ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಗೂಲಿ ನೌಕರರ ಕಾಯಮಾತಿಗೆ ಒತ್ತಾಯ

Last Updated 9 ಜನವರಿ 2014, 6:07 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರಿ ವಸತಿ ನಿಲಯಗಳ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಹಾಗೂ  ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ, ಅಲ್ಪ­ಸಂಖ್ಯಾತ ಕಲ್ಯಾಣ ಇಲಾಖೆಯ ದಿನ­ಗೂಲಿ ನೌಕರರ ಸಂಘದ ಪದಾಧಿಕಾರಿ­ಗಳು ಹಾಗೂ ಸದಸ್ಯರು ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಈ ವಸತಿ ನಿಲಯಗಳಲ್ಲಿ ಅಡುಗೆ ಸಹಾಯ­ಕರು, ಕಾವಲುಗಾರರು ಕಳೆದ 20 ವರ್ಷಗಳಿಂದ ದಿನಗೂಲಿ, ಹಾಜರಾತಿ ರಹಿತ ತುಂಡು ಕೆಲಸ, ಅನಧಿಕೃತ ರಸೀದಿ ಆಧಾರದ ಮೇಲೆ  ಕೆಲಸ ಮಾಡುತ್ತಿದ್ದಾರೆ. ಈ ದಿನಗೂಲಿ ನೌಕರರಿಗೆ ಯಾವುದೇ ಭದ್ರತೆ, ಸೌಕರ್ಯ­ಗಳ ಕಲ್ಪಿಸಿಲ್ಲ. ಇದರಿಂದ ದಿನಗೂಲಿ ನೌಕರರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಸಮಸ್ಯೆ ವಿವರಿಸಿದರು.

ಸರ್ಕಾರ ಗುತ್ತಿಗೆದಾರರಿಗೆ ನೀಡುವ ಹಣದಲ್ಲಿ ದಿನಗೂಲಿ ನೌಕರರಿಗೆ ವೇತನ ಹಾಗೂ ಇತರ ಭತ್ಯೆಗಳನ್ನು ನೀಡಬಹು­ದಾಗಿದೆ. ಇದರಿಂದ ಗ್ರಾಮೀಣ ಪ್ರದೇ­ಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂ­ಲವಾಗುತ್ತದೆ. ವಸತಿ ನಿಲಯಗಳ ದಿನಗೂಲಿ ನೌಕರರಿಗೆ ಮಾಸಿಕ ಭದ್ರತೆ ಕಲ್ಪಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

2013–14 ಮತ್ತು 2014–15ನೇ ಸಾಲಿನ ಅವಧಿಗೆ ನೀಡಿರುವ ಹೊರಗುತ್ತಿಗೆ ಪದ್ಧತಿಯನ್ನು ಕೂಡಲೇ  ರದ್ದುಪಡಿಸಬೇಕು, 20 ವರ್ಷಗಳಿಂದ ಕಾರ್ಯನಿರ್ವಹಿಸಿದ ಅಡುಗೆಯಾಳು, ಅಡುಗೆ ಸಹಾಯಕ, ಕಾವಲುಗಾರರ ದಿನಗೂಲಿ ನೌಕರರನ್ನೇ ಮುಂದುವರಿ­ಸಬೇಕು ಎಂದು ಒತ್ತಾಯಿಸಿದರು.

ಕನಿಷ್ಠ ವೇತನ ಜಾರಿಗೊಳಿಸಬೇಕು, ನೌಕರರ ಹಾಜರಾತಿಯನ್ನು ಕಡ್ಡಾಯ­ವಾಗಿ ನಿರ್ವಹಿಸಬೇಕು ಎಂದು ವಸತಿ ನಿಲ­ಯಗಳ ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್‌ ಮಾರೆಪ್ಪ ವಕೀಲ ಜಿಪಂ ಸಿಇಒ ಅವರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಸಂಘದ ಪದಾ­ಧಿಕಾರಿಗಳಾದ ಆರ್‌. ರಾಮಸ್ವಾಮಿ, ತಿಮ್ಮಪ್ಪ ಗುಂಜಳ್ಳಿ, ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT