ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬೋಲ್- ಬೆಂಗಳೂರು ಕೊಳವೆಯಲ್ಲಿ ಅನಿಲ

Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಹುನಿರೀಕ್ಷಿತ `ದಾಬೋಲ್- ಬೆಂಗಳೂರು ಅನಿಲ ಕೊಳವೆ ಮಾರ್ಗ'ದ ಮೂಲಕ ರಾಜ್ಯಕ್ಕೆ ಅನಿಲ ಸರಬರಾಜು ಸೋಮವಾರ ಆರಂಭಗೊಂಡಿತು. ಇದೇ ಸಂದರ್ಭದಲ್ಲಿ ಬಿಡದಿ ವಿದ್ಯುತ್ ಉತ್ಪಾದನಾ ಘಟಕಕ್ಕಾಗಿ ಅನಿಲ ವರ್ಗಾವಣೆ ಒಪ್ಪಂದಕ್ಕೂ ಸಹಿ ಹಾಕಲಾಯಿತು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಎಂ. ವೀರಪ್ಪ ಮೊಯಿಲಿ ಅವರು ಬೆಂಗಳೂರು ನಗರಕ್ಕೆ `ಗ್ಯಾಸ್-ಇನ್' ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ಪ್ರಥಮ ಗ್ರಾಹಕ ಟೊಯೊಟೊ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸಂಸ್ಥೆಗೆ ಅನಿಲ ಪೂರೈಕೆ ಮಾಡಲಾಯಿತು.
`ಈ ವ್ಯವಸ್ಥೆಗೆ ಚಾಲನೆ ನೀಡಿರುವುದರಿಂದ ಉದ್ಯಾನನಗರಿಯಲ್ಲಿ ಮಾಲಿನ್ಯ ಎಂಬ ಭೂತ ಮಾಯವಾಗಲಿದೆ' ಎಂದು ಮೊಯಿಲಿ ಬಣ್ಣಿಸಿದರು.

`ಈ ಯೋಜನೆ ಅನುಷ್ಠಾನದಿಂದ ರಾಜ್ಯದ ಅನಿಲ ಸರಬರಾಜು ವ್ಯವಸ್ಥೆ ಇನ್ನಷ್ಟು ಸದೃಢಗೊಳ್ಳಲಿದ್ದು, ಸಾಮರ್ಥ್ಯ ವೃದ್ಧಿ ಹಾಗೂ ಮಾಲಿನ್ಯ ನಿಯಂತ್ರಣದಂತಹ ಉಪಕ್ರಮಗಳ ಮೂಲಕ ವಾರ್ಷಿಕ ರೂ.800 ಕೋಟಿ ಉಳಿತಾಯವಾಗಲಿದೆ' ಎಂದು ಅವರು ಅಭಿಪ್ರಾಯಪಟ್ಟರು.

ಅನುಷ್ಠಾನದ ಹಾದಿ: ದಾಬೋಲ್- ಬೆಂಗಳೂರು ನಡುವೆ ಅನಿಲ ಸಂಪರ್ಕಕ್ಕೆ ರಾಜ್ಯ ಸರ್ಕಾರ ಹಾಗೂ ಭಾರತೀಯ ಅನಿಲ ಪ್ರಾಧಿಕಾರ (ಗೇಲ್) 2010ರ ಮೇ 10ರಂದು ಒಡಂಬಡಿಕೆಗೆ ಸಹಿ ಹಾಕಿದ್ದವು. ಈ ಯೋಜನೆಗೆ ರೂ. 4,500 ಕೋಟಿ ವೆಚ್ಚ ಮಾಡಲಾಗುತ್ತಿದೆ. ರಾಜ್ಯದ 700 ಕಿ.ಮೀ, ಮಹಾರಾಷ್ಟ್ರ 263 ಕಿ.ಮೀ ಹಾಗೂ ಗೋವಾದ 36 ಕಿ.ಮೀ ಪ್ರದೇಶ ಸೇರಿದಂತೆ ಈ ಯೋಜನೆಯ ಕೊಳವೆ ಮಾರ್ಗಗಳು 1,000 ಕಿ.ಮೀ ಪ್ರದೇಶದಲ್ಲಿ ಹಾದು ಹೋಗಿವೆ.

ರಾಜ್ಯದ ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕೊಳವೆ ಮಾರ್ಗ ಹಾದು ಬಂದಿದೆ. ಈ ರವಾನೆ ಜಾಲವು ದಿನಕ್ಕೆ 16 ಎಂಎಂಎಸ್‌ಸಿಎಂಡಿ (ದಶಲಕ್ಷ ಮೆಟ್ರಿಕ್ ಸ್ಟ್ಯಾಂಡರ್ಡ್ ಘನ ಮೀಟರ್) ನೈಸರ್ಗಿಕ ಅನಿಲ ತಲುಪಿಸುವ ಸಾಮರ್ಥ್ಯ ಹೊಂದಿದೆ.

11 ರಾಷ್ಟ್ರೀಯ ಹೆದ್ದಾರಿ, 382 ಇತರ ರಸ್ತೆಗಳ ಕ್ರಾಸಿಂಗ್, 83 ಕೇಸ್ಡ್ ಕ್ರಾಸಿಂಗ್, 20 ರೈಲ್ವೆ ಕ್ರಾಸಿಂಗ್, 276 ನೀರಿನ ಮೂಲಗಳು, ಘಟಪ್ರಭಾ ನದಿಯ ಕ್ರಾಸಿಂಗ್ ಅನ್ನು ಈ ಕೊಳವೆ ಮಾರ್ಗ ಸೀಳಿಕೊಂಡು ಬಂದಿದೆ. ಅಲ್ಲದೆ ಈ ಮಾರ್ಗವು 25 ಕಿ.ಮೀ. ಮೀಸಲು ಅರಣ್ಯ ಪ್ರದೇಶದಲ್ಲಿ ಹಾದುಕೊಂಡು ಬಂದಿದೆ.

300 ಕಿ.ಮೀ. ವಿಸ್ತಾರದ ಪಶ್ಚಿಮಘಟ್ಟವನ್ನು ಈ ಜಾಲವು ಸೀಳಿಕೊಂಡು ಬಂದಿದೆ. ಬೆಂಗಳೂರಿನ ಆಸುಪಾಸಿನ 73 ಕಿ.ಮೀ. ಪ್ರದೇಶದಲ್ಲಿ ಕೊಳವೆ ಮಾರ್ಗಗಳನ್ನು ಅಳವಡಿಸಲಾಗಿದೆ ಎಂದು ಗೇಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ತ್ರಿಪಾಠಿ ತಿಳಿಸಿದರು.

`ಬಿಡದಿ ಘಟಕ 30 ತಿಂಗಳಲ್ಲಿ ಪೂರ್ಣ'
`ಬಿಡದಿ ವಿದ್ಯುತ್ ಉತ್ಪಾದನಾ ಘಟಕದ ಮೊದಲ ಹಂತ ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ' ಎಂದು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಕಾಂಬ್ಳೆ ತಿಳಿಸಿದರು.

`ಗೇಲ್ ಹಾಗೂ ಕೆಪಿಸಿಎಲ್ ನಡುವಿನ ಒಪ್ಪಂದದ ಪ್ರಕಾರ ಪ್ರಾಧಿಕಾರದಿಂದ ಈ ಘಟಕಕ್ಕೆ 2.1ಎಂಎಂಎಸ್‌ಸಿಎಂಡಿ ಅನಿಲ ಪೂರೈಕೆಯಾಗಲಿದೆ. ಇಲ್ಲಿ ಮೊದಲ ಹಂತದಲ್ಲಿ 750 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವನ್ನು ಆರಂಭಿಸಲಾಗುವುದು. ಈ ಘಟಕದ ವೆಚ್ಚ ರೂ. 2,800 ಕೋಟಿ. ಈ ಘಟಕಕ್ಕಾಗಿ 170 ಎಕರೆ ಜಾಗ ಒತ್ತುವರಿ ಮಾಡಲಾಗಿದೆ' ಎಂದು ಅವರು ತಿಳಿಸಿದರು.

`ಇದಲ್ಲದೆ 350 ಮೆಗಾವಾಟ್ ಸಾಮರ್ಥ್ಯದ ಯಲಹಂಕದ ಡೀಸೆಲ್ ವಿದ್ಯುತ್ ಘಟಕವನ್ನು ಅನಿಲ ಘಟಕವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಇದರಿಂದ ರಾಜ್ಯಕ್ಕೆ ವಾರ್ಷಿಕ ರೂ.800 ಕೋಟಿ ಉಳಿತಾಯ ಆಗಲಿದೆ.

ಬೆಂಗಳೂರಿನ ವಿದ್ಯುತ್ ಬೇಡಿಕೆ 1,500 ಮೆಗಾವಾಟ್. ಬಿಡದಿ ಘಟಕವು ಪೂರ್ಣಗೊಂಡ ಬಳಿಕ ಅಲ್ಲಿಂದ 1,400 ಮೆಗಾವಾಟ್ ವಿದ್ಯುತ್ ದೊರಕಲಿದೆ. ಈ ಎರಡು ಘಟಕಗಳಿಂದ ಒಟ್ಟು 1,750 ಮೆಗಾವಾಟ್ ವಿದ್ಯುತ್ ದೊರಕಲಿದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT