ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಸಂಖ್ಯೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು!

Last Updated 23 ಏಪ್ರಿಲ್ 2013, 6:41 IST
ಅಕ್ಷರ ಗಾತ್ರ

ಮಡಿಕೇರಿ: ಮೇ 5ರಂದು ನಡೆಯಲಿರುವ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸುಮಾರು 23 ಜನ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಕೊಡಗಿನ ಇತಿಹಾಸದಲ್ಲಿಯೇ ಇಷ್ಟೊಂದು ಅಭ್ಯರ್ಥಿಗಳು ಸ್ಪರ್ಧಿಸಿರಲಿಲ್ಲ. ಇದೊಂದು ದಾಖಲೆಯಾಗಿದೆ.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಿಗೆ ಸರಿಸಮವಾಗಿ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ ಒಟ್ಟು 10 ಜನ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ ಏಳು ಜನ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಸಿ.ವಿ. ನಾಗೇಶ್ (ಚಿಹ್ನೆ- ಗಾಜಿನ ಲೋಟ), ಸಂತೋಷ ಕುಮಾರ್ (ಚಿಹ್ನೆ- ಗಾಳಿಪಟ), ರಫೀಕ್ (ಚಿಹ್ನೆ- ಟಾರ್ಚ್), ಎಂ.ಎ. ನಿಜಾಮುದ್ದೀನ್ (ಚಿಹ್ನೆ- ಸೀಲಿಂಗ್ ಫ್ಯಾನ್), ಬಿ.ಸಿ. ನಂಜಪ್ಪ (ಚಿಹ್ನೆ- ಟೆಲಿಫೋನ್), ಗುರುಪ್ರಸಾದ್ (ಚಿಹ್ನೆ- ವಿದ್ಯುತ್ ಕಂಬ), ಹರೀಶ್ ಪೂವಯ್ಯ (ಚಿಹ್ನೆ- ಹಾಕಿ ಸ್ಟಿಕ್ ಮತ್ತು ಚೆಂಡು) ಕಣದಲ್ಲಿದ್ದಾರೆ.

ಇವರೊಂದಿಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ನಿಂದ ಕೆ.ಎಂ. ಲೋಕೇಶ್ (ಚಿಹ್ನೆ- ಕೈ), ಬಿಜೆಪಿಯಿಂದ ಅಪ್ಪಚ್ಚು ರಂಜನ್ (ಕಮಲ), ಬಿಎಸ್ಪಿಯಿಂದ ಎಸ್.ಪಿ. ಮಹಾದೇವಪ್ಪ (ಆನೆ), ಸಿಪಿಐ(ಎಂಎಲ್) ವತಿಯಿಂದ ವನಜಾಕ್ಷಿ (ಹೊಲಿಗೆ ಯಂತ್ರ), ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್ ವತಿಯಿಂದ ಬಿ.ಎ.ಜೀವಿಜಯ (ತೆನೆ ಹೊತ್ತ ಮಹಿಳೆ), ಜೆಡಿಯು ಪಕ್ಷದಿಂದ ಕೆ.ಎಂ. ಬಷೀರ್ (ಬಾಣ) ಹಾಗೂ ಕೆಜೆಪಿಯ ಶಂಭುಲಿಂಗಪ್ಪ (ತೆಂಗಿನಕಾಯಿ) ಸ್ಪರ್ಧಿಸಿದ್ದಾರೆ. 

ವಿರಾಜಪೇಟೆ ಕ್ಷೇತ್ರದಲ್ಲಿ ಕೇವಲ ಮೂರು ಜನ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಡೇವಿಡ್ (ಹಾಕಿ ಸ್ಟಿಕ್ ಹಾಗೂ ಚೆಂಡು), ಮಾರಣ್ಣ ದಿಲೀಪ್‌ಕುಮಾರ್ (ಗಾಳಿಪಟ), ಡಿ. ಉದಯ (ಟೆಲಿಫೋನ್) ಕಣದಲ್ಲಿದ್ದಾರೆ.

ಇವರೊಂದಿಗೆ ಕಾಂಗ್ರೆಸ್ಸಿನ ಬಿ.ಟಿ. ಪ್ರದೀಪ್ (ಚಿಹ್ನೆ- ಕೈ), ಬಿಜೆಪಿಯ ಕೆ.ಜಿ.ಬೋಪಯ್ಯ (ಕಮಲ), ಜೆಡಿಎಸ್ ವತಿಯಿಂದ ಡಿ.ಎಸ್. ಮಾದಪ್ಪ (ತೆನೆ ಹೊತ್ತ ಮಹಿಳೆ), ಸಿಪಿಐ(ಎಂಎಲ್) ಚೆಂಗಪ್ಪ (ಹೊಲಿಗೆ ಯಂತ್ರ), ಬಿ.ಎಸ್. ಆರ್ ಪಕ್ಷದ ಜನಿತ್ ಅಯ್ಯಪ್ಪ (ಫ್ಯಾನ್) ಹಾಗೂ ಎಸ್‌ಡಿಪಿಐ ಉಸ್ಮಾನ್ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿಗಳ ಇತಿಹಾಸ
ಮಡಿಕೇರಿ ಕ್ಷೇತ್ರದಲ್ಲಿ 1957ರಲ್ಲಿ ಮೂರು ಜನ, 1962, 1972, 1978, 1999ರಲ್ಲಿ ಐದು ಮಂದಿ, 1967, 1983, 2004ರಲ್ಲಿ ಆರು ಜನ, 1985, 1994ರಲ್ಲಿ ಎಂಟು, 1989ರಲ್ಲಿ 9 ಹಾಗೂ 2008ರಲ್ಲಿ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಸಲ (2013) 14 ಜನರು ಕಣಕ್ಕಿಳಿದಿದ್ದಾರೆ.

ವಿರಾಜಪೇಟೆ ಕ್ಷೇತ್ರದಲ್ಲಿ 1957, 1967ರಲ್ಲಿ ಇಬ್ಬರು, 1962, 1989, 1994, 1999, 2008ರಲ್ಲಿ ಐದು ಮಂದಿ, 1972, 1983, 1985, 2004ರಲ್ಲಿ ಮೂವರು, 1978ರಲ್ಲಿ ನಾಲ್ಕು ಜನ, ಈ ಸಲ (2013) ಒಂಬತ್ತು ಜನ ಅಭ್ಯರ್ಥಿಗಳು ಕಣಕ್ಕೆ ಧುಮುಕ್ಕಿದ್ದಾರೆ.

ಅಖಾಡಕ್ಕಿಳಿದ ಹೊಸ ಪಕ್ಷಗಳು
ಈಗ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಹೊಸ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಮಡಿಕೇರಿ ಕ್ಷೇತ್ರದಲ್ಲಿ ಕೆಜೆಪಿ ವತಿಯಿಂದ ಶಂಭುಲಿಂಗಪ್ಪ, ಸಿಪಿಐ(ಎಂಎಲ್) ವತಿಯಿಂದ ವನಜಾಕ್ಷಿ, ಜೆಡಿಯು ವತಿಯಿಂದ ಕೆ.ಎಂ. ಬಷೀರ್ ಕಣಕ್ಕಿಳಿದಿದ್ದಾರೆ.

ವಿರಾಜಪೇಟೆ ಕ್ಷೇತ್ರದಿಂದ ಸಿಪಿಐ(ಎಂಎಲ್) ಅಭ್ಯರ್ಥಿ ಚಂಗಪ್ಪ, ಬಿ.ಎಸ್.ಆರ್. ಪಕ್ಷದಿಂದ ಜನಿತ್ ಅಯ್ಯಪ್ಪ, ಎಸ್‌ಡಿಪಿಐ ವತಿಯಿಂದ ಉಸ್ಮಾನ್ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT