ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದಾವಣಗೆರೆ ಎಕ್ಸ್‌ಪ್ರೆಸ್'ಗೆ ಬಾಗಿದ ರಾಯಲ್ಸ್

ಕ್ರಿಕೆಟ್ ಪ್ರಿಯರಿಗೆ ನಿರಾಸೆಗೊಳಿಸದ ದ್ರಾವಿಡ್; ರಾಯಲ್ ಚಾಲೆಂಜರ್ಸ್ ಗೆಲುವಿಗೆ ಗೇಲ್ ಬಲ
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸರತಿ ಸಾಲಿನಲ್ಲಿ ನಿಂತು ಕಷ್ಟಪಟ್ಟು ಟಿಕೆಟ್ ಪಡೆದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಕಾಡಲಿಲ್ಲ. `ದ ವಾಲ್' ಖ್ಯಾತಿಯ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಲಭಿಸಿತು. ಆದರೆ, `ದಾವಣಗೆರೆ ಎಕ್ಸ್‌ಪ್ರೆಸ್' ಮೊನಚಿನ ದಾಳಿಯ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಟ್ವಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಕ್ಷೇತ್ರರಕ್ಷಣೆ ಆಯ್ದುಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ವಿನಯ್ ಬೌಲಿಂಗ್ ಮಾಡಿದರು. ಇನ್ನೊಬ್ಬ ವೇಗಿ ಆರ್.ಪಿ. ಸಿಂಗ್ ಕೂಡಾ ನೆರವಾದರು. ಇವರ ದಾಳಿಯ ಮುಂದೆ ತಲೆಬಾಗಿದ ರಾಯಲ್ಸ್ 19.4 ಓವರ್‌ಗಳಲ್ಲಿ 117 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಅಲ್ಪ ಮೊತ್ತದ ಸವಾಲು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಕಷ್ಟವೇನಲ್ಲ ಎಂದು ಆರ್‌ಸಿಬಿ ಇನಿಂಗ್ಸ್ ಆರಂಭವಾಗುವ ಮುನ್ನವೇ ಗೊತ್ತಾಗಿ ಹೋಗಿತ್ತು. ನಿರೀಕ್ಷೆಯಂತೆ ಆರ್‌ಸಿಬಿ 17.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ವಿನಯ್ ಮಿಂಚು: ಪ್ರೆಸ್ ಬಾಕ್ಸ್‌ನ ವಿರುದ್ಧ ದಿಕ್ಕಿನಿಂದ ಬೌಲಿಂಗ್ ಆರಂಭಿಸಿದ ಬಲಗೈ ವೇಗಿ ವಿನಯ್ ಮೊದಲ ಓವರ್‌ನಲ್ಲಿ ಪರಿಣಾಮಕಾರಿಯೆನಿಸಲಿಲ್ಲ. ಆದರೆ, ತಕ್ಷಣವೇ `ತಂತ್ರ' ಹೂಡಿದ ವಿನಯ್ ನಂತರ ಪ್ರೆಸ್ ಬಾಕ್ಸ್ ತುದಿಯಿಂದ ಬೌಲಿಂಗ್ ನಡೆಸಿ ಪ್ರಮುಖ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಸ್ಟುವರ್ಟ್ ಬಿನ್ನಿ, ಬ್ರಾಡ್ ಹಾಡ್ಜ್ ಮತ್ತು ಎಸ್. ಶ್ರೀಶಾಂತ್ ವಿಕೆಟ್‌ಗಳನ್ನು ಪಡೆದು ನಾಲ್ಕು ಓವರ್‌ಗಳಲ್ಲಿ 18 ರನ್ ಮಾತ್ರ ಬಿಟ್ಟುಕೊಟ್ಟರು. ಒಟ್ಟು ಏಳು ಪಂದ್ಯಗಳನ್ನಾಡಿರುವ ವಿನಯ್ 12 ವಿಕೆಟ್‌ಗಳನ್ನು ಪಡೆದು, ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಆರ್.ಪಿ. ಸಿಂಗ್ ಕೂಡಾ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದು 13 ರನ್ ನೀಡಿದರು. ರಾಯಲ್ಸ್ ಕೊನೆಯ 20 ರನ್ ಗಳಿಸುವಷ್ಟರಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದೂ ಹೆಚ್ಚುವರಿ ರನ್‌ಗಳನ್ನು ಆರ್‌ಸಿಬಿ ನೀಡಲಿಲ್ಲ. ಇದು ಕೊಹ್ಲಿ ಬಳಗದ ಬೌಲಿಂಗ್ ಎಷ್ಟೊಂದು ಪರಿಣಾಮಕಾರಿಯಾಗಿತ್ತು ಎನ್ನುವುದಕ್ಕೆ ಸಾಕ್ಷಿ.

ಗೇಲ್ ಬಲ: ಅಲ್ಪ ಮೊತ್ತದ ಗುರಿ ಬೆನ್ನಟ್ಟುವ ಹಾದಿಯಲ್ಲಿ ರಾಯಲ್ ಚಾಲೆಂಜರ್ಸ್ ಉತ್ತಮ ಆರಂಭವನ್ನೇ ಪಡೆಯಿತು. ತಿಲಕರತ್ನೆ ದಿಲ್ಶಾನ್ (25, 22ಎಸೆತ, 5 ಬೌಂಡರಿ) ಜೊತೆಗೂಡಿ ಕ್ರಿಸ್ ಗೇಲ್ 53 ರನ್ ಗಳಿಸಿ ಉತ್ತಮ ಆರಂಭ ತಂದುಕೊಟ್ಟರು. ಗಟ್ಟಿ ಬುನಾದಿ ಮೇಲೆ ಕೆರಿಬಿಯನ್ ನಾಡಿನ ಗೇಲ್ ಮತ್ತು ಸೌರಭ್ ತಿವಾರಿ (ಔಟಾಗದೆ 25, 29ಎಸೆತ, 2 ಬೌಂಡರಿ, 1 ಸಿಕ್ಸರ್) ಗೆಲುವಿನ ಸೌಧ ನಿರ್ಮಿಸಿದರು. 44 ಎಸೆತಗಳನ್ನು ಎದುರಿಸಿದ ಗೇಲ್ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳ ನೆರವಿನಿಂದ ಅಜೇಯ 49 ರನ್ ಗಳಿಸಿದರು

ಆರ್‌ಸಿಬಿ ಗೆಲುವಿನ ಒಂದು ರನ್ ಅಗತ್ಯವಿದ್ದಾಗ ಗೇಲ್ ಸ್ಟ್ರೈಕರ್ ಆಗಿದ್ದರು. ಆಗ, ಪ್ರೇಕ್ಷಕರ ಗ್ಯಾಲರಿಯಲ್ಲಿ `ವಿ ವಾಂಟ್ ಸಿಕ್ಸರ್, ವಿ ವಾಂಟ್ ಸಿಕ್ಸರ್....' ಎನ್ನುವ ಕೂಗು ಭಾರಿ ಪ್ರಮಾಣದಲ್ಲಿ ಕೇಳಿ ಬಂದಿತು. ಕ್ರಿಕೆಟ್ ಪ್ರಿಯರ ಮನದಾಸೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡ ಗೇಲ್ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಮನದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡರು

ಬ್ಯಾಟಿಂಗ್ ಸೊಬಗು: ಕನ್ನಡಿಗ ದ್ರಾವಿಡ್ ಅವರ ಬ್ಯಾಟಿಂಗ್ ನೋಡಲೆಂದೇ ಬಹುತೇಕ ಕ್ರಿಕೆಟ್ ಪ್ರಿಯರು ಕ್ರೀಡಾಂಗಣಕ್ಕೆ ಬಂದಿದ್ದರು. ಅರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ (6) ಹಾಗೂ ಅಜಿಂಕ್ಯ ರಹಾನೆ (14) ಬೇಗನೆ ಪೆವಿಲಿಯನ್ ಸೇರಿಕೊಂಡರು. ರಹಾನೆ ಔಟಾದ ನಂತರ ದ್ರಾವಿಡ್ ಕ್ರೀಸ್‌ಗೆ ಬಂದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ತವರೂರ ಹುಡುಗನಿಗೆ ಭರ್ಜರಿ ಸ್ವಾಗತ ಲಭಿಸಿತು. 52 ನಿಮಿಷ ಕ್ರೀಸ್‌ನಲ್ಲಿದ್ದ ದ್ರಾವಿಡ್ 31 ಎಸೆತಗಳಲ್ಲಿ ಐದು ಬೌಂಡರಿ ಸೇರಿದಂತೆ  35 ರನ್ ಗಳಿಸಿದರು. ದ್ರಾವಿಡ್ `ಗರಿಷ್ಠ ಸ್ಕೋರರ್' ಎನಿಸಿದರು.

ಎಂದಿನಂತೆಯೇ ತಮ್ಮ ಸಹಜ ಶೈಲಿಯಲ್ಲಿ ಬ್ಯಾಟ್ ಮಾಡಿದ ದ್ರಾವಿಡ್ ರಕ್ಷಣಾತ್ಮಕವಾಗಿಯೇ ಅಡಿದರು. ಅವಕಾಶ ಸಿಕ್ಕಾಗಲೆಲ್ಲಾ ಲೀಲಾಜಾಲವಾಗಿ ಚೆಂಡನ್ನು ಬೌಂಡರಿಗೆ ಅಟ್ಟಿದರು.

ರಾಹುಲ್ ಆಟಕ್ಕೆ ತಕ್ಕ ಬೆಂಬಲ ನೀಡಿದ್ದ ಇನ್ನೊಬ್ಬ ಕನ್ನಡಿಗ ಸ್ಟುವರ್ಟ್ ಬಿನ್ನಿ ಕೂಡಾ ಚೆಂದನೆಯ ಹೊಡೆತಗಳನ್ನು ಸಿಡಿಸಿದರು. 21 ನಿಮಿಷ ಕ್ರೀಸ್‌ನಲ್ಲಿದ್ದ ಬಿನ್ನಿ ನಾಲ್ಕು ಬೌಂಡರಿ ಹಾಗೂ ಒಂದು  ಸಿಕ್ಸರ್ ಸೇರಿದಂತೆ 33 ರನ್ ಗಳಿಸಿದರು. 15 ರಿಂದ 20 ನಿಮಿಷಗಳ ಕಾಲ ಬ್ಯಾಟಿಂಗ್ ಸೊಬಗು ಸವಿಯಲು ಅವಕಾಶ ಮಾಡಿಕೊಟ್ಟ ಕರ್ನಾಟಕದ ಜೋಡಿ ದ್ರಾವಿಡ್-ಬಿನ್ನಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 27 ಎಸೆತಗಳಲ್ಲಿ 40 ರನ್ ಕಲೆಹಾಕಿತು. ಇದರಿಂದ ರಾಯಲ್ಸ್ ತಂಡಕ್ಕೆ 100ಕ್ಕಿಂತಲೂ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು. ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳಿಗೆ ವಿನಯ್ ಹಾಗೂ ಸಿಂಗ್ ಬೌಲಿಂಗ್ ದಾಳಿಯಿಂದ ಪಾರಾಗಲು ಸಾಧ್ಯವಾಗಲಿಲ್ಲ.

ಸ್ಕೋರು ವಿವರ
ರಾಜಸ್ತಾನ ರಾಯಲ್ಸ್ 19.4 ಓವರ್‌ಗಳಲ್ಲಿ 117

ಶೇನ್ ವಾಟ್ಸನ್ ಸಿ ಕಾರ್ತಿಕ್ ಬಿ ರವಿ ರಾಂಪಾಲ್  06

ಅಜಿಂಕ್ಯ ರಹಾನೆ ಸಿ ದಿಲ್ಶಾನ್ ಬಿ ಜಯದೇವ್ ಉನದ್ಕತ್  14
ರಾಹುಲ್ ದ್ರಾವಿಡ್ ಸಿ ರಾಂಪಾಲ್ ಮುರಳಿ ಕಾರ್ತಿಕ್  35
ಸ್ಟುವರ್ಟ್ ಬಿನ್ನಿ ಸಿ ಅರುಣ್ ಕಾರ್ತಿಕ್ ಬಿ ವಿನಯ್ ಕುಮಾರ್  33
ಬ್ರಾಡ್ ಹಾಡ್ಜ್ ಸಿ ಅರುಣ್ ಕಾರ್ತಿಕ್ ಬಿ  ವಿನಯ್ ಕುಮಾರ್  13
ದಿಶಾಂತ್ ಯಾಗ್ನಿಕ್ ಸಿ ರಾಂಪಾಲ್ ಬಿ ಆರ್.ಪಿ. ಸಿಂಗ್  05
ಜೇಮ್ಸ ಫುಲ್ಕನರ್ ಸಿ ರವಿ ರಾಂಪಾಲ್ ಬಿ ಆರ್.ಪಿ. ಸಿಂಗ್  03
ಅಜಿತ್ ಚಂಡಿಲಾ ಔಟಾಗದೆ  04
ಎಸ್. ಶ್ರೀಶಾಂತ್ ಎಲ್‌ಬಿಡಬ್ಲ್ಯು ಬಿ ವಿನಯ್ ಕುಮಾರ್  00
ಶಾನ್ ಟೈಟ್ ಬಿ ಆರ್.ಪಿ. ಸಿಂಗ್  01
ಸಿದ್ಧಾರ್ಥ್ ತ್ರಿವೇದಿ  ಸಿ ಆರ್.ಪಿ. ಸಿಂಗ್ ಬಿ ರವಿ ರಾಂಪಾಲ್  03
ಇತರೆ:  00
ವಿಕೆಟ್ ಪತನ: 1-10 (ವಾಟ್ಸನ್; 2.2), 2-26 (ರಹಾನೆ; 5.2), 3-66 (ಬಿನ್ನಿ; 9.5), 4-97 (ದ್ರಾವಿಡ್;14.4), 5-105 (ಹಾಡ್ಜ್; 15.2), 6-108 (ಫುಲ್ಕನರ್; 16.3), 7-110 (ಯಾಗ್ನಿಕ್; 16.6), 8-111(ಶ್ರೀಶಾಂತ್; 17.4), 9-112 (ಟೈಟ್; 18.1), 10-117 (ತ್ರಿವೇದಿ; 19.4).
ಬೌಲಿಂಗ್: ರವಿ ರಾಂಪಾಲ್ 3.4-1-19-2, ಆರ್.ಪಿ. ಸಿಂಗ್ 4-0-13-3, ಜಯದೇವ್ ಉನದ್ಕತ್ 4-0-32-1, ವಿನಯ್ ಕುಮಾರ್ 4-0-18-3, ಮುರಳಿ ಕಾರ್ತಿಕ್ 4-0-35-1

ರಾಯಲ್ ಚಾಲೆಂಜರ್ಸ್ : 17.5 ಓವರ್‌ಗಳಲ್ಲಿ 3 ವಿಕೆಟ್‌ಗೆ 123
ತಿಲಕರತ್ನೆ ದಿಲ್ಶಾನ್ ಸಿ ಯಾಗ್ನಿಕ್ ಬಿ ಶೇನ್ ವಾಟ್ಸನ್  25
ಕ್ರಿಸ್ ಗೇಲ್ ಔಟಾಗದೆ  49
ವಿರಾಟ್ ಕೊಹ್ಲಿ ಬಿ ಜೇಮ್ಸ ಫುಲ್ಕನರ್  01
ಎ.ಬಿ. ಡಿವಿಲಿಯರ್ಸ್ ಸಿ ಅಜಿತ್ ಚಂಡಿಲಾ ಬಿ ಶೇನ್ ವಾಟ್ಸನ್  07
ಸೌರಭ್ ತಿವಾರಿ ಔಟಾಗದೆ  25
ಇತರೆ: (ಲೆಗ್ ಬೈ-5, ವೈಡ್-11)  16
ವಿಕೆಟ್ ಪತನ: 1-53 (ದಿಲ್ಶಾನ್; 6.4), 2-57 (ಕೊಹ್ಲಿ; 7.4), 3-64 (ಡಿವಿಲಿಯರ್ಸ್; 8.6)
ಬೌಲಿಂಗ್: ಅಜಿತ್ ಚಾಂಡಿಲ 4-0-21-0, ಎಸ್. ಶ್ರೀಶಾಂತ್ 1-0-9-0, ಶಾನ್ ಟೈಟ್ 3-0-30-0, ಜೇಮ್ಸ ಫುಲ್ಕನರ್ 4-0-21-1, ಶೇನ್ ವಾಟ್ಸನ್ 2-0-11-2, ಸಿದ್ಧಾರ್ಥ್ ತ್ರಿವೇದಿ 3.5-0-26-0.
ಫಲಿತಾಂಶ: ರಾಯಲ್ ಚಾಲೆಂಜರ್ಸ್‌ಗೆ 7 ವಿಕೆಟ್ ಗೆಲುವು
ಪಂದ್ಯ ಶ್ರೇಷ್ಠ: ವಿನಯ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT