ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಕಾಣದಾಗಿದೆ ಮಳೆರಾಯನೆ..!

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಬಿದ್ದ ಪರಿಣಾಮ ಹೊರ ವಲಯ ಮಾತ್ರವಲ್ಲದೇ ಹೃದಯ ಭಾಗದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಅವತರಿಸಿವೆ. ಡಾಂಬರೀಕರಣಕ್ಕೆ ಮುಂದಾಗಬೇಕಿರುವ ಬಿಬಿಎಂಪಿ ಕೈಕಟ್ಟಿ ಕುಳಿತಿರುವುದರಿಂದ ವಾಹನ ಚಾಲಕರು, ಪಾದಚಾರಿಗಳು ಪರದಾಡುವಂತಾಗಿದೆ.

ನಗರದ ಕೆ.ಎಚ್.ರಸ್ತೆ, ಕೆ.ಎಚ್.ರಸ್ತೆಯಿಂದ ರೆಸಿಡೆನ್ಸಿ ರಸ್ತೆ ಕಡೆಗೆ ತೆರಳುವ ಮೇಲ್ಸೇತುವೆ ರಸ್ತೆ, ಕೆ.ಆರ್.ವೃತ್ತ, ನೃಪತುಂಗ ರಸ್ತೆ, ಟ್ರಿನಿಟಿ ವೃತ್ತ, ಆರ್.ಟಿ. ನಗರದ ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ ರಸ್ತೆ, ದೇವಾಂಗ ಸಮಾಜ ರಸ್ತೆ, ಬಸವನಗುಡಿಯ ಸುಬ್ರಹ್ಮಣ್ಯ ಚೆಟ್ಟಿ ರಸ್ತೆ, ಟ್ಯಾಗೋರ್ ಅಂಡರ್ ಪಾಸ್ ಬಳಿ, ಕಬ್ಬನ್‌ಪಾರ್ಕ್ ಸಮೀಪದ ಸಿದ್ದಲಿಂಗಯ್ಯ ವೃತ್ತ, ರಿಚ್ಮಂಡ್ ರಸ್ತೆ, ಮಿಷನ್ ರಸ್ತೆ, ಧರ್ಮರಾಯನ ದೇವಸ್ಥಾನ ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆಯ ಅಲ್ಲಲ್ಲಿ ಮಳೆರಾಯನ ಹೊಡೆತಕ್ಕೆ ಸಿಕ್ಕು ರಸ್ತೆಗಳು ಹಾಳಾಗಿವೆ. ಕೆಲವೆಡೆ ರಸ್ತೆಗಳು ಗುಂಡಿ ಬಿದ್ದಿದ್ದು ಇನ್ನೂ ಕೆಲವೆಡೆ ಡಾಂಬರು ಪದರವೇ ಕಿತ್ತು ಹೋಗಿದೆ.

ಕೆ.ಎಚ್.ರಸ್ತೆಯ ಅವ್ಯವಸ್ಥೆ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಶಾಂತಿನಗರದ ನಿವಾಸಿ ಶಿವರಾಜ್, `ಮಳೆಗಾಲಕ್ಕೂ ಮುನ್ನವೇ ರಸ್ತೆ ಹಾಳಾಗಿತ್ತು. ಮಳೆ ಬಂದ ನಂತರವಂತೂ ಸಮಸ್ಯೆ ಉಲ್ಬಣಿಸಿದೆ. ರಾತ್ರಿ ಹೊತ್ತು ಸಂಚರಿಸುವಾಗ ಎದುರು ಇರುವ ಗುಂಡಿ ಗೊತ್ತೇ ಆಗುವುದಿಲ್ಲ. ರಸ್ತೆಯಲ್ಲಿ ಹೊಸದಾಗಿ ಪ್ರಯಾಣಿಸುವವರಂತೂ ಹೆಚ್ಚು ಕಷ್ಟಪಡಬೇಕು~ ಎಂದರು.

ಮೈಸೂರು ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಆಟೊ ಚಾಲಕ ಫಾರೂಕ್, `ಮೈಸೂರು ರಸ್ತೆಯಲ್ಲಿ ನಿತ್ಯ ಭಾರಿ ಸಂಚಾರ ಇರುತ್ತದೆ. ರಸ್ತೆ ಹಾಳಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ನಮಗೆ ಪ್ರಯಾಣಿಕರು ಸಿಗುವುದು ತಪ್ಪುತ್ತದೆ. ಮಳೆ ಬಂದಾಗ ರಸ್ತೆ ಹಾಳಾಗುತ್ತದೆ ಎನ್ನುವುದು ಬಿಬಿಎಂಪಿಗೆ ತಿಳಿದ ವಿಚಾರವೇ ಆದರೂ ಅವರು ಯಾಕೆ ಸಮಸ್ಯೆ ತಪ್ಪಿಸಲು ಯತ್ನಿಸುವುದಿಲ್ಲ?~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್.ಆರ್.ಕಾಲೋನಿಯ ವ್ಯಾಪಾರಿ ಮಧುಕರ್ ಅವರು ಹೇಳುವಂತೆ `ಪ್ರತಿವರ್ಷ ಸುಬ್ರಹ್ಮಣ್ಯ ಚೆಟ್ಟಿ ರಸ್ತೆ ಹದಗೆಡುತ್ತಲೇ ಇರುತ್ತದೆ. ಈ ಬಾರಿ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಕೇವಲ ರಂಧ್ರಗಳನ್ನು ಮುಚ್ಚುವ ಬದಲು ಇಡೀ ರಸ್ತೆಗೆ ಡಾಂಬರು ಹಾಕುವ ಕೆಲಸ ನಡೆಯಬೇಕು. ರಸ್ತೆ ಮೇಲೆ ಬಿದ್ದ ಮಳೆ ನೀರು ಅಲ್ಲಲ್ಲಿಯೇ ಇಂಗುವಂತೆ ವ್ಯವಸ್ಥೆ ಮಾಡಬೇಕು~ ಎಂದು ಹೇಳಿದರು. 

ಪಾಲಿಕೆಯ ಉತ್ತರ
ತುರ್ತು ಕ್ರಮ
ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳು ಗುಂಡಿಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾರ್ಯಕ್ಕೆ ಆದ್ಯತೆ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು
ಮೇಯರ್ ಪಿ. ಶಾರದಮ್ಮ 

ರೂ 10 ಲಕ್ಷ ಬಿಡುಗಡೆ:
ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಹಾಗಾಗಿ ಗುಂಡಿ ಮುಚ್ಚುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯಕ್ಕಾಗಿ ಪ್ರತಿ ವಾರ್ಡ್‌ಗೆ ತಲಾ 10 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ವಾತಾವರಣವನ್ನು ಗಮನಕ್ಕೆ ತೆಗೆದುಕೊಂಡು ಗುಂಡಿ ಮುಚ್ಚುವ ಕಾರ್ಯ ನಡೆಯಲಿದೆ
 ಬಿಬಿಎಂಪಿ ವಿಶೇಷ ಆಯುಕ್ತ ನಿರಂಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT