ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿಗೆ ಅಡ್ಡಿಯಾದ ಪೊದೆ ತೆಗೆದ ಗ್ರಾಮಸ್ಥರು

Last Updated 22 ಸೆಪ್ಟೆಂಬರ್ 2011, 8:20 IST
ಅಕ್ಷರ ಗಾತ್ರ

ತಿಪಟೂರು: ಇಕ್ಕೆಲದ ಬೇಲಿ ದಾರಿ ಆವರಿಸಿ ಬೆಳೆದರೂ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯಕ್ಕೆ ರೋಸಿದ ತಾಲ್ಲೂಕಿನ ಆಚಾರಪಾಳ್ಯದ ಗ್ರಾಮಸ್ಥರು ತಾವೇ ಪೊದೆ ತೆಗೆಸಿದ್ದಾರೆ.

ತಾಲ್ಲೂಕಿನ ಈಚನೂರಿನಿಂದ ಮೂರು ಕಿಮೀ ನಡೆದೇ ಹೋಗಬೇಕಾದ ಆಚಾರಪಾಳ್ಯಕ್ಕೆ ಬಸ್ ಸಂಚಾರ ಸೌಲಭ್ಯವಿಲ್ಲ. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ಈಚನೂರಿನಲ್ಲಿ ಬಸ್ ಇಳಿದು ಊರು ಮುಟ್ಟಬೇಕೆಂದರೆ ಇಕ್ಕೆಲದಲ್ಲಿ ಬೇಲಿ ಆವರಿಸಿದ್ದ ದಾರಿ ಹಿಡಿದು ಭಯದಲ್ಲಿ ಸಾಗಬೇಕಿತ್ತು.

ಐದಾರು ತಿಂಗಳ ಹಿಂದೆ ಈಚನೂರು ಸಮೀಪ ಚಿರತೆಯೊಂದು ಕಾಣಿಸಿತ್ತೆಂಬ ಸುದ್ದಿ ಹಬ್ಬಿದ್ದ ನಂತರ ಆ ಗ್ರಾಮಸ್ಥರು ದಾರಿಯಲ್ಲಿ ನಡೆಯಲು ಮತ್ತಷ್ಟು ಆತಂಕಗೊಂಡಿದ್ದರು. ಇಕ್ಕೆಲದ ಜಂಗಲ್ ತೆಗೆಸಲು ಗ್ರಾಮ ಪಂಚಾಯಿತಿಯನ್ನು ಕೋರಿದ್ದರು.

ಗ್ರಾಮ ಪಂಚಾಯಿತಿ ಆಡಳಿತ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದ್ದರಿಂದ ಗ್ರಾಮದ ಕೆಲವರು ಸೇರಿ ತಾವೇ ಪೊದೆ ತೆಗೆಯಲು ನಿರ್ಧಾರ ಕೈಗೊಂಡರು. ಒಂದು ದಿನ ಶ್ರಮದಾನದ ಮೂಲಕ ಬೇಲಿ ತೆಗೆಯುವ ಕೆಲಸಕ್ಕೆ ಕೈ ಹಾಕಿದರು. ಆದರೆ ದೊಡ್ಡದಾಗಿ ಬೆಳೆದಿದ್ದ ಬೇಲಿ ಬಗ್ಗಿಸುವುದು ಕಷ್ಟವಾಯಿತು.

ಇದಾದ ನಂತರ ಅಲ್ಲಿನ ಗಣಪತಿ ಯುವಕ ಸಂಘ, ಮಾರುತಿ ಯುವಕ ಸಂಘ, ಕೆಲ ಸ್ತ್ರೀ ಸಂಘಗಳು ಹಾಗೂ ಗ್ರಾಮಸ್ಥರು ಸೇರಿ ಹಣ ಒಗ್ಗೂಡಿಸಿ ಜೆಸಿಬಿಯಿಂದ ಪೊದೆ ತೆರವುಗೊಳಿಸಲು ನಿರ್ಧರಿಸಿದರು. ಅದರಂತೆ ಈಚೆಗೆ ಜೆಸಿಬಿಯೊಂದನ್ನು ಬಾಡಿಗೆಗೆ ಪಡೆದು ಬೇಲಿ ತೆರವುಗೊಳಿಸಲಾಯಿತು. ಗ್ರಾಮದ ಯುವಕರೆಲ್ಲ ಇದಕ್ಕೆ ಸಹಕರಿಸಿದರು.

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದ ಬಗ್ಗೆ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸುತ್ತಾ, ನಡೆದು ಹೋಗಬೇಕಾದ ಆಚಾರಪಾಳ್ಯಕ್ಕೆ ರಸ್ತೆಯಾದರೂ ಸುರಕ್ಷಿತವಾಗಿಲ್ಲ. ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ.

ಜಂಗಲ್ ಕಟ್ ಮಾಡಿಸದೆ ಗ್ರಾಮ ಪಂಚಾಯಿತಿ ಆಡಳಿತ ಕುಂಟು ನೆಪ ಹೇಳುತ್ತಲೆ ಬಂದಿದೆ. ಇದರಿಂದ ರೊಚ್ಚೆಗೆದ್ದು ಗ್ರಾಮಸ್ಥರೇ ಈ ಕಾರ್ಯಕ್ಕೆ ಮುಂದಾದರು ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT