ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಬೆಳೆಗಾರರ ಸಾಲ ಮನ್ನಾಕ್ಕೆ ಆಗ್ರಹ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ತುಮಕೂರು: ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡಿ ಪರಿಹಾರ ಧನ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಪಾವಗಡ ತಾಲ್ಲೂಕು ದಾಳಿಂಬೆ ಬೆಳೆಗಾರರ ಸಂಘದ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಜಿಲ್ಲಾಧಿಕಾರಿಯೊಂದಿಗೆ ತಮ್ಮ ಸದ್ಯದ ಸ್ಥಿತಿಗತಿ ಕುರಿತು ಚರ್ಚಿಸಿದ ರೈತರು, ದುಂಡಾಣು ರೋಗದಿಂದ ಪಾವಗಡ ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆ ಸರ್ವನಾಶವಾಗಿದೆ ಎಂದು ಸಮಸ್ಯೆ ತೋಡಿಕೊಂಡರು.

ಪಾವಗಡ ತಾಲ್ಲೂಕಿನಲ್ಲಿ ಕಳೆದ 20 ವರ್ಷಗಳಿಂದ ಸುಮಾರು 2000 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಕಳೆದ 10 ವರ್ಷಗಳಿಂದ ದಾಳಿಂಬೆ ಬೆಳೆಯನ್ನು ದುಂಡಾಣು ರೋಗ ಬಾಧಿಸುತ್ತಿದೆ ಎಂದು ಸಂಘದ ಅಧ್ಯಕ್ಷ ವೀರಾಂಜನೇಯ ವಿವರಿಸಿದರು.

ರೋಗಬಾಧೆಯಿಂದ ದಾಳಿಂಬೆ ತೋಟಗಳು ಸಂಪೂರ್ಣ ಹಾಳಾಗಿವೆ. ರೈತರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ತೀರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಬಂಗಾರ ಬ್ಯಾಂಕ್ ಸೇರಿದೆ. ಯಾವ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಔಷಧಿ ಖರೀದಿಗೆ ಮಾಡಿದ ಸಾಲವೂ ವ್ಯರ್ಥವಾಗುತ್ತಿದೆ ಎಂದರು.
 

ತೋಟಗಾರಿಕಾ ಮಿಷನ್ ಸಹಾಯಧನ, ಉದ್ಯೋಗಖಾತರಿ, ಬ್ಯಾಂಕ್ ಸಾಲದ ಮೂಲಕ ದಾಳಿಂಬೆ ಬೆಳೆಯಲು ಯತ್ನಿಸಿ ಕೈಸುಟ್ಟುಕೊಂಡಿರುವ ರೈತರ ನೆರವಿಗೆ ಜಿಲ್ಲಾಡಳಿತ ತಕ್ಷಣ ಧಾವಿಸಬೇಕು. ರೈತರ ಸಾಲಮನ್ನಾ ಮಾಡಿ ಪರ್ಯಾಯ ಬೆಳೆಗೆ ಪರಿಹಾರ ಧನ ನೀಡಬೇಕೆಂದು ಕೋರಿದರು.

ಮುಖಂಡರಾದ ಶಿವಪ್ರಸಾದ್, ಆಂಜಿನಪ್ಪರೆಡ್ಡಿ, ಸಿ.ಬಸವರಾಜು, ಎಸ್.ಡಿ.ವೀರಭದ್ರಪ್ಪ, ವಾಗೀಶ್, ವಾಲೆನಾಯ್ಕ, ಸುಬ್ಬರಾಯಪ್ಪ, ಮುದ್ದವೀರಪ್ಪ, ರಾಮಕೃಷ್ಣಪ್ಪ, ನರಸಿಂಹಪ್ಪ, ರಾಮದಾಸ್, ಮಂಜುನಾಥ್‌ಕುಮಾರ್, ರಾಜಶೇಖರ್, ಶಿವಕುಮಾರ್, ಹನುಮಂತರಾಯ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT