ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಇಲ್ಲದ ರೂ. 32 ಲಕ್ಷ ವಶ

ರಾಣೆಬೆನ್ನೂರಿನಲ್ಲಿ ರೂ 8.8 ಲಕ್ಷ ಮೊತ್ತದ ಸೀರೆ ಜಪ್ತಿ
Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾಗೃತದಳ ರಾಜ್ಯದ ವಿವಿಧೆಡೆ ಸೋಮವಾರ ದಾಳಿ ನಡೆಸಿ  ರೂ.32.95 ಲಕ್ಷ ನಗದು,  ರೂ. 8.8 ಲಕ್ಷ ಮೊತ್ತದ ಸೀರೆಗಳನ್ನು ವಶಪಡಿಸಿಕೊಂಡಿದೆ.

ಇದುವರೆಗೂ ಒಟ್ಟಾರೆ  ರೂ. 10ಕೋಟಿ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತದಾರರಿಗೆ ಹಂಚಲು ಶೇಖರಿಸಿ ಇಟ್ಟಿದ್ದ  ರೂ.8.8 ಲಕ್ಷ ಬೆಲೆಯ ಸೀರೆಗಳನ್ನು ರಾಣೆಬೆನ್ನೂರಿನಲ್ಲಿ ವಶಪಡಿಸಿಕೊಳ್ಳಲಾಗಿದೆ. ಚನ್ನಪಟ್ಟಣದಲ್ಲಿ 170 ಸೀರೆಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ಮದ್ಯ ವಶಕ್ಕೆ: ಗದಗ ಜಿಲ್ಲೆಯಲ್ಲಿ 500 ಲೀಟರ್, ಭಾಲ್ಕಿಯಲ್ಲಿ 180 ಲೀಟರ್ ಹಾಗೂ ಮದ್ದೂರಿನಲ್ಲಿ 77 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ದಾವಣಗೆರೆ: ಸೂಕ್ತ ದಾಖಲೆಯಿಲ್ಲದೆ ಮಾರುತಿ ಓಮ್ನಿ ವಾಹನದಲ್ಲಿ ಸಾಗಿಸುತ್ತಿದ್ದ ರೂ 6.15 ಲಕ್ಷ ನಗದನ್ನು ಚುನಾವಣಾ ಜಾಗೃತ ದಳದ ಅಧಿಕಾರಿಗಳು ಮತ್ತು ಪೊಲೀಸರು ನಗರದಲ್ಲಿ ಸೋಮವಾರ ಸಂಜೆ ವಶಪಡಿಸಿಕೊಂಡಿದ್ದಾರೆ.

ಬಿಎಸ್‌ಎನ್‌ಎಲ್ ಕಚೇರಿಯ ಸಮೀಪ ಪಿಬಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಹಣ ಸಿಕ್ಕಿದೆ. ವಾಹನದಲ್ಲಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಅವರು ಹರಿಹರದ ಬೈಪಾಸ್ ಬಳಿಯ ವೀಳ್ಯದೆಲೆ ವ್ಯಾಪಾರಿಗಳು ಎಂದು ಹೇಳಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸೂಕ್ತ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಶಂಕೆಯ ಮೇಲೆ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಜಾಗೃತ ದಳದ ನೇತೃತ್ವ ವಹಿಸಿದ್ದ ಸಹಾಯಕ ಆಯುಕ್ತ ಎಚ್.ಪಿ. ನಾಗರಾಜ್ ತಿಳಿಸಿದರು.

`ನಾವು ವೀಳ್ಯದೆಲೆ ವ್ಯಾಪಾರಿಗಳು. ರಾಷ್ಟ್ರೀಯ ಹೆದ್ದಾರಿ -4ರ ಹರಿಹರ ಬೈಪಾಸ್ ಬಳಿ ರೈತರಿಂದ ವೀಳ್ಯದೆಲೆ ಖರೀದಿ ಮಾರಾಟ ಮಾಡುತ್ತೇವೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ವೀಳ್ಯದೆಲೆ ಕಳುಹಿಸಿದ್ದೇವೆ. ಅಲ್ಲಿಂದ ಮೊತ್ತ ವಸೂಲು ಮಾಡಿಕೊಂಡು ಬರುತ್ತಿದ್ದಾಗ ಅಧಿಕಾರಿಗಳು ಹಣ ವಶಪಡಿಸಿಕೊಂಡಿದ್ದಾರೆ. ನಾವೀಗ ನೂರಾರು ರೈತರಿಗೆ ಈ ವಾರದ ಹಣ ಪಾವತಿಸಬೇಕು.

ಎಲ್ಲರ ದಾಖಲೆ ಈಗಲೇ ಎಲ್ಲಿಂದ ತರಲಿ?' ಎಂದು ಕಾರಿನಲ್ಲಿದ್ದ ವ್ಯಾಪಾರಿ ರಹೀಂ ಖಾನ್ ಪ್ರಶ್ನಿಸಿದರು.

ಪಾವಗಡ: ಆಂಧ್ರಪ್ರದೇಶದಿಂದ ಪಾವಗಡಕ್ಕೆ ಬೈಕ್‌ನಲ್ಲಿ ತರುತ್ತಿದ್ದ 81 ಸಾವಿರ ರೂಪಾಯಿಗಳನ್ನು ಚೆಕ್‌ಪೋಸ್ಟ್ ಬಳಿ ಚುನಾವಣಾ ವಿಚಕ್ಷಣಾ ತಂಡ ಸೋಮವಾರ ವಶಪಡಿಸಿಕೊಂಡಿದೆ.   ಆಂಧ್ರದ ವಿ.ವಿ.ಸತ್ಯನಾರಾಯಣ, ದುರ್ಗಪ್ಪ ಬಂಧಿತ ಆರೋಪಿಗಳು. ತಾಲ್ಲೂಕಿನ ರಾಜವಂತಿ ಚೆಕ್‌ಪೋಸ್ಟ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದರು. ಅವರಿಂದ ಬೈಕ್ ವಶಕ್ಕೆ ಪಡೆಯಲಾಗಿದೆ.

ಪಾವಗಡ ತಾಲ್ಲೂಕಿನ ಕರೇಕ್ಯಾತನಹಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 51 ಸಾವಿರ ರೂಪಾಯಿ ಮೌಲ್ಯದ 207 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇಲೆ ಗ್ರಾಮದ ಪ್ರಕಾಶ್ ಎಂಬುವರ ತೋಟದ ಮೇಲೆ ದಾಳಿ ನಡೆಸಿ ಅಡಗಿಸಿಟ್ಟಿದ್ದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದರು.

ಶಿಡ್ಲಘಟ್ಟ: ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 2 ಲಕ್ಷ ರೂಪಾಯಿ ಮೌಲ್ಯದ 66 ಕೇಸ್ ನಕಲಿ (ಗೋವಾ ಮೂಲದ) ಮದ್ಯ ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಘಟನೆ ತಾಲ್ಲೂಕಿನ ಮಳ್ಳೂರಿನಲ್ಲಿ ಸೋಮವಾರ ನಡೆದಿದೆ.

ಮಳ್ಳೂರು ಗ್ರಾಮದ ನಿವಾಸಿ ಬೈರೇಗೌಡ ಅವರ ಮನೆಯಲ್ಲಿ ಮದ್ಯ ಇಡಲಾಗಿತ್ತು,. ಆರೋಪಿಗಳಾದ ಬೈರೇಗೌಡ, ಕೃಷ್ಣಮೂರ್ತಿ, ಸತೀಶ್ ಮತ್ತು ಜಗದೀಶ್ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಚುನಾವಣೆ ವಿಚಕ್ಷಣಾ ದಳದ ಸಿಬ್ಬಂದಿ ತಿಳಿಸಿದ್ದಾರೆ.

ಶಿಕಾರಿಪುರ: ತಾಲ್ಲೂಕಿನ ಬೋಗಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ  25ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.ಗ್ರಾಮದ ಮಲ್ಲೇಶ್ ಬಣಕಾರ್ ಎಂಬುವವರ ಮನೆಯಲ್ಲಿ `ಒರಿಜಿನಲ್ ಚಾಯ್ಸ' ಲೇಬಲ್‌ಉಳ್ಳ ವಿಸ್ಕಿ ಬಾಟಲಿಗಳ 10 ಬಾಕ್ಸ್‌ಗಳನ್ನು  ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT