ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ ನಿಗದಿಗೂ ಮುನ್ನವೇ ರಂಗೇರಿದ ಕಣ!

Last Updated 14 ಜನವರಿ 2012, 10:50 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಹಾಗೂ ಜಿಲ್ಲಾ ಅಧ್ಯಕ್ಷರ ಚುನಾವಣೆಯ ದಿನಾಂಕ ನಿಗದಿ ವಿಳಂಬವಾಗುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಚುನಾವಣಾ ಕಾವು ಏರತೊಡಗಿದೆ.

ದಾವಣಗೆರೆ 1997ರಲ್ಲಿ ಪ್ರತ್ಯೇಕ ಜಿಲ್ಲೆಯಾಗಿ ರಚನೆಗೊಂಡ ನಂತರ ನಡೆಯುತ್ತಿರುವ 5ನೇ ಚುನಾವಣೆ ಇದಾಗಿದ್ದು, ಹಿಂದಿಗಿಂತಲೂ ಹೆಚ್ಚು ಸ್ಪರ್ಧಾಕಣವನ್ನು ಸೃಷ್ಟಿಸಿದೆ. ಪ್ರತ್ಯೇಕ ಜಿಲ್ಲೆಯಾದ ತಕ್ಷಣ ಜಾನಪದ ಸಾಹಿತಿ ಡಾ.ಎಂ.ಜಿ. ಈಶ್ವರಪ್ಪ ಅಧ್ಯಕ್ಷರಾಗಿ ಕೆಲ ತಿಂಗಳು ನಿಯುಕ್ತರಾಗಿದ್ದರು. ನಂತರ ಜಗಳೂರಿನ ನಳಂದ ಪದವಿಪೂರ್ವ ಕಾಲೇಜಿನ ಉಪನ್ಯಾಸ ಎಂ. ಬಸಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ಚುನಾವಣಾ ಮತದಾನ ಸಂಸ್ಕೃತಿ ಆರಂಭವಾದುದು 2011ರಲ್ಲಿ. ಅವಿಭಜಿತ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್.ಬಿ. ರಂಗನಾಥ್, ಜಿಲ್ಲಾ ಕಸಾಪ ಚುನಾವಣಾ ಕಣಕ್ಕೆ ಧುಮಿಕಿದ್ದು ಕಣವನ್ನು ರಂಗೇರಿಸಿತ್ತು. ರಂಗನಾಥ್ ಹಾಗೂ ಹರಿಹರದ ಶಿಕ್ಷಕ ಎಸ್.ಎಚ್. ಹೂಗಾರ್ ಮಧ್ಯೆ ನಡೆದ ಚುನಾವಣೆಯಲ್ಲಿ ರಂಗನಾಥ್ ಗೆಲುವು ಸಾಧಿಸಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲೂ ಅದೇ ಇಬ್ಬರು ಸ್ಪರ್ಧಿಗಳು ಮತ್ತೆ ಮುಖಾಮುಖಿಯಾದರು. ಹೂಗಾರ್ ಹಿಂದಿನ ಸೋಲಿನ ಅನಕಂಪದ ಅಲೆಯಲ್ಲಿ ಗೆಲವು ಸಾಧಿಸಿದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ನಿವೃತ್ತ ಶಿಕ್ಷಕ ಬಿ.ಎಂ. ಸದಾಶಿವಪ್ಪ ಶ್ಯಾಗಲೆ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಕಣಕ್ಕೆ ಧುಮಿಕಿದರು. ಅಂದು 120 ಮತಗಳ ಅಂತರದಲ್ಲಿ ಸದಾಶಿವಪ್ಪ ಗೆಲುವು ಸಾಧಿಸಿದರು.

ಈ ಬಾರಿ ಎ.ಆರ್. ಉಜ್ಜನಪ್ಪ ಮತ್ತೆ ಸ್ಪರ್ಧೆಗೆ ಇಳಿಯಲು ಸಿದ್ಧತೆ ನಡೆಸಿದ್ದು, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಎಸ್.ಟಿ. ಶಾಂತ ಗಂಗಾಧರ್ ಅವರ ಪ್ರತಿಸ್ಪರ್ಧಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಈಗಾಗಲೇ, ಈ ಇಬ್ಬರು ಅಭ್ಯರ್ಥಿಗಳು ಅನೌಪಚಾರಿಕವಾಗಿ ಪ್ರಚಾರ ಆರಂಭಿಸಿದ್ದು, ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಮತದಾರರನ್ನು ಓಲೈಸುವ ಕೆಲಸ ಆರಂಭಿಸಿದ್ದಾರೆ.

ದ್ವಿಗುಣಗೊಂಡ ಮತಗಳು: ಹಿಂದಿನ ಚುನಾವಣೆಯಲ್ಲಿ ಇದ್ದ ಒಟ್ಟು ಮತದಾರರ ಸಂಖ್ಯೆ ಕೇವಲ 2,300. ಪ್ರಸಕ್ತ ಈ ಸಂಖ್ಯೆ 5 ಸಾವಿರ ತಲುಪಿದೆ. ದ್ವಿಗುಣಗೊಂಡ ಮತಗಳ ಸಂಖ್ಯೆಯಿಂದಾಗಿ ಅಭ್ಯರ್ಥಿಗಳು ಹಿಂದಿಗಿಂತಲೂ ಹೆಚ್ಚು ಬೆವರು ಹರಿಸಬೇಕಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ದಾವಣಗೆರೆ ತಾಲ್ಲೂಕಿನಲ್ಲಿ-1,717, ಹರಪನಹಳ್ಳಿ -787. ಹರಿಹರ- 682, ಜಗಳೂರು-495, ಹೊನ್ನಾಳಿ -389 ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ 643 ಪರಿಷತ್ತಿನ ಮತದಾರರು ಇದ್ದಾರೆ.

ಉತ್ತಮ ವಾಗ್ಮಿಗಳಾದ ಚನ್ನಗಿರಿ ತಾಲ್ಲೂಕು ನವಿಲೇಹಾಳ್‌ನ ಶಾಂತಗಂಗಾಧರ್, ಈ ಹಿಂದೆ ಪ್ರೊ.ಎಸ್.ಬಿ. ರಂಗನಾಥ್, ಸದಾಶಿವಪ್ಪ ಅವರ ಅವಧಿಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಸಂಘಟಕರಾದ ದಾವಣಗೆರೆ ನಗರ ವ್ಯಾಪ್ತಿಯ ಆನೆಕೊಂಡದ ಎ.ಆರ್. ಉಜ್ಜನಪ್ಪ ಅವರು ಎಸ್.ಎಚ್. ಹೂಗಾರ್ ಅವಧಿಯಲ್ಲಿ ಪರಿಷತ್ತಿನ ಗೌರವ ಖಜಾಂಚಿಯಾಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದಾರೆ.

ಸದಾ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಇಬ್ಬರ ಯಾವುದೇ ಸಾಹಿತ್ಯಿಕ ಕೃತಿಗಳು ಇದುವರೆಗೆ ಪ್ರಕಟವಾಗಿಲ್ಲ.

ದಿನಾಂಕ ಪ್ರಕಟಣೆಗೂ ಮುನ್ನವೇ ಈ ಇಬ್ಬರೂ ಚುನಾವಣಾ ಪ್ರಚಾರ ಚುರುಕುಗೊಳಿಸಿದ್ದು, ಇದೇ ಪ್ರಥಮ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ಶಾಂತಗಂಗಾಧರ್ ಅವರಿಗೆ ವಿಜಯಲಕ್ಷ್ಮೀ ಒಲಿಯುವಳೋ? ಹಿಂದೆ ಸೋಲು ಅನುಭವಿಸಿದ್ದ ಅನುಕಂಪ ಉಜ್ಜನಪ್ಪ ಅವರಿಗೆ ವರವಾಗುವುದೋ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT