ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ನೀಡಿದರೂ ಬಹಿರಂಗಪಡಿಸದ ಕೇಜ್ರಿವಾಲ್

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಾಮಾಜಿಕ ಕಾರ್ಯಕರ್ತ ವೈ.ಪಿ. ಸಿಂಗ್ ಆರೋಪ

ಮುಂಬೈ (ಐಎಎನ್‌ಎಸ್): `ಮಹಾರಾಷ್ಟ್ರದ ನೀರಾವರಿ ಹಗರಣದಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಶಾಮೀಲಾಗಿದ್ದಾರೆ ಎಂದು ಪುಷ್ಟ್ರೀಕರಿಸುವ ಹಲವು ದಾಖಲೆಗಳನ್ನು ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್‌ಗೆ ನೀಡಿದ್ದರೂ, ಅವುಗಳನ್ನು ಸೂಕ್ತ ಸಮಯದಲ್ಲಿ ಪ್ರದರ್ಶಿಸಲಿಲ್ಲ~ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ವೈ.ಪಿ.ಸಿಂಗ್ ಆರೋಪಿಸಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೆ. ನಾವಿಬ್ಬರೂ ಒಟ್ಟಿಗೆ ಈ ಹಗರಣದ ವಿರುದ್ಧ ಹೋರಾಟ ಆರಂಭಿಸಿದ್ದೆವು. ಆದರೆ ಕೇಜ್ರಿವಾಲ್ ಕೇವಲ ಆಯ್ದ ದಾಖಲೆಗಳನ್ನಷ್ಟೇ ಬಹಿರಂಗಗೊಳಿಸಿದ್ದಾರೆ. ಹಗರಣದ ವಿರುದ್ಧ ನೀಡಿದ ಮಹತ್ವದ ದಾಖಲೆಗಳಲ್ಲಿ ಕೆಲವನ್ನಷ್ಟೇ ಬಹಿರಂಗಗೊಳಿಸಿ, ಉಳಿದದ್ದನ್ನು ತಮ್ಮ ವೈಯಕ್ತಿಕ ರಾಜಕೀಯ ಬೆಳವಣಿಗೆಗಾಗಿ ಬಳಸಿಕೊಂಡಿದ್ದಾರೆ~ ಎಂದು ಸಿಂಗ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದರು.

`ನೀರಾವರಿ ಹಗರಣದಲ್ಲಿ ಕೇಂದ್ರ ಸಚಿವರು ಶಾಮೀಲಾಗಿರುವ ಕುರಿತ ದಾಖಲೆಗಳನ್ನು ಕೇಜ್ರಿವಾಲ್, ಭ್ರಷ್ಟಾಚಾರ ವಿರೋಧಿ ಭಾರತ  (ಐಎಸಿ) ಸ್ವಯಂ ಸೇವಾ ಸಂಸ್ಥೆಯ ಹೆಸರಲ್ಲಿ ಕಾನೂನಾತ್ಮಕವಾಗಿ ಪಡೆದರು. ಅವುಗಳನ್ನು ಈಗ ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಳ್ಳುತ್ತಿದ್ದಾರೆ~ ಎಂದು ಅವರು ಆರೋಪಿಸಿದರು.

ಗಡ್ಕರಿ ಮೇಲಿನ ಭೂ ಹಗರಣ ಕುರಿತು ಕೇಜ್ರಿವಾಲ್ ಅವರ ವಾದವನ್ನು ಉಲ್ಲೇಖಿಸಿದ ಅವರು, `ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅವರಿಗೆ ಮತ್ತೆ ಹಿಂದಿರುಗಿಸಲು ಸಾಧ್ಯವಿಲ್ಲ~ ಎಂದು ಹೇಳಿದರು.

`ಭೂ ಸ್ವಾಧೀನ ಕುರಿತು ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿ ಪ್ರಕಾರ `ಸರ್ಕಾರ ಒಮ್ಮೆ ರೈತರಿಂದ ಖರೀದಿ ಭೂಮಿಯನ್ನು ಖರೀದಿಸಿದರೆ, ಮತ್ತೆ ಅವರಿಗೆ ವಾಪಾಸು ಮಾಡುವಂತಿಲ್ಲ. ಅದನ್ನು ಮತ್ತೆ ಹರಾಜು ಹಾಕಬೇಕು~ ಎಂದು ವೈ.ಪಿ.ಸಿಂಗ್ ಸಹಾಯಕ ಹಾಗೂ ಪತ್ನಿ ಅಭಾ ಸಿಂಗ್ ಹೇಳಿದ್ದಾರೆ.

ಶರದ್ ಪವಾರ್ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಸೋದರ ಸಂಬಂಧಿ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧವೂ ಆರೋಪದ ಸುರಿಮಳೆಗೈದ ವೈ.ಪಿ.ಸಿಂಗ್, ಅಜಿತ್‌ಪವಾರ್ ಉಪ ಮುಖ್ಯಮಂತ್ರಿಯಾಗಿದ್ದಾಗ ಲಾವಾಸ ಯೋಜನೆಗಾಗಿ ಕಡಿಮೆ ಬೆಲೆಯಲ್ಲಿ ಭೂಮಿ ನೀಡಿದ್ದರು. ಆ ಯೋಜನೆಯಲ್ಲಿ ಲೇಕ್‌ಸಿಟಿ ನಿರ್ಮಾಣಕ್ಕಾಗಿ 341 ಎಕರೆ ಭೂಮಿಯನ್ನು ತಿಂಗಳಿಗೆ ರೂ. 23,000 ಬಾಡಿಗೆಯಂತೆ, 30 ವರ್ಷಗಳ ಗುತ್ತಿಗೆ ನೀಡಿದ್ದರು.

ಇಂದು ಮುಂಬೈನಲ್ಲಿ ಒಂದು ಬೆಡ್‌ರೂಮ್ ಚಿಕ್ಕ ಮನೆ ಕೂಡ ಈ ಬೆಲೆಯಲ್ಲಿ ಬಾಡಿಗೆ ಸಿಗುವುದಿಲ್ಲ~ ಎಂದು ಅವರು ವ್ಯಂಗ್ಯವಾಡಿದರು.

`ಲೇಕ್ ಸಿಟಿ ಕಾರ್ಪೊರೇಷನ್ ಲಾವಾಸ ಕಂಪೆನಿಯ ಶೇ 20.81 ರಷ್ಟು ಷೇರ್‌ಗಳನ್ನು ಸಂಸದೆ ಸುಪ್ರಿಯಾ ಸುಳೆ ಮತ್ತು ಅವರ ಪತಿ ಸದಾನಂದ್ ಅವರಿಗೆ ನೀಡಲಾಗಿತ್ತು. ಇದೇ ಕಂಪೆನಿಗೆ ಅಜಿತ್ ಪವಾರ್ ಉಚಿತವಾಗಿ ಭೂಮಿ ನೀಡಿದ್ದರು. 2006ರಲ್ಲಿ ಸುಳೆ ಮತ್ತು ಅವರ ಪತಿ ಷೇರುಗಳನ್ನು ಮಾರಾಟ ಮಾಡಿದರು. ಈ ಭೂಮಿ ಮಾರಾಟದಲ್ಲಿ ಸುಪ್ರಿಯಾ ಹಣ ಗಳಿಸಿದ್ದಾರೆ~ ಎಂದು ಸಿಂಗ್ ಆರೋಪಿಸಿದರು.
 

ತನಿಖೆ ನಡೆಸಿದರೆ ಇನ್ನಷ್ಟು ಸತ್ಯ ಬಯಲಿಗೆ

ನವದೆಹಲಿ (ಪಿಟಿಐ): `ಆಳವಾದ ತನಿಖೆ ನಡೆಸಿದರೆ, ರಾಜಕೀಯ ಪಕ್ಷಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಮಾಜವನ್ನು ಹೇಗೆ ವಂಚಿಸುತ್ತಿವೆ, ಮೋಸದಾಟದಲ್ಲಿ ತೊಡಗಿವೆ ಎಂಬುದನ್ನು ಬಯಲಿಗೆಳೆಯಬಹುದು~ ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

`ರಾಜಕೀಯ ಪಕ್ಷಗಳ ಮೋಸದಾಟ ತೆರೆದಿಡುವ ಕೆಲಸವನ್ನು ಆರಂಭಿಸಿಯಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗುವವರು ಬೇಕಾಗಿದ್ದಾರೆ. ಇಂತಹ ಹಗರಣಗಳನ್ನು ಆಳವಾಗಿ ತನಿಖೆ ನಡೆಸಿದರೆ, ಹೆಚ್ಚು ಹೆಚ್ಚು ಸತ್ಯಗಳು ಜಗತ್ತಿಗೆ ತಿಳಿಯುತ್ತವೆ. ಈ ಸತ್ಯಗಳು ರಾಜಕಾರಣಿಗಳು, ಅವರ ಪಕ್ಷಗಳು ಹೇಗೆ ಕೈಗಾರಿಕೆಗಳನ್ನು ಹೊಂದಿರುತ್ತವೆ. ಅಂತಹ ಕೈಗಾರಿಕೆಗಳಿಗಾಗಿ ಸಮೀಪದ ಜಲಾಶಯಗಳಿಂದ `ನೀರಾವರಿ~ ಹೆಸರಲ್ಲಿ ಹೇಗೆ ನೀರನ್ನು ಪಡೆಯುತ್ತವೆ~ ಎಂಬುದು ತಿಳಿಯುತ್ತದೆ ಎಂದು ಅವರು ವಿವರಿಸಿದ್ದಾರೆ.

ಬುಧವಾರವಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಹರಿಹಾಯ್ದಿದ್ದ ಕೇಜ್ರಿವಾಲ್, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಸ್ವಂತಕ್ಕಾಗಿ 100 ಎಕರೆ ಕೃಷಿ ಭೂಮಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಇಂಥ ಹಗರಣದ ವಿಷಯದಲ್ಲಿ `ಕಾಂಗ್ರೆಸ್ ಮತ್ತು ಬಿಜೆಪಿ~ ಎರಡೂ ಪಕ್ಷದ್ದೂ ನಿಷ್ಪ್ರಯೋಜಕ ಆಳ್ವಿಕೆಯ ಕಾಲ ಎಂದು ಅವರು ಟೀಕಿಸಿದ್ದರು.

ಪವಾರ್ ಸಮರ್ಥನೆ

ನವದೆಹಲಿ (ಐಎಎನ್‌ಎಸ್): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭೂ ಹಗರಣದ ಆರೋಪ ಎದುರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಸಮರ್ಥಿಸಿಕೊಂಡಿದ್ದಾರೆ.

`ಗಡ್ಕರಿ ಒಬ್ಬ ಜವಾಬ್ದಾರಿಯುತ ಮನುಷ್ಯ. ಅವರು ಮಾಡಿರುವ ಕೆಲಸದಲ್ಲಿ ನನಗೇನೂ ತಪ್ಪು ಕಾಣಿಸುತ್ತಿಲ್ಲ. ಆದರೆ ಐಎಸಿ ಸಂಸ್ಥೆ ಮಾಡಿರುವ ಆರೋಪದಿಂದಾಗಿ ಮಹಾರಾಷ್ಟ್ರ ರೈತರ ಮನಸ್ಸಿಗೆ ನೋವುಂಟಾಗಿದೆ~ ಎಂದು ಪವಾರ್ ಹೇಳಿದ್ದಾರೆ.

ಗಡ್ಕರಿ ಅವರ ಮೇಲಿನ ಭೂ ಹಗರಣದ ಆರೋಪ ಕುರಿತು ಪವಾರ್ ಅವರನ್ನು ಸಿಎನ್‌ಎನ್-ಐಬಿಎನ್ ಸುದ್ದಿವಾಹಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪನೆ ಒಂದು ಸಮುದಾಯದ ಸೇವೆ. ಭೂಮಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಉತ್ಕೃಷ್ಟವಾದ ಬಿತ್ತನೆ ಬೀಜಗಳನ್ನು ಬೆಳೆಸಿ ಮತ್ತೆ ರೈತರಿಗೆ ಹಿಂದಿರುಗಿಸುವುದು ಕೃಷಿ ಸಮುದಾಯಕ್ಕೆ ನೆರವಾಗುವಂತಹ ಕಾರ್ಯ~ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

`ಕೇಜ್ರಿವಾಲ್ ನಿರ್ಲಕ್ಷಿಸಿ~

ಲಖನೌ: ಕೇಂದ್ರ ಸಚಿವ ಸಲ್ಮಾನ ಖುರ್ಷಿದ್, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಎಲ್ಲ ಪಕ್ಷಗಳ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಅರವಿಂದ ಕೇಜ್ರಿವಾಲ್ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, ಕೇಜ್ರಿವಾಲ್ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ಅವರ ಮಾತಿಗೆ ಮಹತ್ವ ನೀಡಬೇಕಿಲ್ಲ ಎಂದಿದ್ದಾರೆ.

`ನಾವು ಅವರ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ, ಎಲ್ಲರೂ ಅವರನ್ನು ನಿರ್ಲಕ್ಷಿಸಿದರೆ ಆರೋಪ ಮಾಡಿ ಮಾಡಿ ಅವರಾಗೇ ಸುಸ್ತಾಗಿ ಸುಮ್ಮನಾಗುತ್ತಾರೆ ನೋಡ್ತಾ ಇರಿ~ ಎಂದು ಇಲ್ಲಿ ಸುದ್ದಿಗಾರರ ಜತೆ ನಡೆಸಿದ ಅನೌಪಚಾರಿಕ ಮಾತುಕತೆಯಲ್ಲಿ ಮುಲಾಯಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT