ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಬಂದ್‌; ಮುಖಂಡರ ಬಂಧನ

ರಸ್ತೆತಡೆ, ಬೈಕ್‌ ರ್‍ಯಾಲಿ, ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ
Last Updated 24 ಡಿಸೆಂಬರ್ 2013, 5:41 IST
ಅಕ್ಷರ ಗಾತ್ರ

ದಾವಣಗೆರೆ: ಮೆಕ್ಕೆಜೋಳ, ಭತ್ತ ಹಾಗೂ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ, ಸೋಮವಾರ ಕರೆ ನೀಡಿದ್ದ ‘ದಾವಣಗೆರೆ ಬಂದ್‌’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್‌ ವೇಳೆ ರಸ್ತೆತಡೆ ನಡೆಸಲು ಮುಂದಾಗಿದ್ದ ಮಾಜಿ ಸಚಿವ ರೇಣುಕಾಚಾರ್ಯ, ಬಿ.ಎಂ.ಸತೀಶ್‌, ಬಿ.ಎಸ್‌.ಜಗದೀಶ್‌ ಸೇರಿದಂತೆ 100ಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿದ ಪೊಲೀಸರು, ಬಳಿಕ ಬಿಡುಗಡೆ ಮಾಡಿದರು.

ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ಪಿ.ಬಿ.ರಸ್ತೆ, ಜಯದೇವ ವೃತ್ತ, ಹದಡಿ ರಸ್ತೆ, ರಾಮ್‌ ಅಂಡ್‌ ಕೋ ವೃತ್ತ, ಅಕ್ಕಮಹಾದೇವಿ ರಸ್ತೆ, ಚೌಕಿಪೇಟೆಯ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿದ್ದರು. ಮಧ್ಯಾಹ್ನದ ಬಳಿಕ ವ್ಯಾಪಾರ ಯಥಾಸ್ಥಿತಿಗೆ ಮರಳಿತು. ನಗರದ ವಿವಿಧ ಪ್ರದೇಶಗಳಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬೈಕ್‌ ರ್‍ಯಾಲಿ ನಡೆಸಲಾಯಿತು.

ಚೌಕಿಪೇಟೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖಾ ಕಚೇರಿಗೆ ತೆರಳಿದ ಪ್ರತಿಭಟನಾನಿರತರು ಬ್ಯಾಂಕ್‌ ಬಂದ್‌ ಮಾಡಿಸಲು ಪ್ರಯತ್ನಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಆಗ ಮಾತಿನ ಚಕಮಕಿಯೂ ನಡೆಯಿತು.

ಬಂದ್‌ನಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲಾ– ಕಾಲೇಜುಗಳು ಯಥಾಸ್ಥಿತಿ ಕಾರ್ಯ ನಿರ್ವಹಿಸಿದವು. ಕೆಲವು ಖಾಸಗಿ ಶಾಲಾ– ಕಾಲೇಜುಗಳಿಗೆ ಮಾತ್ರ ಮುಂಜಾಗೃತಾ ಕ್ರಮವಾಗಿ ರಜೆ ನೀಡಲಾಗಿತ್ತು. ಹೂವಿನ ವ್ಯಾಪಾರಿಗಳು ಬೆಳಿಗ್ಗೆ ತಮ್ಮ ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಿದ್ದರು. ಚಿತ್ರಮಂದಿರಗಳಲ್ಲಿ ಬೆಳಿಗ್ಗೆಯ ಚಿತ್ರ ಪ್ರದರ್ಶನ ರದ್ದುಪಡಿಸಲಾಗಿತ್ತು.

ಖಾಸಗಿ ನಗರ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್‌ಗಳು ಸಂಚಾರವಿತ್ತು. ಗ್ರಾಮೀಣ ಸಾರಿಗೆಗೆ ಯಾವುದೇ ತೊಂದರೆ ಆಗಲಿಲ್ಲ. ಹೊಸ ಬಸ್‌ನಿಲ್ದಾಣದ ಆವರಣದಲ್ಲಿ ಬೆಳಿಗ್ಗೆ ಬಿಕೋ ಎನ್ನುವ ವಾತಾವರಣವಿತ್ತು. ಮಧ್ಯಾಹ್ನ ಬಳಿಕ ಪ್ರಯಾಣಿಕರು ಬಸ್‌ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ‘ಸರ್ಕಾರಕ್ಕೆ ಕಣ್ಣು, ಕಿವಿ, ಬಾಯಿ ಇಲ್ಲ. ರೈತರ ಬೇಡಿಕೆ ಈಡೇರಿಸುವಂತೆ ಅಹೋರಾತ್ರಿ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಸೌಜನ್ಯಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ಬೇಡಿಕೆ ಬಗ್ಗೆ ಮಾತನಾಡುತ್ತಿಲ್ಲ. ಅಧಿಕಾರ ಶಾಶ್ವತವಲ್ಲ. ಹೋರಾಟ ಅಂತ್ಯಗೊಳಿಸುತ್ತಾರೆ ಎಂದು ನಂಬಿದ್ದರೆ ಅದು ಶುದ್ಧಸುಳ್ಳು. ಹೊನ್ನಾಳಿ ಜನರು ನನ್ನ ಹೋರಾಟಕ್ಕೆ ರೊಟ್ಟಿ, ಬುತ್ತಿ ತಂದು ಸಹಕಾರ ನೀಡುತ್ತಿದ್ದಾರೆ. ಅವರ ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ’ ಎಂದು ಸ್ಮರಿಸಿದರು.

ಅಡಿಕೆ ಬೆಳೆಗಾರರ ರಕ್ಷಣೆ ಮಾಡಬೇಕಾದ ಸರ್ಕಾರ ಅವರ ಕತ್ತು ಹಿಸುಕುತ್ತಿದೆ. ಅಡಿಕೆ ನಮ್ಮ ಪರಂಪರೆಯಿಂದ ಬಂದ ಬೆಳೆ. ಅದನ್ನೇ ನಿಷೇಧ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ‘ನಾನು ಸಾಕಷ್ಟು ಸರ್ಕಾರ ನೋಡಿದ್ದೇನೆ. ಎಲ್ಲ ಸರ್ಕಾರಗಳು ರೈತರ ಬೇಡಿಕೆ ಆಲಿಸುವ ಕೆಲಸ ಮಾಡುತ್ತಿದ್ದವು. ಕಾಂಗ್ರೆಸ್‌ ಸರ್ಕಾರಕ್ಕೆ ಕಿವಿಯೇ ಇಲ್ಲವಾಗಿದೆ. ಕನಿಷ್ಠ ಸೌಜನ್ಯವೂ ಇಲ್ಲದಾಗಿದೆ. ಇದು ಸರ್ವಾಧಿಕಾರಿ ಧೋರಣೆ. ಈ ಧೋರಣೆ ಬಹಳಷ್ಟು ದಿವಸ ನಡೆಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ದಾವಣಗೆರೆಯಲ್ಲಿ ಹುಟ್ಟಿದ ಈ ರೈತ ಚಳವಳಿ ರಾಜ್ಯದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಲಿದೆ. ಕಾಂಗ್ರೆಸ್‌ಗೆ ಜನಾದೇಶ ನೀಡಿದರೆ, ಜನವಿರೋಧಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಎಂ.ಸತೀಶ್‌ ಹಾಗೂ ಬಿ.ಎಸ್‌.ಜಗದೀಶ್‌ ರೈತ ವಿರೋಧಿ ನೀತಿ ಖಂಡಿಸಿದರು. ಹೊನ್ನಾಳಿ ತಾಲ್ಲೂಕಿನಿಂದ ನೂರಾರು ಕಾರ್ಯಕರ್ತರು ಆಗಮಿಸಿದ್ದರು.
ಟಿಪ್ಪು ಸುಲ್ತಾನ್‌, ಲಿಂಗಣ್ಣ, ವೀರಭದ್ರಸ್ವಾಮಿ, ಸುರೇಂದ್ರಪ್ಪ ಮಾಸ್ಟರ್‌, ಪಾಟೀಲ್‌, ವಿಜಯಕುಮಾರ್‌, ಕೆ.ಎಸ್‌.ವೆಂಕಟೇಶ್‌, ಸಿ.ವೀರೇಶ್‌, ಪಿ.ಮಂಜುನಾಥ್‌, ಟಿ.ಮಂಜುನಾಥ್‌, ಪರಶುರಾಮ್‌, ಚೌಡಪ್ಪ ಹಾಜರಿದ್ದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರವಿನಾರಾಯಣ್‌ ನೇತೃತ್ವದಲ್ಲಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT