ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನ ಮಾಡಿದ ರಕ್ತದ ಮಾರಾಟ ಸಲ್ಲ

Last Updated 1 ಅಕ್ಟೋಬರ್ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: `ಜನರ ಅಮೂಲ್ಯ ಜೀವ ಉಳಿಸುವ ಉದ್ದೇಶದಿಂದ ದಾನಿಗಳು ನೀಡಿರುವ ರಕ್ತವನ್ನು ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ರಕ್ತ ನಿಧಿಗಳಲ್ಲಿ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ದಾನ ಮಾಡಿದ ರಕ್ತವನ್ನು ಮಾರಾಟ ಮಾಡದಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ~ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ರಾಜ್ಯ ರಕ್ತ ಚಾಲನಾ ಪರಿಷತ್ ಆಶ್ರಯದಲ್ಲಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

`ಆಸ್ಪತ್ರೆಗಳ ಈ ಪ್ರವೃತ್ತಿಯಿಂದ ರಕ್ತದಾನಿಗಳ ಮನಸ್ಸಿಗೆ ಘಾಸಿ ಉಂಟಾಗುತ್ತಿದೆ. ದಾನದ ರಕ್ತವನ್ನು ಮಾರಾಟ ಮಾಡುವುದೂ ಸರಿಯಲ್ಲ. ಖಾಸಗಿ ಆಸ್ಪತ್ರೆಗಳಿಗೆ ತಗುಲಿದ ಅಗತ್ಯ ಖರ್ಚನ್ನು ಮಾತ್ರ ವಸೂಲಿ ಮಾಡಬೇಕು~ ಎಂದು ಅವರು ಸೂಚಿಸಿದರು.

`ಕೊಪ್ಪಳ, ಯಾದಗಿರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ರಕ್ತನಿಧಿ ಕೇಂದ್ರಗಳು ಇಲ್ಲ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಶೀಘ್ರದಲ್ಲೇ ಆ ಜಿಲ್ಲೆಗಳಲ್ಲಿ ರಕ್ತನಿಧಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಭರವಸೆ ನೀಡಿದರು.

ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕಾರ್ಯಕ್ರಮ ಉದ್ಘಾಟಿಸಿ, `ನಕಲಿ ರಕ್ತನಿಧಿ ಕೇಂದ್ರಗಳು ಹುಟ್ಟಿಕೊಳ್ಳುತ್ತಿವೆ. ಇವುಗಳು ಸಮಾಜಸೇವೆ ಮಾಡುತ್ತಿಲ್ಲ. ಇದರಿಂದಾಗಿ ಈ ಪವಿತ್ರ ಕಾರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಜನರು ಸಹ ಹಣ ಗಳಿಸುವ ಉದ್ದೇಶದಿಂದ ರಕ್ತದಾನ ಮಾಡಬಾರದು~ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ರಕ್ತನಿಧಿ ನಿರ್ವಹಣಾ ಸಾಫ್ಟ್‌ವೇರ್ ಹಾಗೂ ಡ್ರಗ್ಸ್ ಕಂಟ್ರೋಲ್ ಅವರ ವೆಬ್‌ಸೈಟ್ ಉದ್ಘಾಟಿಸಲಾಯಿತು. ಈ ವೆಬ್‌ಸೈಟ್‌ನಲ್ಲಿ ರಾಜ್ಯದ 176 ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹದ ಮಾಹಿತಿ, ಯಾವ ಗುಂಪಿನ ರಕ್ತ ಎಷ್ಟು ಇದೆ ಎಂಬ ಮಾಹಿತಿ ದೊರಕಲಿದೆ. ನಗರದ ಎನ್‌ಐಸಿ ಸಂಸ್ಥೆ ವೆಬ್‌ಸೈಟ್ ಅಭಿವೃದ್ಧಿಪಡಿಸಿದೆ.

ರಕ್ತದಾನಿ ರಾಜ್ಯಪಾಲ
`ನಾನು 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ಈ ಹವ್ಯಾಸ ಆರಂಭಗೊಂಡಿತು. ರಕ್ತದಾನ ಮಾಡುವುದರಿಂದ ದೇಹದ ಸೌಂದರ್ಯ ಹೆಚ್ಚಳವಾಗುತ್ತದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.

`ರಕ್ತದಾನ ಮಾಡಲು ಯುವಜನರಲ್ಲಿ ಜಾಗೃತಿ ಮೂಡಿಸಬೇಕು. ಯುವಜನರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬೇಕು. ಇದೊಂದು ಶ್ರೇಷ್ಠ ಕಾರ್ಯ. ಸದೃಢ ಆರೋಗ್ಯಕ್ಕಾಗಿ ರಕ್ತದಾನ ಮಾಡಬೇಕು~ ಎಂದರು.

ಉಡುಪಿ ಜಿಲ್ಲಾಸ್ಪತ್ರೆಗೆ ನೀಡಲು ಶಿಬಿರ ಆಯೋಜಿಸಿ ಒಂದೇ ದಿನ ದಾಖಲೆಯ 512 ಯುನಿಟ್ ರಕ್ತ ಸಂಗ್ರಹ ಮಾಡಿದ ಕುಂದಾಪುರದ ನಾರಾಯಣಗುರು ಯುವಕ ಸಂಘ, ನಗರದ ಎಂ.ಎಸ್. ರಾಮಯ್ಯ ಇನ್ಸ್‌ಟಿಟ್ಯೂಟ್, ಆರ್.ವಿ. ಕಾಲೇಜು ಸೇರಿದಂತೆ ಆರು ಸಂಘ ಸಂಸ್ಥೆಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್, ಇಲಾಖೆಯ ಆಯುಕ್ತ ವಿ.ಬಿ.ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ಬಿ.ಎನ್.ಧನ್ಯಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಎಸ್.ಬಿ.ಕುಲಕರ್ಣಿ ಉಪಸ್ಥಿತರಿದ್ದರು. 
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT