ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್ ನಾಯಕತ್ವ ಬದಲಾವಣೆ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೇಗಿ ಜೂಲನ್ ಗೋಸ್ವಾಮಿ ಅವರನ್ನು ಭಾರತ ಮಹಿಳಾ ತಂಡದ ನಾಯಕತ್ವದಿಂದ ಕೆಳಗಿಳಿಸಿ ಎರಡು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡದ ಅಂಜುಮ್ ಚೋಪ್ರಾ ಅವರಿಗೆ ದಿಢೀರ್‌ನೇ ಸಾರಥ್ಯ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ತಿಂಗಳ ಅಂತ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆರಂಭವಾಗಲಿರುವ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ತಂಡ ಪ್ರಕಟಿಸಿರುವ ಬಿಸಿಸಿಐ ರಾಷ್ಟ್ರೀಯ ಮಹಿಳಾ ಆಯ್ಕೆ ಸಮಿತಿಯು ಈ ತುರ್ತು ನಿರ್ಧಾರ ತೆಗೆದುಕೊಂಡಿದೆ.ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಬೇರೆ ಪ್ರಶ್ನೆಗಳಿದ್ದರೆ ಕೇಳಿ ಮಾತನಾಡುತ್ತೇನೆ~ ಎಂದು ನಾಯಕತ್ವ ಕಳೆದುಕೊಂಡ ಜೂಲನ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಕಳೆದ 10 ದಿನಗಳಿಂದ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಆಟಗಾರ್ತಿಯರು ಜೂಲನ್ ಅವರ ಮಾರ್ಗದರ್ಶನದಲ್ಲೇ ಅಭ್ಯಾಸ ನಡೆಸಿದ್ದರು. ಆದರೆ ತಂಡ ಪ್ರಕಟಿಸುವ ವೇಳೆ ನಾಯಕತ್ವವನ್ನು ಬದಲಿಸಲಾಗಿದೆ.

ಈ ಸಂಬಂಧ ಪತ್ರಿಕೆಗೆ ಪ್ರತಿಕ್ರಿಯಿಸಿದ ಕೋಚ್ ಅಂಜು ಜೈನ್, `ಈ ನಿರ್ಧಾರದ ಬಗ್ಗೆ ನಮಗೂ ಗೊತ್ತಾಗಿದ್ದು ತಂಡ ಆಯ್ಕೆ ಮಾಡಿದ ಮೇಲೆ. ಆಯ್ಕೆ ಸಮಿತಿ ಸಭೆಯಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಆಹ್ವಾನ ಕೂಡ ಇರಲಿಲ್ಲ. ಆದರೆ ತಂಡದಲ್ಲಿ ಯಾವುದೇ ವಿವಾದ ಇಲ್ಲ~ ಎಂದರು.

114 ಏಕದಿನ ಪಂದ್ಯ ಹಾಗೂ 18 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರುವ 28 ವರ್ಷ ವಯಸ್ಸಿನ ಜೂಲನ್ ಮೂರು ವರ್ಷಗಳಿಂದ ತಂಡ ಮುನ್ನಡೆಸುತ್ತ್ದ್ದಿದರು. ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗ್ದ್ದಿದಾರೆ.
ಮತ್ತೆ ತಂಡ ಮುನ್ನಡೆಸುವ ಅವಕಾಶ ಲಭಿಸಿದ್ದಕ್ಕೆ ಅಂಜುಮ್ ಖುಷಿ ವ್ಯಕ್ತಪಡಿಸಿದ್ದಾರೆ. `ತಂಡ ಪ್ರಕಟಿಸಿದ ದಿನವಷ್ಟೇ ನನಗೆ ನಾಯಕತ್ವ ಜವಾಬ್ದಾರಿ ನೀಡಿದ್ದಾರೆ ಎಂಬುದು ಗೊತ್ತಾಯಿತು. ಆಯ್ಕೆದಾರರು ನನ್ನ ಮೇಲೆ ಮತ್ತೊಮ್ಮೆ ಭರವಸೆ ಇಟ್ಟು ಈ ನಿರ್ಧಾರ ಕೈಗೊಂಡಿದ್ದಾರೆ. ಅವರಿಟ್ಟ ಭರವಸೆ ಉಳಿಸಿಕೊಳ್ಳುತ್ತೇನೆ~ ಎಂದು ಅವರು ನುಡಿದರು.

35 ವರ್ಷ ವಯಸ್ಸಿನ ಅಂಜುಮ್ 121 ಏಕದಿನ ಪಂದ್ಯ ಹಾಗೂ 8 ಟ್ವೆಂಟಿ-20 ಆಡಿದ್ದಾರೆ. ಆದರೆ ಅವರು ಕೊನೆಯ ಏಕದಿನ ಪಂದ್ಯ ಆಡಿದ್ದು 2010ರ ಮಾರ್ಚ್‌ನಲ್ಲಿ. ಈಗ ತಂಡಕ್ಕೆ ವಾಪಸಾಗಿರುವ ಅವರು ಇನ್ನು ಒಂದೂ ಪಂದ್ಯ ಆಡಿಲ್ಲ. ಅವರು ಮೂರು ವರ್ಷಗಳ ಹಿಂದೆ ಕೂಡ ತಂಡವನ್ನು ಮುನ್ನಡೆಸಿದ್ದರು.

ಈ ಬದಲಾವಣೆಗೆ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. `ಈಗ ಉಪನಾಯಕಿ ಆಗಿರುವ ಮಿಥಾಲಿ ರಾಜ್ ಅವರನ್ನೇ ನಾಯಕಿಯನ್ನಾಗಿ ನೇಮಿಸಬಹುದಿತ್ತು. ಆದರೆ ತಂಡದ ಆಡಳಿತ ಏಕೆ ಈ ಬದಲಾವಣೆ ಮಾಡಿದೆ ನನಗೆ ಗೊತ್ತಿಲ್ಲ~ ಎಂದಿದ್ದಾರೆ.

`ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅಂಜುಮ್ ಸಾಧನೆ ಅಷ್ಟಕಷ್ಟೇ. ಒಮ್ಮೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಜೂಲನ್ ಕೂಡ ತಂಡದ ಸಾರಥ್ಯ ವಹಿಸಲು ಸೂಕ್ತ ವ್ಯಕ್ತಿ ಅಲ್ಲ. ಅದೇನೇ ಇರಲಿ. ಭಾರತ ತಂಡ ಉತ್ತಮ ಪ್ರದರ್ಶನ ತೋರಬೇಕು~ ಎಂದು ಶಾಂತಾ ಹೇಳಿದರು. 

 `ಈ ದಿಢೀರ್ ಬದಲಾವಣೆ ಏಕೆ ಎಂಬುದು ನನಗೆ ಗೊತ್ತಿಲ್ಲ. ಬೇರೆ ಕಾರಣಗಳು ಇದ್ದರೂ ಇರಬಹುದು. ಆದರೆ ಅಂಜುಮ್ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಜೊತೆಗೆ ಹಿರಿಯ ಹಾಗೂ ಅನುಭವಿ ಆಟಗಾರ್ತಿ. ಈ ಕಾರಣ ಅವರಿಗೆ ಸಾರಥ್ಯ ನೀಡಿರಬಹುದು~ ಎಂದು ಮಾಜಿ ನಾಯಕಿ ಮಮತಾ ಮಾಬೆನ್ ನುಡಿದಿದ್ದಾರೆ.

`ಎರಡು ವರ್ಷಗಳಿಂದ ಜೂಲನ್ ನಾಯಕತ್ವದಲ್ಲಿ ಭಾರತ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಹಾಗೇ, ಅವರ ವೈಯಕ್ತಿಕ ಪ್ರದರ್ಶನದಲ್ಲಿ ಕೂಡ ಕುಸಿತ ಕಂಡಿದೆ. ಈ ಕಾರಣ ಆಯ್ಕೆದಾರರು ಬದಲಾವಣೆಗೆ ಮುಂದಾಗಿರಬಹುದು~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆರಿಬಿಯನ್ ನಾಡಿನ ಒಂದು ತಿಂಗಳ ಪ್ರವಾಸದ ಅವಧಿಯಲ್ಲಿ  ಭಾರತ ಮೂರು ಏಕದಿನ ಹಾಗೂ ಐದು ಟ್ವೆಂಟಿ-20 ಪಂದ್ಯಗಳ ಸರಣಿ ಆಡಲಿದೆ. ಭಾರತ ತಂಡದವರು ಫೆಬ್ರುವರಿ 15ರಂದು ಕೆರಿಬಿಯನ್ ನಾಡಿಗೆ ತೆರಳಲಿದ್ದಾರೆ. ಏಕದಿನ ಸರಣಿ ಫೆ.29ರಂದು ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT