ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನವಿಡೀ ಮಳೆ: ಜನಜೀವನ ಅಸ್ತವ್ಯಸ್ತ

ವ್ಯಾಪಾರ ವಹಿವಾಟು ಕುಂಠಿತ, ರಸ್ತೆಗಳಲ್ಲಿ ನಿಂತ ನೀರು, ಚಾಲಕರ ಪಡಿಪಾಟಲು
Last Updated 20 ಜುಲೈ 2013, 7:00 IST
ಅಕ್ಷರ ಗಾತ್ರ

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಶುಕ್ರವಾರ ಇಡೀ ದಿನ ಮಳೆಯ ನರ್ತನ. ಬೆಳಗಿನಿಂದ ಬಹುತೇಕ ಸಂಜೆಯವರೆಗೂ ಮಳೆ ನಿರಂತರವಾಗಿ ಸುರಿದಿದ್ದು, ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿತು.  ಗುರುವಾರ ರಾತ್ರಿ ಶುರುವಾದ ಮಳೆ ಶುಕ್ರವಾರವೂ ಮುಂದುವರೆದಿದ್ದು, ಕೆಲವೊಮ್ಮೆ ಧಾರಾಕಾರವಾಗಿತ್ತು.

ಶುಕ್ರವಾರ ಇಡೀ ದಿನ ಮಳೆ ಸುರಿದ ಪರಿಣಾಮ ಬಹುತೇಕ ಜನರು ಮನೆಯಿಂದ ಹೊರಬರಲು ಆಗಲಿಲ್ಲ. ವಿದ್ಯಾರ್ಥಿಗಳು ಮನೆಯಲ್ಲಿಯಏ ಉಳಿದಿದ್ದು, ಶಾಲೆಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಸರ್ಕಾರಿ ನೌಕರರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ತೆರಳಲು ಹರಸಾಹಸ ಪಡಬೇಕಾಯಿತು.ಬೆಳಿಗ್ಗೆಕೊಡೆಗಳ ಆಶ್ರಯದೊಂದಿಗೆ ಅನೇಕ ಜನ ಪಾಲಕರು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು. ಇನ್ನು ಅನೇಕ ಮಕ್ಕಳು ಶಾಲೆಗಳಿಗೆ ಗೈರು ಹಾಜರಾದರು. ಕೆಲ ಶಾಲೆಗಳು ರಜೆ ಕೂಡ ಘೋಷಿಸಿದ್ದವು.

ಕಮಠಾಣಾ ರಸ್ತೆ, ಅಂಬೇಡ್ಕರ್ ವೃತ್ತ, ಗುಂಪಾ ರಸ್ತೆ, ಶಹಾಪುರ ಗೇಟ್, ಫತೇ ಧರವಾಜಾ ಸೇರಿದಂತೆ ಬಹುತೇಕ ಕಡೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಚಾಲಕರು ಮುಖ್ಯವಾಗಿ ದ್ವಿಚಕ್ರ ವಾಹನಗಳ ಚಾಲಕರು ತೀವ್ರ ಪಡಿಪಾಟಲು ಅನುಭವಿಸಿದರು.

ಫತೇಧರವಾಜಾ ಬಳಿ ಒಳಚರಂಡಿ ಕಟ್ಟಿಕೊಂಡಿದ್ದ ಪರಿಣಾಮ ಕಲ್ಮಶ ನೀರೂ ಕೂಡಾ ಮಳೆಯೊಂದಿಗೆ ಸೇರಿದ್ದು, ಗಲೀಜು ನೀರಿನಲ್ಲಿ ಪಾದಚಾರಿಗಳು ನಡೆದು ಹೋಗಬೇಕಾದ ಸ್ಥಿತಿ ನಿರ್ಮಾಣವಾಯಿತು.

ಹೆಚ್ಚಿನವರು ಜನ ಮನೆಯಲ್ಲೇ ಕುಳಿತು ಕಾಲ ಕಳೆದರೆ, ಇನ್ನು ಅನಿವಾರ್ಯ ಇರುವವರು ಕೊಡೆ ಆಶ್ರಯ ಇಲ್ಲವೇ ಜರ್ಕಿನ್ ಹಾಕಿಕೊಂಡು ಓಡಾಟ ನಡೆಸಿದರು.  ಮಳೆ ನಿಲ್ಲದ ಕಾರಣ ಗುರುವಾರ ರಾತ್ರಿ ಬೀಗ ಹಾಕಿದ್ದ ಬಹುತೇಕ ಅಂಗಡಿಗಳು ಶುಕ್ರವಾರ ಬೆಳಿಗ್ಗೆ ತೆರೆಯಲಿಲ್ಲ. ಅಲ್ಲಲ್ಲಿ ಒಂದೊಂದು ಅಂಗಡಿಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ದಿನದೂಡಬೇಕಾಯಿತು. ವಾಹನ ಸಂಚಾರ ವಿರಳವಾಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ನಗರದ ನೆಹರು ಕ್ರೀಡಾಂಗಣ ಬಳಿಯ ತಿರುವಿನ ರಸ್ತೆಯಲ್ಲಿ ಅಪಾರ ಪ್ರಮಾಣಲ್ಲಿ ನೀರು ನಿಂತುಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಅನುಭವಿಸಬೇಕಾಯಿತು. ನಗರದ ಹಳೆಯ ಭಾಗದ ಸೇರಿದಂತೆ ವಿವಿಧೆಡೆ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡಿದ್ದರಿಂದ ಸಂಚಾರ ದುಸ್ತರವಾಯಿತು.ರಸ್ತೆಗಳಲ್ಲಿ ನೀರು ನಿಂತುಕೊಂಡ ಪರಿಣಾಮ ಅಲ್ಲಲ್ಲಿ ಸೃಷ್ಟಿಯಾಗಿರುವ ತಗ್ಗುಗಳು ಕಾಣದೆ ಸವಾರರು ಕುಂಟುತ್ತಾ ಸಾಗಬೇಕಾಯಿತು. ಚರಂಡಿಗಳೂ ಕಾಣದ ಕಾರಣ ಅನೇಕರು ಬಿದ್ದು ಸಂಕಟ ಅನುಭವಿಸಿದ ಘಟನೆಗಳೂ ನಡೆದ ವರದಿಯಾಗಿದೆ.

ವಿದ್ಯಾನಗರ ಕಾಲೋನಿ, ಲೇಬರ್ ಕಾಲೊನಿಯ ಕೆಲಕಡೆ ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ. ಇನ್ನು ಇಳಿಜಾರು ಪ್ರದೇಶದಲ್ಲಿ ಇರುವ ಕಟ್ಟಡಗಳಲ್ಲೂ ನೀರು ನುಗ್ಗಿತು. ಬೆಳಿಗ್ಗೆಯಿಂದ ನೀರು ಹೊರಹಾಕುವುದೇ ಕೆಲಸವಾಗಿದೆ ಎಂದು ತಿಳಿಸುತ್ತಾರೆ ನಾಗರಿಕರೊಬ್ಬರು.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಾವಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಾರಿಯೇ ಇಷ್ಟೊಂದು ಮಳೆಯಾಗುತ್ತಿದೆ ಎಂದು ಉದ್ಗಾರ ತೆಗೆಯುತ್ತಾರೆ ಅವರು.

ಕೆನರಾ ಬ್ಯಾಂಕ್ ಬಳಿ ಮನೆಯೊಂದಕ್ಕೆ ನುಗ್ಗಿದ ನೀರನ್ನುಅಗ್ನಿಶಾಮಕ ದಳದ ಸಿಬ್ಬಂದಿ ಹೊರ ಹಾಕಿದರು. ಮಳೆಯಿಂದಾಗಿ ನಗರದಲ್ಲಿ ವಾತಾವರಣವೂ ತಂಪಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT