ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವಿಜ್‌ ದಿಟ್ಟ ಆಟ...

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಲಿಯಾಂಡರ್‌ ಪೇಸ್‌ ಹೊರತುಪಡಿಸಿ ಭಾರತದ ಇತರ ಆಟಗಾರರು ಗಮನ ಸೆಳೆಯಲಿಲ್ಲ. ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಜೊತೆ ಪುರುಷರ ಡಬಲ್ಸ್‌ ವಿಭಾಗದಲ್ಲಿ ಆಡಿದ ಪೇಸ್‌ ಹಿರಿ ವಯಸ್ಸಿನಲ್ಲೂ ತನ್ನ ಸಾಮರ್ಥ್ಯ ಕುಗ್ಗಿಲ್ಲ ಎಂಬುದನ್ನು ತೋರಿಸಿಕೊಟ್ಟರು.

ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್‌ನಲ್ಲಿ ಸೆಮಿಫೈನಲ್‌ವರೆಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. ಪೇಸ್‌ ಹಾಗೂ ಸಾನಿಯಾ ಅವರನ್ನು ಹೊರತುಪಡಿಸಿ ಟೂರ್ನಿಯಲ್ಲಿ ಭಾರತದ ಇನ್ನೊಬ್ಬ ಆಟಗಾರ ಕೂಡಾ ಅಲ್ಪ ಮಿಂಚಿದ್ದಾನೆ. ಆತನೇ ದಿವಿಜ್‌ ಶರಣ್‌. ಆದರೆ ದಿವಿಜ್‌ ತೋರಿದ ಸಾಧನೆಯನ್ನು ಹೆಚ್ಚಿನವರು ಗುರುತಿಸದೇ ಇದ್ದುದು ವಿಪರ್ಯಾಸ.

ಚೈನೀಸ್‌ ತೈಪೆಯ ಯೆನ್‌ ಸುನ್‌ ಲು ಜೊತೆ ಪುರುಷರ ಡಬಲ್ಸ್‌ ವಿಭಾಗದಲ್ಲಿ ಆಡಿದ್ದ ದಿವಿಜ್‌ ಮೂರನೇ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾ­ಗಿದ್ದರು. ದೆಹಲಿಯ ಈ ಯುವ ಆಟಗಾರನ ಪ್ರದರ್ಶನ­ವನ್ನು ಸುಲಭವಾಗಿ ಕಡೆಗಣಿಸು­ವಂತಿಲ್ಲ. ತಮ್ಮ ಎರಡನೇ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯಲ್ಲೇ ಗಮನ ಸೆಳೆಯುವಂತಹ ಆಟ ತೋರಿದ್ದಾರೆ.

ದಿವಿಜ್‌ ಈ ವರ್ಷ ವಿಂಬಲ್ಡನ್‌ನಲ್ಲಿ ಆಡುವ ಮೂಲಕ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಭಾರತದ ಪುರವ್‌ ರಾಜಾ ಜೊತೆ ಆಡಿದ್ದ ಅವರು ಅರ್ಹತಾ ಹಂತದಲ್ಲಿ ಗೆದ್ದು ಪ್ರಧಾನ ಸುತ್ತಿಗೆ ಅವಕಾಶ ಗಿಟ್ಟಿಸಿದ್ದರು. ಆದರೆ ಮೊದಲ ಸುತ್ತಿನ ತಡೆ ದಾಟಲು ಸಾಧ್ಯವಾಗಿ­ರ­ಲಿಲ್ಲ. ಮ್ಯಾರಥಾನ್‌ ಹೋರಾಟದ ಬಳಿಕ ಅಮೆರಿಕದ ನಿಕೊಲಸ್‌ ಮನ್ರೋ ಮತ್ತು ಸೈಮನ್‌ ಸ್ಟಾಡ್ಲೆರ್‌ ಕೈಯಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದರು.

ದಿವಿಜ್‌ ಅಮೆರಿಕ ಓಪನ್‌ ಟೂರ್ನಿಯಲ್ಲಿ ಕೊನೆಯ ಕ್ಷಣದಲ್ಲಿ ಸುನ್‌ ಲು ಜೊತೆ ಕಣಕ್ಕಿಳಿ­ಯಲು ನಿರ್ಧರಿಸಿದ್ದರು. ಅಲ್ಲಿ ದೊರೆತ ಅನುಭವ ‘ಅದ್ಭುತವಾದದ್ದು’ ಎಂದು ಹೇಳಿದ್ದಾರೆ. ಸುನ್‌ ಲು ಬೇಸ್‌ಲೈನ್‌ ಬಳಿ ಉತ್ತಮ ಆಟ ತೋರುವ ತಾಕತ್ತು ಹೊಂದಿದ್ದಾರೆ. ನೆಟ್‌ ಬಳಿ ನಿಂತು ಶ್ರೇಷ್ಠ ಆಟ ತೋರುವ ಸಾಮರ್ಥ್ಯ ದಿವಿಜ್‌ ಬಾಹು­ಗಳಲ್ಲಿ ಅಡಗಿದೆ. ಈ ಕಾರಣ ಇಬ್ಬರಿಗೂ ಹೊಂದಾ­ಣಿಕೆಯ ಪ್ರದರ್ಶನ ತೋರಲು ಸಾಧ್ಯವಾಗಿತ್ತು.

‘ಅಮೆರಿಕ ಓಪನ್‌ ಟೂರ್ನಿಗೆ ಹೆಸರು ನೋಂದಾಯಿಸಲು ಕೆಲವೇ ದಿನಗಳು ಇದ್ದಾಗ ನಾವು ಒಟ್ಟಾಗಿ ಆಡಲು ನಿರ್ಧರಿಸಿದ್ದೆವು. ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಆಡುವುದೇ ಒಂದು ವಿಶೇಷ ಅನುಭವ’ ಎಂದಿದ್ದಾರೆ.

ದಿವಿಜ್‌ ಮತ್ತು ಸುನ್‌ ಎರಡನೇ ಸುತ್ತಿನಲ್ಲಿ ಇಸ್ರೇಲ್‌ನ ಅನುಭವಿ ಜೋಡಿ ಆ್ಯಂಡಿ ರಾಮ್‌ ಮತ್ತು ಜೊನಾಥನ್‌ ಎಲ್ರಿಚ್‌ಗೆ ಆಘಾತ ನೀಡಿದ್ದರು. ಮೂರನೇ ಸುತ್ತಿನಲ್ಲಿ ಐಸಾಮ್‌ ಉಲ್‌ ಹಕ್‌ ಖುರೇಷಿ– ಜೀನ್‌ ಜೂಲಿಯನ್‌ ರೋಜರ್‌ ಕೈಯಲ್ಲಿ ಪರಾಭವಗೊಂಡಿದ್ದರು. ಆದರೆ ಎಲ್ಲ ಟೂರ್ನಿಗಳಲ್ಲಿ ಸುನ್‌ ಅವರೊಂದಿ­ಗೆಯೇ ಆಡುವುದಿಲ್ಲ ಎಂದು ದಿವಿಜ್‌ ಸ್ಪಷ್ಟಪಡಿಸಿದ್ದಾರೆ.

‘ಸುನ್‌ ಸಿಂಗಲ್ಸ್‌ ವಿಭಾಗದ ಆಟಗಾರ. ಕೆಲವೊಂದು ಟೂರ್ನಿಗಳಲ್ಲಿ ಮಾತ್ರ ಅವರೊಂದಿಗೆ ಆಡಲು ಬಯಸುತ್ತೇನೆ. ಆದರೆ ಪುರವ್‌ ರಾಜಾ ಜೊತೆ ಆಡುವುದು ನನ್ನ ಮೊದಲ ಆದ್ಯತೆ’ ಎಂಬುದು ದಿವಿಜ್‌ ಹೇಳಿಕೆ.
ಪೇಸ್‌ ಮತ್ತು ಭೂಪತಿ ಅವರ ಆಟವನ್ನು ನೋಡಿಕೊಂಡೇ ಬೆಳೆದ ದಿವಿಜ್‌ ಕಠಿಣ ಪ್ರಯತ್ನಕ್ಕೆ ಇದೀಗ ತಕ್ಕ ಫಲ ಪಡೆಯುತ್ತಿದ್ದಾರೆ.

ದಿವಿಜ್‌ 2004 ರಲ್ಲೇ ವೃತ್ತಿಪರ ಆಟಗಾರ­ನಾಗಿ ಬದಲಾಗಿದ್ದರು. ಆರಂಭದ ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಯಶಸ್ಸು ಲಭಿಸಿರಲಿಲ್ಲ. ಆದರೆ ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ಮಾತ್ರ ಸೊಗಸಾದ ಪ್ರದರ್ಶನ ತೋರುತ್ತಿದ್ದಾರೆ. 2011ರ ಸೆಪ್ಟೆಂಬರ್‌ ಬಳಿಕ 11 ಸಲ ಎಟಿಪಿ ಚಾಲೆಂಜರ್‌ ಟೂರ್ನಿಯ ಡಬಲ್ಸ್‌ ಫೈನಲ್‌ನಲ್ಲಿ ಆಡಿದ್ದಾರೆ. ಇದರಲ್ಲಿ ಮೂರು ಸಲ ಚಾಂಪಿಯನ್‌ ಕೂಡಾ ಆದರು. ಪುರವ್‌ ರಾಜಾ, ವಿಷ್ಣುವರ್ಧನ್‌, ಯೂಕಿ ಭಾಂಬ್ರಿ ಮತ್ತು ಕರಣ್‌ ರಸ್ತೋಗಿ ಜೊತೆ ಈ ಟೂರ್ನಿಗಳಲ್ಲಿ ಆಡಿದ್ದರು.

ಆದರೆ ಇದೇ ವರ್ಷದ ಜುಲೈನಲ್ಲಿ ವೃತ್ತಿಜೀವನದ ಚೊಚ್ಚಲ ಎಟಿಪಿ ವಿಶ್ವ ಟೂರ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಕೊಲಂಬಿಯದ ಬೊಗೊಟದಲ್ಲಿ ನಡೆದ ಕ್ಲಾರೊ ಓಪನ್‌ ಟೂರ್ನಿಯಲ್ಲಿ ಪುರವ್‌ ರಾಜಾ ಜೊತೆ ಆಡಿ ಚಾಂಪಿಯನ್‌ ಆಗಿದ್ದರು.

ಅಂದು ಫೈನಲ್‌ನಲ್ಲಿ ಫ್ರಾನ್ಸ್‌ ಮತ್ತು ಹಾಲೆಂಡ್‌ನ ಜೋಡಿ ಎಡ್ವರ್ಡ್‌ ರೋಜರ್‌ ವೆಸೆಲಿನ್‌ ಮತ್ತು ಇಗೋರ್‌ ಸಿಜ್ಲಿಂಗ್‌ ಅವರನ್ನು ಮಣಿಸಿದ್ದರು. ವೆಸೆಲಿನ್‌ ಮತ್ತು ಸಿಜ್ಲಿಂಗ್‌ ಒಟ್ಟು 17 ಗ್ರ್ಯಾಂಡ್‌ ಸ್ಲಾಮ್‌ ಡಬಲ್ಸ್‌ನಲ್ಲಿ ಆಡಿದ ಅನುಭವ ಹೊಂದಿದ್ದರು. ಅವರ ವಿರುದ್ಧ ದೊರೆತ ಗೆಲುವು ದಿವಿಜ್‌ ವೃತ್ತಿಜೀವನದ ‘ಟರ್ನಿಂಗ್‌ ಪಾಯಿಂಟ್‌’ ಎನಿಸಿದ್ದು ನಿಜ.

ಪೇಸ್‌ಗೆ ಈಗ 40 ವರ್ಷ ವಯಸ್ಸು. ಭೂಪತಿಗೆ 39ರ ಹರೆಯ. ಪೇಸ್‌ ಇನ್ನೂ ಒಂದೆರಡು ವರ್ಷಗಳ ಆಡುವ ಇಚ್ಛೆ ಹೊಂದಿದ್ದಾರೆ. ಆದರೆ ಭೂಪತಿ ಮುಂದಿನ ಋತುವಿನಲ್ಲಿ ಗ್ರ್ಯಾಂಡ್‌ ಸ್ಲಾಮ್‌ನಲ್ಲಿ ಆಡುವುದು ಅನುಮಾನ.
ಪ್ರಸಕ್ತ ಸೋಮದೇವ್‌ ದೇವವರ್ಮನ್‌ ಮತ್ತು ಯೂಕಿ ಭಾಂಬ್ರಿ ಸಿಂಗಲ್ಸ್‌ ವಿಭಾಗದಲ್ಲಿ ದೇಶದ ಸವಾಲನ್ನು ಮುನ್ನಡೆಸುವ ತಕ್ಕಮಟ್ಟಿನ ಪ್ರಯತ್ನ ನಡೆಸುತ್ತಿದ್ದಾರೆ.

ಆದರೆ ಡಬಲ್ಸ್‌ ವಿಭಾಗದಲ್ಲಿ ರೋಹನ್‌ ಬೋಪಣ್ಣ ಹೊರತುಪಡಿಸಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಆಟಗಾರರಿಗೆ ಹೆಚ್ಚಿನ ಯಶಸ್ಸು ಲಭಿಸಿಲ್ಲ. ಆದ್ದರಿಂದ ದಿವಿಜ್‌ ಅಲ್ಲದೆ, ಪುರವ್‌ ಮತ್ತು ವಿಷ್ಣುವರ್ಧನ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ದಿವಿಜ್‌ಗೆ ಈ 27 ವರ್ಷ ವಯಸ್ಸು. ದೈಹಿಕ ಸಾಮರ್ಥ್ಯ ಕಾಪಾಡಿಕೊಂಡರೆ ಇನ್ನು ಏನಿದ್ದರೂ ಏಳೆಂಟು ವರ್ಷಗಳ ಕಾಲ ಉನ್ನತಮಟ್ಟದ ಆಟ ಪ್ರದರ್ಶಿಸಲು ಸಾಧ್ಯ. ತನ್ನ ‘ರೋಲ್‌ ಮಾಡೆಲ್‌’ ಎನಿಸಿರುವ ಪೇಸ್‌ ಹಾಗೂ ಭೂಪತಿ ಅವರಂತೆಯೇ ದಿವಿಜ್‌ ಮುಂದೊಂದು ದಿನ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವಷ್ಟು ಎತ್ತರಕ್ಕೆ ಏರಿದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT