ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಬ್ಬ ಕುಸಿದು ಇಬ್ಬರ ಸಾವು, ಬಂಧನ

ಅಕ್ರಮ ಮರಳು ಗಣಿಗಾರಿಕೆ
Last Updated 13 ಜುಲೈ 2013, 9:36 IST
ಅಕ್ಷರ ಗಾತ್ರ

ಕಡೂರು: ರಾಜ್ಯಾದ್ಯಂತ ಅಕ್ರಮ ಮರಳು ಗಣಿಗಾರಿಕೆ ಸದ್ದು ಮಾಡುತ್ತಿರುವ ಹೊತ್ತಿನಲ್ಲಿಯೇ ತಾಲ್ಲೂಕಿನ ಕಡೂರಹಳ್ಳಿಯ ವೇದಾನದಿ ತೀರದಲ್ಲಿನ ಕಟ್ಟೆಹೊಳೆಯಲ್ಲಿ ಮರಳು ಬಗೆಯಲು ತೆರಳಿದ್ದ ಇಬ್ಬರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಕಡೂರಹಳ್ಳಿ ಸಮೀಪದ ಕಟ್ಟೆಹೊಳೆಯಲ್ಲಿ ಮರಳು ಬಗೆಯಲು ಐವರ ತಂಡ ಟ್ರಾಕ್ಟರ್ ಸಮೇತ ಗುರುವಾರ ರಾತ್ರಿ ತೆರಳಿತ್ತು.ಮರಳು ತೆಗೆಯುವ ವೇಳೆ ಮಣ್ಣಿನ ದಿಬ್ಬ ಕುಸಿದು ಕಡೂರಹಳ್ಳಿಯ ಹುಚ್ಚಪ್ಪ (50) ಸ್ಥಳದಲ್ಲಿಯೇ ಸಮಾಧಿಯಾಗಿದ್ದು ಚಿದಾನಂದ (25) ಎಂಬಾತನಿಗೆ ತಲೆಗೆ ತೀವ್ರ ಪೆಟ್ಟಾಗಿದೆ. ಗಾಯಗೊಂಡವನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಚಿದಾನಂದನೂ ಮೃತಪಟ್ಟಿದ್ದು ಈತನ ಮೃತದೇಹವನ್ನು ಟ್ರಾಕ್ಟರ್ ಮಾಲೀಕ ಸತೀಶ್ ಎಂಬಾತ ಕಡೂರುಹಳ್ಳಿಯ ಊರಮುಂದಿನ ಕೆರೆಯಲ್ಲಿ ಗುಂಡಿಗೆ ಹಾಕಿ ಏನೂ ಅರಿಯದವನಂತೆ ತೆರಳಿದ್ದಾನೆ.

ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಶಾಂತಯ್ಯ ಎಂಬಾತ ಕಡೂರುಹಳ್ಳಿಯವನೇ ಆಗಿದ್ದು, ಗ್ರಾಮಸ್ಥರಿಗೆ ವಿಷಯ ತಿಳಿಸಿದ ಬಳಿಕ ವಿಷಯ ಕಡೂರು ಪೊಲೀಸರ ಗಮನಕ್ಕೆ ಬಂದಿದೆ. ಕಂದಾಯ ಅಧಿಕಾರಿಗಳೊಡನೆ ಸ್ಥಳಕ್ಕೆ ತೆರಳಿದ ತರೀಕೆರೆ ಡಿವೈಎಸ್‌ಪಿ ಸದಾನಂದ ಬಿ.ನಾಯ್ಕ, ವೃತ್ತ ನಿರೀಕ್ಷಕ ಬಾಲಚಂದ್ರೇಗೌಡ ಮತ್ತು ಸಬ್‌ಇನ್ಸ್‌ಪೆಕ್ಟರ್ ಸಂತೋಷ ಶೆಟ್ಟಿ ಜೆಸಿಬಿ ಯಂತ್ರ ಬಳಸಿ ಸ್ಥಳದಲ್ಲಿಯೇ ಸಮಾಧಿಯಾಗಿದ್ದ ಹುಚ್ಚಪ್ಪನ ಮೃತದೇಹವನ್ನು ಸ್ಥಳೀಯರ ಸಹಾಯದಿಂದ ಹೊರಗೆ ತೆಗೆದಿದ್ದಾರೆ. ಬಳಿಕ ಟ್ರಾಕ್ಟರ್ ಮಾಲೀಕ ಸತೀಶ್ ಮತ್ತು ಹನುಮಂತಪ್ಪನನ್ನು ಬಂಧಿಸಿ ಕೆರೆಯಲ್ಲಿ ಹೂತಿದ್ದ ಚಿದಾನಂದನ ಶವವನ್ನೂ ಹೊರತೆಗೆಸಿದರು. ಈ ವೇಳೆ ಘಟನೆಯ ವಿವರ ತಿಳಿದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ನೆರೆದು ಈ ಅಕ್ರಮಕ್ಕೆ ಕಾರಣರಾದವರನ್ನು ಇಲ್ಲಿಗೆ ಕರೆಸುವಂತೆ ಒತ್ತಾಯಿಸತೊಡಗಿದರು.

ಈ ಸಮಯದಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು ಸಹಕರಿಸುವಂತೆ ಮನವಿ ಮಾಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಘಟನಾ ಸ್ಥಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಮಾತನಾಡಿದ ತರೀಕೆರೆ ಉಪವಿಭಾಗಾಧಿಕಾರಿ ಅನುರಾಧಾ, ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕಂದಾಯ ಇಲಾಖೆ ಸತತ ಪ್ರಯತ್ನದಲ್ಲಿ ತೊಡಗಿದ್ದರೂ ಕಡಿವಾಣ ಸಾಧ್ಯವಾಗಿಲ್ಲ. ಈ ರೀತಿಯ ಘಟನೆಗಳು ಅನಕ್ಷರಸ್ಥ ಮತ್ತು ಹೊಟ್ಟೆಪಾಡಿಗೆ ಕೆಲಸ ಮಾಡುವವರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡುತ್ತಿವೆ.

ಮರಳು ಗಣಿಗಾರಿಕೆ ಕುರಿತು ಸಾರ್ವಜನಿಕರೂ ಮಾಹಿತಿ ನೀಡಬೇಕು, ಅದರಿಂದ ಇಂತಹ ಘಟನೆಗಳು ಮರುಕಳಿಸುವುದು ತಪ್ಪು ತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಲೋಕೋಪಯೋಗಿ ಮತ್ತು ಗಣಿ ಇಲಾಖೆ ಅಧಿಕಾರಿಗಳು ಗೈರುಹಾಜರಾಗಿದ್ದು ಘಟನೆಯ ವಿವರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ  ಅವರು ತಿಳಿಸಿದರು.

ತಹಶೀಲ್ದಾರ್ ಶಾರದಾಂಬ ಮಾತನಾಡಿ, ಮರಳು ಕಳ್ಳಸಾಗಣೆ ತಡೆಗೆ ಟಾಸ್ಕ್‌ಫೋರ್ಸ್ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲ್ಲೂಕಿನ 8ಕಡೆ ಮರಳು ದಂಧೆ ಜಾರಿಯಲ್ಲಿದ್ದು ಯಗಟಿ ಮತ್ತು ಕಸಬಾ ಹೋಬಳಿಗಳಲ್ಲಿ ಹೆಚ್ಚು ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು ಅಂತಹವರ ವಿರುದ್ಧ ಶೀಘ್ರ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT