ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಚರಿ ದಾಖಲಿಸಲೊಂದು ಆ್ಯಪ್‌

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

‘ದಿನಚರಿ’ ಮಾನವನ ಬದುಕಿಗೆ ಒಂದು ಶಿಸ್ತನ್ನು ನೀಡುತ್ತದೆ. ಹಿಂದಿನ ದಿನಚರಿಗಳನ್ನು ಓದುವುದರಿಂದ ನಾವು ಮಾಡಿದ ಬಾಲಿಶ ವರ್ತನೆಗಳು, ತಪ್ಪುಗಳು ಎಲ್ಲವೂ ನಮ್ಮ ಕಣ್ಮುಂದೆ ಬಂದು ಮತ್ತೆ ಅದೇ ತಪ್ಪುಗಳನ್ನು ನಾವು ಮಾಡದಿರುವಂತೆ ಪ್ರೇರಣೆ ನೀಡುತ್ತವೆ.

ಇಂದು ದಿನಚರಿ ಬರೆಯುವ ಅಭ್ಯಾಸವನ್ನು ಕೆಲವು ಶಾಲೆಗಳು ಬಾಲ್ಯದಲ್ಲೇ ಕಲಿಸುತ್ತವೆ. ಆದರೆ, ಇಂದಿನ ವೇಗದ ಜೀವನ ಶೈಲಿಯಲ್ಲಿ ಬರೆಯುವಷ್ಟು ವ್ಯವಧಾನ ಯಾರಿಗಿದೆ? ಎಲ್ಲವೂ ಫಟಾಪಟ್ ಎಂದು ಕೆಲಸ ಆಗಬೇಕು. ಸ್ವಲ್ಪವೂ ಕಷ್ಟವಾಗಬಾರದು ಎಂಬ ಭಾವನೆ ಒಂದೆಡೆ, ಆದರೆ ಮತ್ತೊಂದೆಡೆ ಯಾವುದಕ್ಕೂ ಸಮಯವಿಲ್ಲದ ವೇಗದ ಧಾವಂತದ ಬದುಕು.

ಬೆಳಿಗ್ಗೆಯಿಂದ ಕಂಪ್ಯೂಟರ್ ಮುಂದೆ ಕುಳಿತೋ, ಇಲ್ಲವೇ ಕಚೇರಿಯಲ್ಲಿ ಮತ್ತಾವುದೋ ಕೆಲಸ ಮಾಡಿ ಮನೆಗೆ ಮರಳಿ ಟಿವಿ ಮುಂದೆ ಕೂತು ಕಣ್ಣು ನೋಯಿಸಿಕೊಂಡು ಊಟ ಮಾಡಿ ಮಲಗುವ ಹೊತ್ತಿಗೆ ದಿನಚರಿ ಬರೆಯುವಷ್ಟು ವ್ಯವಧಾನ ಇರುತ್ತದೆಯೇ?

ಹಾಗೆಂದು ಕೆಲವರಿಗಾದರೂ ದಿನಚರಿ ಬರೆಯದೇ ಕೈಬಿಡುವುದಕ್ಕೆ ಆಗುವುದಿಲ್ಲ. ಇಂತಹವರಿಗೆಂದೇ ಇತ್ತೀಚೆಗೆ ಸಾಕಷ್ಟು ಮೊಬೈಲ್ ಫೋನ್‌ ತಂತ್ರಾಂಶಗಳು (ಆ್ಯಪ್) ಇವೆ. ಇದರಲ್ಲಿ ಕೆಲವು ಆ್ಯಪ್‌ ಉಚಿತವಾಗಿ ಲಭ್ಯವಿದ್ದರೆ, ಮತ್ತೆ ಕೆಲವಕ್ಕೆ ಸ್ವಲ್ಪ ಶುಲ್ಕ ತೆರಬೇಕಾಗುತ್ತದೆ. ಕೆಲವು ದಿನಚರಿ ಆ್ಯಪ್‌ಗಳ ಪರಿಚಯ ಇಲ್ಲಿದೆ.

ಪ್ರೈವೇಟ್ ಡೈರಿ ಫ್ರೀ
ಇದರಲ್ಲಿ ದೈನಂದಿನ ಬದುಕಿನಲ್ಲಿ ನಡೆಯುವ ಎಲ್ಲಾ ಘಟನೆಗಳು, ಭಾವನೆಗಳು ಹಾಗೂ ರಹಸ್ಯಗಳನ್ನೂ ಕೂಡ ಟೈಪ್ ಮಾಡಿಟ್ಟುಕೊಳ್ಳಬಹುದಾಗಿದೆ. ದಿನಾಂಕವಾರು ನೋಡುವ ಸೌಲಭ್ಯ ಇದರಲ್ಲಿದೆ.

ಗರ್ಲ್‌ಫ್ರೆಂಡ್ ಜತೆಗಿನ ಗುಟ್ಟೋ, ಕಚೇರಿಯ ರಗಳೆಯೋ ಅಥವಾ ಖಾಸಾ ಬದುಕಿನ ರಹಸ್ಯಗಳನ್ನೂ ಟೈಪ್ ಮಾಡಿಟ್ಟರೆ ಬೇರೆ ಯಾರಾದರೂ ಇದನ್ನು ಕದ್ದು ಓದುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಇದಕ್ಕೆ ಪಾಸ್‌ವರ್ಡ್‌ನ ವಜ್ರಕವಚ ಇದೆ. ಹೀಗಾಗಿ, ಇದು ಅತ್ಯಂತ ಸುರಕ್ಷಿತ ಆ್ಯಪ್‌ ಎಂಬುದು ಇದನ್ನು ರೂಪಿಸಿದ ಮಿಹಾಲಿಕ್ಸ್ ಡಿಎಸ್ ಗ್ರೂಪ್‌ನ ಆಂಬೋಣ.

ಅಲ್ಲದೆ, ಇದಕ್ಕೆ ಮನಸಿಗೆ ಒಪ್ಪುವಂತೆ ಥೀಮ್‌ಗಳನ್ನು ಆರಿಸಿ ಅಳವಡಿಸಿಕೊಳ್ಳಬಹುದು. ಆದರೆ, ಇವು ತೀರಾ ಕಡಿಮೆ ಸಂಖ್ಯೆಯಲ್ಲಿ ಇರುವುದು ಇದರ ಒಂದು ಕೊರತೆಯಾಗಿದೆ. ಎಷ್ಟೇ ಹಳೆಯ ದಿನಗಳ ನಮೂದು, ಮಾಹಿತಿಗಳನ್ನೂ ಬೇಕೆನಿಸಿದಾಗ ತಕ್ಷಣವೇ ಸುಲಭವಾಗಿ ನೋಡುವ ಸೌಲಭ್ಯವೂ ಇದರಲ್ಲಿದೆ. ದಿನಚರಿಗೆ ಅಗತ್ಯವಿದ್ದರೆ, ಆಕರ್ಷಕವಾಗಿರಬೇಕು ಎನಿಸಿದರೆ ಇದರಲ್ಲಿ ಚಿತ್ರಗಳನ್ನೂ ಕೂಡ ಅಳವಡಿಸಿಕೊಳ್ಳಬಹುದು. ಆದರೆ, ಇದೂ ಕೂಡ ಒಂದು ಮಿತಿಯವರೆಗೆ ಮಾತ್ರ ಸಾಧ್ಯವೇ ಹೊರತು ಅನಿಯಮಿತವಾದ ಚಿತ್ರಗಳ ಸೇರ್ಪಡೆ ಅವಕಾಶ ಇದರಲ್ಲಿಲ್ಲ.

ಒಂದು ವೇಳೆ ಯಾವುದೋ ದಿನದ ನಮೂದು, ಮಾಹಿತಿಯನ್ನು ಯಾರಿಗಾದರೂ ಮೇಲ್ ಮಾಡಬೇಕೆಂದರೆ ಈ ಆ್ಯಪ್‌ನಲ್ಲಿ ಅದೂ ಕೂಡ ಬಹಳ ಸುಲಭ. ತ್ವರಿತಗತಿಯಲ್ಲಿ ಮೇಲ್ ಮಾಡುವ ಅವಕಾಶವೂ ಇಲ್ಲಿದೆ.

ಹಳೆಯ ದಿನಗಳ ದಿನಚರಿಯನ್ನು ಹುಡುಕುವುದು ಕಷ್ಟವೆನಿಸಿದರೆ ಶೋಧನಾ ಯಂತ್ರವೂ ಇಲ್ಲಿದೆ. ಹೀಗಾಗಿ, ಹಳೆಯ ಮಾಹಿತಿ ಶೋಧ ಬಹಳ ಸುಲಭದ ಕೆಲಸವಾಗಲಿದೆ. ನೆನಪಿಸುವ (ರಿಮೈಂಡರ್) ಸೌಲಭ್ಯವನ್ನೂ ಇದಕ್ಕೆ ಅಳವಡಿಸಲಾಗಿದೆ.

ಇದನ್ನು ಒಮ್ಮೆ ನೋಡಲು ಈ ಲಿಂಕ್‌ ಕ್ಲಿಕ್ಕಿಸಿರಿ
https://play.google.com/store/apps/details?id=app.diaryfree&hl=en

3ಕ್ಯೂ ಪೋಟೋ ಡೈರಿ
ಈ 3Q Photo Diary ಎಂಬ ಅಪ್ಲಿಕೇಷನ್‌ ಮೇಲಿನದಕ್ಕಿಂತ ತುಸು ಭಿನ್ನವಾದ ತಂತ್ರಾಂಶ ಎನಿಸಿಕೊಂಡಿದೆ. ಅತ್ಯಂತ ಸರಳ ಹಾಗೂ ಸುಂದರ ಫೋಟೊ ಡೇರಿ ಇದಾಗಿದೆ. ಪ್ರವಾಸದ ವಿವರಗಳು ಹಾಗೂ ದೈನಂದಿನ ವ್ಯವಹಾರಗಳನ್ನು ಚಿತ್ರಸಮೇತ ದಾಖಲು ಮಾಡುವುದು ಇದರಲ್ಲಿ ಸಾಧ್ಯ.

ಇದನ್ನು ಬೇಕಾದರೆ ಬರೇ ದಿನಚರಿ ಬರೆಯುವುದಕ್ಕೆ ಮಾತ್ರ ಬಳಸದೇ ಮಕ್ಕಳ ಬೆಳವಣಿಗೆಯನ್ನು ದಾಖಲಿಸಬಹುದು. ಮಗುವಿನ ಪ್ರತಿ ತಿಂಗಳ ಬೆಳವಣಿಗೆಯ ವಿವರಗಳನ್ನು ಚಿತ್ರಸಮೇತ ಹಾಕಿಡಬಹುದು. ಮಗುವಿನ ತೂಕ, ಎತ್ತರ ಮತ್ತಿತರ ಮಾಹಿತಿಗಳನ್ನೂ ದಾಖಲಿಸಬಹುದು.
ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಖರೀದಿಸಿದ ಸರಕುಗಳ ವಿವರಗಳ ಜತೆಗೆ ನೆನಪಿಡಬೇಕಾದ ಸಂಗತಿಗಳನ್ನೂ ಕೂಡ ಇದರಲ್ಲಿ ದಾಖಲು ಮಾಡಬಹುದು.

ಚಿತ್ತಾಕರ್ಷಕ ಚಿತ್ರಗಳನ್ನು ಜೋಡಿಸಿ ಇಡೀ ತಂತ್ರಾಂಶಕ್ಕೆ ಮಾತ್ರವಲ್ಲ ವೈಯಕ್ತಿಕ ದಿನಚರಿಯನ್ನು ಸಿಂಗರಿಸುವುದು ಇದರಲ್ಲಿನ ಬಹುದೊಡ್ಡ ಆಕರ್ಷಣೆ. ಭಾವನೆಗೆ ತಕ್ಕ ಚುಟುಕು ಚಿತ್ರಗಳ ಆಯ್ಕೆಯೂ ಇಲ್ಲದ್ದು, ನೋಡುಗರ ಕಣ್ಣಿಗೆ ಹಬ್ಬದೌತಣವಂತೂ ಖಂಡಿತ.
https://play.google.com/store/apps/details?id=mo.in.en.diary&hl=en

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT