ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಸಪ್ಪ ವಿರುದ್ಧ ಸೇಡು ತೀರಿಸಿಕೊಂಡಿತ್ತು ಕಾಂಗ್ರೆಸ್!

1980ರ ಚುನಾವಣೆಯಲ್ಲಿ ನಲ್ಕುದುರೆಯ ಟಿ.ವಿ.ಚಂದ್ರಶೇಖರಪ್ಪ ಕೊರಳಿಗೆ ವಿಜಯ ಮಾಲೆ
Last Updated 18 ಮಾರ್ಚ್ 2014, 9:28 IST
ಅಕ್ಷರ ಗಾತ್ರ

ದಾವಣಗೆರೆ: ಅದೊಂದು ಕಾಲವಿತ್ತು. ಅಭ್ಯರ್ಥಿ ಯಾರೇ ಇರಲಿ ಕ್ಷೇತ್ರ ಯಾವುದೇ ಇರಲಿ ಕಾಂಗ್ರೆಸ್‌ ಟಿಕೆಟ್‌ ಸಿಕ್ಕರೆ ಸಾಕು ಆ ಅಭ್ಯರ್ಥಿ ಸಂಸದನಾಗಿ ಆಯ್ಕೆಯಾದ ಎಂದೇ ಅರ್ಥ.

ಅಂತಹ ಅದೃಷ್ಟ ಪಕ್ಷದ ನಿಷ್ಠಾವಂತರಿಗೆ ಸಿಗುತ್ತಿತ್ತು. ಅಂತಹ ಅದೃಷ್ಟವಂತರಲ್ಲಿ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಹೋಬಳಿ ನಲ್ಕುದುರೆ ಗ್ರಾಮದ ಟಿ.ವಿ.ಚಂದ್ರಶೇಖರಪ್ಪ ಕೂಡ ಒಬ್ಬರು.

ವ್ಯಕ್ತಿನಿಷ್ಠೆಗಿಂತ ಅಂದು ಕಾಂಗ್ರೆಸ್‌ ನಿಷ್ಠೆಗೆ ಮನ್ನಣೆ ಇತ್ತು. ಅದುವರೆಗೂ ಕಾಂಗ್ರೆಸ್‌ ಪ್ರಮುಖರಾಗಿ, ಶಾಸಕರಾಗಿ, ಸಚಿವರೂ ಆಗಿ ಅಧಿಕಾರ ಅನುಭವಿಸಿದ್ದ ಬಸಪ್ಪ ಬದಲಾದ ಕಾಲಘಟ್ಟದಲ್ಲಿ ಕಾಂಗ್ರೆಸ್‌ ತೊರೆದು ಜನತಾ ಪಕ್ಷ ಸೇರಿದರು. ಕಾಂಗ್ರೆಸ್‌ ಟಿಕೆಟ್‌ ಪಡೆದು 1977ರಲ್ಲಿ ಸಂಸದರಾಗಿ ಆಯ್ಕೆಯಾದ ನಂತರ ಪಕ್ಷಾಂತರ ಮಾಡಿ ಕೇಂದ್ರದ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಆರೋಗ್ಯ ಖಾತೆ ಉಪ ಸಚಿವರಾದರು.

ಬಸಪ್ಪ ಅವರ ಇಂತಹ ಪಕ್ಷ ದ್ರೋಹ ಕಾಂಗ್ರೆಸ್‌ ನಾಯಕರನ್ನು ಕೆರಳಿಸಿತ್ತು. ಬಸಪ್ಪ ಅವರ ಸರಳ, ಸಜ್ಜನಿಕೆಯ ಮಂದೆ ಪಕ್ಷವೇ ದೊಡ್ಡದು ಎಂಬುದನ್ನು ನಿರೂಪಿಸಬೇಕಿತ್ತು. ಹಾಗಾಗಿ, 1980ರ ಚುನಾವಣೆಯಲ್ಲಿ ಟಿ.ವಿ.ಚಂದ್ರಶೇಖರಪ್ಪ ಎಂಬ ಅಭ್ಯರ್ಥಿಗೆ ಟಿಕೆಟ್‌ ನೀಡಿ ಗೆಲ್ಲಿಸುವ ಮೂಲಕ ಬಸಪ್ಪ ಅವರ ವಿರುದ್ಧ ಕಾಂಗ್ರೆಸ್‌ ಸೇಡು ತೀರಿಸಿಕೊಂಡಿತು.

1971ರಲ್ಲಿ ನೆರೆಯ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದ ಚಂದ್ರಶೇಖರಪ್ಪ ಅಲ್ಲಿ ಸುಲಭವಾಗಿ ಗೆಲುವು ದಾಖಲಿಸಿದ್ದರು. ಆದರೆ, 1977ರ ಚುನಾವಣೆಯಲ್ಲಿ ಆ ಕ್ಷೇತ್ರದಿಂದ  ಎ.ಆರ್‌. ಬದರಿನಾರಾಯಣ್‌ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿದರು.
ಮೂರು ವರ್ಷ ಅಧಿಕಾರ ಇಲ್ಲದೇ ಕಳೆದ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ 1980ರ ಲೋಕಸಭಾ ಮಧ್ಯಂತರ ಚುನಾವಣೆಗೆ ಬಸಪ್ಪ ಅವರ ವಿರುದ್ಧ ದಾವಣಗೆರೆ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು.

1980ರ ಚುನಾವಣೆ ಎಂದರೆ ಅದು ಬದಲಾದ ರಾಜಕೀಯ ಪರಿಸ್ಥಿತಿಯ ಕಾಲಘಟ್ಟ. ತುರ್ತುಪರಿಸ್ಥಿತಿಯ ಪರಿಣಾಮ 1977ರಲ್ಲಿ ಕೇಂದ್ರದಲ್ಲಿ ಮೊದಲ ಬಾರಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್‌. ನೀರಿನಿಂದ ಹೊರಬಂದ ಮೀನಿನಂತಾಗಿತ್ತು. ಆದರೆ, ಅನಿರೀಕ್ಷಿತವಾಗಿ ದೊರೆತ ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ವಿಫಲವಾಗಿದ್ದವು. ಅದರ ಪರಿಣಾಮವೇ 1980ರ ಮಧ್ಯಂತರ ಚುನಾವಣೆ.

ಇತ್ತ ರಾಜ್ಯದಲ್ಲೂ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಕಾಂಗ್ರೆಸ್‌ ಅಧಿನಾಯಕಿ ಇಂದಿರಾ ಗಾಂಧಿ ವಿರುದ್ಧ ತಿರುಗಿ ಬಿದ್ದಿದ್ದರು. ಕಾಂಗ್ರೆಸ್‌ ಇಬ್ಭಾಗವಾಗಿತ್ತು.

ಕೊಂಡಜ್ಜಿ ಬಸಪ್ಪ 1980ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧೆಗೆ ಇಳಿದರು. ಅರಸು ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಪ್ರಥಮ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ್ದರು.

ಇತ್ತ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದ ಕಾಂಗ್ರೆಸ್‌ ಹೈಕಮಾಂಡ್‌ ಟಿ.ವಿ.ಚಂದ್ರಶೇಖರಪ್ಪ ಅವರನ್ನು ಕೊಂಡಜ್ಜಿ ಬಸಪ್ಪ ಅವರ ವಿರುದ್ಧ ಕಣಕ್ಕೆ ಇಳಿಸಿತು.

ಅಂದು 7.37 ಲಕ್ಷ ಮತದಾರರು ಇದ್ದರು. ಮತ ಚಲಾಯಿಸಿದ್ದು 4.43 ಲಕ್ಷ ಮತದಾರರು. ಸರಿಸುಮಾರು ಮೂರು ಲಕ್ಷ ಮತದಾರರು ಅಂದೂ ಮತದಾನದಿಂದ ದೂರ ಉಳಿದಿದ್ದರು.

ಹೊಸ ಮುಖ ಚಂದ್ರಶೇಖರಪ್ಪ ಅವರಿಗೆ ಕೊಂಡಜ್ಜಿ ಬಸಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ತೀವ್ರ ಸ್ಪರ್ಧೆ ಒಡ್ಡಿದ್ದರು. ಕೊಂಡಜ್ಜಿ ಬಸಪ್ಪ ಗೆಲುವು ನಿಶ್ಚಿತ ಎಂದೇ ಕ್ಷೇತ್ರದ ಜನ ಭಾವಿಸಿದ್ದರು. ಆದರೆ, ವಿಜಯಮಾಲೆ ಒಲಿದಿದ್ದು ಮಾತ್ರ ಕಾಂಗ್ರೆಸ್‌ಗೆ. 

ಚಂದ್ರಶೇಖರಪ್ಪ ಗೆಲ್ಲುವ ಮೂಲಕ ದಾವಣಗೆರೆ ಕಾಂಗ್ರೆಸ್‌ ಭದ್ರಕೋಟೆ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದರು. ಕೊಂಡಜ್ಜಿ ಬಸಪ್ಪ ಹಾಗೂ ಶಾಮನೂರು ಒಂದು ಲಕ್ಷ ಮತ ಗಳಿಸಲೂ ಸಾಧ್ಯವಾಗಲಿಲ್ಲ.

2,38,506 ಮತ ಪಡೆದ ಚಂದ್ರಶೇಖರಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಕೊಂಡಜ್ಜಿ ಬಸಪ್ಪ  ಅವರನ್ನು 1,40,996 ಮತಗಳ ಭಾರಿ ಅಂತರದಿಂದ ಬಗ್ಗುಬಡಿದಿದ್ದರು. ಬಸಪ್ಪ 97,510 ಮತ ಪಡೆದರೆ, ಶಾಮನೂರು ಶಿವಶಂಕರಪ್ಪ ಕೇವಲ 86,167 ಮತಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಇನ್ನು ಪಕ್ಷೇತರರಾಗಿ ಕಣಕ್ಕೆ ಇಳಿದ್ದಿದ್ದ ಬೇರ್‍ಯಾನಾಯ್ಕ (2,816 ಮತ), ಅಮೀರ್‌ (2,197 ಮತ), ವೈ.ಎಂ.ಪರಮೇಶ್ವರಯ್ಯ (1,949 ಮತ) ಕಡಿಮೆ ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.

‘ಕೊಂಡಜ್ಜಿ ಬಸಪ್ಪ ಸಜ್ಜನ ವ್ಯಕ್ತಿ. ಆದರೆ, ಪಕ್ಷಾಂತರ ಮಾಡಿದ ಪರಿಣಾಮ ಅವರು 80ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದರು. ತುರ್ತು ಪರಿಸ್ಥಿತಿಯ ನಂತರ ಆದ ಬದಲಾವಣೆಗಳು ಇಂದಿರಾಗಾಂಧಿ ಅವರ ಜನಪ್ರಿಯತೆಯನ್ನು ದ್ವಿಗುಣಗೊಳಿಸಿತ್ತು. ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರ್ಕಾರ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಬೇರೂರಿತ್ತು. ಹಾಗಾಗಿ, ಜನರು ಅಭ್ಯರ್ಥಿ ಯಾರು ಎನ್ನದೇ ಕಾಂಗ್ರೆಸ್‌ಗೆ ಪ್ರಚಂಡ ಬಹುಮತ ನೀಡಿದರು. ಸರಳ ವ್ಯಕ್ತಿ ಚಂದ್ರಶೇಖರಪ್ಪ ಇಂದಿರಾ ಅಲೆಯಲ್ಲಿ ಗೆಲುವಿನ ದಡ ಸೇರಿದರು’ ಎಂದು ಘಟನೆಗಳನ್ನು ಬಿಡಿಸಿಟ್ಟರು ಅಂದು ವಿದ್ಯಾರ್ಥಿ ಕಾಂಗ್ರೆಸ್‌ ನಗರ ಘಟಕದ ಕಾರ್ಯದರ್ಶಿಯಾಗಿದ್ದ ನಗರಸಭೆ ಮಾಜಿ ಅಧ್ಯಕ್ಷರೂ, ಜಿಲ್ಲಾ ಕಾಂಗ್ರೆಸ್ ವಕ್ತರಾರೂ ಆದ ಡಿ.ಬಸವರಾಜ್‌.

4 ಬಾರಿ ಗೆದ್ದರೂ ಅಹಂ ಇರಲಿಲ್ಲ
ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದ ಚಂದ್ರಶೇಖರಪ್ಪ 1971ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ರಾಜಕಾರಣ ಪ್ರವೇಶಿಸಿದರು. ನಂತರ 1980(ದಾವಣಗೆರೆ), 84 (ಶಿವಮೊಗ್ಗ) ಹಾಗೂ 89ರಲ್ಲೂ (ಶಿವಮೊಗ್ಗ) ಸಂಸದರಾಗಿದ್ದರು.

ಸುದೀರ್ಘ ಅವಧಿ ಸಂಸದರಾಗಿದ್ದರೂ, ಬೆಂಗಳೂರಿನಲ್ಲಿ ಒಂದು ಮನೆ ಹೊರತುಪಡಿಸಿ ಒಂದೇ ಒಂದು ಆಸ್ತಿ ಮಾಡಿಲ್ಲ. ಅಷ್ಟೊಂದು ಸರಳ, ಪ್ರಾಮಾಣಿಕ ವ್ಯಕ್ತಿ ಚಂದ್ರಶೇಖರಪ್ಪ. ಅವರ ಕುಟಂಬ ಈಗಾಲೂ ನಲ್ಕುದುರೆಯಲ್ಲೇ ಇದೆ.
–ಪ್ರಕಾಶ್‌, ನಲ್ಕುದುರೆ ಗ್ರಾಮಸ್ಥ

1980ರ ಚುನಾವಣೆಯ ಅಂಕಿ–ಅಂಶ
ಒಟ್ಟು ಮತದಾರರು:  7,37,332
ಚಲಾವಣೆಯಾದ ಮತ:  4,43,514
ಚಂದ್ರಶೇಖರಪ್ಪ (ಕಾಂಗ್ರೆಸ್‌ ಐ): 2,38,506
ಕೊಂಡಜ್ಜಿ ಬಸಪ್ಪ (ಜೆಎನ್‌ಪಿ):    97,510
ಶಿವಶಂಕರಪ್ಪ (ಕಾಂಗ್ರೆಸ್‌–ಯು):   86,167
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT