ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ : ಪಕ್ಷ ನಿಷ್ಠೆಯ ಕಾಲದಲ್ಲೂ ಗೆದ್ದ ವ್ಯಕ್ತಿ ಸಜ್ಜನಿಕೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಥಮ ಚುನಾವಣೆಯಲ್ಲಿ ಕೊಂಡಜ್ಜಿ ಬಸಪ್ಪಗೆ ಜಯ
Last Updated 18 ಮಾರ್ಚ್ 2014, 9:28 IST
ಅಕ್ಷರ ಗಾತ್ರ

ದಾವಣಗೆರೆ: ಅದು 1977ನೇ ಇಸವಿ. ದಾವಣಗೆರೆ ಲೋಕಸಭಾ ಕ್ಷೇತ್ರ ಅವಿಭಜಿತ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ವಿಭಜನೆಗೊಂಡು ಸ್ವತಂತ್ರ ಅಸ್ತಿತ್ವ ಪಡೆದ ವರ್ಷ. ಇಲ್ಲಿನ ಜನರ ಬಹುದಿನದ ಕನಸು ನನಸಾದ ಸಮಯ. ದಾವಣಗೆರೆ ಚಿತ್ರದುರ್ಗ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿದ್ದರೂ, ಆ ವರ್ಷ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಉದಯವಾಯಿತು.

ಅಂದು ಹೊಸ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹರಿಹರ ತಾಲ್ಲೂಕು ಕೊಂಡಜ್ಜಿ ಬಸಪ್ಪ,  ಭಾರತೀಯ ಲೋಕದಳದಿಂದ ಕುರ್ಕಿಯ ಕೆ.ಜಿ.ಮಹೇಶ್ವರಪ್ಪ ಹಾಗೂ ಅಂದು ಭಾರತೀಯ ಕಮ್ಯುನಿಸ್ಟ್ ಪಕ್ಷದಿಂದ ದಾವಣಗೆರೆ ನಗರದ ವೈದ್ಯ
ಗನಿಸಾಬ್ ಚುನಾವಣಾ ಕಣಕ್ಕೆ ಧುಮುಕಿದ್ದರು.

ಹೊಸ ಕ್ಷೇತ್ರದ ಮೊದಲ ಅಧಿಪತಿಯಾರು ಎಂಬ ಪ್ರಶ್ನೆ ಇತ್ತಾದರೂ, ದಾವಣಗೆರೆ ಭಾಗ ಕಾಂಗ್ರೆಸ್‌ನ ಭದ್ರಕೋಟೆಯಾದ ಕಾರಣ ಬಸಪ್ಪ

ಗೆಲ್ಲುತ್ತಾರೆ ಎನ್ನುವ ನಂಬಿಕೆ ಹೆಚ್ಚಿನ ಜನರಲ್ಲಿ ಇತ್ತು. ಆದರೆ, ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಾದ ಕಾರಣ ಕಾಂಗ್ರೆಸ್‌ ವಿರೋಧಿ ಅಲೆಯಲ್ಲಿ ಲೋಕದಳದ ಮಹೇಶ್ವರಪ್ಪ ಗೆಲುವು ಪಡೆಯಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಚಾರವಾಗಿತ್ತು.
ಅಂದಿನ ಕಾಲಕ್ಕೇ 6 ಲಕ್ಷ ಮತದಾರರಿದ್ದರು. ಬಸಪ್ಪ ಹಾಗೂ ಮಹೇಶ್ವರಪ್ಪ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.

ಮತ ಚಲಾಯಿಸಿದ್ದು 4.25 ಮತದಾರರು. ಇನ್ನೂ 1.75 ಲಕ್ಷ ಮತದಾರರು ಮತ ಚಲಾಯಿಸಿರಲಿಲ್ಲ. ಅಂದೂ ಸಹ ಮತದಾನದ ಬಗ್ಗೆ ಜನರಲ್ಲಿ ಇದ್ದ ನಿರಾಸಕ್ತಿಗೆ ಇದೂ ಒಂದು ಉದಾಹರಣೆ.

ಮಹೇಶ್ವರಪ್ಪ ಗೆಲ್ಲಬಹುದು ಎಂದು, ಬಸಪ್ಪ ಅವರಿಗೇ ಗೆಲುವು ಎಂದು ಹಲವರು ಬಾಜಿಯನ್ನೂ ಕಟ್ಟಿದ್ದರು. ಕೊನೆಗೂ ಬಸಪ್ಪ ಅವರೇ ಗೆಲವು ಸಾಧಿಸಿದರು ಎಂದು ಆ ದಿನದ ಚುನಾವಣೆಯನ್ನು ಮೆಲುಕು ಹಾಕಲುತ್ತಾರೆ ದಾವಣಗೆರೆಯ ಕೆಂಚಪ್ಪ.

ಫಲಿತಾಂಶ ಪ್ರಕಟವಾದಾಗ ಬಸಪ್ಪ ಅವರು 2,44,200 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕೆ.ಜಿ.ಮಹೇಶ್ವರಪ್ಪ ಅವರನ್ನು 92,122 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಮಹೇಶ್ವರಪ್ಪ 1,52,078 ಮತ ಪಡೆದಿದ್ದರು. ಸಿಪಿಐನ
ಗನಿಸಾಬ್‌ 15,965 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.

‘ಬಸಪ್ಪ ಗಾಂಧಿವಾದಿ, ಮಹೇಶ್ವರಪ್ಪ ಲೋಹಿಯಾವಾದಿ. ಗನಿಸಾಬ್‌ ವೈದ್ಯರು. ಮೂವರೂ ಸಜ್ಜನರು. ಬಸಪ್ಪ, ಮಹೇಶ್ವರಪ್ಪ ಹೆಚ್ಚು ಪ್ರಸಿದ್ಧರಾಗಿದ್ದರು. ಗನಿಸಾಬ್‌ ಜನ ಸಾಮಾನ್ಯರಿಗೆ ರಾಜಕೀಯವಾಗಿ ಅಷ್ಟೊಂದು ಪರಿಚಿತರಲ್ಲ. ಅಲ್ಲದೇ, ಕಮ್ಯನಿಸ್ಟ್ ಪಕ್ಷ ನಗರಕ್ಕೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ, ಅವರು ನಿರೀಕ್ಷೆಯಂತೆ ಮತಗಳಿಸಲಿಲ್ಲ. ಬಸಪ್ಪ ಹಾಗೂ ಮಹೇಶ್ವರಪ್ಪ ನಡುವೆ ನೇರ ಸ್ಪರ್ಧೆ ಇತ್ತು. ಅಲ್ಲದೇ, ಇಂದಿರಾ ಏರಿದ ತುರ್ತು ಪರಿಸ್ಥಿತಿಯ ನಂತರ ಚುನಾವಣೆ ನಡೆದ ಕಾರಣ ಕಾಂಗ್ರೆಸ್‌ ವಿರೋಧಿ ಅಲೆಯಲ್ಲಿ ಮಹೇಶ್ವರಪ್ಪ ಗೆಲುವು ಪಡೆಯಬಹುದು ಎಂದು ನಿರೀಕ್ಷಿಸಿದ್ದೆವು. ಅಂದು ಈಗಿನಂತೆ ವ್ಯಕ್ತಿ ಪ್ರತಿಷ್ಠೆ ಇರಲಿಲ್ಲ. ಪಕ್ಷ ನಿಷ್ಠೆ ಇತ್ತು.  ಆದರೆ, ಬಸಪ್ಪ ಅವರ ಸಜ್ಜನಿಕೆಗೆ ಗೆಲುವು ದೊರೆಯಿತು ಎಂದು ಗತ ಘಟನೆಗಳನ್ನು ಮೆಲುಕು ಹಾಕಿದರು' ಅಂದು ನಗರಸಭೆ ಉಪಾಧ್ಯಕ್ಷರಾಗಿದ್ದ, ಸಿಪಿಐ ಮುಖಂಡ ಎಚ್.ಕೆ.ರಾಮಚಂದ್ರಪ್ಪ.

‘ಬಸಪ್ಪ ಎಂದರೆ ಅಂದು ನಮಗೆಲ್ಲ ಆದರ್ಶ. ಅಜಾನುಬಾಹು ದೇಹದ ಅವರು ಸದಾ ಕಚ್ಚೆಪಂಚೆ, ಕಪ್ಪು ಕೋಟು ಧರಿಸುತ್ತಿದ್ದರು. ಎರಡು ಬಾರಿ ಮೈಸೂರು ಸರ್ಕಾರದಲ್ಲಿ ಸಚಿವರಾಗಿದ್ದರೂ, ಹಣ ವಂತರಾಗಿರಲಿಲ್ಲ. ಸರಳ, ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ
ಅವರು ಅಂಬಾಸಡರ್‌ ಕಾರಲ್ಲಿ ಊರಿಗೆ ಬರುತ್ತಿದ್ದರು. ಈಗಿನಂತೆ ಅಂದು ಚುನಾವಣಾ ಅಬ್ಬರ ಇರಲಿಲ್ಲ. ಯಾವುದೇ ಗ್ರಾಮಕ್ಕೆ ಹೋದರೂ, ಆ ಗ್ರಾಮದ ಮುಖಂಡರನ್ನೆಲ್ಲಾ ಒಂದೆಡೆ ಸೇರಿಸಿ, ಅವರೊಂದಿಗೆ ಮಾತನಾಡಿ ಗ್ರಾಮದ ಮತಗಳನ್ನು ತಮಗೆ ಹಾಕಿಸುವಂತೆ ವಿನಂತಿಸಿ ಮುಂದೆ ಸಾಗುತ್ತಿದ್ದರು. ಅವರ ಸರಳತೆ, ಪ್ರಾಮಾಣಿಕತೆ ವಿರೋಧಿಗಳನ್ನೂ ದ್ವೇಷಿಸದ ಅವರ ಗುಣವನ್ನು
ಮೆಚ್ಚಿದ ಜನ ಅವರನ್ನು ಗೆಲ್ಲಿಸಿದರು’ ಎಂದು ಅಂದು 17–18 ವರ್ಷದ ಯುವಕನಾಗಿದ್ದ ಅವರ ಸಂಬಂಧಿಯೂ
ಆದ ಕುವೆಂಪು ವಿವಿ ಸಿಂಡಿಕೇಟ್‌ ಸದಸ್ಯ ಕೊಂಡಜ್ಜಿ ಜಯಪ್ರಕಾಶ್‌ ಅಂದಿನ ಘಟನೆಯನ್ನು  ಮೆಲುಕುಹಾಕಿದರು.

1977ರ ಚುನಾವಣೆಯ ಅಂಕಿ–ಅಂಶ

*ಒಟ್ಟು ಮತದಾರರು: 6,13,519
*ಚಲಾವಣೆಯಾದ ಮತ: 4,25,341
*ಕೊಂಡಜ್ಜಿ ಬಸಪ್ಪ (ಕಾಂಗ್ರೆಸ್‌): 2,44,200
*ಕೆ.ಜಿ.ಮಹೇಶ್ವರಪ್ಪ (ಬಿಎಲ್‌ಡಿ): 1,52,078
*ಗನಿಸಾಬ್‌ (ಸಿಪಿಐ): 15,965

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT