ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸೋಹ ನೌಕರರ ಸಂಪು

Last Updated 20 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅಕ್ಷರದಾಸೋಹ ನೌಕರರನ್ನು ವಜಾಗೊಳಿಸುವುದನ್ನು ನಿಲ್ಲಿಸಬೇಕು, ಆಶಾ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಅಕ್ಷರದಾಸೋಹ ನೌಕರರ ಸಂಘ ಮತ್ತು ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಪ್ರವಾಸಿಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸದಸ್ಯೆಯರು, ಹಲವಾರು ವರ್ಷಗಳಿಂದ ಇರುವ ನಮ್ಮ ಬೇಡಿಕೆಗಳನ್ನು ಈಡೇರಿಸಲೇಬೇಕು. ನ್ಯಾಯಯುತವಾದ ಬೇಡಿಕೆ ಜಾರಿಗೆ ತರಲೇಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಸಿಐಟಿಯು ಅಕ್ಷರದಾಸೋಹ ನೌಕರರ ಸಂಘದ ಉಪಾಧ್ಯಕ್ಷೆ ಮಂಗಳಾ ಮಾತನಾಡಿ, ಶಿಕ್ಷಣ ವಿರೋಧಿ ಪ್ರೊ.ಆರ್.ಗೋವಿಂದ ಅವರ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದು. ಸೂಕ್ತ ಕಾರಣ ನೀಡದೇ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಅಕ್ಷರದಾಸೋಹ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ ಎಂದರು.

ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಮಾತನಾಡಿ, ಹಾಜರಾತಿ ಕೊರತೆ ಮತ್ತು ಬೇರೆ ನೆಪಗಳನ್ನು ಒಡ್ಡಿ ಅಕ್ಷರದಾಸೋಹ ನೌಕರರನ್ನು ವಜಾರಗೊಳಿಸುವುದು ನಿಲ್ಲಿಸಬೇಕು. ನೌಕರರನ್ನು ಕಾಯಂಗೊಳಿಸಿ, ತಿಂಗಳ ಗೌರವಧನವನ್ನು ಹೆಚ್ಚಳ ಮಾಡಬೇಕು. ಕನಿಷ್ಠ ವೇತನ 10 ಸಾವಿರ ರೂಪಾಯಿ ನೀಡುವ ಜೊತೆಗೆ ನಿವೃತ್ತಿ ವೇತನ ಸೌಲಭ್ಯ ಕಲ್ಪಿಸಬೇಕು. ಹೆರಿಗೆ ಸಂದರ್ಭದಲ್ಲಿ ವೇತನಸಹಿತ ಹೆರಿಗೆ ರಜೆ ನೀಡಬೇಕು ಮತ್ತು ಸೇವಾ ನಿಯಮಾವಳಿ ಜಾರಿ ತರಬೇಕು ಎಂದರು.

ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶೋಭಾ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯನ್ನು ರಾಜ್ಯದ ಎಲ್ಲ ನಗರ ಮತ್ತು ಗ್ರಾಮಗಳಿಗೂ ವಿಸ್ತರಿಸಬೇಕು, ಆಶಾ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು, ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು, ಪ್ರೋತ್ಸಾಹಧನವನ್ನು ಪ್ರತಿ ತಿಂಗಳು ಬಿಡುಗಡೆ ಮಾಡಬೇಕು, ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದರು. ವಿವಿಧ ಸಂಘಟನೆ ಮುಖಂಡರಾದ ಮಂಜುಳಾ, ಭಾರತಿ, ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಸಿಐಟಿಯು ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಂಸತ್ ಎದುರು ಧರಣಿ
ಗೌರಿಬಿದನೂರು: ಕನಿಷ್ಠ 10 ಸಾವಿರ ವೇತನ, ಕೆಲಸ ಕಾಯಮಾತಿ, ಸಾಮಾಜಿಕ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ, ಅಕ್ಷರ ದಾಸೋಹ ನೌಕರರು, ಸಿಐಟಿಯು ತಾಲ್ಲೂಕು ಸಮಿತಿ ಸದಸ್ಯರು ಶುಕ್ರವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ  ತಾಲ್ಲೂಕು ಪಂಚಾಯಿತಿ ಆವರಣದಿಂದ ಹೊರಟ ಕಾರ್ಯಕರ್ತರು ನಾಗಯ್ಯರೆಡ್ಡಿ, ಮಹಾತ್ಮ ಗಾಂಧಿ  ವೃತ್ತಗಳ ಮೂಲಕ  ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಖಾಸಗಿ  ಸಂಘ- ಸಂಸ್ಥೆ, ವ್ಯಕ್ತಿಗಳಿಗೆ ಅಂಗನವಾಡಿಗಳನ್ನು ನೀಡಬಾರದು ಎಂದು ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ನಾರಾಯಣಮ್ಮ, ಅಸಂಘಟಿತ ನೌಕರರ ಬೇಡಿಕೆಗಳ ಈಡೇರಿಕೆಗೆ ನವೆಂಬರ್ 26, 27ರಂದು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಲಿದ್ದು,  ಇದರ ಪೂರ್ವಭಾವಿಯಾಗಿ ಇಂದು ಎಲ್ಲಾ ತಾಲ್ಲೂಕು ಕಚೇರಿಗಳ ಎದುರು ಧರಣಿ ನಡೆಸುತ್ತಿದ್ದೇವೆ ಎಂದರು.

ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ರವಿಚಂದ್ರರೆಡ್ಡಿ, ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ, ಅಂಗನವಾಡಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರಾಜಮ್ಮ, ತಾಲ್ಲೂಕು ಅಧ್ಯಕ್ಷೆ ನರಸಮ್ಮ, ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಅಧ್ಯಕ್ಷೆ ಸರಸ್ವತಮ್ಮ, ಕಾರ್ಯದರ್ಶಿ ಮಂಜುಳಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಸ್ತೆಯಲ್ಲಿ ಮೆರವಣಿಗೆ
ಶಿಡ್ಲಘಟ್ಟ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿ.ಐ.ಟಿ.ಯು ಸಂಘಟನೆ ಪ್ರತಿಭಟನೆ ನೇತೃತ್ವ ವಹಿಸಿತ್ತು. ಕೆ.ಎಂ.ವೆಂಕಟೇಶ್, ದಲಿತ ಹಕ್ಕುಗಳ ಉಪಸಮಿತಿ ಜಿಲ್ಲಾ ಸಹಕಾರ್ಯದರ್ಶಿ ಮುನೀಂದ್ರ, ಸಿ.ಐ.ಟಿ.ಯು ಸಂಘಟನೆ ಲಕ್ಷ್ಮೀದೇವಮ್ಮ, ಸುದರ್ಶನ್, ಅಶ್ವತ್ಥಮ್ಮ, ಮಂಜುಳಮ್ಮ, ಭಾಗ್ಯಮ್ಮ, ಪಾಪಣ್ಣ, ಕೆ.ಆರ್.ನರಸಿಂಹಪ್ಪ, ರವಣಮ್ಮ, ಕೆ.ನಂದಿನಿ, ನಯನಮ್ಮ, ಚಂದ್ರಶೇಖರ್ ಇದ್ದರು.

ಕಚೇರಿ ಎದುರು ಧರಣಿ
ಬಾಗೇಪಲ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ಅಂಗನವಾಡಿ, ಆಶಾ, ಅಕ್ಷರದಾಸೋಹದ ನೌಕರರು ಹಾಗೂ ಸಿಬ್ಬಂದಿ ಶುಕ್ರವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಕ್ಷರದಾಸೋಹ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಜಿ.ಮುಸ್ತಾಫ ಮಾತನಾಡಿದರು. ನಂತರ ಶಿರಸ್ತೇದಾರ್ ನಾರಾಯಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ರತ್ನಮ್ಮ, ಖಜಾಂಚಿ ರಾಧಮ್ಮ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸಿಐಟಿಯು ಮುಖಂಡ ವೆಂಕಟೇಶ್‌ಬಾಬು, ಅಕ್ಷರದಾಸೋಹ ಸಂಘದ ಅಧ್ಯಕ್ಷೆ ಮುನಿಗೋವಿಂದಮ್ಮ, ಕಾರ್ಯದರ್ಶಿ ಸುಧಮ್ಮ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವಿ.ರಾಧಾ, ಕಾರ್ಯದರ್ಶಿ ವಿ.ಲಲಿತಾ, ಖಜಾಂಚಿ ಸುಬ್ಬಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT