ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಹಾಜರುಪಡಿಸಲು ರೇವಣ್ಣ ಒತ್ತಾಯ

Last Updated 7 ಫೆಬ್ರುವರಿ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷನಾಗಿ ನಾನು ಅವ್ಯವಹಾರ ನಡೆಸಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರು ಈ ಬಗ್ಗೆ ದಾಖಲೆ ನೀಡುತ್ತಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ದೂರಿದರು.

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಎಂಎಫ್‌ನಲ್ಲಿ ನಾನು 300-400 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜನವರಿ 11ರಂದು ವಿಧಾನಸಭೆಯಲ್ಲಿ ಆರೋಪಿಸಿದ್ದರು. ಈ ಬಗ್ಗೆ ದಾಖಲೆ ನೀಡುವಂತೆ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಎರಡು ಬಾರಿ ಪತ್ರ ಬರೆದರೂ ಸ್ಪಂದಿಸಿಲ್ಲ’ ಎಂದರು.

‘ಯಾವುದೇ ದಾಖಲೆ ನೀಡಲು ವಿಫಲರಾದ ಮುಖ್ಯಮಂತ್ರಿ ಈಗ ಮತ್ತೆ ನಮ್ಮ ವಿರುದ್ಧ ಬೆಂಬಲಿಗರ ಮೂಲಕ ಆರೋಪ ಮಾಡಿಸುತ್ತಿದ್ದಾರೆ. ಕೈಗಾರಿಕೆ ಹೆಸರಿನಲ್ಲಿ ಸಾಲ ಪಡೆದು ಸರ್ಕಾರಕ್ಕೆ ಟೋಪಿ ಹಾಕಿದವರನ್ನು ಈ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರಿಂದಲೇ ಅರ್ಜಿ ಹಾಕಿಸಿಕೊಂಡು ನಮ್ಮ ವಿರುದ್ಧ ತನಿಖೆಗೂ ಆದೇಶಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಪಡುವಲ ಹಿಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನದಿಂದ ಕೆಎಂಎಫ್ ಅಧ್ಯಕ್ಷ ಸ್ಥಾನದವರೆಗಿನ ಅಧಿಕಾರದ ಅವಧಿಯಲ್ಲಿ ನಾನು ವೇತನ, ಭತ್ಯೆ ಯಾವುದನ್ನೂ ಪಡೆದಿಲ್ಲ. ಕರ್ನಾಟಕ ಹಾಲು ಮಹಾಮಂಡಳವನ್ನು ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಕೊಂಡೊಯ್ದಿದ್ದೇನೆ. ಯಡಿಯೂರಪ್ಪ ತಮ್ಮ ವಿರುದ್ಧದ ಆರೋಪಗಳನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು. ಕೆಎಂಎಫ್‌ನಲ್ಲಿ ತಾವು ಕಾನೂನು ಮೀರಿ ಯಾವುದೇ ತೀರ್ಮಾನವನ್ನೂ ಕೈಗೊಂಡಿರಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT