ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಳಿದ್ದರೆ ಬಹಿರಂಗಪಡಿಸಿ:ಎಚ್‌ಡಿಕೆ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ದೇವೇಗೌಡರ ಕುಟುಂಬದ ಮೇಲೆ ಆರೋಪ ಮಾಡಲಾಗುತ್ತಿದೆ. ಈ ಸಂಬಂಧ ಯಾವುದೇ ದಾಖಲೆಗಳಿದ್ದರೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಹಿರಂಗಪಡಿಸಲಿ~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಸವಾಲು ಹಾಕಿದರು.

ಜೆಡಿಎಸ್ ಕನಕಪುರ ತಾಲ್ಲೂಕು ಘಟಕದ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

`ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡು ಗುತ್ತಿಗೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ದೇವೇಗೌಡರ ಮೇಲೆ ಆರೋಪ ಮಾಡುತ್ತಿವೆ. ಯಾರೋ ಕೇಸು ದಾಖಲು ಮಾಡಿದ ಮಾತ್ರಕ್ಕೆ ಅವರು ಆರೋಪಿಯಾಗುವುದಿಲ್ಲ. ವಾಸ್ತವ ಅಂಶಗಳನ್ನು ಅರಿತು ಮಾಧ್ಯಮಗಳು ವರದಿ ಮಾಡಬೇಕು~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಆ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ದೇವೇಗೌಡರು ಪಟ್ಟ ಶ್ರಮ ಯಾರಿಗೂ ತಿಳಿದಿಲ್ಲ. ಆದರೆ ಅವರನ್ನೇ ಆರೋಪಿಯನ್ನಾಗಿ ಮಾಡುವ ಹುನ್ನಾರಗಳು ನಡೆಯುತ್ತಿದೆ. ಈ ಆರೋಪಗಳಿಗೆ ಹೆದರುವುದಿಲ್ಲ. ಎಲ್ಲ ಆರೋಪಗಳನ್ನು ಧೈರ್ಯವಾಗಿ ಎದುರಿಸುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಆರಂಭಿಸಿರುವ ಹೋರಾಟ ಯಾವುದೇ ವ್ಯಕ್ತಿ, ಸಮುದಾಯದ ವಿರುದ್ಧವಲ್ಲ. ಬಿಜೆಪಿ ಸರ್ಕಾರ ಮೂರು ವರ್ಷಗಳಿಂದ ನಡೆಸಿರುವ ಭ್ರಷ್ಟಾಚಾರವನ್ನು ಬಯಲು ಮಾಡದಿದ್ದಲ್ಲಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿತ್ತು. ಸರ್ಕಾರವನ್ನು ಸರಿದಾರಿಗೆ ತರಲು ಈ ಹೋರಾಟ ಆರಂಭಿಸಿದೆ ಎಂದು ನುಡಿದರು.

ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋದಾಗ ಕೆಲ ಕಾಂಗ್ರೆಸ್ ಮುಖಂಡರು ಕುಣಿದು ಕುಪ್ಪಳಿಸಿದರು. ಆದರೆ ಅದೇ ನಾಯಕರು ರಾತ್ರಿಯಾದರೆ ಬಿಎಸ್‌ವೈ ಮನೆಯಲ್ಲಿ ಠಿಕಾಣಿ ಹೂಡುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಆ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ, ಬೆಂಗಳೂರು ನಗರ ಹಿಂದುಳಿದ ವರ್ಗಗಳ ಅಧ್ಯಕ್ಷ ಸೌಂದರ್ಯ ರಮೇಶ್, ಕನಕಪುರ ಜೆಡಿಎಸ್ ಘಟಕದ ಅಧ್ಯಕ್ಷ ಸಿದ್ದಮರೀಗೌಡ ಉಪಸ್ಥಿತರಿದ್ದರು.

ಮಹಾಭಾರತ ಯುದ್ಧ ಆರಂಭ
ಭ್ರಷ್ಟಾಚಾರದ ವಿರುದ್ಧ ಈಗಷ್ಟೇ ಮಹಾಭಾರತ ಯುದ್ದ ಆರಂಭವಾಗಿದೆ. ಅಕ್ರಮವಾಗಿ ಹಣ ಸಂಪಾದನೆ ಮಾಡಿರುವವರ ವಿರುದ್ಧ ಬಾಣಗಳು ಸಿದ್ಧವಾಗಿವೆ. ಈ ಬತ್ತಳಿಕೆಯಲ್ಲಿ ಕನಕಪುರ ಪ್ರಮುಖ ಕಾಂಗ್ರೆಸ್ ಮುಖಂಡರೊಬ್ಬರ ವಿರುದ್ಧವೂ ಬಾಣವಿದೆ. ಸದ್ಯದಲ್ಲೇ ಆ ಬಾಣವನ್ನು ಈಚೆಗೆ ಬಿಡುತ್ತೇನೆ.
 
ಹೋಗಲಿ ಅಂತ ಸುಮ್ಮನಾದರೆ ನನ್ನ ಮೇಲೆ ಮೀಸೆ ತಿರುಗುತ್ತಿದ್ದಾರೆ. ಶೀಘ್ರದಲ್ಲೇ ಅವರು ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರುತ್ತಾರೆ ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT