ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಳ ಎತ್ತರಕ್ಕೆ ಕೌಟುಂಬಿಕ ಹಾಕಿ

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಕೊಡಗಿನಲ್ಲಿ ಆರು ತಿಂಗಳು ಕಾಲ ಮಳೆಗಾಲವಿದ್ದರೆ, ಇನ್ನುಳಿದ ಆರು ತಿಂಗಳು `ಕ್ರೀಡಾ ಕಾಲ~ ಇರುತ್ತದೆ. ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಪ್ರಮುಖ ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆಯಾದರೂ, ಹಾಕಿ ಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ.

ಇತ್ತೀಚೆಗೆ (ಏಪ್ರಿಲ್ 21-ಮೇ 13ವರೆಗೆ) ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆದ 16ನೇ ವರ್ಷದ ಕೊಡವ ಕುಟುಂಬಗಳ ಹಾಕಿ ಉತ್ಸವವೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಈ ವರ್ಷದ ಹಾಕಿ ಉತ್ಸವ ಹತ್ತು ಹಲವು ವಿಶೇಷತೆಗಳನ್ನು ಹೊಂದಿತ್ತು.

`217 ಕುಟುಂಬಗಳ ತಂಡಗಳು ಭಾಗವಹಿಸಿದ್ದ ಈ ಉತ್ಸವಕ್ಕಾಗಿ ಸುಮಾರು 72 ಲಕ್ಷ ರೂ. ಖರ್ಚು ಮಾಡಲಾಯಿತು~ ಎಂದು ಆತಿಥ್ಯ ವಹಿಸಿದ್ದ ಐಚೆಟ್ಟಿರ ಕುಟುಂಬದ ಐ.ಕೆ. ಅನಿಲ್ ಹೇಳುತ್ತಾರೆ.

ಸರ್ಕಾರವು ನೀಡಿದ 30 ಲಕ್ಷ ರೂಪಾಯಿ ಹೊರತುಪಡಿಸಿದರೆ ಉಳಿದ ಹಣವನ್ನು ಕ್ರೀಡಾಭಿಮಾನಿಗಳಿಂದ ಹಾಗೂ ಕಂಪೆನಿಗಳ ಪ್ರಾಯೋಜಕತ್ವದಿಂದ ಸಂಗ್ರಹಿಸಲಾಗಿತ್ತು  ಎಂದೂ ಅವರು ಹೇಳುತ್ತಾರೆ. 

ಕೊಡವ ಜಾತಿಗೆ ಸೀಮಿತವಾಗಿ ನಡೆಯುವ ಈ ಹಾಕಿ ಉತ್ಸವವನ್ನು ಪ್ರತಿವರ್ಷ ಒಂದೊಂದು ಕುಟುಂಬಸ್ಥರು ನಿರ್ವಹಿಸುತ್ತಾರೆ. ರಾಜ್ಯ ಸರ್ಕಾರ ಅಗತ್ಯವಾದ ಧನ ಸಹಾಯ ಕೂಡ ಮಾಡುತ್ತಿದೆ. ಇಲ್ಲಿ ಅಂತರರಾಷ್ಟ್ರೀಯ ಹಾಕಿಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಿರುವುದು ವಿಶೇಷವಾಗಿದೆ.

ಹಲವು ಕಡೆ ಚದುರಿದಂತಿರುವ ಕೊಡವ ಜಾತಿಯ ಜನರಲ್ಲಿ ಒಗ್ಗಟ್ಟು ಮೂಡಿಸುವುದಕ್ಕಾಗಿ ಮತ್ತು ಒಂದೆಡೆ ಸೇರಿಸುವ ಹೆಗ್ಗುರಿಯೊಂದಿಗೆ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕುಟ್ಟಪ್ಪ ಅವರು ಇಂತಹದ್ದೊಂದು ಉತ್ಸವನ್ನು 1997ರಲ್ಲಿ ಆರಂಭಿಸಿದರು.
 
ರಾಜ್ಯದ ಬೇರೆ ಬೇರೆ ಕಡೆ ನೆಲೆಸಿರುವ ಕೊಡವ ಸಮುದಾಯಕ್ಕೆ ಸೇರಿರುವ ಮಂದಿ ಹಾಕಿ ಉತ್ಸವವನ್ನು ವೀಕ್ಷಿಸುವ ನೆಪದಲ್ಲಿ ಊರಿಗೆ ಬರುವ ಸಂಪ್ರದಾಯವೂ ಬೆಳೆದಿದೆ. ಒಂದು ಸಮುದಾಯಕ್ಕೆ ಸೇರಿದವರು ಈ ರೀತಿ ಕ್ರೀಡಾಕೂಟವೊಂದನ್ನು ನಡೆಸುತ್ತಿರುವುದು ಅಪರೂಪದ ಸಂಗತಿಯೇ ಹೌದು. ಇದೇ ಕಾರಣಕ್ಕಾಗಿ ಈ ಉತ್ಸವ ಲಿಮ್ಕಾ ದಾಖಲೆ ಪುಸ್ತಕದಲ್ಲಿಯೂ ಸ್ಥಾನ ಪಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳ ಪ್ರಭಾವದಿಂದಾಗಿ ಈ ಹಾಕಿ ಉತ್ಸವಕ್ಕೆ ಬಹಳಷ್ಟು ಪ್ರಚಾರ ಸಿಕ್ಕಿದೆ. ಈ ಕಾರಣದಿಂದಾಗಿ ವಿವಿಧ ಕಂಪೆನಿಗಳು ಪ್ರಾಯೋಜಕತ್ವ ನೀಡಲು ಮುಂದೆ ಬರುತ್ತಿವೆ. ಇದರಿಂದಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಬಹುಮಾನದ ರೂಪದಲ್ಲಿ ಸಾಕಷ್ಟು ಹಣವೂ ಸಿಗುತ್ತಿದೆ. 

ಜಿಲ್ಲೆಯ ಬಾಳುಗೋಡಿನಲ್ಲಿರುವ ಕೊಡವ ಸಾಂಸ್ಕೃತಿಕ ಕೇಂದ್ರದ ಸಮುಚ್ಚಯದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣದಲ್ಲಿ ಮುಂದಿನ ವರ್ಷದಿಂದ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಉತ್ಸವಕ್ಕೆ ಸಿಕ್ಕಿದ ಪ್ರಚಾರದಿಂದ ಪ್ರೇರೇಪಣೆ ಪಡೆದಂತಿರುವ ಗೌಡ, ಬಿಲ್ಲವ, ಬಂಟ ಜಾತಿಯ ಜನರೂ ಸೇರಿದಂತೆ ಹಲವು ಸಮುದಾಯದ ಮಂದಿ ತಮ್ಮ ತಮ್ಮ ಜಾತಿಯ ಮಟ್ಟದ ಕ್ರೀಡಾಕೂಟಗಳನ್ನು ಸಂಘಟಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT