ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಕ್ಷಿತ್-ಪೊಲೀಸ್ ಜಟಾಪಟಿ

ಗಾಯಾಳು ಪೊಲೀಸ್ ಸಾವು; ಯುವತಿಯ ಇನ್ನೊಂದು ಹೇಳಿಕೆ ದಾಖಲು
Last Updated 26 ಡಿಸೆಂಬರ್ 2012, 10:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್):  ಬಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ  ಸಾಮೂಹಿಕ ಅತ್ಯಾಚಾರ ಪ್ರಕರಣವು ಈಗ ಹೊಸ ತಿರುವು ಪಡೆಯುತ್ತಿದ್ದು,  ಘಟನೆ ಖಂಡಿಸಿ ಭಾನುವಾರ ಇಂಡಿಯಾ ಗೇಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾನ್‌ಸ್ಟೆಬಲ್ ಸುಭಾಷ್ ಚಂದ್ರ ತೋಮರ್ (45) ಇಲ್ಲಿನ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

ಇನ್ನೊಂದೆಡೆ, ಈ ಪ್ರಕರಣವು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಪೊಲೀಸರ ಮಧ್ಯೆ ಜಟಾಪಟಿಗೂ ಕಾರಣವಾಗಿದೆ. ಯುವತಿಯ ಹೇಳಿಕೆ ದಾಖಲಿಸಿಕೊಳ್ಳುವಾಗ ಪೊಲೀಸರು ಹಸ್ತಕ್ಷೇಪ ಮಾಡಿದ್ದಾರೆ ಎನ್ನಲಾದ ಆರೋಪವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಶೀಲಾ ಆಗ್ರಹಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಈ ಸಂಬಂಧ ಶೀಲಾ ದೀಕ್ಷಿತ್ ಅವರು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಬರೆದ ಗೌಪ್ಯ ಪತ್ರವು ಮಾಧ್ಯಮಗಳಿಗೆ ಬಹಿರಂಗವಾಗಿದ್ದು ಹೇಗೆ ಎನ್ನುವುದನ್ನು ತನಿಖೆಗೆ ಒಳಪಡಿಸಬೇಕೆಂದು   ದೆಹಲಿ ಪೊಲೀಸರು ಪಟ್ಟು ಹಿಡಿದ್ದಾರೆ. ಯುವತಿಯ ಹೇಳಿಕೆ ದಾಖಲಿಸಿಕೊಳ್ಳುವಾಗ ಪೊಲೀಸರು ಹಸ್ತಕ್ಷೇಪ ಮಾಡಿದ್ದಾರೆ ಎನ್ನುವ ಆರೋಪವನ್ನು ದೆಹಲಿ ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

`ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಳ್ಳುವಾಗ ತಾವು ಸಿದ್ಧ ಪಡಿಸಿದ ಪ್ರಶ್ನೆಗಳನ್ನೇ ಕೇಳುವಂತೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ಒತ್ತಡ ತಂದರು. ಅಲ್ಲದೇ ಹೇಳಿಕೆಯನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲು ತಡೆದರು' ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಉಷಾ ಚತುರ್ವೇದಿ ಆರೋಪಿಸಿದ್ದಾರೆ. ಉಪ ಆಯುಕ್ತ ಬಿ.ಎಂ. ಮಿಶ್ರಾ ಅವರು ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದರು. ಇದನ್ನು ಉಲ್ಲೇಖಿಸಿ ಶೀಲಾ ದೀಕ್ಷಿತ್ ಅವರು ಶಿಂಧೆಗೆ ಪತ್ರ ಬರೆದಿದ್ದರು.

`ನಾವು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸ್ದ್ದಿದು ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ' ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಆರೋಪ ನಿರಾಕರಣೆ: ಉಷಾ ಚತುರ್ವೇದಿ ಅವರ ಆರೋಪವನ್ನು ದೆಹಲಿ ಪೊಲೀಸ್ ವರಿಷ್ಠ ನೀರಜ್ ಕುಮಾರ್ ಅಲ್ಲಗಳೆದಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಹೇಳಿಕೆ ದಾಖಲಿಸಿಕೊಳ್ಳುವಾಗ ಉಷಾ ಅವರಿಗೆ ಪೊಲೀಸರು ಒತ್ತಡ ಹಾಕಿಲ್ಲ. ಒಂದು ವೇಳೆ ಆ ರೀತಿ ಆಗಿದ್ದರೆ ಅವರು ಯಾಕೆ ಹೇಳಿಕೆ ದಾಖಲಿಸಿಕೊಳ್ಳಬೇಕಿತ್ತು' ಎಂದು  ಪ್ರಶ್ನಿಸಿದ್ದಾರೆ.

`ಉಷಾ ನಮಗೆ ಈವರೆಗೂ ದೂರು ನೀಡಿಲ್ಲ. ದೂರು ದಾಖಲಿಸಲಾಗಿದೆ ಎಂದು ನಮಗೆ ತಿಳಿದು ಬಂದಿದೆ. ಅದರ ಪ್ರತಿ ಮಾಧ್ಯಮದವರ ಕೈಗೂ ಸಿಕ್ಕಿದೆ. ನಿಜಕ್ಕೂ ಈ ಬೆಳವಣಿಗೆಯಿಂದ ಬೇಸರವಾಗಿದೆ. ಇದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ' ಎಂದರು.

ಹೇಳಿಕೆ ದಾಖಲೆ: ಈ ವಿವಾದದ ಹಿನ್ನೆಲೆಯಲ್ಲಿ ಯುವತಿಯಿಂದ ಮಂಗಳವಾರ ಇನ್ನೊಮ್ಮೆ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಪೊಲೀಸರ ಕರ್ತವ್ಯ ಲೋಪ ತನಿಖೆ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯ ಲೋಪ ತನಿಖೆ ಮಾಡಲು ಏಕ ಸದಸ್ಯ ತಂಡ ರಚಿಸಲಾಗುತ್ತಿದೆ.

`ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅವರು ತನಿಖೆ ನಡೆಸುವರು. ಅಲ್ಲದೇ ಮಹಿಳೆಯರ ಸುರಕ್ಷತೆ ಪರಿಶೀಲಿಸುವರು. ಶೀಘ್ರವೇ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗುತ್ತದೆ' ಎಂದು ಉನ್ನತ ಮೂಲಗಳು ಹೇಳಿವೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಶಿಫಾರಸು ನೀಡಲು ರಚಿಸಿರುವ ನ್ಯಾ. ವರ್ಮಾ ಸಮಿತಿಯು ಈ ಘಟನೆ ತನಿಖೆಯನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ನಿರಾಕರಿಸಿದ ಕಾರಣ ಬೇರೆ ಸಮಿತಿ ರಚಿಸಲಾಗುತ್ತಿದೆ ಎನ್ನಲಾಗಿದೆ.

ತೋಮರ್ ಅಂತ್ಯ ಸಂಸ್ಕಾರ: ಮೃತಪಟ್ಟ ಕಾನ್‌ಸ್ಟೆಬಲ್ ಸುಭಾಷ್ ಚಂದ್ರ ತೋಮರ್ ಅವರ ಅಂತ್ಯ ಸಂಸ್ಕಾರ ಪೊಲೀಸ್ ಗೌರವದೊಂದಿಗೆ ನೆರವೇರಿತು. ಮುಖ್ಯಮಂತ್ರಿ ಶೀಲಾ ದೀಕ್ಷಿತ್, ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್, ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೃತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೆರವು ನೀಡುವುದಾಗಿ ದೆಹಲಿ ಪೊಲೀಸ್ ವರಿಷ್ಠ ನೀರಜ್ ಕುಮಾರ್ ಭರವಸೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ತೀವ್ರ ಗಾಯಗೊಂಡಿದ್ದ ತೋಮರ್, ಇಂಡಿಯಾ ಗೇಟ್ ತಿಲಕ್ ಮಾರ್ಗದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳಿಂದ ಅವರು ಕೃತಕ ಉಸಿರಾಟದಲ್ಲಿ ಇದ್ದರು.

ಕುಟುಂಬದ ಆಕ್ರೋಶ: ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ಸುಭಾಷ್ ಸಾವಿನಿಂದ ಅವರ ಮಕ್ಕಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.  `ನನ್ನ ತಂದೆಯ ಸಾವಿಗೆ ಸಾರ್ವಜನಿಕರೇ ಕಾರಣ' ಎಂದು ಪುತ್ರ ದೀಪಕ್ (20) ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಆಸ್ಪತ್ರೆಯಲ್ಲಿ ನನ್ನ ತಂದೆಯನ್ನು ನೋಡಲು ಯಾವ ರಾಜಕಾರಣಿಯೂ ಬರಲಿಲ್ಲ' ಎಂದೂ ಅವರು ಆರೋಪಿಸಿದ್ದಾರೆ. ಸುಭಾಷ್ ಅವರಿಗೆ ಇನ್ನೊಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.

ಎಂಟು ಜನರ ವಿರುದ್ಧ ಕೊಲೆ ಆರೋಪ: ಸುಭಾಷ್ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯನೊಬ್ಬ ಸೇರಿ 8 ಜನರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.
ಕೇಜ್ರಿವಾಲ್ ಎಚ್ಚರಿಕೆ:  ತಮ್ಮ ಪಕ್ಷದ ಸದಸ್ಯ ಚಮನ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅರವಿಂದ ಕೇಜ್ರಿವಾಲ್,  ಈ ಎಂಟು ಜನರ ವಿರುದ್ಧ ಪೊಲೀಸರ ಬಳಿ ಪುರಾವೆ ಇಲ್ಲ. ಇದರಲ್ಲಿ ಚಮನ್ ಅವರನ್ನು ವಿನಾಕಾರಣ ಎಳೆದರೆ ನಾವು ಸುಮ್ಮನಿರುವುದಿಲ್ಲ' ಎಂದು ದೆಹಲಿ ಪೋಲಿಸರಿಗೆ ಎಚ್ಚರಿಕೆ ನೀಡಿದ್ದಾರೆ.

ಯುವತಿ ಚೇತರಿಕೆ: `ಅತ್ಯಾಚಾರಕ್ಕೊಳಗಾದ ಯುವತಿಯ ಸ್ಥಿತಿ ಸೋಮವಾರಕ್ಕಿಂತ ಉತ್ತಮವಾಗಿದೆ. ಕೃತಕ ಉಸಿರಾಟದಲ್ಲಿದ್ದೂ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ನಾವು ಆಕೆಯ ಆರೋಗ್ಯವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ' ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ದೂರದರ್ಶನದ ಐವರು ಸಿಬ್ಬಂದಿ ಅಮಾನತು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಪ್ರಧಾನಿ ಅವರ ಭಾಷಣವನ್ನು ವರದಿ ಮಾಡಲು ಸಕಾಲಕ್ಕೆ ಅವರ ಮನೆಗೆ ತೆರಳದ ತನ್ನ ಐವರು ಸಿಬ್ಬಂದಿಯನ್ನು ದೂರದರ್ಶನ ಅಮಾನತು ಮಾಡಿದೆ. ಅಲ್ಲದೆ ತನಿಖೆಗೂ ಆದೇಶಿಸಿದೆ.

8 ಮಹಿಳೆಯರು ಪೊಲೀಸರ ವಶಕ್ಕೆ: ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ಯುವ ಸಮುದಾಯವು ನವದೆಹಲಿಯ ಜಂತರ್ ಮಂತರ್‌ನಿಂದ ರಾಷ್ಟ್ರಪತಿ ಭವನದತ್ತ ಸಾಗುವಾಗ ಪ್ರತಿಭಟನಾಕಾರರನ್ನು ಹಿಂಸೆಗೆ ಪ್ರಚೋದಿಸಿದ ಆರೋಪದ ಮೇಲೆ ಎಂಟು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ್ಯಾಯಾಂಗ ಬಂಧನ: ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಮಿತಾಭ್ ನೆರವು: ಮೃತಪಟ್ಟ ಪೊಲೀಸ್ ಕಾನ್‌ಸ್ಟೇಬಲ್ ಕುಟುಂಬಕ್ಕೆ ಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ರೂ 2.5 ಲಕ್ಷ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT