕೊಡಬಲ್ಲದು. ಬಹುಪಾಲು ದಾಂಪತ್ಯದ ದ್ರೋಹದಲ್ಲಿ ತೃಪ್ತಿ ಸಿಗುತ್ತಿಲ್ಲವೆಂಬ ಕಾರಣ ಕೇಳಿಬರುತ್ತದೆಯಾದರೂ ಈ ಮಾತು ಸತ್ಯಕ್ಕೆ ಎಷ್ಟು ಹತ್ತಿರ ಎಂದು ಗುರುತಿಸುವುದು ಕಷ್ಟ. ಆದರೂ ಬಾಳನ್ನು ಹಾಳು ಮಾಡಿಕೊಳ್ಳದಂತೆ ಮುಂದುವರೆಯಲು ಸಾಧ್ಯವಿದೆ.

 ದಾಂಪತ್ಯ ದ್ರೋಹ ತಿಳಿದ ನಂತರ...
* ನಿಮ್ಮ ಬಾಳಸಂಗಾತಿ ಮತ್ತೊಂದು ಸಂಬಂಧದಲ್ಲಿರುವುದರ ಬಗ್ಗೆ ಖಚಿತ ಮಾಹಿತಿ ಸಿಗುವ ತನಕ ಆತ/ಆಕೆಯನ್ನು ಒತ್ತಾಯ ಪಡಿಸುವುದು ಜಾಣತನವಲ್ಲ.

* ನಿಮಗೆ ಸತ್ಯ ತಿಳಿಯುವುದೇ ಮುಖ್ಯವಾಗಿರಬೇಕು ಎನ್ನುವುದನ್ನು ಮರೆಯಬಾರದು.

* ಅವಸರದಿಂದ ದಾಂಪತ್ಯವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬರುವುದು ಜಾಣತನವಲ್ಲ.

* ದಾಂಪತ್ಯ ಉಳಿಸಿಕೊಳ್ಳುವುದೋ, ಬೇಡವೋ ಎನ್ನುವುದರ ಬಗ್ಗೆ ತರಾತುರಿ ಬೇಡ.

* ಕೋಪ, ಆವೇಶ, ಖಿನ್ನತೆ ಇಳಿಯುವತನಕ  ತಡೆದುಕೊಳ್ಳುವುದು ಜಾಣತನ.

* ಸಂಗಾತಿಯನ್ನು ಉಳಿಸಿಕೊಳ್ಳುವ ಮನಸ್ಸಿದ್ದರೆ ನಿಮ್ಮ ಮನದ ಸ್ಥಿತಿಯ ಬಗ್ಗೆ ಖಚಿತವಾದ ತಿಳಿವಳಿಕೆ ಇರುವುದು ಜಾಣತನ.

* ಎಲ್ಲರೊಂದಿಗೂ ನಿಮ್ಮ ಸಂಕಟದ ಸ್ಥಿತಿಯನ್ನು ಹಂಚಿಕೊಳ್ಳುವುದು ಜಾಣತನವಲ್ಲ.
ಯೋಚಿಸಬೇಕಾದದ್ದು...

* ಅವರಿವರ ಒತ್ತಡಕ್ಕಾಗಿ ನಿಮ್ಮ ಸ್ವಭಾವ ಬದಲಾಗಿದೆ ಎಂದುಕೊಳ್ಳದಿರಿ.

* ನೀವು ಎಸಗಿದ ಅಪರಾಧದ ಬಗ್ಗೆ ಅರಿವು ಇರಲಿ. ಇದರಿಂದ ಹಾನಿಯುಂಟಾಗಿದೆ ಎನ್ನುವುದನ್ನು ಮರೆಮಾಚದಿರಿ.

* ಕೇವಲ ಪಶ್ಚಾತಾಪದ ಮೂಲಕ ಪಾಪ ಪರಿಹಾರವಾಗಿದೆ ಎಂದುಕೊಳ್ಳದಿರಿ.

* ಇಂತಹ ಘಟನೆಗೆ ನೀವೇ ಕಾರಣವೆನ್ನುವುದನ್ನು ಅಂತರಾಳದಿಂದ ಒಪ್ಪಿಕೊಳ್ಳಿ.

* ನಿಮ್ಮ ಚಟ, ಚಪಲಗಳ ಬಗ್ಗೆ ಮುಚ್ಚುಮರೆ ಬೇಡ, ಅದಕ್ಕೆ ತಡೆಹಾಕಿ.

* ನಿಮ್ಮ ಸಂಗಾತಿಯ ವಿಶಾಲ ಮನೋಭಾವ ಮತ್ತು ಸಂಯಮವನ್ನು ಮೆಚ್ಚಿಕೊಳ್ಳುವುದು ಬಹುಮುಖ್ಯ.

* ನಡೆದ ಪ್ರಸಂಗದ ಪ್ರತಿಯೊಂದು ಹಂತದ ಬಗ್ಗೆಯೂ ನಿಮ್ಮ ಖೇದವಿರಲಿ.

* ನಿಮ್ಮ ಬಾಳಸಂಗಾತಿಯನ್ನು ಮತ್ತೆ ವಂಚಿಸದಿರಿ.

* ಅಪ್ತಸಲಹೆಯ ಮೂಲಕ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಿ.

ಮಾನವೀಯ ಗುಣಗಳಾದ ಕರುಣೆ, ಕನಿಕರ, ಸಹನೆ, ಸಮಾಧಾನ, ಕ್ಷಮೆ, ಪರಿತಾಪ, ಜಾಣತನಗಳು ಸಂಗಾತಿಯ ವ್ಯಕ್ತಿಯ ನೀಚತನವನ್ನು ಬದಲಾಯಿಸಿ ಒಟ್ಟಿಗೆ ಬಾಳುವುದನ್ನು ಕಲಿಸಬಲ್ಲದು. ದಾಂಪತ್ಯವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ದಂಪತಿಗಳಿಬ್ಬರಲ್ಲೂ ಕೂಡಿಬಾಳುವ ಹಂಬಲ ಮತ್ತು ಬದ್ಧತೆ ಇರಬೇಕಾಗುತ್ತದೆ.
 
ದುರ್ಘಟನೆಯನ್ನು ಮರೆಯುವುದು ಸುಲಭವಲ್ಲವಾದರೂ ಆ ಮೂಲಕವೇ ಭವಿಷ್ಯದ ವರ್ತನೆಯನ್ನು ನೋಡುವುದು ಸಹಜ. ಇಂತಹ ಸನ್ನಿವೇಶದಲ್ಲಿ ಸಂಶಯದ ಭೂತ ಕಾಡಿಸದೇ ಇರದು. ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳದಿದ್ದಾಗ ದಾಂಪತ್ಯವು ದೊಡ್ಡ ದುರಂತವೇ ಆಗಬಲ್ಲದು. ಒಟ್ಟಿನಲ್ಲಿ ಮನದ ಪರಿವರ್ತನೆಯತ್ತ ಸಂಗಾತಿಗಳ ಮನಸ್ಸು ದೃಢವಾಗಿ ಇರಬೇಕಾಗುತ್ತದೆ. ಚರ್ಚೆ, ವಿಚಾರ ವಿನಿಮಯ ಮತ್ತು ಗಾಢವಾದ ಪರಸ್ಪರ ಅವಲಂಬನೆಯ ಭಾವಗಳು ಮಗುಚಿದ ದಾಂಪತ್ಯವನ್ನು ಮರುಪ್ರತಿಷ್ಠಾಪಿಸಬಲ್ಲದು.
(ಸಂಪರ್ಕ ಸಂಖ್ಯೆ: 8095609725)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT