ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಟ್ಟ ಆಟಗಾರ ರೋಹಿತ್

Last Updated 9 ಮೇ 2012, 6:10 IST
ಅಕ್ಷರ ಗಾತ್ರ

ಕಲ್ಪತರು ನಾಡು ತುಮಕೂರು ಕ್ರೀಡಾಕ್ಷೇತ್ರಕ್ಕೆ ರಾಷ್ಟ್ರ ಮಟ್ಟದ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ. ಅದರಲ್ಲೂ ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಪಟುಗಳ ಸಂಖ್ಯೆ ಹೆಚ್ಚು. ಈ ಸಾಲಿಗೆ ಸೇರಲು ಸಿದ್ದಗಂಗಾ ಕಾಲೇಜು ದ್ವಿತೀಯ ಬಿಕಾಂ ವಿದ್ಯಾರ್ಥಿ ಟಿ.ಎಸ್.ರೋಹಿತ್ ಸ್ಪರ್ಧೆಯಲ್ಲಿದ್ದಾರೆ.

ಬಾಲ್ ಬ್ಯಾಡ್ಮಿಂಟನ್ ಆಟವನ್ನು ನಾಲ್ಕನೇ ತರಗತಿ ಯಲ್ಲಿದ್ದಾಗಲೇ ಆಸಕ್ತಿ ವಹಿಸಿ ಕಲಿಯಲು ಆರಂಭಿಸಿದ ಚತುರ. ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿದ ಅನುಭವಿಗಳ ಎದುರು ಲೀಲಾಜಾಲವಾಗಿ ಆಡುವ ಮೂಲಕ ಗಮನಾರ್ಹ ಪೈಪೋಟಿ ನೀಡಿರುವಾತ.

ಪೋಷಕರು ಸೂಕ್ತ ಪ್ರೋತ್ಸಾಹ ನೀಡಿದರೆ, ಸಾಧನೆ ಮಕ್ಕಳಿಗೆ ಸವಾಲು ಆಗುವುದಿಲ್ಲ ಎಂಬುದಕ್ಕೆ ಈತನೇ ನೈಜ ನಿದರ್ಶನ. ಬಾಲ್ಯದಿಂದಲೇ ಆಟದಲ್ಲಿ ತೊಡಗಿಸಿಕೊಂಡ ಈತ ಬ್ಯಾಡ್ಮಿಂಟನ್ ಆಟವನ್ನು ಕರಗತ ಮಾಡಿಕೊಂಡಿದ್ದಾನೆ. ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ಹಂತದಲ್ಲಿ ತಾಲ್ಲೂಕು-ಜಿಲ್ಲಾ, ರಾಜ್ಯ ಮಟ್ಟದ ದಸರಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾನೆ. ಇನ್ನೂ ಹೆಚ್ಚಿನ ತರಬೇತಿ ಪಡೆದು ಉತ್ತಮ ಪ್ರದರ್ಶನ ನೀಡುತ್ತೇನೆ ಎನ್ನುವ ಉತ್ಸಾಹ ಈತನದ್ದು.

ಈತನ ಕ್ರೀಡಾಸಕ್ತಿ ಗಮನಿಸಿದ ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಪಿಯುಸಿ ವ್ಯಾಸಂಗಕ್ಕೆ ಅವಕಾಶ ನೀಡಿತು. ಈ ಅವಕಾಶ ಬಳಸಿಕೊಂಡ ರೋಹಿತ್ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮಟ್ಟದ ಪಂದ್ಯಾವಳಿ ಹಾಗೂ ದಸರಾ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ, ಪ್ರಬುದ್ಧತೆ ಕಂಡುಕೊಂಡರು.

2008ರಲ್ಲಿ ಚಂಡೀಗಡದಲ್ಲಿ ಭಾರತೀಯ ಬಾಲ್ ಬ್ಯಾಡ್ಮಿಂಟನ್ ಒಕ್ಕೂಟ ಆಯೋಜಿಸಿದ್ದ ರಾಷ್ಟ್ರಮಟ್ಟದ 54ನೇ ಜೂನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತಿ ರೋಹಿತ್‌ನದ್ದು. ತುಮಕೂರು ವಿಶ್ವ ವಿದ್ಯಾನಿಲಯ ಬಾಲ್‌ಬ್ಯಾಡ್ಮಿಂಟನ್ ತಂಡದ ನಾಯಕನಾಗಿ ಮಂಗಳೂರಿನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟ ದಲ್ಲಿ ಭಾಗವಹಿಸಿದ ಹೆಗ್ಗಳಿಕೆ, ಚೆನ್ನೈ ಎಸ್‌ಆರ್‌ಎಂ ವಿಶ್ವವಿದ್ಯಾನಿಲಯ ದಲ್ಲಿ ನಡೆದ ಸೌತ್‌ಜೋನ್ ಪಂದ್ಯಾವಳಿ ಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕೀರ್ತಿ ಈತನದ್ದು.

ಸೋಮೇಶ್ವರ ಮತ್ತು ಡಿಲೆಕ್ಸ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್‌ಗಳು ರೋಹಿತ್‌ನ ಬಾಲ್‌ಬ್ಯಾಡ್ಮಿಂಟನ್ ಆಟದ ಕಲಿಕೆಗೆ ಮತ್ತು ಸಾಧನೆಗೆ ಬೆನ್ನಲುಬಿನಂತೆ ಸಹಕರಿಸುತ್ತಿರುವುದು ಹೆಮ್ಮೆಯ ವಿಷಯ ಎನ್ನುತ್ತಾರೆ ತಂದೆ ತಿಪ್ಪೂರು ಸಿದ್ದರಾಮಯ್ಯ, ತಾಯಿ ನಿರ್ಮಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT